ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸಿನ ಕಾರ್ಖಾನೆ ಉಳಿಸಲು ಎಲ್ಲರ ಸಂಕಲ್ಪ ಅಗತ್ಯ

ವಿಐಎಸ್ಎಲ್ ಕಾರ್ಖಾನೆಗೆ ಕೇಂದ್ರ ಉಕ್ಕು ಸಚಿವ ಚೌಧರಿ ಬಿರೇಂದರ್‌ ಸಿಂಗ್ ಭೇಟಿ
Last Updated 17 ಮಾರ್ಚ್ 2018, 8:45 IST
ಅಕ್ಷರ ಗಾತ್ರ

ಭದ್ರಾವತಿ: ನೂರು ವರ್ಷಗಳ ಹಿಂದೆ ಮುಂದಾಲೋಚನೆ ಮೇಲೆ ವಿಐಎಸ್ಎಲ್ ಕಾರ್ಖಾನೆ ಸ್ಥಾಪಿಸಿದ ಸರ್.ಎಂ. ವಿಶ್ವೇಶ್ವರಯ್ಯ ಅವರ ಕನಸನ್ನು ಪೂರ್ಣಗೊಳಿಸಲು ಎಲ್ಲರ ಸಂಕಲ್ಪ ಬೇಕಿದೆ ಎಂದು ಕೇಂದ್ರ ಉಕ್ಕು ಸಚಿವ ಚೌಧರಿ ಬೀರೇಂದ್ರ ಸಿಂಗ್ ಹೇಳಿದರು.

ಇಲ್ಲಿನ ವಿಐಎಸ್ಎಲ್ ಕಾರ್ಖಾನೆಗೆ ಭೇಟಿ ನೀಡಿದ ನಂತರ ಕಾರ್ಖಾನೆ ಕಾರ್ಮಿಕ ಸಂಘ ಏರ್ಪಡಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೂರದೃಷ್ಟಿ, ಮಹತ್ವಾಕಾಂಕ್ಷೆಯ ಎಂಜಿನಿಯರ್ ಸ್ಥಾಪಿಸಿದ ಈ ಕಾರ್ಖಾನೆ ಮುಂದಿನ ನೂರು ವರ್ಷದಲ್ಲಿ ದೇವಸ್ಥಾನ ರೂಪದಲ್ಲಿ ಇಲ್ಲಿನ ಜನರ ಪಾಲಿನ ಶ್ರದ್ಧಾಕೇಂದ್ರವಾಗಿ ಮುನ್ನೆಡೆಯಲಿದೆ ಎಂದು ಹೇಳುವ ಮೂಲಕ ಭಾವನಾತ್ಮಕ ಸಂಬಂಧವನ್ನು ತೆರೆದಿಟ್ಟರು.

ಇಲ್ಲಿರುವ ಪ್ರತಿಯೊಬ್ಬ ಕಾರ್ಮಿಕರು ಈ ರೀತಿಯ ಅವಿನಾಭಾವ ಸಂಬಂಧದ ಮೂಲಕ ಕೆಲಸ ಮಾಡುತ್ತಿದ್ದು ಅದು ಮುಂದಿನ ಪೀಳಿಗೆ ತನಕ ಮುನ್ನಡೆಯುವ ಅಗತ್ಯವಿದೆ. ಹಾಗಾಗಿ ಕೇಂದ್ರ ಸರ್ಕಾರ ಯಾವುದೇ ಕಾರ್ಮಿಕರನ್ನು ಕಡಿತ ಮಾಡುವುದಿಲ್ಲ ಎಂದು ಭರವಸೆ ನೀಡಿದರು.

ಗುತ್ತಿಗೆ ನವೀಕರಣ: ‘ಇಲ್ಲಿನ ಸಾವಿರಕ್ಕೂ ಅಧಿಕ ಗುತ್ತಿಗೆ ಕಾರ್ಮಿಕರ ಕೆಲಸ ಕಡಿತವಾಗಲಿದೆ ಎಂಬ ಅಂಶ ನನಗೆ ತಿಳಿದಿದೆ. ಇವರನ್ನು ಕೆಲಸ ವಂಚಿತರನ್ನಾಗಿ ಮಾಡಲು ನಾನು ಬಿಡುವುದಿಲ್ಲ. ಏಕೆಂದರೆ ನಾನೊಬ್ಬ ಕೃಷಿ ಕುಟುಂಬದ ವ್ಯಕ್ತಿ, ನನಗೆ ದುಡಿಮೆಯ ಮಹತ್ವ, ಅದನ್ನು ನಂಬಿ ಬದುಕುವ ಜನರ ಬವಣೆಯ ಅರಿವಿದೆ. ಈ ಎಲ್ಲಾ ಕಾರ್ಮಿಕರ ಗುತ್ತಿಗೆಯನ್ನು ನವೀಕರಣ ಮಾಡಲು ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಇದರ ಕುರಿತಾಗಿ ಸೈಲ್ ಆಡಳಿತದಿಂದ ಆಗಬೇಕಾದ ಕೆಲಸದ ಬಗ್ಗೆ ಗಮನಹರಿಸುತ್ತೇನೆ’ ಎಂದು ಭರವಸೆ ನೀಡಿದರು.

15 ದಿನಗಳಲ್ಲಿ ತಂಡ: ಸದ್ಯ ಈ ಕಾರ್ಖಾನೆಯ ಪುನಶ್ಚೇತನ ಪ್ರಸ್ತಾವ ಹಾಗೂ ಬಂಡವಾಳ ಹೂಡಿಕೆಗೆ ಸಂಬಂಧಿಸಿದ ವಿಷಯಗಳ ಪರಿಶೀಲನೆಗೆ ಉಕ್ಕು ಪ್ರಾಧಿಕಾರದ ಅಧಿಕಾರಿಗಳ ಎರಡು ತಂಡಗಳು ಇನ್ನು 15 ದಿನಗಳಲ್ಲಿ ಇಲ್ಲಿಗೆ ಭೇಟಿ ನೀಡಲಿವೆ ಎಂದು ತಿಳಿಸಿದರು.

ಈ ತಂಡಗಳು ಪರಿಶೀಲನೆ ನಡೆಸಿ ವರದಿ ನೀಡಲಿದ್ದು, ಅದರ ಆಧಾರದ ಮೇಲೆ ಕಾರ್ಖಾನೆಯ ಭವಿಷ್ಯದ ಉಜ್ವಲತೆಗೆ ಬಂಡವಾಳ ತೊಡಗಿಸುವುದಾಗಿ ಘೋಷಿಸಿದರು.

ವಿಶ್ವದಲ್ಲಿ ಉಕ್ಕು ಉದ್ಯಮ ಏರಿಳಿತದ ಪರಿಸ್ಥಿತಿಯ ವಾತಾವರಣದಲ್ಲಿ ಮುನ್ನಡೆದಿದೆ. ಭವಿಷ್ಯದಲ್ಲಿ ಭಾರತ ವಿಶ್ವದ ಒಟ್ಟು ಉಕ್ಕು ಅವಶ್ಯಕತೆಯಲ್ಲಿ ಶೇ 28ರಷ್ಟನ್ನು ಪೂರೈಸಲು ಪ್ರಯತ್ನ ನಡೆಸಲಾಗಿದೆ. ಪ್ರಧಾನಿ ನರೇಂದ್ರಮೋದಿ ಅವರ ‘ಮೇಕ್ ಇನ್‌ ಇಂಡಿಯಾ’ ಕಲ್ಪನೆಯಡಿ ಕೆಲಸ ನಡೆದಿದ್ದು,  ‘ಮೇಕ್ ಇನ್ ಸ್ಟೀಲ್’ ಪರಿಕಲ್ಪನೆ ಹೊತ್ತು ಉಕ್ಕು ಪ್ರಾಧಿಕಾರ ಕೆಲಸ ಮಾಡುತ್ತಿದೆ. ಭವಿಷ್ಯದಲ್ಲಿ ಈ ಕಾರ್ಖಾನೆ ಸಹ ಉನ್ನತ ಮಟ್ಟಕ್ಕೆ ಏರಲಿದೆ ಎಂಬ ವಿಶ್ವಾಸವಿದೆ ಎಂದರು.

ಸಂಸದ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ‘ತಕ್ಷಣಕ್ಕೆ ಆಗಬೇಕಿರುವ ಕೆಲಸ ಕುರಿತಾಗಿ ಸಚಿವರಿಗೆ ಮನದಟ್ಟು ಮಾಡಲಾಗಿದೆ. ತುರ್ತಾಗಿ ಬೇಕಿರುವ ಕಾರ್ಯಪಾಲಕ ನಿರ್ದೇಶಕರ ನೇಮಕ, ಗುತ್ತಿಗೆ ಕಾರ್ಮಿಕರ ಮುಂದುವರಿಕೆ ಪ್ರಸ್ತಾವಗಳಿಗೆ ಅವರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ’ ಎಂದು ಹೇಳಿದರು.

ಬಿಜೆಪಿ ಮುಖಂಡ ಆಯನೂರು ಮಂಜುನಾಥ, ಶಾಸಕ ಬಿ.ವೈ. ರಾಘವೇಂದ್ರ, ಕಾರ್ಖಾನೆ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಮುಖುಲ್ ಅರೌರಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರುದ್ರೇಗೌಡ, ಕಾರ್ಯದರ್ಶಿ ಜಿ. ಧರ್ಮಪ್ರಸಾದ್, ಎಸ್.ಎನ್. ಬಾಲಕೃಷ್ಣ, ಕ್ಷೇತ್ರ ಪ್ರಭಾರಿ ಕದಿರೇಶ್, ನಗರಾಧ್ಯಕ್ಷ ಜಿ. ಆನಂದಕುಮಾರ್, ಗ್ರಾಮಾಂತರ ಅಧ್ಯಕ್ಷ ಮಂಗೋಟೆ ರುದ್ರೇಶ್, ಕಾರ್ಮಿಕ ಸಂಘದ ಅಧ್ಯಕ್ಷ ಜಗದೀಶ್ ಅವರೂ ಉಪಸ್ಥಿತರಿದ್ದರು.

ಕಾರ್ಖಾನೆ ವೀಕ್ಷಿಸಿದ ಸಚಿವ
ಭದ್ರಾವತಿ:
ಕೇಂದ್ರ ಉಕ್ಕು ಸಚಿವ ಚೌಧರಿ ಬಿರೇಂದರ್‌ ಸಿಂಗ್ ಶುಕ್ರವಾರ ವಿಐಎಸ್ಎಲ್ ಕಾರ್ಖಾನೆಗೆ ಭೇಟಿ ನೀಡಿದ್ದ ವೇಳೆ ಪ್ರೈಮರಿ ಹಾಗೂ ಪೋರ್ಜ್ ಮಿಲ್ ವಿಭಾಗಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.

ಇದಾದ ನಂತರ ಕಾರ್ಯಪಾಲಕ ನಿರ್ದೇಶಕರ ಸಭಾಂಗಣಕ್ಕೆ ಸಚಿವರು ಕಾರ್ಖಾನೆ ಹಿರಿಯ ಅಧಿಕಾರಿಗಳ ಜತೆಗೆ ಸಮಾಲೋಚನೆ ನಡೆಸಿ ಮಾಹಿತಿ ಪಡೆದರು.

ಕಾರ್ಖಾನೆ ಕಾರ್ಮಿಕ ಸಂಘ, ಅಧಿಕಾರಿಗಳ ಸಂಘ, ಗುತ್ತಿಗೆ ಕಾರ್ಮಿಕರ ಸಂಘ ಹಾಗೂ ಇನ್ನಿತರೆ ಸಂಘದ ಜತೆ ಮಾತುಕತೆ ನಡೆಸುವ ಮೂಲಕ ಕಾರ್ಖಾನೆಯ ಅಗತ್ಯ ಕುರಿತು ಮಾಹಿತಿ ಪಡೆದರು.

ಈ ಎಲ್ಲಾ ಕಾರ್ಯಕ್ರಮಕ್ಕೂ ಮುನ್ನ ಆಡಳಿತ ಕಚೇರಿ ಬಳಿ ಇರುವ ಸರ್.ಎಂ. ವಿಶ್ವೇಶ್ವರಯ್ಯ ಪುತ್ಥಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ವಂದನೆ ಸಲ್ಲಿಸಿದರು.

ಕಾರ್ಮಿಕ ಸಂಘದ ಅಧ್ಯಕ್ಷ ಜಗದೀಶ್, ಅಮೃತ್, ಮಾಜಿ ಅಧ್ಯಕ್ಷ ಜೆ.ಎನ್. ಚಂದ್ರಹಾಸ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT