ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್ ಅಂಗಳದ ಮಿನುಗುತಾರೆ

Last Updated 17 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಭಾರತ ಮತ್ತು ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡಗಳ ನಾಯಕ ಸುನಿಲ್ ಚೆಟ್ರಿ ಬಗ್ಗೆ ಬರೆಯುವುದೆಂದರೆ ಒಂದು ಕುಟುಂಬದ ಫುಟ್‌ಬಾಲ್‌ ಪ್ರೀತಿಯ ಕಥೆಯನ್ನೇ ಹೆಣೆದಂತಾಗುತ್ತದೆ.

ಅಮ್ಮ ಸುಶೀಲಾ ನೇಪಾಳ ತಂಡದಲ್ಲಿ ಆಡಿದ್ದರು. ಅಪ್ಪ ಕೆ.ಬಿ. ಚೆಟ್ರಿ ಸೇನಾಧಿಕಾರಿ ಮತ್ತು ಫುಟ್‌ಬಾಲ್ ಆಟಗಾರ. ಸಹೋದರಿಯರಾದ ಸಶಾ ಮತ್ತು ಸುನಂದಾ ಕೂಡ ಕಾಲ್ಚೆಂಡಿನ ಆಟದಲ್ಲಿ ಹೆಜ್ಜೆಗುರುತು ಮೂಡಿಸಿದವರು. ಆದರೆ ಅವರೆಲ್ಲರನ್ನೂ ಮೀರಿ ಬೆಳೆದ ಹೆಗ್ಗಳಿಕೆ ಸ್ಟ್ರೈಕರ್ ಸುನಿಲ್ ಅವರದ್ದು.

ಸಿಕಂದರಾಬಾದಿನಲ್ಲಿ ಜನಿಸಿದ ಸುನಿಲ್, ಹೈದರಾಬಾದ್, ದೆಹಲಿ, ಕೋಲ್ಕತ್ತ ಮತ್ತು ಬೆಂಗಳೂರಿನಲ್ಲಿ ಫುಟ್‌ಬಾಲ್ ಆಟದ ಪಾಠಗಳನ್ನು ಕಲಿತರು. ಆದರೆ ಮೂರು ವರ್ಷಗಳಿಂದ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಬೆಂಗಳೂರು ಫುಟ್‌ಬಾಲ್ ಕ್ಲಬ್ ಅವರ ತವರುಮನೆಯಂತಾಗಿದೆ. ಅದರಿಂದ ಉದ್ಯಾನನಗರಿಗೆ ಒಳ್ಳೆಯದಾಯಿತು. ಅವರು ಸೂಪರ್ ಡಿವಿಷನ್ ಲೀಗ್‌ಗಳಲ್ಲಿ ಆಡಿದರು. ಎಎಫ್‌ಸಿ ಕಪ್, ವಿಶ್ವಕಪ್ ಕ್ವಾಲಿಫೈಯರ್ ಪಂದ್ಯಗಳಲ್ಲಿ ಅವರ ಆಟಕ್ಕೆ ಇಲ್ಲಿಯ ಜನ ಮರುಳಾದರು. ಇತ್ತೀಚೆಗೆ ಕಂಠೀರವ ಕ್ರೀಡಾಂಗಣದಲ್ಲಿ ಚೆಟ್ರಿ ಆಡುವ ಪಂದ್ಯಗಳಲ್ಲಿ ಅವರ ಅಭಿಮಾನಿಗಳು ‘ಹೃದಯ ಶಿವ’ ಎಂಬ ಒಕ್ಕಣೆಯಿರುವ ದೊಡ್ಡ ಬ್ಯಾನರ್‌ ಪ್ರದರ್ಶಿಸುತ್ತಾರೆ. ಅವರು ಗೋಲು ಹೊಡೆದಾಗಲೆಲ್ಲ ಜನರು ಕುಣಿದು ಕುಪ್ಪಳಿಸುವುದನ್ನು ನೋಡುವುದೇ ಹಬ್ಬ. ಹಲವು ಅಂತರರಾಷ್ಟ್ರೀಯ ಆಟಗಾರರನ್ನು ನಾಡಿಗೆ ನೀಡಿದ ಶ್ರೇಯ ಇರುವ ಬೆಂಗಳೂರಿನಲ್ಲಿ ಮತ್ತೊಮ್ಮೆ ಫುಟ್‌ಬಾಲ್ ಕ್ರೇಜ್ ಗರಿಗೆದರಲು ಕೂಡ ಚೆಟ್ರಿ ಕಾರಣರಾಗಿದ್ದಾರೆ.

‘ಇಲ್ಲಿನ ವಾತಾವರಣ, ಜನ, ಹಸಿರು ಎಲ್ಲವೂ ತುಂಬಾ ಹಿಡಿಸಿದೆ. ಒಂದು ರೀತಿಯಲ್ಲಿ ಬೆಂಗಳೂರು ನನ್ನ ತವರೂರಾಗಿದೆ’ ಎಂದು ಸುನಿಲ್ ಹೇಳುತ್ತಾರೆ.

ತಂಡದ ಮುಖ್ಯ ಕೋಚ್ ಅಲ್ಬರ್ಟ್ ರೋಕಾ ಅವರಿಗೂ ಸುನಿಲ್ ಆಟದ ಬಗ್ಗೆ ಅಪಾರ ಅಭಿಮಾನ. 33ನೇ ವಯಸ್ಸಿನಲ್ಲಿಯೂ ಫಿಟ್‌ನೆಸ್ ಕಾಯ್ದುಕೊಂಡಿರುವ ಸುನಿಲ್, ಗೋಲುಪೆಟ್ಟಿಗೆಯ ಬಳಿ ಕಿಕ್ ಮಾಡುವ ಶೈಲಿಯು ಎದುರಾಳಿಗಳನ್ನು ದಂಗುಬಡಿಸುತ್ತದೆ. ಐಎಸ್‌ಎಲ್ ಸೆಮಿಫೈನಲ್‌ ಪಂದ್ಯದಲ್ಲಿ, ಸಹ ಆಟಗಾರನಿಂದ ಪಾಸ್ ಪಡೆದು ವೇಗವಾಗಿಯೇ ಗೋಲುಪೆಟ್ಟಿಗೆಯತ್ತ ಸಾಗಿದ್ದ ಸುನಿಲ್ ನಂತರ ಏಕಾಏಕಿ ವೇಗ ತಗ್ಗಿಸಿಕೊಂಡು ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದ್ದ ರೀತಿಗೆ ಪುಣೆ ಸಿಟಿ ಗೋಲ್‌ಕೀಪರ್ ಬೆಕ್ಕಸಬೆರಗಾಗಿದ್ದರು. ಅಷ್ಟೇ ಅಲ್ಲ ‘ಹ್ಯಾಟ್ರಿಕ್’ ಸಾಧನೆ ಮಾಡಿದ್ದ ಅವರು, ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಆಡುತ್ತಿರುವ ಬಿಎಫ್‌ಸಿ ತಂಡ ಫೈನಲ್‌ ಪ್ರವೇಶಿಸಲು ಕಾರಣರಾದರು. ಈ ಟೂರ್ನಿಯಲ್ಲಿ ಒಟ್ಟು 14 ಗೋಲುಗಳನ್ನು ಅವರು ದಾಖಲಿಸಿದ್ದಾರೆ.

2013ರಲ್ಲಿ ಅವರು ಬಿಎಫ್‌ಸಿಯ ನಾಯಕತ್ವ ವಹಿಸಿಕೊಂಡಾಗಿನಿಂದಲೂ ತಂಡವು ಸಾಧನೆಯ ಹಾದಿಯಲ್ಲಿದೆ.  ಚೊಚ್ಚಲ ಐ–ಲೀಗ್ ಟೂರ್ನಿಯಲ್ಲಿ ಅವರ ಅಮೋಘ ಆಟದ ಬಲದಿಂದ ತಂಡವು ಪ್ರಶಸ್ತಿ ಗೆದ್ದಿತ್ತು. 2014ರಲ್ಲಿ ತಂಡವು ರನ್ನರ್ಸ್ ಅಪ್ ಆಗಿತ್ತು. ಫೆಡರೇಷನ್‌ ಕಪ್‌ನಲ್ಲಿ ಬೆಂಗಳೂರಿನ ತಂಡವನ್ನು ಎರಡು ಬಾರಿ ಚಾಂಪಿಯನ್‌ ಪಟ್ಟಕ್ಕೇರಿಸಿದ ಹಿರಿಮೆಯೂ ಚೆಟ್ರಿ ಅವರದ್ದು.

ಗೋಲುಗಳ ಸರದಾರ: 2002ರಲ್ಲಿ ಅವರು ಕೋಲ್ಕತ್ತದ ಮೋಹನ್ ಬಾಗನ್ ತಂಡದ ಮೂಲಕ ವೃತ್ತಿಪರ ಫುಟ್‌ಬಾಲ್‌ ಆಡಲು ಆರಂಭಿಸಿದರು. ಕೆಲವು ತಿಂಗಳುಗಳ ನಂತರ ಜೆಸಿಟಿ ತಂಡ ಸೇರಿಕೊಂಡರು. ಆ ತಂಡದ ಪರ 48 ಪಂದ್ಯಗಳಲ್ಲಿ ಆಡಿದ ಅವರು 21 ಗೋಲುಗಳನ್ನು ಗಳಿಸಿದ್ದರು.

ನಂತರದ ವರ್ಷದಲ್ಲಿ ಸಂತೋಷ್ ಟ್ರೋಫಿ ಟೂರ್ನಿಯಲ್ಲಿ ದೆಹಲಿ ಪರವಾಗಿ ಹ್ಯಾಟ್ರಿಕ್ ಗೋಲಿನ ಸಾಧನೆ ಮಾಡಿದರು. ಇಡೀ ಟೂರ್ನಿಯಲ್ಲಿ ಅವರು ಉತ್ತಮವಾಗಿ ಆಡಿದರೂ ದೆಹಲಿ ತಂಡವು ಕ್ವಾರ್ಟರ್‌ಫೈನಲ್ ಪ್ರವೇಶಿಸುವಲ್ಲಿ ವಿಫಲವಾಗಿತ್ತು.

2005ರಲ್ಲಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದರು. 2007ರಲ್ಲಿ ಅವರು ಮೊದಲ ಬಾರಿಗೆ ನೆಹರು ಕಪ್‌ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಆಡಿದರು. ಮೊದಲ ಪಂದ್ಯದಲ್ಲಿ ಭಾರತ ತಂಡವು 6–0 ಗೋಲುಗಳಿಂದ ಕಾಂಬೋಡಿಯಾ ಎದುರು ಗೆದ್ದಿತ್ತು. ಅದರಲ್ಲಿ ಚೆಟ್ರಿ ಎರಡು ಗೋಲು ಹೊಡೆದಿದ್ದರು. ಆ ಟೂರ್ನಿಯಲ್ಲಿ ಭಾರತ ಪ್ರಶಸ್ತಿ ಗೆದ್ದಿತ್ತು. 2009 ಮತ್ತು 2011ರಲ್ಲಿಯೂ ಜಯದ ರೂವಾರಿಯಾಗಿದ್ದರು. ಸ್ಯಾಫ್‌ ಚಾಂಪಿಯನ್‌ಷಿಪ್‌ನಲ್ಲಿ ಕೂಡ ತಂಡವು ಚಾಂಪಿಯನ್ ಆಗಿತ್ತು.

2008ರಲ್ಲಿ ಎಎಫ್‌ಸಿ ಚಾಲೆಂಜ್ ಕಪ್ ಗೆದ್ದು ಏಷ್ಯನ್ ಕಪ್‌ ಟೂರ್ನಿಗೆ ತಂಡವು ಅರ್ಹತೆ ಪಡೆಯಲು ಕೂಡ ಅವರ ಕಾಣಿಕೆ ಇತ್ತು. 27 ವರ್ಷಗಳ ನಂತರ ತಂಡವು ಈ ಸಾಧನೆ ಮಾಡಿತ್ತು. 2011ರಲ್ಲಿ ಅವರು ತಂಡದ ನಾಯಕತ್ವ ವಹಿಸಿಕೊಂಡರು. ಅದೇ ವರ್ಷ ತಾರಾವರ್ಚಸ್ಸಿನ ಆಟಗಾರ ಭೈಚುಂಗ್ ಭುಟಿಯಾ ನಿವೃತ್ತಿ ಘೋಷಿಸಿದರು. ಅವರ ಜಾಗವನ್ನು ಚೆಟ್ರಿ ತುಂಬಿದ್ದರು.

‘ನಾನು ವೃತ್ತಿಪರ ಫುಟ್‌ಬಾಲ್‌ ಆಟಗಾರನಾಗುತ್ತೇನೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಕಾಲೇಜು ದಿನಗಳಲ್ಲಿದ್ದಾಗ ದೆಹಲಿಯ ಸಿಟಿ ಎಫ್‌ಸಿ ಕ್ಲಬ್‌ ಪರವಾಗಿ ಡ್ಯುರಾಂಡ್‌ ಕಪ್‌ನಲ್ಲಿ ಆಡಿದ್ದೆ. ಆ ಟೂರ್ನಿಯಲ್ಲಿ ನನ್ನ ಆಟವನ್ನು ನೋಡಿ ಮೋಹನ್‌ ಬಾಗನ್‌ ತನ್ನ ಅಕಾಡೆಮಿಗೆ ಸೇರುವಂತೆ ಆಹ್ವಾನ ನೀಡಿತು. ಬಳಿಕ ಕ್ಲಬ್‌ ನನ್ನೊಂದಿಗೆ ಒಪ್ಪಂದವನ್ನೂ ಮಾಡಿಕೊಂಡಿತು. ಆಗಿನಿಂದ ಉತ್ತಮವಾಗಿ ಆಡಿ ಈ ಮಟ್ಟಕ್ಕೆ ಬೆಳೆದಿದ್ದೇನೆ’ ಎಂದು ಸುನಿಲ್ ಹೇಳುತ್ತಾರೆ.

ಇದುವರೆಗೆ 97 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿರುವ ಅವರು  ಅತ್ಯಧಿಕ ಗೋಲು (56) ಗಳಿಸಿರುವ ಭಾರತದ ಆಟಗಾರ ಎಂಬ ಶ್ರೇಯ ಗಳಿಸಿದ್ದಾರೆ. ಭುಟಿಯಾ (40) ಅವರನ್ನೂ ಮೀರಿದ ಸಾಧನೆ ಇದು. ಅಷ್ಟೆ ಅಲ್ಲ ದೇಶ–ವಿದೇಶಗಳ  ಪ್ರತಿಷ್ಠಿತ ತಂಡಗಳ ಪರವಾಗಿಯೂ ಆಡಿ ಯಶಸ್ವಿಯಾಗಿರುವ ಆಟಗಾರ ಅವರು. ಡೆಂಪೊ (8 ಗೋಲು), ಚಿರಾಗ್ ಯುನೈಟೆಡ್ (7), ಮೋಹನ್ ಬಾಗನ್ (8), ಚರ್ಚಿಲ್ ಬ್ರದರ್ಸ್ (4), ಕೆನ್ಸಾಸ್ ಸಿಟಿ ವಿಜರ್ಡ್ಸ್,  ಮುಂಬೈ ಸಿಟಿ (7), ಬೆಂಗಳೂರು ಎಫ್‌ಸಿ (20) ತಂಡಗಳ ಹಲವು ಜಯಗಳಲ್ಲಿ  ಅವರ ಕಾಲ್ಚಳಕ ಇತ್ತು.

ನಾಲ್ಕು ಬಾರಿ ಎ.ಐ.ಎಫ್‌.ಎಫ್‌ ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿ ಗಳಿಸಿದರು. ಶುಕ್ರವಾರ ಪ್ರಕಟವಾದ ಫಿಫಾ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತ ತಂಡವು 99ನೇ ಸ್ಥಾನ ಪಡೆಯಲು ಕೂಡ ಅವರ ಪಾತ್ರ ಮಹತ್ವದ್ದು. ಹೋದ ವರ್ಷ ತಂಡವು 96ನೇ ಸ್ಥಾನಕ್ಕೇರಿತ್ತು. ಆಗಲೂ ಅವರೇ ನಾಯಕರಾಗಿದ್ದರು.

ಆದರೆ ಫಿಫಾ ವಿಶ್ವಕಪ್‌ನಲ್ಲಿ ಆಡುವ ಭಾರತದ ಕನಸು ನನಸಾಗಬೇಕಾದರೆ ಸಾಗಬೇಕಾದ ಹಾದಿ ಬಹುದೂರ ಇದೆ. ಅದಕ್ಕಾಗಿ ಸುನಿಲ್ ಅವರಂತಹ ಮತ್ತಷ್ಟು ಆಟಗಾರರು ಬೆಳೆಯಬೇಕಾದ ಅವಶ್ಯಕತೆ ಇದೆ. ಯಾವುದೇ ಕ್ರೀಡೆ ಬೆಳೆಯಲು ತಾರಾವರ್ಚಸ್ಸಿನ ಆಟಗಾರರು ಇದ್ದರೆ ಮಾತ್ರ ಸಾಧ್ಯ. ಅವರ ಯಶೋಗಾಥೆಯು ಮತ್ತಷ್ಟು ಪ್ರತಿಭಾವಂತರನ್ನು ಆಟದತ್ತ ಆಕರ್ಷಿಸುತ್ತದೆ. ಅ ಮೂಲಕ ಕ್ರೀಡೆ ಬೆಳೆಯುತ್ತದೆ. ಅಂತಹ ವರ್ಚಸ್ಸು ಈಗ ಚೆಟ್ರಿ ಅವರಿಗೆ ಇದೆ. ಉದಾಂತ್ ಸಿಂಗ್, ಜೆಜೆ ಲಾಲ್‌ಪೆಕ್ಲುವಾ, ವಿನೀತ್, ಯುಗೇನ್ಸನ್‌ ಲಿಂಗ್ಡೊ ಅವರಂತಹ ಆಟಗಾರರ ಪೈಪೋಟಿಯ ನಡುವೆಯೂ ಚೆಟ್ರಿ ತಮ್ಮ ತಾರಾಪಟ್ಟವನ್ನು ನಿರಂತರವಾಗಿ ಉಳಿಸಿಕೊಂಡು ಮುನ್ನುಗ್ಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT