ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಸ್ಯೆ ಪರಿಹಾರಕ್ಕೆ ಯೋಜನೆ ರೂಪಿಸಿ’

ಕುಡಿವ ನೀರಿನ ಸಮಸ್ಯೆ ತುರ್ತು ಪರಿಹಾರಕ್ಕಾಗಿ ಅಧಿಕಾರಿಗಳ ಸಭೆ
Last Updated 17 ಮಾರ್ಚ್ 2018, 9:14 IST
ಅಕ್ಷರ ಗಾತ್ರ

ಕುಂದಾಪುರ: ಬೈಂದೂರು ಹಾಗೂ ಕುಂದಾಪುರ ತಾಲ್ಲೂಕಿನ ಜನರು ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುವ ಮೊದಲೇ ಸಮಸ್ಯೆ ಪರಿಹಾರಕ್ಕಾಗಿ ತಾಲ್ಲೂಕು ಆಡಳಿತ ಸಮರೋಪಾದಿಯಲ್ಲಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ಕುಡಿವ ನೀರಿನ ಸಮಸ್ಯೆ ತುರ್ತು ಪರಿಹಾರಕ್ಕಾಗಿ ಕರೆದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ, ಗ್ರಾಮಲೆಕ್ಕಿಗರ, ಮೆಸ್ಕಾಂ ಹಾಗೂ ಎಂಜಿಯರಿಂಗ್ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಬೇಸಿಗೆ ದಿನಗಳು ಈಗಾಗಲೇ ಆರಂಭವಾಗಿವೆ. ಎರಡು ತಾಲ್ಲೂಕುಗಳ ಹಲವು ಗ್ರಾಮಗಳಲ್ಲಿನ ನೀರಿನ ಪ್ರಮಾಣ ಕುಸಿದಿರುವುದರಿಂದ ಜನರು ಕುಡಿಯುವ ನೀರಿಗೂ ಸಮಸ್ಯೆ ಪಡುತ್ತಿದ್ದಾರೆ. ಇಂತಹ ಗ್ರಾಮಗಳಲ್ಲಿನ ಪರಿಸ್ಥಿತಿ ಅಧ್ಯಯನ ನಡೆಸಿ ಜನರಿಗಾಗಿ ತುರ್ತು ಪರಿಹಾರ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳೊಂದಿಗೆ ಗ್ರಾಮವಾರು ಸಮಸ್ಯೆ ಕುರಿತು ಮಾಹಿತಿ ಪಡೆದುಕೊಂಡರು.

ಆಜ್ರಿ, ಅಂಪಾರು, ಮೂಡಬಗೆ, ಗಂಗೊಳ್ಳಿ ಮುಂತಾದ ಕಡೆಗಳಲ್ಲಿ ನೀರು ಸರಬರಾಜು ಪೈಪ್‌ಲೈನ್, ಬೋರ್‌ವೆಲ್‌ ಹಾಗೂ ತೆರೆದ ಬಾವಿಗಳ ನೀರಿನ ಮಟ್ಟದ ಕುಸಿತ ಸಮಸ್ಯೆ ಇರುವುದನ್ನು ಬೊಟ್ಟು ಮಾಡಿದ ಅಧಿಕಾರಿಗಳ ವಿವರಣೆಗೆ ಸ್ಪಂದಿಸಿದ ಶಾಸಕರು ಯಾವ ಯಾವ ಗ್ರಾಮಗಳಲ್ಲಿ ಯಾವ ರೀತಿಯ ಸಮಸ್ಯೆ ಇದೆ ಎಂದು ಅಧ್ಯಯನ ನಡೆಸಿ, ಪರಿಹಾರ ಕ್ರಮಗಳ ಕುರಿತು ವಿವರಣೆಯನ್ನು ನೀಡಿ ಕೂಡಲೇ ಜಿಲ್ಲಾಡಳಿತಕ್ಕೆ ಅವಶ್ಯ ಅನುದಾನಕ್ಕಾಗಿ ವರದಿ ಕಳುಹಿಸಿ ಕೊಡುವಂತೆ ಸೂಚನೆ ನೀಡಿದರು.

ಚುನಾವಣಾ ದಿನಾಂಕ ಘೋಷಣೆ ಮೊದಲೇ ಅನುದಾನ ದೊರಕಿಸಿಕೊಳ್ಳುವ ಪ್ರಯತ್ನ ಮಾಡಬೇಕು, ಚುನಾವಣಾ ದಿನಾಂಕ ಘೋಷಣೆ ಬಳಿಕ ಅಭಿವೃದ್ಧಿ ಕಾಮಗಾರಿಗಳಿಗೆ ತೊಡಕು ಆಗುವ ಸಾಧ್ಯತೆ ಇರುವುದರಿಂದ ಕಾಲಮಿತಿಯೊಳಗೆ ವರದಿ ಮಾಡುವಂತೆ ಸೂಚಿಸಿದರು.

ಕುಡಿಯುವ ನೀರನ್ನು ಸರಬರಾಜು ಮಾಡುವ ಟ್ಯಾಂಕರ್‌ ಮಾಹಿತಿ ಸಿಗಬೇಕಾದರೆ  ಜಿಲ್ಲಾಡಳಿತದಿಂದ ನೀರು ಸರಬರಾಜು ಎನ್ನುವ ನಾಮಫಲಕ ಅಳವಡಿಸಬೇಕು.  ಆಕ್ರಮ-ಸಕ್ರಮ, 94ಸಿ ಯೋಜನೆಗಳ ಕುರಿತು 2 ತಾಲ್ಲೂಕಿನ ಜನರಿಗೆ ಸರಿಯಾದ ಮಾಹಿತಿ ತಲುಪಿಸುವ ಕೆಲಸಗಳು ಸರ್ಕಾರದ ಅಧಿಕಾರಿಗಳಿಂದ ಆಗಬೇಕು ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕೆ. ನಾರಾಯಣ ಗುಜ್ಜಾಡಿ, ಕುಂದಾಪುರ ತಹಶೀಲ್ದಾರ್ ಜಿ.ಎಂ.ಬೋರ್ಕರ್‌ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಕಿರಣ್ ಪಡ್ನೇಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT