ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಾನತೆಗೆ ಬೇಕು ಮಹಿಳಾ ನೀತಿ’

ಮೀಸಲಾತಿ ಜಾರಿಯಾಗಲಿ: ಕೆ. ನೀಲಾರ ಮನದಾಳದ ಮಾತು
Last Updated 17 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಮಾಜದಲ್ಲಿ ಸಮಾನತೆ ನೆಲೆಸಬೇಕಾದರೆ ಮಹಿಳಾ ಪರ ನೀತಿಗಳು ಮತ್ತು ಮೀಸಲಾತಿ ಜಾರಿಯಾಗಬೇಕು ಎಂದು ಹೋರಾಟಗಾರ್ತಿ ಕೆ.ನೀಲಾ ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಶನಿವಾರ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತುಕತೆ' ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಅವರು ಮಾತನಾಡಿದರು.

‘ಎರಡು ಕೈಗಳಿರುವ ಯಾರು ಬೇಕಾದರೂ ಅಡುಗೆ ಮಾಡಬಹುದು. ಪುರುಷರು ಏಕೆ ಅಡುಗೆ ಮಾಡಬಾರದು? ಹೆಣ್ಣು ಮಕ್ಕಳು ಎರಡುಪಟ್ಟಲ್ಲ, ಮೂರುಪಟ್ಟು ಕೆಲಸ ಮಾಡುತ್ತಾರೆ. ಮಹಿಳೆ ಕುಟುಂಬ ನಿಭಾಯಿಸುತ್ತಾಳೆ, ಪುರುಷನಿಗೆ ಸಮನಾಗಿ ಹೊರಗೆ ದುಡಿಯುತ್ತಾಳೆ. ಮಕ್ಕಳನ್ನು ಹೆತ್ತು ಸಲಹುತ್ತಾಳೆ. ಇಂತಹ ಶಕ್ತಿ ಕೇಂದ್ರವೆನಿಸಿದ ಮಹಿಳೆಯರನ್ನು ಅಡುಗೆ ಮನೆಗೆ ಏಕೆ ಸೀಮಿತಗೊಳಿಸಬೇಕು’ ಎಂದು ಪ್ರಶ್ನಿಸಿದರು.

ದೇಶದ ಜನಸಂಖ್ಯೆಯಲ್ಲಿ ಶೇಕಡ 50ರಷ್ಟಿರುವ ಹೆಣ್ಣು ಮಕ್ಕಳನ್ನು ಅಡುಗೆ ಮನೆಗೆ ಸೀಮಿತಗೊಳಿಸಿದರೆ ಕುಟುಂಬ ಮತ್ತು ದೇಶದ ಆರ್ಥಿಕ ಬೊಕ್ಕಸಕ್ಕೆ ಅಪಾರ ನಷ್ಟವಾಗುತ್ತದೆ. ಉತ್ಪಾದನಾ ಕೊಡುಗೆಯಲ್ಲಿ ಮಹಿಳೆಯರಿಗೂ ಅವಕಾಶ ಕೊಡಬೇಕು. ಅದೇ ನಿಜವಾದ ಸಮಾನತೆ. ಬಸವಣ್ಣ, ಅಂಬೇಡ್ಕರ್‍ ಅವರ ಆಶಯವೂ ಅದೇ ಆಗಿದೆ ಎಂದರು.

‘ಪಿಯುಸಿಯಲ್ಲಿ ಅನುತ್ತೀರ್ಣಗೊಂಡಿದ್ದರಿಂದ ಶಿಕ್ಷಣ ಅರ್ಧಕ್ಕೆ ನಿಲ್ಲಿಸಬೇಕಾಯಿತು. ಸಮುದಾಯದ ಸಂಘಟನೆ ಸೆಳೆಯಿತು. ಅಲ್ಲಿ ನನಗೆ ಬಾಳಸಂಗಾತಿ ಸಿಕ್ಕಿ, ಅಂತರ್ಜಾತಿ ವಿವಾಹ ಮಾಡಿಕೊಂಡೆ. ಅದೇ ಕಾರಣಕ್ಕೆ ಕುಟುಂಬ ನನ್ನನ್ನು ಬಹಿಷ್ಕರಿಸಿತು. ಆದರೆ, ಗಂಡನ ಪ್ರೋತ್ಸಾಹ ನನ್ನ ಹೋರಾಟಕ್ಕೆ ನೀರೆರೆಯಿತು. ಮದುವೆಯ ನಂತರ ನನ್ನ ಪೂರ್ತಿ ಸಮಯ ಹೋರಾಟಕ್ಕೆ ಮೀಸಲಿಟ್ಟಿದ್ದೇನೆ’ ಎಂದರು.

‘ಬಸವಾದಿ ಶರಣರು ಬೆಳೆದ ನಾಡಿನಲ್ಲಿ ನಾನು ಬೆಳೆದಿದ್ದರಿಂದ ವಚನಗಳು, ತತ್ವ ಪದಗಳು ಚಿಕ್ಕಂದಿನಲ್ಲೇ ಮನಕ್ಕೆ ತಟ್ಟಿದ್ದವು. ಅಪ್ಪನ ಸಮಾಜವಾದದ ಸಭೆಗಳು ನನ್ನ ಮೇಲೆ ಪ್ರಭಾವ ಬೀರಿದವು. ತಾಯಿಯ ಕಷ್ಟಗಳನ್ನು ನೋಡಿ ಹೆಣ್ಣುಮಕ್ಕಳ ಬವಣೆ ಅರಿತೆ. ಇದು ಜಗತ್ತಿನ ಮಹಿಳೆಯರ ಸ್ಥಿತಿ ಅರಿಯಲು ಮತ್ತು ಹೋರಾಟದತ್ತ ಮನಸ್ಸು ಹೊರಳಲು ಪ್ರೇರಣೆಯಾಯಿತು' ಎಂದು ತಮ್ಮ ಬದುಕಿನ ಪುಟ ತೆರೆದಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT