ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಾಪವೂ ಸೂಫಿ ಸಂತರ ದರ್ಗಾವೂ

Last Updated 17 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಇಕ್ಕಟ್ಟಿನದಾರಿ. ಪಿತಿಗುಡುವ ಜನ. ಹೆಣ್ಣಿನ ಕಾಡಿಗೆ ಗಂಡಿನ ಕಣ್ಣಲ್ಲಿ… ಹೆಣ್ಣಿನ ಕಣ್ಣುಕಪ್ಪು ಗೂಡಲ್ಲಿ. ಇದು ಗುಲ್ಬರ್ಗಾದ ಖಾಜಾ ಬಂದೇ ನವಾಜ್‌ ದರ್ಗಾದ ಹಾದಿ. ಎರಡೂ ಅಕ್ಕಪಕ್ಕದಲ್ಲಿ ಕೂಗಿ ಕರೆವ ಗುಲಾಬಿಹಾರಗಳು. ಅದರಿಂದ ಬರುವ ತಾಜಾ ಗಂಧಕ್ಕೆ ಸಾಕ್ಷಿಯಾಗಿ ಮುತ್ತುತ್ತಿದ್ದ ಜೇನ್ನೊಣದ ಸದ್ದು. ಪರಿಮಳಕ್ಕೆ ಮೂಗರಳಿಸಿ ಗಮನಿಸಿದರೆ ಈಗ ಅಪರೂಪವಾಗಿರುವ ನಾಟಿ ತಳಿ ಪನ್ನೀರು ಗುಲಾಬಿ ರಾಶಿ ರಾಶಿ ಇದ್ದವು. ತೆಂಗಿನಕಾಯಿ ಗುಡ್ಡೆಯವರೂ ಚಪ್ಪಲಿ ಬಿಡಲು ಒತ್ತಾಯವಿಟ್ಟು ಕೂಗುತ್ತಿದ್ದರು.

ಸೂಫಿಸಂತ ‘ಸಜ್ಜಾದೆಸಾಬ್’ ಬದುಕಿ ಸಮಾಧಿಯಾಗಿ ಇಲ್ಲಿ ಐನೂರು ವರುಷಗಳು ಕಳೆದಿವೆ. ಹೆಣ್ಣು ಹೃದಯದ ಸಂತರು ಬದುಕಿದ ಗುರುತಿಗೆ ಅವರ ಮಕ್ಕಳು ಮೊಮಕ್ಕಳು ಬಂಧುಗಳ ಭರ್ತಿ ಸಮಾಧಿಗಳೋ ಸಮಾಧಿಗಳು ದರ್ಗಾವನ್ನು ತುಂಬಿವೆ. ಹತ್ತಾರು ಗುಂಬಜ್‌ಗಳಿವೆ. ಅಂತೆಯೇ ಗುಂಬಜ್ ಒಳಮೈಗೆ ಮೆತ್ತಿದ ಕನ್ನಡಿ ಇನ್ಲೇ ಚೂರುಗಳ ಹೊಳೆ ಹೊಳೆಯುವ ರತ್ನ ಕಿರಣಗಳ ಕಣ್ಣುಕಟ್ಟಿನ ಹೊಳಪು ಇರುಳಲ್ಲಿ ಕಣ್ಸೆಳೆಯುತ್ತವೆ. ಆದರೆ ಹೆಂಗಸರು ಬಗ್ಗಿ ನೋಡಿ ಮಾತ್ರ ಖುಷಿ ಪಡಬೇಕು. ಗುಮ್ಮಟದ ಒಳಗೆ ಹೆಂಗಸರಿಗೆ ಪ್ರವೇಶವಿಲ್ಲ.

ದರ್ಗಾಕ್ಕೆ ಬರುವ ಆದಾಯದಲ್ಲಿ ಒಂದು ದೊಡ್ಡ ಶಿಕ್ಷಣ ಸಂಸ್ಥೆಯೂ ನಡೆಯುತ್ತಿದೆ. ನಾವು ಅಲ್ಲಿದ್ದ ಸಮಯದಲ್ಲಿ ವಿ. ಐ. ಪಿಯಂತೆ ಜನರ ನಡುವಲ್ಲಿ ಬಂದ ಅವರ ರಕ್ತಸಂಬಂಧೀ ಕುಟುಂಬದವರು ಅಲ್ಲಿದ್ದ ಜನರ ಅತ್ಯಾದರದಿಂದ ಸಲಾಮು ಸ್ವೀಕರಿಸಿ ಕೆಲವು ಸಮಾಧಿಗಳ ಬಟ್ಟೆ ತೆಗೆದಿಟ್ಟು ಅವರು ತಂದ ಹೂವಿನ ರಾಶಿಯಿಂದ ಸಮಾಧಿಗಳನ್ನು ಅಲಂಕರಿಸಿ ಪೂಜೆ ಮಾಡಿಹೋದರು. ಅದು ಹಳೆಕಾಲದ ಸಿನಿಮಾದಲ್ಲಿ ಬರುವ ಒಂದು ಕನಸಿನ ದಿನದಂತೆ ಆ ವಾತಾವರಣದಲ್ಲಿ ಕಾಣಿಸುತ್ತಿತ್ತು.

ದರ್ಗಾದ ತುಂಬ ಭಿಕ್ಷೆ ಬೇಡುವ ಜನರು ತುಂಬಿಹೋಗಿದ್ದಾರೆ. ಅಸಹಾಯಕರ ಜೊತೆಗೆ ಬೇಡುವುದನ್ನ ರೂಢಿ ಮಾಡಿಕೊಂಡವರೂ ಇದ್ದಾರೆ. ಒಳಗೆ ನೆಗೆದಾಡಿಕೊಂಡು ಮೇಯುವ ಮೇಕೆ ಮರಿಗಳು ಸಿಗುತ್ತವೆ. ನಾಕಾರು ದೊಡ್ಡ ದೊಡ್ಡ ಕಬ್ಬಿಣದ ಬಾಗಿಲಿಗೆ ನೇತುಬಿದ್ದ ಸಾವಿರಾರು ಅಸಂಖ್ಯಾತ ಬೀಗಗಳು ಸಾವಿರಾರು ನೊಂದು ಬೆಂದ ಕಥೆಯನ್ನು ಬಂಧಿಸಿ ಅಲ್ಲಿ ಇಳಿಬಿದ್ದಿವೆ. ಎಕರೆಗಟ್ಟಲೆ ಹರಡಿರುವ ದರ್ಗಾಕ್ಕೆ ನಂಬಿಕೆಯೊಂದಿಗೆ ಬಂದು ಇದ್ದು ಹೋಗುವ ಜನಸಂಖ್ಯೆ ಸಾವಿರಾರು. ಅಲ್ಲಿಗೆ ನಡೆದುಕೊಳ್ಳುವ ಎಲ್ಲರೂ ಮುಂದಿರುವ ಕೊಳದಲ್ಲಿ ಕೈಕಾಲು ಮುಖ ತೊಳೆದು ಮುಂದಿನ ಪೂಜೆಗೆ ಶ್ರದ್ಧೆಯಿಂದ ಸಜ್ಜಾಗಿ ಸಾಗುತ್ತಾರೆ.

ಅಲ್ಲಲ್ಲೇ ಮುಸ್ಲಿಮ್ಹಾಗೂ ಹಿಂದು ಕುಟುಂಬಗಳು ಬಟ್ಟೆ ಹಾಸಿ ಒಂದೆರಡು ದಿನ ಅಲ್ಲೇ ಇದ್ದು ತಮ್ಮ ಮನಸ್ಸಿನ ಸಂಕಲ್ಪದ ಹರಕೆ ಹೊರುತ್ತಾರೆ. ಬಂದು ಸೇವೆ ಮಾಡುತ್ತಾರೆ. ಸೂಫಿ ಕಾಲದಿಂದಲೂ ಬೇರೂರಿದ ಅಲ್ಲಿನ ಬೇವಿನಮರದ ಬೇರ ನೆರಳಲ್ಲಿ ಅವರ ನಂಬಿಕೆಗಳು ಅಡಗಿ ಕುಳಿತಿವೆ. ಉರಿಯುವ ಬಿಸಿಲಿನಲ್ಲೂ ಕಪ್ಪು ಬಟ್ಟೆ ಹೊದ್ದು ಓಡಾಡುವ ಮುಸ್ಲಿಮ್ಹೆಣ್ಣುಗಳನ್ನು ಅವರ ಪರದೆಯೊಳಗಿಂದ ಕೈಬೀಸಿ ದರ್ಗಾದ ತಂಪು ನೆರಳು ಕರೆಯುತ್ತಿದೆಯೇನೋ ಎಂದನ್ನಿಸುತ್ತದೆ.

ಅಲ್ಲಿನ ಆಮ್ಲಜನಕ, ದರ್ಗಾದ ಮೇಲಿನ ಭರವಸೆ, ಅವರಿಗೆ ಬಿಡುಗಡೆಯ ಉಸಿರೊಂದನ್ನು ಬಿಡಲು ಇಲ್ಲಿಗೆ ಎಳೆದು ತರುವಂತೆ ನನಗೆ ಅನ್ನಿಸಿದ್ದು ಯಾಕೋ ಗೊತ್ತಾಗಲಿಲ್ಲ. ಇಲ್ಲಿ ಮಾನಸಿಕ ವ್ಯಾಕುಲತೆಯಿರುವ ಬಳಲುವ ಹೆಣ್ಣುಗಳು ಬಂದು ಸೂಫಿ ಸಮಾಧಿಗೆ ಶಿರಬಾಗಿ ಹಣೆ ಹಚ್ಚಿ ಕುಳಿತಿರುತ್ತಾರೆ. ಅವರೊಂದಿಗೆ ಅವರ ಬಂಧುಗಳು ಕೂಡ. ಆದರೆ ವ್ಯಾಕುಲತೆಯಿರುವ ಗಂಡುಗಳ ಸಂಖ್ಯೆ ಶೇಕಡಾ ಐದು ಇರಬಹುದು. ಹುಷಾರಾದವರು ಅಲ್ಲಿ ಗುಡಿಸುವ ಹಾಗೂ ಬಂದವರ ಸಹಾಯಕ್ಕೆ ಕೈ ಹಚ್ಚುತ್ತಾ ಇಲ್ಲದಿರೆ ಹರಕೆ ತೀರಿಸುತ್ತ ದರ್ಗಾಕ್ಕೆ ನಡೆದುಕೊಳ್ಳುತ್ತಾರೆ. ಎಲ್ಲಾ ನೋಡಿ ಅದರ ಹಿಂಭಾಗದ ಕೊನೆಗೆ ಇಳಿದಿಳಿದು ಬಲತುದಿಗೆ ಬಂದೆವು.

ಭೂಮಿಯೊಳಗೆ ಬಿಟ್ಟ ಬೇರಲ್ಲಿ ನಿಲ್ಲಲಾರದೆ, ತನ್ನ ಮೈಭಾರವನ್ನೂ ತಡೆಯದೆ, ನೆಲಕ್ಕೆ ತನ್ನ ಮೈ ಒರಗಿಸಿ, ನೆರಳು ನೀಡುತ್ತಿದ್ದ ಆ ಪುರಾತನ ಬೇವಿನಮರದ ಕೆಳಗಿನ ಸಂತನ ಸಮಾಧಿಗೆ ಕೆಲವರು ಹಣೆಹಚ್ಚಿ ಕುಳಿತಿದ್ದರು. ತನಗೆ ತಾನೇ ಏದುಸಿರು ಬಿಡುತ್ತಿದ್ದ ಆ ಉರಿ ಬಿಸಿಲ ತಾಪದಲ್ಲೂ ತಮ್ಮ ಗುಂಗಲ್ಲೇ ಅವರು ಬುರ್ಖಾ ತೊಟ್ಟೇ ಕುಳಿತಿದ್ದರು. ತಮ್ಮ ಗುರುತನ್ನೇ ಮುಚ್ಚಿ ಕುಳಿತಿದ್ದ ಹೆಂಗಸರ ನೀರಸ ಕಣ್ಣನ್ನು ನೋಡುತ್ತಾ ನಿಂತಾಗ…

ಅದೇನದು? ಆ ಆಲಾಪನೆ. ಅಳುತ್ತಳುತ್ತಲೇ ತಮ್ಮ ನಿವೇದನೆಯನ್ನು ತನ್ನೆದೆಗೇ ಹೇಳಿಕೊಳ್ಳುವಂಥ ಸ್ವರಗಳು. ಅದು… ಅದು…ಹೆಣ್ಣುಗಳದ್ದು!

ಉರಿ ಉರಿವ ಸೂರ್ಯನಡಿ ಕಣ್ಣು ಚುಚ್ಚುವ ಬೆಳಕ ಕಿರಣದ ಅಡಿಯಲ್ಲಿ ಒಳಗೇ ಬೆಂದು ಬಸವಳಿದು ಓಡಾಡುವವರ ಜೀವಸ್ವರ. ಹುಚ್ಚು ಹೆಚ್ಚಾದ ಹೆಣ್ಣುಗಳನ್ನು ಅಲ್ಲಿ ಕೂಡಿಹಾಕಿರುತ್ತಾರೆ. ಆನಂತರ ದೇವರ ಹರಕೆಯಿಂದ ಸುಧಾರಿಸಿದ ನಂತರ ಅವರನ್ನು ಹೊರಬಿಡಲಾಗುತ್ತದೆ ಎಂದು ತಿಳಿಯಿತು.

ಒಳಗೆ ಕರುಳು ಕಿವುಚಿದಂತಾಯಿತು. ಇದುವರೆಗೂ ಕಪ್ಪು ಕತ್ತಲಲಿ ನುಸುಳಿ ಹೊರಗೆ ಹರಡದಂತೆ ಮುಚ್ಚಿಟ್ಟ ಅವರ ಜೀವಸೆಲೆಯ ಬೆಳಕನ್ನು ಕಿತ್ತೆಸೆದು ಹೊರಬರುವ ಸ್ವರಗಳು ಸಮಾಜವನ್ನೇ ಧಿಕ್ಕರಿಸಿ ಕೂಗಿದಂತೆ! ಎಲ್ಲರೆದುರು ಹಗಲಲ್ಲೇ ದುರುದುಂಡು ಮೈಬಿಟ್ಟು ಓಡಾಡುವ ಮಗಳಂತೆ!

ಅನತಿ ಕಾಲದಿಂದಲೂ ಆ ಕಬ್ಬಿಣದ ಬಾಗಿಲಲ್ಲಿ ತೂಗಿಬಿದ್ದ ಬೀಗಗಳು ತಮ್ಮ ಕೀಲಿ ಕಳೆದುಕೊಂಡು… ತಮ್ಮನ್ನು ಬಂಧಿಸಿಟ್ಟು ಕೂಡಿ ಹಾಕಿದ ಗೋಡೆಗಳ ನಡುವೆ ನ್ಯಾಯದ ಕೀಲಿಯ ಹುಡುಕಾಟದಲ್ಲಿದ್ದಂತೆ ಅವರ ಧ್ವನಿಗಳು ತೋರಿದವು.

ಈ ಕಾಲದಲ್ಲೇ ಇದನ್ನು ಕೇಳುತಿದ್ದೇವಲ್ಲ ಎಂದು ಭ್ರಮೆ ಹರಿವಂತೆ ದೂರದಿಂದ ಬಂದಿದ್ದ ಜೀನ್ಸ್‌ ತೊಟ್ಟ ಹುಡುಗಿಯರು ಕ್ಯಾಮೆರಾ ಕ್ಲಿಕ್ ಎನಿಸಿ ಬೆಳಕ ತೋರಿದರು. ನಮ್ಮನ್ನೆಚ್ಚರಿಸಿದರು. ಅವರ ಕ್ಯಾಮೆರಾ ಅಲ್ಲಿ ಹರಿದಾಡುತ್ತಿದ್ದ ಇತಿಹಾಸವನ್ನು ಹುಡುಕುತ್ತಿದ್ದವು.

ಮೇಲೆ ಬರಲು ಮೆಟ್ಟಿಲು ಹತ್ತುವಾಗ ಮರದ ಕಲ್ಲುಕಟ್ಟೆಯ ಮರದ ಮೇಲೆ ಗಿಳಿಗಳ ಕಚಿಪಿಚಿ. ಅಡ್ಡಾಡುವ ಮೇಕೆ ಮರಿಗಳ ನಡುವೆ ಒಬ್ಬಳು ಕೈಬೀಸಿ ಕರೆದು ಕಟ್ಟೆಯ ಮೇಲಿನ ಕಸೂತಿಯ ಪರದೆ ಎತ್ತಿ ಕಲ್ಲ ಮೇಲೆ ಕೆತ್ತಿದ್ದ ಗಿಳಿಚಿತ್ರವೊಂದನ್ನುತೋರಿದಳು. ಅದಕ್ಕೆ ಹರಕೆ ಎಂದು ಸಕ್ಕರೆ ಚೆಲ್ಲಿದ್ದರು. ದಕ್ಷಿಣೆ ವಸೂಲಿಯಾದ ಮೇಲೆ ಅದರ ಪಕ್ಕಕ್ಕಿದ್ದ ಚಾದರವಿಲ್ಲದ ಒಂದು ಕೊಠಡಿಗೆ ಕರೆದುಕೊಂಡು ಹೋದಳು.

ಅಲ್ಲಿ ಒಂದು ಸಮಾಧಿ. ಅದು ಮುಖ್ಯ ಸಂತರ ಮಗಳದಂತೆ. ಆ ಸಂತರಿಗೆ ಹೆಣ್ಣುಮಕ್ಕಳು ಬಲು ಇಷ್ಟವಂತೆ. ಆದರೆ ಅವರಿಗೆ ಗಂಡು ಮಗು ಆಯಿತಂತೆ. ಆಮೇಲೆ ಅವರು ದೇವರಿಗೆ ಸಲ್ಲಿಸಿದ ಬೇಡಿಕೆಯಿಂದ ಈ ಸಮಾಧಿಯ ಒಡತಿ ತಟ್ಟನೆ ಹೆಣ್ಣಾಯಿತಂತೆ. ಅಲ್ಲೇ ಮೂಲೆಯಲ್ಲಿ ಇನ್ನೊಂದು ಮರಿ ಸಮಾಧಿ. ಅಲ್ಲಿರುವವಳು ಅವಳ ಹೆಣ್ಣುಮಗು. ಮೊದಲು ತೋರಿದ ತೋತೆ ಅಂದ್ರೆ ಕಲ್ಲಲ್ಲಿ ಕೆತ್ತಿದ ಗಿಳಿ ಅವಳದಂತೆ. ಅದು ಕೂಡ ಅವಳಂತೆ ದೇವರ ಸೇವೆಯ ಮಾತುಗಳನ್ನು ಕಣಿಕಣಿನೆ ಆಡುತಿತ್ತೆಂದು ಅದನ್ನುನೋಡಿಕೊಳ್ಳುತ್ತಿದ್ದವಳು ಹೇಳಿದಳು. ಮರದ ಮೇಲಿನ ಗಿಳಿಗಳು ಕಿಚಗುಡುತ್ತ ಅಹುದಹುದೆಂದವು. ಗೋಡೆಯಲ್ಲಿದ್ದ ದೀಪದ ಗೂಡಲ್ಲಿ ಎಣ್ಣೆಯಿಳಿಬಿಟ್ಟ ದೀಪವೂ... ಅದರ ಮಸಿಯೂ... ಕಾಲ ಕಾಲದಿಂದಲೂ ಉರಿದು ಆರಿದಂತೆ ತೋರುತ್ತಿದ್ದವು.

ಇಲ್ಲಿ ಔರಂಗಜೇಬನ ಮಗಳೂ ಬಂದು ಶಿಷ್ಯೆಯಾಗಿ ಇದ್ದಳೆಂದೂ, ಅಂತೆಯೇ ಅವಳನ್ನು ಹುಡುಕಿ ಬಂದ ತಂದೆಯೂ ಕೆಲಕಾಲ ಇಲ್ಲಿ ಇದ್ದರೆಂದು ದಾಖಲೆಗಳಿವೆ. ‘ಭವದ ಮುಕ್ತಿ ಭಕ್ತಿಯಲ್ಲಿ ತಾನೇ’ ಅನ್ನಿಸಿತು.

ಹಾಗೆಯೇ ಈ ಸೂಫಿ ಸಂತರ ಹಿಂದು ಶಿಷ್ಯ ರಾಣಾ ಸಾಹೇಬ್ರು ಕುಮ್ತೋಲಾ ಇವರಿಂದ ಬೇರ್ಪಟ್ಟು ಅನಿತು ದೂರದಲ್ಲಿ ಎತ್ತರದ ಜಾಗದಲ್ಲಿ ನೆಲೆಯಾಗಿರುವುದರಿಂದ ರಾಣಾದರ್ಗಾಎಂದು ಹೆಸರಾಗಿ ಅದು ಕೂಡ ಇವತ್ತಿಗೂ ಉಳಿದಿದೆ. ಹಾಗೆಯೇ ಇದು ಆ ಪ್ರದೇಶದ ಜಾತೀಯತೆಯ ನೆಲೆಯ ಒಂದು ಉದಾಹರಣೆಯಾಗಿ ನಿಂತಿದೆ ಎಂದು ಇತಿಹಾಸಕಾರರು ಗುರುತಿಸುತ್ತಾರೆ.

ಅದೇನೇ ಇರಲಿ. ಇದಕ್ಕೆ ಹೆಣೆದುಕೊಂಡ ಜನಸಾಮಾನ್ಯನೊಬ್ಬನ ಕಥೆಯೊಂದಿರುತ್ತದಲ್ಲ! ನಮ್ಮ ಕಾರು ಚಲಿಸುವಾಗ ಎತ್ತರದಲ್ಲಿದ್ದ ಆ ದರ್ಗಾವನ್ನು ತೋರಿ ಚಾಲಕರು ಹೇಳಿದ್ದು ಹೀಗೆ… ರಾಣಾಸ್ಪೀರನ ದರ್ಗಾದಲ್ಲಿ ನಿಂತಾಗ ಗುರುಗಳ ಬಂದೇನವಾಜ್ದರ್ಗಾದ ಅಕ್ಕಪಕ್ಕದ ಸ್ಥಳವೆಲ್ಲವೂ ನಿಚ್ಚಳವಾಗಿ ಕಾಣುತ್ತವೆ. ಆದರೆ ಬಂದೇನವಾಜರ ದರ್ಗಾ ಕಂಡುಬರುವುದಿಲ್ಲ.

ಇದು ಗುರುವನ್ನು ತಲುಪಲಾಗದ ಶಿಷ್ಯನ ಹುಡುಕಾಟದಂತೆ ಕಾಣಿಸಿತು. ಇದರ ಸುತ್ತಲೂ ಅವರ ಭಕ್ತರು ಕಟ್ಟಿದ ಎತ್ತರದ ಗೋಡೆ ಅಥವಾ ವಾಸ್ತುಶಿಲ್ಪದಿಂದ ಅದು ಕಾಣದೆ ಇರಬಹುದೇನೋ?

ಆದರೆ ಅದೇ ಚಾಲಕರ ಇನ್ನೊಂದು ಮಾತು ನಗು ತರಿಸುವಂಥದ್ದು. ಅವು ಸರಳಮಾತುಗಳಾಗಿದ್ದರೂ ಮಾರ್ಮಿಕವಾಗಿ ಕಂಡವು. ಏನೆಂದರೆ ಗುರುವಿರುವೆಡೆಯಲ್ಲಿ ಹರಕೆ ತೀರಿಸಲು ಬಂದವರು ಕುರಿಬಲಿ ಕೊಡುವುದನ್ನು ನೋಡಲಾರದೆ, ತಡೆಯಲಾರದೆ ಅದನ್ನು ಸಹಿಸಲಾರದೆ ಈ ರಾಣಾಪೀರ್ ಎಂಬ ಶಿಷ್ಯ ಸಿಡಿದು ದೂರದಲ್ಲಿ ಹೋಗಿ ನೆಲೆಗೊಂಡರೆಂಬುದು.

ಇವತ್ತಿಗೂ ನಾವು ತಿನ್ನುವ ಆಹಾರಪದ್ಧತಿಗಳನ್ನು ಅನುಸರಿಸಿ…. ಸಮಾಜ ಅದರ ಸುತ್ತ ಕಟ್ಟುತ್ತಿರುವ ಕೋಟೆ ಗೋಡೆಗಳನ್ನು ನೆನೆಸಿಕೊಂದರೆ ಅಂದೂ ಗೋಡೆ ಹಾಗೆಯೇ ಎದ್ದುನಿಂತಿರಬಹುದೋ ಏನೋ? ಭೂಮಿ ಮೇಲೆದ್ದ ಗೋಡೆಗಳಿಗೆ ಎಷ್ಟೊಂದು ಕತೆಗಳು. ಹೇಳುವವರು ಕೇಳುವವರು ಇರುವರೆಗೂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT