ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುಡಿಯುವ ನೀರಿಗೆ ಸರ್ಕಾರದ ಬಳಿ ಹಣವಿಲ್ಲವೇ’

ಜಿಲ್ಲಾ ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಸ್ಥಾಯಿಸಮಿತಿ ಅಧ್ಯಕ್ಷರ ಪ್ರಶ್ನೆ
Last Updated 17 ಮಾರ್ಚ್ 2018, 10:22 IST
ಅಕ್ಷರ ಗಾತ್ರ

ದಾವಣಗೆರೆ: ‘ಬೇಸಿಗೆ ಆರಂಭದಲ್ಲೇ ಕುಡಿಯುವ ನೀರಿನ ಸಮಸ್ಯೆ ಶುರುವಾಗಿದೆ. ಹಳ್ಳಿಗಳಿಗೆ ಟ್ಯಾಂಕರ್‌ ನೀರು ಪೂರೈಕೆ ಸ್ಥಗಿತವಾಗಿದೆ. ಬೋರ್‌ವೆಲ್‌ ಕೊರೆಸಲು ಅನುದಾನವೂ ಸಿಗುತ್ತಿಲ್ಲ. ಜನರಿಗೆ ಕುಡಿಯುವ ನೀರು ಪೂರೈಸಲೂ ಸರ್ಕಾರದ ಬಳಿ ಹಣ ಇಲ್ಲವೇ’?.

‌ಹೀಗೆ, ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ಅಧ್ಯಕ್ಷೆ ಮಂಜುಳಾ ಟಿ.ವಿ.ರಾಜು ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಎಂ.ವಾಗೀಶ ಸ್ವಾಮಿ, ಜೆ.ಸವಿತಾ, ಎಂ.ಆರ್‌.ಮಹೇಶ್‌ ನೀರಿನ ಸಮಸ್ಯೆ ಕುರಿತ ಚರ್ಚೆಗೆ ಕಿಡಿ ಹೊತ್ತಿಸಿದರು.

ಕುಡಿಯುವ ನೀರಿನ ತೀವ್ರ ಸಮಸ್ಯೆ ಇರುವ ಜಗಳೂರು ತಾಲ್ಲೂಕಿನ ಚಿಕ್ಕಬನ್ನಿಹಟ್ಟಿ ಗ್ರಾಮಕ್ಕೆ ಹಿಂದೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿತ್ತು. ಕಳೆದ ಡಿಸೆಂಬರ್ 20ರಿಂದ ಸ್ಥಗಿತಮಾಡಲಾಗಿದೆ. ವಿಚಾರಿಸಿದರೆ ಅನುದಾನ ಇಲ್ಲ ಎಂಬ ಉತ್ತರ ನೀಡುತ್ತಿದ್ದಾರೆ ಎಂದು ಸವಿತಾ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಷಡಕ್ಷರಪ್ಪ ಪ್ರತಿಕ್ರಿಯಿಸಿ, ‘ಬರಪೀಡಿತ ಜಿಲ್ಲೆಗಳ ಪಟ್ಟಿ ಘೋಷಣೆಯಾಗದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದಲೂ ಅನುದಾನ ಸಿಗುತ್ತಿಲ್ಲ. ಗ್ರಾಮ ಪಂಚಾಯ್ತಿಗಳಲ್ಲೂ ಅನುದಾನ ಇಲ್ಲ. 14ನೇ ಹಣಕಾಸು ಯೋಜನೆಯಡಿ ಅನುದಾನ ಬಳಸಿಕೊಂಡು ನೀರು ಪೂರೈಸಲು ಗ್ರಾಮ ಪಂಚಾಯ್ತಿಗಳಿಗೆ ಸೂಚನೆ ನೀಡಲಾಗಿದೆ’ ಎಂದರು.

ಕುಡಿಯುವ ನೀರು ಪೂರೈಸಲೂ ಸರ್ಕಾರದ ಬಳಿ ಹಣವಿಲ್ಲವೇ ಎಂದು ವಾಗೀಶ ಸ್ವಾಮಿ ಛೇಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯ್ತಿ ಸಿಇಒ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಎಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗೆ ಸೂಚಿಸಿದರು.

ಜಗಳೂರು ತಾಲ್ಲೂಕಿನ ಹಲವೆಡೆ ಶುದ್ಧ ನೀರಿನ ಘಟಕಗಳು ಕೆಟ್ಟುನಿಂತಿವೆ. ಕೆಲವು ಕಾರ್ಯಾರಂಭ ಮಾಡಿಲ್ಲ. ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸವಿತಾ ಆರೋಪಿಸಿದರು.

‘2017–18ನೇ ಸಾಲಿನಲ್ಲಿ ಮೊದಲ ಹಂತದಲ್ಲಿ 163, ಎರಡನೇ ಹಂತದಲ್ಲಿ 28  ಸೇರಿ 191 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ಎಲ್ಲೆಲ್ಲಿ ಸಮಸ್ಯೆ ಇದೆಯೇ ಕೂಡಲೇ ಬಗೆಹರಿಸಲಾಗುವುದು’ ಎಂದು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಅಧಿಕಾರಿ ಭರವಸೆ ನೀಡಿದರು.

ಮಲೇಬೆನ್ನೂರಿನ 25 ಗ್ರಾಮಗಳಿಗೆ ನೀರು ಪೂರೈಸಲು 2008ರಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಆರಂಭವಾಯಿತು. 10 ವರ್ಷ ಕಳೆದರೂ ಹರಳಹಳ್ಳಿ ಗ್ರಾಮಕ್ಕೆ ನೀರು ಸಿಕ್ಕಿಲ್ಲ ಎಂದು ವಾಗೀಶ ಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಈಗಾಗಲೇ 24 ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಹರಳಹಳ್ಳಿ ಸಮೀಪ ಸೇತುವೆ ಕಾಮಗಾರಿ ನಡೆಯುತ್ತಿದ್ದು, ಪೈಪ್‌ಲೈನ್‌ ಹಾಕಲು ಅಡ್ಡಿಯಾಗಿದೆ. ಕಾಮಗಾರಿ ಮುಗಿದ ಕೂಡಲೇ ನೀರು ಪೂರೈಸಲಾಗುವುದು ಎಂದು ಅಧಿಕಾರಿ ಭರವಸೆ ನೀಡಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಆರ್.ಮಹೇಶ್‌ ಮಾತನಾಡಿ, ‘ಹೊನ್ನಾಳಿ ತಾಲ್ಲೂಕಿನ ಹನುಮಸಾಗರದಲ್ಲಿ ಕೃಷಿಹೊಂಡ ಯೋಜನೆಯಲ್ಲಿ ಅವ್ಯವಹಾರ ನಡೆದಿರುವ ಅನುಮಾನಗಳಿವೆ. ಕೃಷಿ ಹೊಂಡದ ಅಳತೆ ಸರಿಯಿಲ್ಲದಿದ್ದರೂ, ತಗ್ಗಿನ ಪ್ರದೇಶದಲ್ಲಿ ಗುಂಡಿ ತೋಡಲಾಗಿದೆ ಎಂದು ಅಲ್ಲಿನ ಕೆಲವು ಗ್ರಾಮಸ್ಥರು ದೂರಿದ್ದಾರೆ’ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಉಪ ನಿರ್ದೇಶಕರಾದ ಹಂಸವೇಣಿ, ‘ಇಲಾಖೆ ಮುತುವರ್ಜಿ ವಹಿಸಿ ‘ಕೃಷಿಭಾಗ್ಯ ಯೋಜನೆ’ ಅನುಷ್ಠಾನಗೊಳಿಸುತ್ತಿದೆ. ಕೃಷಿ ಹೊಂಡ ಯೋಜನೆಯ ಫಲಾನುಭವಿಗಳು ಕಾಮಗಾರಿ ನಡೆಸಿದ್ದರ ಬಗ್ಗೆ ಫೋಟೊ ಸೇರಿದಂತೆ ಅಗತ್ಯ ದಾಖಲಾತಿಗಳನ್ನು ಕಡ್ಡಾಯವಾಗಿ ಸಲ್ಲಿಸಲೇಬೇಕು. ಪರಿಶೀಳನೆಗೆ ಜಿಪಿಎಸ್‌ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತದೆ. ಒಂದೆರಡು ಕಡೆ ತೊಂದರೆಯಾಗಿರಬಹುದು. ಆರೋಪಗಳ ಸಂಬಂಧ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ’ ಎಂದು ಭರವಸೆ ನೀಡಿದರು.

ತಾಡಪಾಲು ಕೊಡಿಸುವಂತೆ ರೈತರು ದುಂಬಾಲು ಬೀಳುತ್ತಾರೆ. ಜಿಲ್ಲಾ ಪಂಚಾಯ್ತಿ ಸದಸ್ಯರ ಶಿಫಾರಸು ಪರಿಗಣಿಸಿ ಎಂದು ಸದಸ್ಯರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಹಂಸವೇಣಿ, ‘ಶಿಫಾರಸು ಪರಿಗಣಿಸಲು ಯೋಜನೆಯಲ್ಲಿ ಅವಕಾಶವಿಲ್ಲ. ಜಿಲ್ಲೆಯಲ್ಲಿ ತಾಡಪಾಲಿಗೆ ಹೆಚ್ಚಿನ ಬೇಡಿಕೆಯಿದೆ. ಅರ್ಜಿ ಸಲ್ಲಿಸಿದ ರೈತರಿಗೆ ಲಾಟರಿ ಮೂಲಕ ವಿತರಿಸಲಾಗುವುದು. ವಾರದೊಳಗೆ ಹೆಚ್ಚುವರಿ ಅನುದಾನ ಲಭ್ಯವಾಗಲಿದ್ದು, ಹೆಚ್ಚಿನ ರೈತರಿಗೆ ನೀಡಲಾಗುವುದು’ ಎಂದರು.

ಬಸವನಾಳ್‌ ಗೊಲ್ಲರಹಟ್ಟಿ ಶಾಲೆ ಶಿಥಿಲವಾಗಿದೆ. ಮಕ್ಕಳು ಭಯದಲ್ಲಿ ಪಾಠ ಕೇಳಬೇಕಾಗಿದೆ. ಈ ಬಗ್ಗೆ ಗಮನ ಹರಿಸಿ ಎಂದು ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಗೀತಾ ಗಂಗಾನಾಯ್ಕ ಒತ್ತಾಯಿಸಿದರು.

ಆದ್ಯತೆ ಮೇರೆಗೆ ಸರ್ಕಾರಕ್ಕೆ ಹೊಸ ಕಟ್ಟಡಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಪ್ರಸ್ತಾವ ಸಲ್ಲಿಸುವುದಾಗಿ ಡಿಡಿಪಿಐ ಕೋದಂಡರಾಮ ತಿಳಿಸಿದರು.

ರೋಗಿಗಳಿಗೆ ಜನೌಷಧ ಮಳಿಗೆಯ ಔಷಧವನ್ನೇ ಬರೆಯುವಂತೆ ವೈದ್ಯರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಜಗಳೂರು ಆಸ್ಪತ್ರೆಯಲ್ಲಿ ರೋಗಿಗಳಿಗೆ ಸ್ಕಾನಿಂಗ್ ಮಾಡಲಾಗುತ್ತಿಲ್ಲ, ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಲಾಯಿತು.

ನೀರು ನಿರ್ವಹಣೆಗೆ ಮೂವರು ಸಿಬ್ಬಂದಿ!
ಸಾಸ್ವೆಹಳ್ಳಿ, ಬಸವಾಪಟ್ಟಣ, ಮಲೇಬೆನ್ನೂರು ಉಪ ವಿಭಾಗದಲ್ಲಿ ನೀರು ನಿರ್ವಹಣೆಗೆ ಸಿಬ್ಬಂದಿ ಕೊರತೆ ಇದೆ. 17 ಹುದ್ದೆ ಮಂಜೂರಾಗಿದ್ದರೂ ಕೇವಲ ಮೂವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಮಲೇಬೆನ್ನೂರು ಭದ್ರಾ ಅಚ್ಚುಕಟ್ಟು ಕೊನೆಯ ಭಾಗವಾಗಿದ್ದು, ಸರಿಯಾಗಿ ನೀರು ಸಿಗದೆ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಸ್ಥಾಯಿಸಮಿತಿ ಅಧ್ಯಕ್ಷ ಬಿ.ಎಂ.ವಾಗೀಶಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ನೀರಾವರಿ ಇಲಾಖೆಗೆ ರೈತರ ಬಗ್ಗೆ ಕಾಳಜಿ ಇಲ್ಲ. ಕಳೆದ 2 ವರ್ಷಗಳಿಂದ ಭದ್ರಾ ನೀರಿಲ್ಲದೆ ರೈತರು ಬೆಳೆ ಬೆಳೆದಿಲ್ಲ. ಈ ಬಾರಿ ನಾಲೆಯಲ್ಲಿ ನೀರು ಹರಿಸುತ್ತಿದ್ದರೂ ನಿರ್ವಹಣೆ ಸಮಸ್ಯೆಯಿಂದಾಗಿ ಕೊನೆಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಈಚೆಗೆ ನೀರು ಸಿಗದೆ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಎರಡೇ ದಿನಕ್ಕೆ ಡಿಸ್‌ಚಾರ್ಜ್‌’
ಜಿಲ್ಲಾ ಆಸ್ಪತ್ರೆಯ ಹೆರಿಗೆ ವಾರ್ಡ್‌ನಲ್ಲಿ ಸ್ವಚ್ಛತೆ ಇಲ್ಲ, ಬೆಡ್‌ಗಳು ಸಿಗದೆ ಗರ್ಭಿಣಿಯರು ನೆಲದ ಮೇಲೆ ಮಲಗುತ್ತಾರೆ ಎಂಬ ಸ್ಥಾಯಿ ಸಮಿತಿ ಅಧ್ಯಕ್ಷರ ಆರೋಪಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಆಸ್ಪತ್ರೆ ಅಧೀಕ್ಷಕಿ ಡಾ.ನೀಲಾಂಬಿಕೆ, ‘ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆ ಪ್ರಮಾಣ ಹೆಚ್ಚಾಗಿದ್ದು, 100 ಬೆಡ್‌ ಸಾಮರ್ಥ್ಯದ ಪ್ರತ್ಯೇಕ ಹೆರಿಗೆ ವಾರ್ಡ್‌ ಮಂಜೂರಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಆಸ್ಪತ್ರೆಯ ವೈದ್ಯರೇ ಅನಿವಾರ್ಯವಾಗಿ ಎರಡೇ ದಿನಕ್ಕೆ ಬಾಣಂತಿಯರನ್ನು ಡಿಸ್‌ಚಾರ್ಚ್‌ ಮಾಡುವಂತಹ ಪರಿಸ್ಥಿತಿ ಇದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT