ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಮಳೆಗೆ ನೆಲಕಚ್ಚಿದ ಬಾಳೆ ತೋಟ

ಜಿಲ್ಲೆಯಲ್ಲಿ ಎರಡನೇ ದಿನವೂ ಸುರಿದ ವರುಣ
Last Updated 17 ಮಾರ್ಚ್ 2018, 9:20 IST
ಅಕ್ಷರ ಗಾತ್ರ

ಮೈಸೂರು: ವಾಯುಭಾರ ಕುಸಿತದ ಪರಿಣಾಮ ಎರಡನೇ ದಿನವಾದ ಶುಕ್ರವಾರವೂ ಜಿಲ್ಲೆಯಲ್ಲಿ ಗುಡುಗು, ಬಿರುಗಾಳಿ ಸಹಿತ ಉತ್ತಮ ಮಳೆ ಸುರಿದಿದೆ. ಹುಣಸೂರು ತಾಲ್ಲೂಕಿನಲ್ಲಿ ಸಿಡಿಲಿಗೆ ಮಹಿಳೆಯೊಬ್ಬರು ಗಾಯ ಗೊಂಡಿದ್ದು, ಐದು ಎಕರೆ ಬಾಳೆತೋಟ ಸಂಪೂರ್ಣ ನೆಲಕಚ್ಚಿದೆ.

ಮಧ್ಯಾಹ್ನ 3 ಗಂಟೆ ಹೊತ್ತಿಗೆ ಹನಿಯೊಡೆದ ಮಳೆ ಒಂದೂವರೆ ಗಂಟೆ ಸುರಿಯಿತು. ನಗರದಲ್ಲಿ ಬಹುತೇಕ ರಸ್ತೆಗಳ ಮೇಲೆ ನೀರು ಹರಿಯಿತು. ಮಳೆಯಿಂದ ರಕ್ಷಣೆ ಪಡೆಯಲು ಸಾರ್ವಜನಿಕರು ಪರದಾಡಿದರು.

ವರುಣಾ ಹೋಬಳಿಯ ಬಿಳಿಗೆರೆ, ದೇವಲಾಪುರ, ಮೆಲ್ಲಹಳ್ಳಿ, ವಾಜಮಂಗಲ ಸೇರಿ ಹಲವು ಭಾಗಗಳಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ಮಳೆ ಸುರಿಯಿತು. ಕೆಲವು ಕಡೆ ಗುಡುಗು ಸಹಿತ ಮಳೆಯಾದರೆ, ಇನ್ನೂ ಕೆಲವು ಕಡೆ ಸಾಧಾರಣಾ ಮಳೆಯಾಗಿದೆ.

ಬಾಳೆತೋಟ ನಾಶ
ಹುಣಸೂರು ವರದಿ:
ಹನಗೋಡು ಹೋಬಳಿಯ ಕುರುಬರ ಹೊಸಹಳ್ಳಿಯ ರೈತ ಮಹಿಳೆ ಸರಸ್ವತಿ (56) ಸಿಡಿಲಿಗೆ ಗಾಯಗೊಂಡಿದ್ದಾರೆ. ಇವರನ್ನು ಹನಗೋಡು ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಜು ಅವರ ಪತ್ನಿ ಸರಸ್ವತಿ ಅವರು ಗುರುವಾರ ಸಂಜೆ ಜಮೀನಿನಲ್ಲಿ ಕೃಷಿ ಕೆಲಸದಲ್ಲಿ ತೊಡಗಿದ್ದರು. ಈ ವೇಳೆ ಮಳೆಯೊಂದಿಗೆ ಬಂದ ಸಿಡಿಲಿಗೆ ಗಾಯಗೊಂಡಿದ್ದಾರೆ.

ಗೌಡಿಕೆರೆ ಗ್ರಾಮದ ರೈತ ಅಕ್ರಂ ಪಾಷಾ ಅವರಿಗೆ ಸೇರಿದ ಎರಡು ಎಕರೆ ಬಾಳೆ ಮತ್ತು ಕೋಣನಹೊಸಹಳ್ಳಿಯ ರಾಜು ಎಂಬುವರಿಗೆ ಸೇರಿದ ಮೂರು ಎಕರೆ ಬಾಳೆ ಸಂಪೂರ್ಣ ನಾಶವಾಗಿದೆ. ಮಂಜುನಾಥ್‌ ಮನೆ ಚಾವಣಿ ಗಾಳಿಗೆ ಹಾರಿಹೋಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕಾಳ್ಗಿಚ್ಚು ಆತಂಕ ದೂರ
ಎಚ್.ಡಿ.ಕೋಟೆ ವರದಿ:
ತಾಲ್ಲೂಕಿನ ಹಂಪಾಪುರ ಸೇರಿ ಸುತ್ತಮುತ್ತ ಸುರಿದ ಮಳೆಯಿಂದ ಭೂಮಿ ತಂಪಾಗಿದೆ. ರೈತರು ಉಳುಮೆ ಮಾಡಿಕೊಳ್ಳಲು ಅನುಕೂಲವಾಗಿದೆ ಎಂದು ಕೃಷಿ ಅಧಿಕಾರಿ ಜಯರಾಮಯ್ಯ ತಿಳಿಸಿದ್ದಾರೆ.

ನಾಗರಹೊಳೆ ಉದ್ಯಾನದಲ್ಲಿ ಉತ್ತಮ ಮಳೆಯಾಗಿದೆ. ಹಸಿರು ಚಿಗುರುವ ಸಾಧ್ಯತೆ ಇದ್ದು, ಕಾಡುಪ್ರಾಣಿ ಗಳ ಆಹಾರ ಸಮಸ್ಯೆ ಹಾಗೂ ಕಾಳ್ಗಿಚ್ಚು ಆತಂಕ ದೂರವಾಗಲಿದೆ. ಅಲ್ಲದೆ, ಕೆರೆ ಕಟ್ಟೆಗಳಿಗೆ ನೀರು ಹರಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT