ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಜ ಕಲಾವಿದರ ನಿರ್ಲಕ್ಷ್ಯ ಆರೋಪ

ಉಳ್ಳವರ ಪಾಲಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ * ಕಲಾವಿದರ ಪತ್ರಿಕಾಗೋಷ್ಠಿಯಲ್ಲಿ ಟೀಕೆ
Last Updated 17 ಮಾರ್ಚ್ 2018, 8:56 IST
ಅಕ್ಷರ ಗಾತ್ರ

ರಾಮನಗರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಉಳ್ಳವರ ಪಾಲಾಗುತ್ತಿದ್ದು ಶೋಷಿತ ಮತ್ತು ಮೂಲ ಜನಪದ ಬಡ ಕಲಾವಿದರನ್ನು ನಿರ್ಲಕ್ಷಿಸಲಾಗಿದೆ ಎಂದು ಪೂಜಾ ಕುಣಿತದ ಹಿರಿಯ ಕಲಾವಿದ ಅಂಕನಹಳ್ಳಿ ಶಿವಣ್ಣ ಆರೋಪಿಸಿದರು.

‘ಈಚಿನ ವರ್ಷಗಳಲ್ಲಿ ಮನೆಯಲ್ಲಿ ಕುಳಿತು ಟ್ರಸ್ಟ್‌ ಮಾಡಿಕೊಂಡಿರುವವರು ಲಕ್ಷಗಟ್ಟಲೆ ಹಣವನ್ನು ಸರ್ಕಾರದಿಂದ ಲೂಟಿ ಹೊಡೆಯುತ್ತಿದ್ದಾರೆ. ಯಾವುದೆ ಕಾರ್ಯಕ್ರಮಗಳನ್ನು ನಡೆಸದೇ ಕೇವಲ ಆಹ್ವಾನ ಪತ್ರಿಕೆ ಮತ್ತು ಭಾವಚಿತ್ರಗಳನ್ನು ತೋರಿಸಿ ಸರ್ಕಾರದ ಹಣವನ್ನು ದೋಚುತ್ತಿದ್ದಾರೆ. ಅಂತಹವರನ್ನೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪೋಷಿಸುತ್ತಿದೆ. ಮೂಲ ಜನಪದ ಕಲಾವಿದರಿಗೆ ಗೌರವ ದೊರೆಯುತ್ತಿಲ್ಲ’ ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಜನಪದ ಕಲಾವಿದ ಚನ್ನಪಟ್ಟಣದ ಪುಟ್ಟರಾಜು ಮಾತನಾಡಿ, ‘ಜಿಲ್ಲೆಯಲ್ಲಿ ಕೆಲವು ಟ್ರಸ್ಟ್‌ಗಳು ಭವನಗಳನ್ನು ನಿರ್ಮಿಸುವ ನೆಪದಲ್ಲಿ ಲಕ್ಷಾಂತರ ರೂಪಾಯಿ ಅನುದಾನ ಪಡೆದಿವೆ. ಆದರೆ ಭವನಗಳ ಬದಲು ಟ್ರಸ್ಟ್ ಗಳ ಮಾಲೀಕರ ಮನೆಗಳು ನಿರ್ಮಾಣಗೊಂಡಿವೆ’ ಎಂದು ದೂರಿದರು.

ಕನಕಪುರದ ಹನುಮಂತ ನಾಯ್ಕ ಮಾತನಾಡಿ, ಕೆಲವು ಟ್ರಸ್ಟ್‌ಗಳು ಉತ್ಸವದ ಹೆಸರಿನಲ್ಲಿ ಅನುದಾನ ದುರ್ಬಳಕೆ ಮಾಡಿಕೊಳ್ಳುತ್ತಿವೆ. ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮ ನಡೆಸಿ ಸರ್ಕಾರಕ್ಕೆ ಮೋಸ ಮಾಡುತ್ತಿವೆ ಎಂದು ಆಪಾದಿಸಿದರು.

ಜಿಲ್ಲೆಯಲ್ಲಿ ಸಾಂಸ್ಕೃತಿಕ ಭವನದ ನಿರ್ಮಾಣದ ಹೆಸರಿನಲ್ಲಿ ಹಣ ಲೂಟಿಯಾಗಿದ್ದು, ಇದರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೇಂದ್ರ ಕಚೇರಿಯು ಶಾಮೀಲಾಗಿರುವ ಶಂಕೆಯಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

ಡೊಳ್ಳು ಕಲಾವಿದ ಕೂಟಗಲ್ ಮಹೇಶ್ ಮಾತನಾಡಿ, ನಾವು ಕಲೆಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದೇವೆ. ನಮ್ಮ ಕಲಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಬೇಕು. ಸರ್ಕಾರಿ ಸವಲತ್ತುಗಳನ್ನು ಕಲ್ಪಿಸುವುದರ ಜತೆಗೆ ಹೆಚ್ಚಿನ ಅನುಕೂಲ ದೊರೆಯುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ಡೊಳ್ಳು ಕಲಾವಿದ ಶಶಿಧರ್ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ನಿರಂತರವಾಗಿ ಅವ್ಯವಹಾರಗಳು ನಡೆಯುತ್ತಿವೆ. ಸ್ವತಃ ಕಲಾವಿದೆಯಾಗಿರುವ ಉಮಾಶ್ರೀ ಅವರು ಕಲಾವಿದರ ಸಮಸ್ಯೆಗಳಿಗೆ ಸ್ಪಂದಿಸದೆ, ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ಮೂಲ ಕಲಾವಿದರು ಅವಕಾಶಗಳು ದೊರೆಯುತ್ತಿಲ್ಲ ಎಂದು ತಿಳಿಸಿದರು.

ಪೂಜಾ ಕುಣಿತದ ಕಲಾವಿದ ಶ್ರೀನಿವಾಸ್‌, ತಮಟೆ ಕಲಾವಿದ ಗೋವಿಂದಯ್ಯ, ಕಲಾವಿದರಾದ ರವಿ, ಜಯರಾಮಯ್ಯ, ಶಿವಪ್ಪ, ಎನ್. ಗಂಗಾಧರಯ್ಯ ಇದ್ದರು.

ನೈಜ ಕಲಾವಿದರಿಗೆ ಅವಕಾಶ ಕೊಡಿ
ಗಾಯಕ ಹೊನ್ನಿಗಾನಹಳ್ಳಿ ಸಿದ್ದರಾಜು ಮಾತನಾಡಿ, ಚನ್ನಪಟ್ಟಣದಲ್ಲಿ ಕಲಾವಿದರೇ ಅಲ್ಲದವರಿಗೆ ಮುಖ್ಯಮಂತ್ರಿಗಳ ಕೋಟಾದಡಿ ಮಹಾತ್ಮಗಾಂಧಿ ಜ್ಞಾನ ಮಂದಿರ ನಿರ್ಮಾಣಕ್ಕಾಗಿ ₹20 ಲಕ್ಷ ಮಂಜೂರು ಆಗಿದೆ. ಯಾವುದೇ ದಾಖಲಾತಿಗಳನ್ನು ಪಡೆಯದೆ ಇಷ್ಟೊಂದು ಅನುದಾನವನ್ನು ಸರ್ಕಾರ ಹೇಗೆ ಬಿಡುಗಡೆ ಮಾಡಿದೆ ಎಂದು ಪ್ರಶ್ನಿಸಿದರು.

ಇಲಾಖೆ ತನ್ನ ತಪ್ಪನ್ನು ತಿದ್ದುಕೊಂಡು ನೈಜ ಕಲಾವಿದರಿಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಪ್ರತಿಭಟನೆ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT