ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಮೂಲ್ಯ ನೀರನ್ನು ಪ್ರೀತಿಸಿ ಸಂರಕ್ಷಿಸಿ’

ನಾಂದಿ ಸಂಸ್ಥೆಯಿಂದ ನಿರ್ಮಾಣಗೊಂಡ ನೀರಿನ ಘಟಕ ಉದ್ಘಾಟನೆ
Last Updated 17 ಮಾರ್ಚ್ 2018, 8:52 IST
ಅಕ್ಷರ ಗಾತ್ರ

ಕಸಬಾ (ಕನಕಪುರ): ಹಿಂದಿನ ತಲೆಮಾರಿನಲ್ಲಿ 10 ಅಡಿ ಆಳದಲ್ಲಿದ್ದ ಅಂತರ್ಜಲ ಮಟ್ಟ ಈಗ 1,000 ಅಡಿಗೆ ಇಳಿದಿದೆ. ಮುಂದೆ ಹನಿ ನೀರು ಸಿಗದಿರುವ ಪರಿಸ್ಥಿತಿ ಎದುರಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್‌.ರವಿ ಎಚ್ಚರಿಸಿದರು.

ಕಸಬಾ ಹೋಬಳಿ ಕೆರಳಾಳುಸಂದ್ರ ಗ್ರಾಮದಲ್ಲಿ ನಾಂದಿ ಸಂಸ್ಥೆಯಿಂದ ನೂತನವಾಗಿ ನಿರ್ಮಾಣಗೊಂಡ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

‘ಪ್ರಕೃತಿಯಲ್ಲಿ ನೀರು, ಭೂಮಿ ಮತ್ತು ಗಾಳಿಯನ್ನು ಬಿಟ್ಟು ಎಲ್ಲವನ್ನೂ ಕೃತಕವಾಗಿ ತಯಾರಿಸಬಹುದು. ಆದರೆ ಈ ಮೂರನ್ನು ಪ್ರಕೃತಿಯಲ್ಲಿ ನೈಸರ್ಗಿಕವಾಗಿಯೇ ಪಡೆಯಬೇಕು. 20 ವರ್ಷಗಳ ಹಿಂದೆ ನಮಗೆ ನೀರಿನ ಮಹತ್ವ ಗೊತ್ತಾಗುತ್ತಿರಲಿಲ್ಲ. ಇಂದು ನೀರಿನ ಬೆಲೆ ಏನೆಂದು ಗೊತ್ತಾಗುತ್ತಿದೆ. ನಾಲ್ಕು ವರ್ಷ ಬರಗಾಲದಿಂದ ಅದು ಮತ್ತಷ್ಟು ತೀವ್ರವಾಗಿದೆ ಎಂದರು.

‘ಮುಂದೆ ದೇಶದಲ್ಲಿ ಏನಾದರೂ ಯುದ್ಧವಾದರೆ ಅದು ನೀರಿಗಾಗಿಯೇ ನಡೆಯಲಿದೆ. ಹಣ ಯಾವ ರೀತಿ ಜೋಪಾನ ಮಾಡಿ ಸಂಗ್ರಹಿಸುತ್ತೇವೋ ಅದೇ ರೀತಿಯಲ್ಲಿ ನೀರನ್ನು ಸಂಗ್ರಹಿಸಬೇಕು. ಮಿತವಾಗಿ ಬಳಕೆ ಮಾಡಬೇಕು. ಭೂಮಿಯಲ್ಲಿ ಸಿಗುವ ನೀರನ್ನು ಯಥೇಚ್ಚವಾಗಿ ಬಳಕೆ ಮಾಡುತ್ತೇವೆ. ಆ ನೀರು ಒಬ್ಬರದಲ್ಲ. ಇಡೀ ಊರಿನದ್ದು, ಇಡೀ ಸಮಾಜದ್ದು ಎಂಬ ಅರಿವು ನಮಗೆ ಮೂಡಬೇಕು’ ಎಂದರು.

‘ಪರಿಸರ ಸ್ವಚ್ಚವಾಗಿ ಕಾಪಾಡಿಕೊಂಡು ನಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು. ದೇಹದಲ್ಲಿ ಉತ್ಪತ್ತಿಯಾಗುವ ಮಲ ಮೂತ್ರ ಸಮಯಕ್ಕೆ ಸರಿಯಾಗಿ ಹೊರ ಹಾಕದಿದ್ದರೆ ದೇಹದಲ್ಲಿ ಅದು ವಿಷವಾಗಿ ಜೀವಕ್ಕೆ ಕಂಟಕವಾಗುತ್ತದೆ. ಆ ಕಾರಣದಿಂದ ಪ್ರತಿಯೊಂದು ಮನೆಯಲ್ಲೂ ಶೌಚಾಲಯವನ್ನು ಕಡ್ಡಾಯವಾಗಿ ನಿರ್ಮಾಣ ಮಾಡಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ನಾಂದಿ ಸಂಸ್ಥೆಯ ರಮೇಶ್‌ ಮಾತನಾಡಿ, ‘ಭೂಮಿ ಮೇಲೆ ಬಳಕೆ ಆಗುವುದು 0.01ರಷ್ಟು ನೀರು ಮಾತ್ರ. ಇದನ್ನು ನಾವು ಜಾಗ್ರತೆಯಿಂದ ಕಾಪಾಡಿಕೊಳ್ಳಬೇಕು ನೀರನ್ನು ಪ್ರೀತಿಸಿ, ಸಂರಕ್ಷಿಸಿ. ಶೇ 33 ರಷ್ಟಿದ್ದ ಅರಣ್ಯ ಇಂದು ಶೇ 23ಕ್ಕೆ ಇಳಿದಿದೆ. ಮರಗಳನ್ನು ಬೆಳೆಸಬೇಕು. ಅದಕ್ಕಾಗಿ ಮನೆಯ ಹತ್ತಿರ ಮರ ನೆಡಿ ಎಂದರು.

ನೀರನ್ನು ಸಂಕ್ಷಣೆ ಮಾಡುತ್ತೇವೆ ಎಂದು ನಾಗರಿಕರು ಸೇರಿದಂತೆ ಜನಪ್ರತಿನಿಧಿಗಳಿಂದ ಪ್ರತಿಜ್ಞೆ ಮಾಡಿಸಿದರು. ಗ್ರಾಮದ ಪ್ರತಿಯೊಂದು ಕುಟುಂಬಕ್ಕೂ ಉಚಿತ ನೀರಿನ ಕ್ಯಾನ್‌ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಸಿದ್ದರಾಜು, ಉಪಾಧ್ಯಕ್ಷ ಚೀರಣಕುಪ್ಪೆ ರವಿ, ಸದಸ್ಯ ಸಿ.ಬಿ.ಮಹೇಶ್‌, ಬರಡನಹಳ್ಳಿ ವಿಎಸ್‌ಎಸ್‌ಎನ್‌ ಅಧ್ಯಕ್ಷ ಕೆ.ಎಚ್.ಗಿರೀಶ್‌, ಮುಖಂಡರಾದ ತಿಮ್ಮೇಗೌಡ, ರಮೇಶ್‌, ಜೈರಾಮು, ಬರಡನಹಳ್ಳಿ ಚಂದ್ರಶೇಖರ್‌, ನಾಂದಿ ಸಂಸ್ಥೆಯ ವೆಂಕಟಸ್ವಾಮಿ, ಮಂಜಪ್ಪ ಮಾಳಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT