ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋರ್‌ ಬಂಡೆಗಳ ಒಡಲಲ್ಲಿ ಕೇಳದ ಭೋರ್ಗರೆತ

ನೀರಿಲ್ಲದೆ ಸೊರಗಿದ ಜೋಗ ಜಲ‍ಪಾತ * ಪ್ರವಾಸಿಗಳಿಗೆ ನಿರಾಸೆ
Last Updated 17 ಮಾರ್ಚ್ 2018, 8:47 IST
ಅಕ್ಷರ ಗಾತ್ರ

ಕಾರ್ಗಲ್: ‘ಅಂದು ಭೋರ್ಗರೆವ ಜಲಪಾತ, ಇಂದು ಬೋರ್ ಬಂಡೆ ಪ್ರಪಾತ’! ಇದು ಜೋಗ ಜಲಪಾತದ ಮುಂಭಾಗದಲ್ಲಿ ಪ್ರವಾಸಿಗರೊಬ್ಬರ ಬಾಯಿಯಿಂದ ಹೊರಬಂದ ಉದ್ಗಾರ.

ವಿಶ್ವ ವಿಖ್ಯಾತ ಜೋಗ ಜಲಪಾತದಲ್ಲಿ ಮೈದುಂಬಿ ಹರಿಯುತ್ತಿದ್ದ ಜಲಧಾರೆ ಈಗ ಬತ್ತಿ ಹೋಗಿದ್ದು, ತನ್ನ ಭೋರ್ಗರೆತವನ್ನು ನಿಲ್ಲಿಸಿದೆ. ಪಶ್ಚಿಮಘಟ್ಟಗಳ ಸಾಲು ಸಾಲಿನ ಬೆಟ್ಟಗಳಿಗೆ ಆತುಕೊಂಡಿರುವ ಭಾರೀ ಗಾತ್ರದ ಬಂಡೆಗಳು ಕಣಿವೆಯಾಳಕ್ಕೆ ಮೈಚಾಚಿ ನಿಂತು ಕೊಂಡಿವೆ. ನೀರಿನ ಸಿಂಚನದಿಂದ ಬಂಡೆಗಳ ಮೈ ಮೇಲೆ ಹರಡಿಕೊಂಡಿದ್ದ ಹಸಿರು ಬಣ್ಣದ ಪಾಚಿಗಳು ಮರೆಯಾಗಿ ಬಿಸಿಲ ಝಳಕ್ಕೆ ಕೆಂಬಣ್ಣಕ್ಕೆ ತಿರುಗಿದೆ.

960 ಅಡಿ ಎತ್ತರದಿಂದ ಗಂಭೀರವಾಗಿ ಧುಮ್ಮಿಕ್ಕುತ್ತಿದ್ದ ‘ರಾಜಾ’ ಫಾಲ್ಸ್ ನೀರಿಲ್ಲದೇ ಸೊರಗಿ ಹೋಗಿದೆ. ಇಡೀ ಪ್ರದೇಶವನ್ನು ತನ್ನ ಗರ್ಜನೆಯಿಂದ ಜೀವಂತವಿಡುತ್ತಿದ್ದ ‘ರೋರರ್’ ಫಾಲ್ಸ್ ತನ್ನ ಆರ್ಭಟವನ್ನು ನಿಲ್ಲಿಸಿ ಮೌನಕ್ಕೆ ಶರಣಾಗಿದೆ. ಕಣಿವೆಯಾಳಕ್ಕೆ ಮೈಚೆಲ್ಲಿ ನಿಂತಿರುವ ಬೃಹತ್ ಬಂಡೆಗಳ ಮೇಲೆ ಅಪ್ಪಳಿಸಿ ವೇಗವಾಗಿ ಚಿಮ್ಮುತ್ತಿದ್ದ ‘ರಾಕೆಟ್’ ಫಾಲ್ಸ್ ಕೃಶವಾಗಿ ಹೋಗಿದೆ. ತನ್ನ ಶ್ವೇತ ವೈಭವದಿಂದ ನುಣುಪಾದ ಬಂಡೆಗಳ ಮೇಲೆ ವಯ್ಯಾರದಿಂದ ನರ್ತಿಸುತ್ತ ಕಣಿವೆಯಾಳಕ್ಕೆ ಜಾರಿ ಹೋಗುತ್ತಿದ್ದ ‘ರಾಣಿ’ ಫಾಲ್ಸ್ ನರ್ತನವನ್ನು ನಿಲ್ಲಿಸಿದೆ.

ಬಿಸಿಲಿನ ಕಾವಿಗೆ ಬಂಡೆಗಳು ಬಿಸಿಯಾಗಿ ಜಲಪಾತ ಪ್ರದೇಶದ ಉಷ್ಣತೆಯನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ಬಂಡೆಗಳ ಪೊಟರೆಯಲ್ಲಿರುವ ಬಾವಲಿ ಹಕ್ಕಿ ಮತ್ತು ಪಾರಿವಾಳಗಳು ಏರುತ್ತಿರುವ ತಾಪಮಾನದಿಂದಾಗಿ ಗೂಡಿನಿಂದ ಹೊರಬಂದು ಕಣಿವೆಯುದ್ದಕ್ಕೂ ಹಾರಾಡುತ್ತಿವೆ.

ಜಲಪಾತದ ಮುಂಭಾಗದಲ್ಲಿರುವ ಮೈಸೂರು ಬಂಗಲೆಯ ಆವರಣದಲ್ಲಿ ಸಮಾಜ ಸೇವಕ ಸಿದ್ಧರಾಜು ತಮ್ಮ ಟೆಲಿಸ್ಕೋಪ್ ಮೂಲಕ ಹೆಬ್ಬಂಡೆಗಳ ಮೇಲೆ ಕಂಡು ಬರುವ ಗಿಡ ಗಂಟಿಗಳು, ಉರಗ ಸಂತತಿಗಳು, ಉಭಯವಾಸಿಗಳನ್ನು ಪ್ರವಾಸಿಗರಿಗೆ ತೋರಿಸುತ್ತ ಈ ಸಂದರ್ಭವನ್ನು ಸಮಯೋಚಿತವಾಗಿ ಬಳಸಿಕೊಳ್ಳುತ್ತಿದ್ದಾರೆ. ಸ್ಥಳೀಯ ಛಾಯಾಗ್ರಾಹಕರ ಪಾಲಿಗೆ ಜೀವ ಜಲವೇ ಬತ್ತಿ ಹೋದಂತಾಗಿದೆ.

ಪ್ರವಾಸಿಗರ ಕೊರತೆಯಿಂದ ವ್ಯಾಪಾರವಿಲ್ಲದೇ, ಬದುಕಿನ ಬಂಡಿಯನ್ನು ಸಾಗಿಸುವುದು ಹೇಗೆ ಎಂಬ ಚಿಂತೆ ವ್ಯಾಪಾರಸ್ಥರನ್ನು ಕಾಡುತ್ತಿದೆ. ಸದಾ ಕ್ರಿಯಾಶೀಲತೆಯಿಂದ ಇರುತ್ತಿದ್ದ ಪ್ರವಾಸಿ ಗೈಡ್‌ಗಳು ಕೆಲಸವಿಲ್ಲದೇ ಅಲ್ಲಲ್ಲಿ ಮರದ ಕೆಳಗೆ ಕುಳಿತು ಹರಟೆ ಹೊಡೆಯುತ್ತ ಕಾಲ ಕಳೆಯುವಂತಾಗಿದೆ. ಜಲಪಾತ ಪ್ರದೇಶದಲ್ಲಿ ಜೀವನ್ಮುಖಿಯಾಗಿದ್ದ ಇಡೀ ವ್ಯವಸ್ಥೆ ಮಳೆ ಮಾರುತಕ್ಕಾಗಿ ಜಾತಕ ಪಕ್ಷಿಯಂತೆ ಕಾದು ಕುಳಿತಿರುವ ದೃಶ್ಯ ಜಲಪಾತ ಪ್ರದೇಶದಲ್ಲಿ ಕಂಡು ಬರುತ್ತಿದೆ.

‘ಜಲಪಾತಕ್ಕೆ ನೀರು ಹರಿಸಲಿ’
‘ಪ್ರಕೃತಿ ಸಹಜವಾದ ಜಲಸಂಪತ್ತನ್ನು ಮನುಷ್ಯ ತನ್ನ ಸ್ವಾರ್ಥಕ್ಕಾಗಿ ತಡೆಹಿಡಿದಿಟ್ಟು, ಪ್ರಕೃತಿಯ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾನೆ. ಲಿಂಗನಮಕ್ಕಿ ಜಲಾಶಯದಿಂದ ಬೇಸಿಗೆಯಲ್ಲಿ ಪ್ರತಿದಿನ ನಿರ್ದಿಷ್ಟ ಪ್ರಮಾಣದ ನೀರನ್ನು ಜಲಪಾತಕ್ಕೆ ಬಿಡಬೇಕು ಎಂಬ ಕಾನೂನು ಇದೆ. ಆದರೆ, ಈ ಬಗ್ಗೆ ಕೇಳುವವರು ಯಾರು? ಪ್ರಶ್ನೆ ಮಾಡುವವರು ಯಾರು? ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು ಎಂಬಂತಾಗಿದೆ ಇಲ್ಲಿನ ಸ್ಥಿತಿ’ ಎಂದು ಸ್ಥಳೀಯ ವ್ಯಾಪಾರಿ ಚಂದ್ರಶೇಖರ ಭಟ್ ಅಳಲು ತೋಡಿಕೊಂಡರು.
– ಸಂತೋಷ್‌ ಕುಮಾರ್‌ ಕಾರ್ಗಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT