ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಳ್ಳಗಿನ ಬಂಗಲೆ

Last Updated 17 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಅತಿ ನಾಜೂಕಿನ, ತುಸು ಹಳೆಯದಾಗಿ ತೋರುವ ಒಂದು ಸುಂದರ ಬಂಗಲೆ. ಕಟ್ಟಿಸಿದವರು ಊರಲ್ಲಿಲ್ಲ. ಇರುವಲ್ಲಿಂದಲೇ ಪ್ಲ್ಯಾನ್ ಕಳುಹಿಸಿಕೊಟ್ಟು ಕಟ್ಟಿಸಿದ್ದು. ಪಾಶ್ಚಿಮಾತ್ಯರ ಶೈಲಿ. ಕಪ್ಪು ಕಲ್ಲಿನ ಗೋಡೆ. ಭಾರತದ ಮನೆಗಳ ಹಾಗೆ ಗಾಳಿ ಮಳೆಗಳನ್ನು ಧಿಕ್ಕರಿಸುವ ಜಾಯಮಾನದ್ದಲ್ಲ. ನಾಜೂಕು. ಇಡೀ ಬಂಗಲೆ ತೆಳ್ಳತೆಳ್ಳಗೆ. ಪ್ರವೇಶದಲ್ಲೊಂದು ಪುಟ್ಟ ಚಾವಡಿ. ಅಲ್ಲಿಂದ ಇಳಿದು ಹೋಗಬೇಕು ದಿವಾನ ಖಾನೆಗೆ. ಎರಡು ಮೆಟ್ಟಿಲು ತಗ್ಗಿನಲ್ಲಿ ಉರುಟಾದ ದಿವಾನಖಾನೆ. ಗೋಡೆಗೆ ತಾಗಿಕೊಂಡೇ ಎಡದಿಂದ ಮೇಲಕ್ಕೆ ನೆಗೆದೇಳುವ ಉರುಟುರುಟು ಮಹಡಿಯ ಮೆಟ್ಟಿಲು. ಆ ಮೆಟ್ಟಿಲು ಕೂಡ ತೆಳ್ಳತೆಳ್ಳಗೆ. ವೃತ್ತಾಕಾರದ ತೆಳ್ಳಗಿನ ಗೋಡೆಗೇನೆ ಕೂರಿಸಿರುವ ಚಪ್ಪಡಿ ಕಲ್ಲುಗಳು!

ಬಹುಕಾಲದಿಂದ ಅರಿಜೋನಾದಲ್ಲಿದ್ದ ರಘುನಾಥ ಶೇಟ್ ಹಾಗೂ ಯಮುನಾ ಶೇಟ್ ಯಾವತ್ತಾದರೂ ಊರಿಗೆ ಬಂದರೆ ಇಲವಾಲದ ಹಳ್ಳಿಮೂಲೆಯ ಪುತ್ತುಶೇಟ್ ಮನೆಗೆ ಹೋಗದೆ ನಗರದಲ್ಲೇ ವಾಸಿಸಲೆಂದು ಕಟ್ಟಿಸಿದ ಬಂಗಲೆಯದು. ಎರಡು ವರ್ಷಗಳಿಂದ ಹಾಗೇ ಇದೆ. ಬಾಡಿಗೆಗೆ ಕೊಟ್ಟರೆ ಮನೆಹಾಳು! ಹಾಗೇ ಬಿಟ್ಟರೆ ಗೆದ್ದಲಿಗೆ ಆಹಾರ. ಕೊನೆಗೂ ಅರಿಜೋನಾದಲ್ಲಿದ್ದ ಮನೆಮಠಗಳನ್ನು ಮಗನ ವಶಕ್ಕೆ ಬಿಟ್ಟು ಉಳಿದಷ್ಟು ಕಾಲ ಊರಲ್ಲೆ ಎಂಬ ತೀರ್ಮಾನಕ್ಕೆ ಬಂದು ಎರಡೂ ಮುದಿ ಜೀವಗಳು ಬೆಂಗಳೂರಿನಲ್ಲಿ ಇಳಿದುಬಿಟ್ಟವು.

ಕೋರಮಂಗಲದ ಆ ಬಡಾವಣೆ ಪ್ರತಿಷ್ಠಿತರು ವಾಸಿಸುವ ತಾಣ. ತಮ್ಮ ಪ್ಲಾನಿನ ಹಾಗೆಯೇ ಬಂಗಲೆ ಸಿದ್ಧವಾಗಿದೆಯೆಂದು ಸಂತುಷ್ಟರಾದ ದಂಪತಿ ಬಲಗಾಲಿಟ್ಟು ಗೃಹ ಪ್ರವೇಶ ಮಾಡಿದರು. ತೆಳ್ಳಗಿನ ಗೋಡೆಗಳ, ತೆಳ್ಳಗಿನ ಮೆಟ್ಟಿಲುಗಳ ಬಗ್ಗೆ ರಘುನಾಥ ಶೇಟ್ ತಲೆ ಕೆಡಿಸಿಕೊಳ್ಳಲೇ ಇಲ್ಲ. ಅರಿಜೋನಾದಿಂದ ಕಳುಹಿಸಿದ ಡಿಸೈನ್ ತಾನೆ? ತೆಳ್ಳಗಿದ್ದರೂ ಗಟ್ಟಿ! ಸುರಿದ ದುಡ್ಡಿಗೆ ತಕ್ಕಹಾಗೆ ಇದೆ ಎಂಬುದು ರಘುನಾಥ ಶೇಟ್‌ರ ಅಭಿಪ್ರಾಯವಾದರೆ ಅವರ ಹೆಂಡತಿಯದು ಇನ್ನೊಂದೇ ಬಗೆಯ ತಲೆನೋವು.

ಮೊಣಕಾಲ ಗಂಟಿನ ವಿಪರೀತ ನೋವಿನಿಂದ ಬಳಲುತ್ತಿದ್ದ ಯಮುನಾ ಶೇಟ್ ಅರಿಜೋನಾದಲ್ಲಿದ್ದಾಗಲೇ ವಾಜಪೇಯಿ ಆಪರೇಷನ್ ಮಾಡಿಸಿಕೊಂಡಿದ್ದರು. ಗುಣವಾಯಿತೆಂದು ನಡೆಯತೊಡಗಿದ ಕೂಡಲೆ ಅವರ ಗ್ರಹಚಾರಕ್ಕೆ ತೊಡೆಯ ಸಂಧಿಯ ಎಲುಬು ಮುರಿದು ಮತ್ತೆ ಮತ್ತೆ ಆಪರೇಷನ್‌ಗೆ ಒಳಗಾಗಿದ್ದರು. ಅವರು ಅಡುಗೆ ಮನೆಯಿಂದ ಎರಡು ಮೆಟ್ಟಲಿಳಿದು ದಿವಾನಖಾನೆಗೆ ಬಂದು ಅಲ್ಲಿಂದ ಮತ್ತೆ ಎರಡು ಮೆಟ್ಟಲೇರಿ ಚಾವಡಿಗೆ ಬರಬೇಕಿದ್ದರೆ ಬೆಲ್ ಒತ್ತಿ ಬಾಗಿಲಲ್ಲಿ ಕಾಯುವಾತ- ಆತ ಯಾರೇ ಆಗಿದ್ದರೂ- ಮರಳಿ ಹೋಗಿ ಅರ್ಧ ಗಂಟೆಯೇ ಆಗಿಬಿಟ್ಟಿರುತ್ತಿತ್ತು. ಇನ್ನು, ತೆಳ್ಳಗಿನ ಚಪ್ಪಡಿಕಲ್ಲುಗಳನ್ನೇರಿ ಮಹಡಿಗೆ ಹೋಗುವ ಸಾಹಸ ಅವರಿಗೆ ಯಾವ ಕಾಲಕ್ಕೂ ಬೇಕಾಗಿರಲಿಲ್ಲ.

ಯಮುನಾಬಾಯಿ ಒಬ್ಬರೇ ಮನೆಯಲ್ಲಿರಬೇಕಾದ ಪ್ರಮೇಯ ಬಂದಾಗಲೆಲ್ಲ ಪ್ರವೇಶ ದ್ವಾರದ ಒಳಪಕ್ಕದ ಚಪ್ಪಲಿ ಸ್ಟ್ಯಾಂಡಿನ ಬಳಿ ಕುರ್ಚಿ ಹಾಕಿ ಕುಳಿತೇ ಇರುತ್ತಿದ್ದರು. ವಾಕಿಂಗ್ ಹೋದ ಗಂಡನಾಗಲೀ ಕೆಲಸದಾಕೆ ಭದ್ರೆಯಾಗಲೀ ಬಂದಾಗ ಅಬ್ಬ! ಬಂದಿರಲ್ಲ! ಎನ್ನುತ್ತಾ ಹೇಗೋ ಒಳಗೆ ಹೋಗಿ ಕಾಲನ್ನು ತೊಡೆಯಿಂದ ಎತ್ತಿ ಹಾಸಿಗೆಯಲ್ಲಿಟ್ಟು ಆಯಾಸ ಪರಿಹರಿಸಿಕೊಳ್ಳುತ್ತಿದ್ದರು.

ಈ ಮನೆಯಂತೂ ತನಗಾಗದ ಬಾಬತ್ತು ಎಂದು ಯಮುನಾಬಾಯಿ ಒಂದೆರಡು ವಾರದಲ್ಲೇ ತೀರ್ಮಾನಿಸಿಬಿಟ್ಟರು. ಅಮೆರಿಕಕ್ಕಂತೂ ಮರಳಿ ಹೋಗುವ ಪ್ರಮೇಯವಿರಲಿಲ್ಲ. ‘ನಾವು ಇಲವಾಲಕ್ಕೇ ಹೋಗಿ ಬಿಡೋಣಾರೀ. ಇನ್ನೊಂದು ಹೆಜ್ಜೆ ಈ ಮನೇಲಿ ಇಡೋದಿಲ್ಲ ನಾನು. ಇಟ್ರೆ ಸತ್ತೇ ಹೋಗ್ತೇನೆ’ ಯಮುನಾಬಾಯಿ ನೋವನ್ನೇ ಅಳುವನ್ನೇ ಅಸ್ತ್ರ ಮಾಡಿದರು.

‘ಏನು ಹೇಳ್ತೀಯೇ ನೀನು? ಬೇಕೂಂತ ಆಸೆಪಟ್ಟು ಕಟ್ಟಿಸಿದ ಬಂಗ್ಲೆ. ಕೈಯಳತೆಯಲ್ಲಿ ದಿನಸಿ, ತರಕಾರಿ ಅಂಗಡಿ, ವಾಕಿಂಗ್ ಮಾಡ್ಲಿಕ್ಕೆ ಪಾರ್ಕು, ಇಸ್ಪೀಟಾಟಕ್ಕೆ ಕ್ಲಬ್ಬು, ಕೆಲಸಕ್ಕೆ ಜನ- ಎಲ್ಲ ಇದೆ. ಸುಮ್ನಿರು.’ ರಘುನಾಥ ಶೇಟ್ ಹೆಂಡತಿಯ ಬಾಯಿ ಮುಚ್ಚಿಸುವ ಪ್ರಯತ್ನ ಪಡುತ್ತಲೇ ಇದ್ದರು.

ಆ ಒಂದು ದಿನ ಯಮುನಾ ಶೇಟ್ ಊರಿನಿಂದ ಕಾರುಬಾರಿಯನ್ನು ಕರೆಸಿ, ಗಂಟು ಮೂಟೆ ಕಟ್ಟಿಸಿ ಹೊರಡುವ ಸಿದ್ಧತೆ ಮಾಡಿದರು. ಬೇರೆ ದಾರಿ ಕಾಣದೆ ರಘುನಾಥ ಶೇಟರು ತನ್ನ ಬಟ್ಟೆಬರೆಗಳನ್ನೂ ಗಂಟುಕಟ್ಟುವಂತೆ ಕಾರುಬಾರಿಗೆ ತಿಳಿಸಿದರು.

***

ವಾಸಿಸುವುದಿಲ್ಲ ಅಂದಮೇಲೆ ಕೋರಮಂಗಲದಲ್ಲಿ ಮನೆ ಯಾಕೆ? ಎಷ್ಟು ಕಡಿಮೆಗೆ ಸಾಧ್ಯವೋ ಅಷ್ಟು ಕಡಿಮೆಗೆ ದಕ್ಕಿಸೋಣವೆಂದು ವಾಮನ ಬಾಳಿಗರು ಅಮೆರಿಕದಲ್ಲಿರುವ ತನ್ನ ಮಗಳಿಗೆ ಫೋನು ಮಾಡಿದರು. ಅವಳಿಗೂ ಊರಿನಲ್ಲೊಂದು ಸ್ವಂತ ಮನೆ ಬೇಕೂಂತಿತ್ತು. ಶೇಟರ ಜೊತೆ ಕೊಂಕಣಿಯಲ್ಲೇ ಮಾತಾಡುತ್ತ, ಪುಸಲಾಯಿಸುತ್ತ, ಮಗಳು ಸೋನಾಲಿ ಕೇಂದ್ರೆಯ ದುಡ್ಡಿನಲ್ಲಿ ಆ ತೆಳ್ಳಗಿನ ಬಂಗಲೆಯನ್ನು ಕೊಂಡುಕೊಂಡರು. ಬಂಗಲೆಯಿಂದ ಬರುವ ಬಾಡಿಗೆಯನ್ನು ನಿವೃತ್ತ ಬದುಕು ಸಾಗಿಸುತ್ತಿದ್ದ ಅಪ್ಪ ತಮ್ಮ ಅಗತ್ಯಕ್ಕೆ ಬಳಸಿಕೊಳ್ಳಬಹುದೆಂದು ಹೇಳಿ ಆಕೆ ಹಿಂದಿರುಗಿದ್ದಳು. ಅದು ಅವಳಾಗಿ ಹೇಳಿದಳೋ ಅಥವಾ ಇವರಾಗಿ ಕೇಳಿದರೋ ಎಂಬುದು ಬಾಳಿಗರ ಪತ್ನಿ ಕಮಲಮ್ಮನಿಗೆ ಗೊತ್ತೇ ಆಗಲಿಲ್ಲ.

ಬಾಡಿಗೆಗೆ ಜನ ಸಿಗುವುದು ಕಷ್ಟವಾದರೆ ಪುಟ್ಟ ಮಕ್ಕಳ ಶಾಲೆ ನಡೆಸುವುದಕ್ಕೆ ಕೊಡೋಣ. ಅಥವಾ ಪಕ್ಕದಲ್ಲೇ ಇರುವ ಕಲ್ಯಾಣಮಂಟಪಕ್ಕೆ ಬರುವವರಿಗೆ ಎರಡೆರಡು ದಿನಕ್ಕೆ ಬಾಡಿಗೆಗೆ ಕೆಡೋಣ, ಅಲ್ಲಿಗೆ ಬರ‍್ತಾ ಇರ‍್ತಾರಲ್ಲ ಜನ - ಹೀಗೆಲ್ಲ ಲೆಕ್ಕ ಹಾಕಿದರು ವಾಮನ ಬಾಳಿಗರು.

ವಾಮನ ಬಾಳಿಗರ ಮನೆಯಲ್ಲೂ ಇಬ್ಬರೆ. ಸ್ವಂತ ಮನೆ. ಗುಮಾಸ್ತಗಿರಿಯಿಂದ ನಿವೃತ್ತಿಯಾದಾಗ ಸಿಕ್ಕಿದ ಹಣ ಹಾಗೂ ಇದ್ದ ಇತರೆ ದುಡ್ಡಿನಿಂದ ಆ ಮನೆ ಕೊಂಡಿದ್ದರು. ಇನ್ನಾದರೂ ಒಂದಷ್ಟು ಬ್ಯಾಂಕ್ ಬ್ಯಾಲೆನ್ಸ್ ಗುಡ್ಡೆ ಹಾಕಬೇಕೆಂಬ ಕನಸು ಮೊದಲಿನಿಂದಲೂ ಇತ್ತು. ಬಾಳಿಗರು ಹಾಗೇನೆ. ಕಂಜೂಸಿ ಬುದ್ದಿ. ಅದೊಂದು ವಿಚಾರ ಹೆಂಡತಿಗೆ ಆಗುತ್ತಿರಲಿಲ್ಲ. ಅವರಿಗೋ ಟಿಪಿಕಲ್ ಕೊಂಕಣಿ ಹೆಂಗಸರ ಹಾಗೆ ಒಂದೆರಡು ಹವಳದ ಸರ, ಒಂದು ಅವಲಕ್ಕಿ ಸರ, ಒಂದು ಕೊತ್ತಂಬರಿ ಸರ ಹಾಕ್ಕೊಂಡು ಕಾಂಜೀವರಂ ಸೀರೆ ಉಟ್ಟು ವೆಂಕಟರಮಣ ಜಾತ್ರೆಯ ವೇಳೆ ಮನೆಯ ಹೊಸ್ತಿಲಲ್ಲಿ ಕುಳಿತು ಮೆರೆಯಬೇಕೆಂಬ ಬದುಕಿನ ಆಸೆ. ಅದಕ್ಕೆ ಬಾಳಿಗರು ಬಾಯಿ ತೆರೆಯುವ ಸ್ವಾತಂತ್ರ್ಯ ಕೊಟ್ರೆ ತಾನೆ? ಆಕೆಯದು ಗಂಡ ತಂದುಕೊಟ್ಟದ್ದನ್ನು ಬೇಯಿಸಿಹಾಕುವ ಕೆಲಸ. ಗಂಡ ಮನೆಯಲ್ಲಿಲ್ಲದಾಗ ನಾಲಗೆಯ ಚಪಲ ತೀರಿಸಿಕೊಳ್ಳುವುದಕ್ಕೆ ಯಾರಾದರೂ ಸಿಕ್ಕರೆ ಸಾಕು, ಬಾಳಿಗರ ಪಿಟ್ಟಾಸಿ ಬುದ್ಧಿಯ ಬಗ್ಗೆ ಅವರ ಕಿವಿ ಕೊರೆಯುತ್ತಿದ್ದರು.

ಬಾಳಿಗರಾದರೋ ಬಂಗಲೆ ಬಾಡಿಗೆಗೆ ಕೇಳಲು ಯಾರಾದರೂ ಬಂದರೆ ಅವರೆದುರು ಆ ಬಂಗಲೆಯನ್ನು ಇನ್ನಿಲ್ಲದಂತೆ ವರ್ಣಿಸಿ ಕೊನೆಗೆ ಇದಕ್ಕೆ ನಲುವತ್ತು ಸಾವಿರವಾದರೂ ಬಾಡಿಗೆ ಸಿಗಬೇಕೆಂದು ವಾದಿಸುತ್ತಿದ್ದರು. ಅದು ಕೇಳಿ, ಮತ್ತೆ ಬರುತ್ತೇವೆಂದು ಹೋದವರು ಆ ದಾರಿಯಲ್ಲಿ ಸುಳಿಯುತ್ತಿರಲಿಲ್ಲ!

***

ಚಂದುಶೆಟ್ಟರು ಎರಡು ಬಾರಿ ಬಂದಾಗಲೂ ಬಾಳಿಗರು ಮನೆಯಲ್ಲಿ ಇರಲಿಲ್ಲ. ಕಮಲಮ್ಮ ತನ್ನ ಗಂಡನ ಬಳಿ ವಿಷಯ ತಿಳಿಸಿರಲೂ ಇಲ್ಲ. ಮೊದಲ ಬಾರಿ ಬಾಗಿಲನ್ನು ಅರೆ ತೆರೆದಿದ್ದ ಆಕೆ ಎರಡನೆಯ ಬಾರಿ ಚಂದುಶೆಟ್ಟರು ಬಂದಾಗ ಪೂರ್ತಿ ತೆರೆದು ಹೊಸ್ತಿಲಲ್ಲಿ ಕುಳಿತು ಮಾತಿಗೆ ತೊಡಗಿದರು: ‘ನೋಡಿ ಇವ್ರೆ, ನಲುವತ್ತು ಸಾವಿರ, ನಲುವತ್ತು ಸಾವಿರ ಅಂತ ಬಡಕೊಳ್ತಾ ಒಂದು ವರ್ಷ ಕಳೆದ್ರೇ! ಆಸೆ ಇರ‍್ಬೇಕು ಮನುಷ್ಯನಿಗೆ, ದುರಾಸೆ ಇರ‍್ಬಾರ‍್ದೇ! ನಿಮ್ಗಿದು ಗೊತ್ತಾ? ಅದ್ರ ವಾಸ್ತೂನೇ ಸರಿಯಿಲ್ವೇ! ಅದು ನೋಡೋದಕ್ಕೆ ಮಾತ್ರ. ಅಮೆರಿಕಾದವ್ರ ಪ್ಲಾನ್‌ನಲ್ಲಿ ಕಟ್ಟಿದ್ದಲ್ವೇ! ಅವರಿಗೆ ನಮ್ಮ ವಾಸ್ತು ಎಂತ ಗೊತ್ತುಂಟೂ? ಅದಕ್ಕೇ ಅಲ್ವೇ ಅಲ್ಲಿ ಸಾವೂ ನೋವೂಂತ ಆದದ್ದು?’

ಶೆಟ್ರಿಗೆ ಒಮ್ಮೆಲೆ ಎದೆ ಧಸಕ್ಕೆಂದಿತು: ‘ಏನದು ಸಾವು ನೋವು?’

‘ನಿಮಗದು ಗೊತ್ತಿಲ್ವೇ! ನೋಡ್ರಿ, ನನ್ನ ಸುದ್ದಿ ಎತ್ತೋದಿಲ್ಲಾಂತಂದ್ರೆ ಹೇಳ್ತೇನೆ. ಆಮೇಲೆ ನಾನು ಹಾಗೆ ಹೇಳಿದೆ, ಹೀಗೆ ಹೇಳಿದೇಂತ್ಹೇಳಿದ್ರೆ ನನ್ನನ್ನಿಲ್ಲಿ ಬದುಕ್ಲಿಕ್ಕೆ ಬಿಡ್ಲಿಕ್ಕಿಲ್ವೇ!’

‘ನಾ ಅಂತೋನಲ್ಲ. ಆ ಬಗ್ಗೆ ಚಿಂತೆ ಬೇಡ.’

‘ಹಾಗಾದ್ರೆ ಕೇಳಿ. ರಘುನಾಥ ಶೇಟ್ ಅಂತ ಬಂಗಲೆಯ ಯಜಮಾನರು. ಇಲ್ಲಿ ಬಂದು ವಾಸ ಸುರು ಮಾಡಿದ್ರೇ!.. ಅವರಿಗೂ ನಮ್ಮ ಇವರಿಗೂ ಕೂಡಿ ಬಂತೇ!.. ಇಬ್ಬರೂ ಕೊಂಕಣಿ, ಗೊತ್ತಾಯ್ತಲ್ವೇ! ಅವರ ಹೆಂಡತಿ ಯಮುನಾ ಬಾಯಿಗೆ ವಿಪರೀತ ಕಾಲು ನೋವು. ಕೆಲಸಕ್ಕೇಂತ ಇಲವಾಲದ ಒಬ್ಳು ಹುಡುಗೀನ ತರಿಸಿ ಇಟ್ಕೊಂಡಿದ್ರೇ!..ಒಂದೇ ವಾರ... ಅದು ಮಹಡಿ ಮೆಟ್ಟಿಲಿನಿಂದ ಉರುಳಿ ಸತ್ತುಬಿಡೋದೆ!?’

‘ಪಡ್ಚಾನಾ! ಆಮೇಲೆ?’

‘ಆಮೇಲೆಂತ! ಶೇಟರು ಓಡಿಕೊಂಡು ಬರೋದು ಇಲ್ಲಿಗೇ ಅಲ್ವೇ? ಇಬ್ಬರೂ ಸೇರಿ ರಾತ್ರೋ ರಾತ್ರಿ ಹೆಣವನ್ನು ಇಲವಾಲಕ್ಕೆ ಸಾಗಿಸಿ ಬಿಟ್ರೇ!.. ಪಾಪದವರ ಮಗು ಅಲ್ವೇ? ಆಮೇಲೆ ಶೇಟರು ಎಲ್ಲಾ ಸರಿಮಾಡಿದ್ರೇ..!’

‘ಅನ್ಯಾಯ.’

‘ಅನ್ಯಾಯ ಎಂತ? ಆಮೇಲೆ ಯಮುನಾಬಾಯಿ ಆ ಮನೇಲಿ ನಿಲ್ಲಿಕ್ಕೇ ಕೇಳ್ಳಿಲ್ವೆ? ವಾಸ್ತು ಸರಿಯಿಲ್ಲಾಂತ ಒಂದೇ ಹಠ. ಮತ್ತೆಂತ. ಶೇಟರು ಇವ್ರನ್ನು ಕರ‍್ದು ಸಿಕ್ಕಿದ ಕ್ರಯಕ್ಕೆ ಮಾರಿ ಇಲವಾಲಕ್ಕೆ ಹೊರಟುಬಿಟ್ರೇ... ಇವ್ರು ಅಮೆರಿಕಾದಲ್ಲಿರೋ ನನ್ನ ಮಗಳನ್ನು ಬರ‍್ಸಿದ್ದು, ಮೂರು ಕಾಸಿಗೆ ಬಂಗ್ಲೆ ಕೊಂಡದ್ದು, ಅಷ್ಟೆ... ಮಗ್ಳು ಬರೋ ಸುದ್ದಿ ನಂಗೆ ಗೊತ್ತೇ ಇರ್ಲಿಲ್ಲ ಮಾರಾಯ್ರೆ... ಗುಟ್ಟು... ಎಲ್ಲ ಗುಟ್ಟು ಮಾಡಿದ್ರೇ! ಯಾಕೆ? ಕಾಸು ಅವಳ್ದಲ್ವೇ! ಇವ್ರೇನು ಕಾಸು ಬಿಚ್ಚಿದ್ದಲ್ವಲ್ಲ. ಗೊತ್ತಾಯ್ತಲ್ವೇ’ ಕಮಲಮ್ಮ ಗಂಡನ ಬಗ್ಗೆ ನಂಜು ಕಾರಿದರು.

‘ಹುಡುಗಿ ಸತ್ತದ್ದಕ್ಕೂ ವಾಸ್ತುವಿಗೂ ಏನು ಸಂಬಂಧ?’ ಚಂದು ಶೆಟ್ಟರು ಸಹಜವಾಗಿಯೇ ಕೇಳಿದರು.

‘ಅಯ್ಯೋ, ನೀವೆಂತ ಮಾರಾಯ್ರೆ, ನಾಸ್ತಿಕರಾ? ಆಮೇಲೆ ನೋಡಿ, ಇವ್ರು ಆ ಮನೆಗೆ ಸುಣ್ಣ ಬಣ್ಣ ಬಳ್ಸಿ ಚೆಂದ ಮಾಡಿದ್ರು. ಏನಾಯ್ತು? ಏನೂ ಆಗ್ಲಿಲ್ಲ. ಇವ್ರ ನಲುವತ್ತು ಇಳೀಲೇ ಇಲ್ಲ, ಗೊತ್ತಾಯ್ತಲ್ವೋ.’

ಗಂಡನ ವ್ಯವಹಾರದ ಬಗ್ಗೆ ಹೆಂಡತಿಗೆ ತೃಪ್ತಿಯಿಲ್ಲ ಎಂಬುದನ್ನು ಅರ್ಥೈಸಿಕೊಂಡ ಚಂದುಶೆಟ್ಟರು, ‘ಈಗ ನಾನೇನು ಮಾಡ್ಲಿ? ನೀವೇ ಹೇಳ್ಬೇಕು’ ಎಂದರು.

‘ನೋಡಿ, ವಾಸ್ತು ದೋಷ ಇದೇಂತ ನೀವು ಇವ್ರಿಗೆ ಗಟ್ಟಿಯಾಗಿ ಹೇಳಿ. ಅದೆಲ್ಲ ನಾನೇ ಪರಿಹಾರ ಮಾಡಿಸಿಕೊಳ್ತೇನೇಂತ ಹೇಳಿ. ನಾನಲ್ದೆ ಇನ್ನೊಬ್ಬ ಬರ‍್ಲಿಕ್ಕಿಲ್ಲ ಈ ಭೂತ ಬಂಗಲೆಗೇಂತ ಹೇಳಿ. ಮೆಟ್ಟಲಿನಿಂದ ಬಿದ್ಲೂಂತೆಲ್ಲ ಯಾರೋ ಹೇಳ್ತಿದ್ರೂಂತ ಹೇಳಿ. ಅಷ್ಟು ಸಾಕು. ಎಲ್ಲ ಆದ ಮೇಲೆ ಹತ್ತು ಸಾವಿರಾಂತ ಹೇಳಿ. ನೋಡಿ, ಅದು ದುಡ್ಡಿನ ಭೂತಾ. ನಿಮ್ಮನ್ನು ಮೇಲೆ ಕೆಳಗೆ ಮಾಡಿಯಾರು. ರಕ್ತ ಬರೋವರೆಗೂ ಹಾಲು ಕರೆಯೋ ಜನ ಅದು. ಗೊತ್ತಾಯ್ತಲ್ವೇ!’ ಆಕೆಯ ಮಾತಿನ ಮರ್ಮ ಹಿಡಿದು ಶೆಟ್ಟರು, ‘ಆಯ್ತಮ್ಮ, ಎಲ್ಲ ನೀವು ಹೇಳಿದ ಹಾಗೆ’ ಎಂದರು.

ಆಕೆ ಒಮ್ಮೆಲೆ, ‘ಏಂತಯೆಂತಾ? ನಾನು ಹೇಳಿದ ಹಾಗೆ? ಇಗೊಳ್ಳಿ, ನಾನೇನೂ ಹೇಳ್ಳಿಲ್ಲ; ನೀವೇನೂ ಕೇಳ್ಳಿಲ್ಲ, ಗೊತ್ತಾಯ್ತಲ್ವೇ’ ಎನ್ನುತ್ತಾ ದಢಾರನೆ ಬಾಗಿಲು ಮುಚ್ಚಿ ಒಳಗೆ ಹೋದರು.

ಮರುದಿನ ಬೆಳ್ಳಂಬೆಳಗ್ಗೆ ಚಂದು ಶೆಟ್ಟರು ಮತ್ತೆ ಬಂದರು. ಬಾಳಿಗರ ಜೊತೆ ಎಚ್ಚರಿಕೆಯಿಂದ ಮಾತನಾಡಿದರು. ಶೆಟ್ಟರ ಮಾತು ಕೇಳ್ತಾಕೇಳ್ತಾ ತಾನೇ ಮೆಟ್ಟಿಲಿನಿಂದ ಉರುಳಿಬಿದ್ದ ಅನುಭವವಾಯಿತು. ಆ ಎತ್ತರದಲ್ಲಿದ್ದ ಬಾಳಿಗರು ಒಮ್ಮೆಲೆ ಧ್ವನಿಯಿಳಿಸಿ ಕೊನೆಗೂ ಹದಿನೈದಕ್ಕೆ ಅಂಗಲಾಚಿ ಒಪ್ಪಿಸಿದರು. ಶೆಟ್ಟರು ಒಳಗೊಳಗೇ ಖುಷಿಪಡುತ್ತಾ ತೋರಿಕೆಗೆ ಹೆಚ್ಚಾಯ್ತು ಎಂದರೂ ಬಾಳಿಗರನ್ನು ಮಕಾಡೆ ಮಲಗಿಸಿಬಿಟ್ಟಿದ್ದರು!

ಬಾಳಿಗರು ಮನೆಯಲ್ಲಿಲ್ಲದ ಹೊತ್ತಿನಲ್ಲಿ ಕಮಲಮ್ಮ ಶೆಟ್ಟರನ್ನು ಕರೆಸಿ, ‘ನೀವೇನೂ ಪ್ರಯೋಜನ ಇಲ್ಲ ಶೆಟ್ಟರೆ. ಹದಿನೈದಕ್ಕೆ ಒಪ್ಪಿದ್ರೇ! ನೋಡಿ, ಪೈಪಿನಲ್ಲಿ ನೀರೇ ಬರೋದಿಲ್ಲಾಂತ ನಿನ್ನೆ ನಿಮ್ಮ ಕೆಲ್ಸದೋಳು ಹೇಳ್ತಿದ್ಲೇ! ಎಲ್ಲಾ ಕಿಲುಬು ಹಿಡಿದಿರಬೇಕೇ! ಪಟ್ಟು ಹಿಡಿದು ಪೈಪ್ ಲೈನ್ ಚೇಂಜ್ ಮಾಡಿಸ್ಕೊಳ್ಳಿ. ಗೊತ್ತಾಯ್ತಲ್ವೇ’ ಎಂದರು.

‘ಅಯ್ಯೋ, ನೀವು ಅದು ಹೇಳ್ತೀರಾ. ಎಲ್ರೂ ಮನೆ ತೆಳ್ಳಿಗಿದೆ ಅನ್ತಿದ್ರು. ನಾನದಕ್ಕೆ ಕವಡೆ ಬೆಲೇನೂ ಕೊಟ್ಟಿರ‍್ಲಿಲ್ಲ. ಈಗ ನೋಡಿ, ಮೂರ‍್ನಾಲ್ಕು ಕಡೆ ಬಿರುಕು ಬಿಟ್ಟಿದೆ. ಮಳೆ ಬರ‍್ಲಿಕ್ಕೆ ಶುರು ಆದ್ರೆ ಎಂತ ಮಾಡೋದು?’ ಶೆಟ್ಟರು ಅವರ ಪ್ರತ್ಯುತ್ತರಕ್ಕೆ ಕಾದರು.

‘ಅದಕ್ಕೇ ಹೇಳಿದ್ದು, ಹತ್ತಕ್ಕಿಂತ ಪೈಸೆ ಹೆಚ್ಚು ಕೊಡ್ಬೇಡೀಂತ. ಏನು ಪ್ರಯೋಜನ? ಅವರು ರಿಪೇರಿ ಮಾಡಿಸದಿದ್ರೇ? ಯಾವುದಕ್ಕೂ ನಾಳೆ ಬೆಳಿಗ್ಗೆ ಅವರಿರುವಾಗ್ಲೇ ಬನ್ನಿ. ಅದೇನು ಉಪಾಯ ಹೂಡ್ತೀರೊ ನೋಡಿ, ಗೊತ್ತಾಯಿತಲ್ವೇ!’ ಎನ್ನುತ್ತಾ ಒಳಗೆ ಹೋದರು.

ಮರುದಿನ ಮುಂಜಾನೆ ಬಾಳಿಗರು ಸರ್ಕೀಟು ಹೊಡೆಯಲು ಹೊರಡುವುದಕ್ಕೆ ಮುನ್ನವೇ ಚಂದು ಶೆಟ್ಟರು ಬಂದು ಕೂತಿದ್ದರು. ಅವರು ಕೇಳುವುದಕ್ಕೆ ಮೊದಲೇ ಹತ್ತಾರು ವಿಚಾರಗಳನ್ನು ಬಾಳಿಗರೇ ಹೇಳಿ ಮುಗಿಸಿದ್ದರು. ಅಷ್ಟರಲ್ಲಿ ಬಂದವರಿಗೆ ಒಂದು ಲೋಟ ನೀರು ತಂದಿಡಲೆಂದು ಬಂದ ಕಮಲಮ್ಮ ‘ಪಾಪ, ನಿನ್ನೇನೂ ಬಂದಿದ್ರು’ ಎಂದರು. ಒಮ್ಮೆಲೆ ಬಾಳಿಗರು ಪಿತ್ತ ನೆತ್ತಿಗೇರಿಸಿಕೊಂಡು, ‘ಯಾಕೆ? ನಿನ್ನತ್ರ ಪಟ್ಟಾಂಗ ಮಾಡ್ಲಿಕ್ಕೆ ಬಂದಿದ್ರಾ? ಒಳಗೆ ನಡೀತೀಯೋ ಇಲ್ವೊ ರಂಡೆ’ ಎನ್ನುತ್ತ ರೌದ್ರ ರೂಪ ತಾಳಿದರು. ಅದು ತನಗೇ ಇಟ್ಟದ್ದು ಎಂಬುದನ್ನು ಅರ್ಥಮಾಡಿಕೊಂಡ ಶೆಟ್ಟರು ತಾವು ಸಿದ್ಧಮಾಡಿಕೊಂಡು ಬಂದಿದ್ದ ಕಟ್ಟಡದ ಬಿರುಕು, ನಡುರಾತ್ರಿ ಭೂತದ ಅಜನೆಯ ಕತೆಗಳನ್ನು ಹೇಳಲಾಗದೆ ಬಾಯಲ್ಲೇ ಉಳಿಸಿಕೊಂಡು ಸೀದಾ ನಡೆದುಬಿಟ್ಟರು.

***

ಅದೇನು ದುರದೃಷ್ಟವೊ, ಯಜಮಾನಿಕೆಯ ಸುಖವನ್ನು ಪೂರ್ತಿಯಾಗಿ ಅನುಭವಿಸುವುದಕ್ಕೆ ಬಾಳಿಗರಿಗೆ ಸಾಧ್ಯವಾಗಲಿಲ್ಲ. ಮೊದಲೇ ಹೃದ್ರೋಗಿಯಾಗಿದ್ದ ಬಾಳಿಗರಿಗೆ ಆವೊಂದು ರಾತ್ರಿ ಎದೆನೋವು ಕಾಣಿಸಿಕೊಂಡದ್ದನ್ನು ಹಠಮಾರಿ ಬಾಳಿಗರು ಹೆಂಡತಿಗೆ ಹೇಳಿಯೇ ಇರಲಿಲ್ಲ!

ಆಸ್ಪತ್ರೆಗೆ ಸಾಗಿಸುವುದು ತಡವಾದುದೂ ಸಾವಿಗೆ ಕಾರಣವಾಯಿತು. ಅಮೆರಿಕದಿಂದ ಮಗಳು ಬಂದಮೇಲೆ ಅಂತ್ಯಕ್ರಿಯೆ ನಡೆಯಿತು. ಎಲ್ಲಾ ಮುಗಿಸಿ ಮತ್ತೆ ನಾಲ್ಕು ದಿನದಲ್ಲಿ ಸೋನಾಲಿ ಕೇಂದ್ರೆ ಹೊರಟು ನಿಂತಳು. ಹೊರಡುವ ಮುನ್ನ ಆಕೆ ಶೆಟ್ಟರನ್ನು ಕರೆಸಿ, ಇನ್ನು ಮುಂದೆ ಬಂಗಲೆ ತಾಯಿಯವರ ಸುಪರ್ದಿಯಲ್ಲಿರುತ್ತದೆ. ಬಾಡಿಗೆ, ರಿಪೇರಿ ಏನೇ ಇದ್ರೂ ಅಮ್ಮನಿಗೆ ಹೇಳಿದರಾಯಿತು ಎಂದೂ ತಿಳಿಸಿದಳು.

ಚಂದುಶೆಟ್ಟರಿಗೆ ಬಾಳಿಗರು ತೀರಿಹೋದದ್ದರ ಬಗ್ಗೆ ಬೇಸರವಿತ್ತು. ಆದರೆ ಮುಂದಿನ ದಿನಗಳಲ್ಲಿ ಬಾಡಿಗೆದಾರನ ಸಮಸ್ಯೆಗಳಿಗೆ ಪರಿಹಾರ ಕೊಡಬಲ್ಲ ಯಜಮಾನಿ ಸಿಕ್ಕಿದರಲ್ಲ ಎಂಬ ಸಮಾಧಾನವೂ ಇತ್ತು.

ನೋಡುತ್ತಿದ್ದಂತೆಯೇ ಮಳೆಗಾಲ ಓಡೋಡಿ ಬಂತು. ಅದಕ್ಕೆ ಪೂರ್ವಭಾವಿಯಾಗಿ ಆ ತೆಳ್ಳನೆಯ ಮನೆ ಬಸವಳಿಯದ ಹಾಗೆ ಪ್ರತಿಬಂಧಕಗಳನ್ನು ರಚಿಸಬೇಕಿತ್ತು. ಮೂರು ನಾಲ್ಕು ಗೋಡೆಗಳ ಬಿರುಕು, ಕೆತ್ತೆಕೆತ್ತೆಯಾಗಿ ಮೇಲಿಂದ ಬಿದ್ದು ಮಟಾಷ್ ಆಗುತ್ತಿದ್ದ ಸಿಮೆಂಟು, ಅದಕ್ಕೆ ಪ್ಲಾಸ್ಟರಿಂಗು-ಎಲ್ಲ ಆಗಬೇಕಿತ್ತು.

ಕಮಲಮ್ಮ ಅರ್ಥಮಾಡಿಕೊಂಡಷ್ಟು ಚೆನ್ನಾಗಿ ಸಮಸ್ಯೆಯನ್ನು ಬಾಳಿಗರು ಅರ್ಥಮಾಡಿಕೊಂಡಿರಲಿಲ್ಲ. ಇದೀಗ ಅವರಲ್ಲೇ ನಿವೇದಿಸಿ ಪರಿಹರಿಸಿಕೊಂಡರಾಯಿತು ಎಂದುಕೊಂಡ ಚಂದುಶೆಟ್ಟರು ಬಾಳಿಗರ ಮನೆಯ ಬೆಲ್ ಒತ್ತಿದರು.

ಕಮಲಮ್ಮನದು ಒಂದೇ ಮಾತು: ‘ಇಷ್ಟೆಲ್ಲ ಸಮಸ್ಯೆ ಇದೇಂತ ಅವರಿರುವಾಗ ಯಾಕೆ ಹೇಳ್ಳಿಲ್ಲ? ಅವರು ಹೋಗ್ಲೀಂತ ಕಾಯ್ತಾ ಇದ್ರ ಇಷ್ಟು ಕಾಲ? ಎಲ್ಲಿಂದ ತರ‍್ಲಿ ಇಷ್ಟೊಂದು ಹಣ ರಿಪೇರಿಗೆ?’

‘ಇಲ್ಲ ಕಮಲಮ್ಮ, ಈಗ ನೀವೇನೂ ಖರ್ಚು ಮಾಡ್ಬೇಡಿ. ನಾನೇ ಮಾಡಿಸ್ತೇನೆ. ಲೆಕ್ಕ ಚುಕ್ತಾ ಆಗೋ ತನಕ ಬಾಡಿಗೆ ಕೇಳದಿದ್ರೆ ಆಯ್ತು.’

‘ನಾನಿಲ್ಲಿ ನಾಲ್ಕು ಕಾಸು ಕೈಗೆ ಬರುತ್ತೇಂತ ಕೂತ್ರೆ ನೀವು ಬಾಡಿಗೆ ಕೊಡೋದಿಲ್ಲಾ ಅನ್ತೀರೇನ್ರಿ? ನಿಮ್ಮ ಈ ಆಲೋಚನೆ ಮನಸ್ಸಿನಲ್ಲಿಟ್ಕೊಳ್ಳಿ. ಬಾಡಿಗೆ ಮಾತ್ರ ಕ್ರಮಪ್ರಕಾರ ಕೊಡಿ, ಆಮೇಲೆ ಏನು ಬೇಕಾದ್ರೂ ಮಾಡ್ಕೊಳ್ಳಿ.’

ದಂಗು ಬಡಿದವರಂತೆ ನಿಂತಿದ್ದ ಶೆಟ್ಟರು ಹೆಚ್ಚು ಮಾತನಾಡದೆ ಏಳಬೇಕಿದ್ದರೆ ಕಮಲಮ್ಮ ಮತ್ತೂ ಒಂದು ಷರಾ ಸೇರಿಸಿದರು: ‘ಮುಂದಿನ ತಿಂಗಳು ಇಪ್ಪತ್ತು ಪರ್ಸೆಂಟ್ ಸೇರಿಸಿ ಬಾಡಿಗೆ ಚೀಟಿ ಮಾಡಿಡ್ತೇನೆ. ಗೊತ್ತಿರ‍್ಲಿಲ್ಲಾಂತ ಇನ್ನೊಂದು ತಗಾದೆ ಎತ್ತೋದು ಬೇಡಾಂತ ಈಗ್ಲೇ ಹೇಳಿದ್ದು.’

ಕಡ್ಡಿ ಮುರಿದಂತೆ ಆಡಿದ ಕಮಲಮ್ಮನ ಮಾತಿನಲ್ಲಿ ಯಜಮಾನಿಯ ಬಿರುಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT