ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ಅಂಕಿತಾ ರೈನಾಗೆ ಪ್ರಶಸ್ತಿ

Last Updated 17 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಗ್ವಾಲಿಯರ್‌ : ಅಮೋಘ ಆಟ ಆಡಿದ ಅಂಕಿತಾ ರೈನಾ, ಐಟಿಎಫ್‌ ಮಹಿಳಾ ಟೆನಿಸ್‌ ಟೂರ್ನಿಯ ಸಿಂಗಲ್ಸ್‌ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಶನಿವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ಅಂಕಿತಾ 6–2, 7–5ರಿಂದ ಫ್ರಾನ್ಸ್‌ನ ಅಮಂಡಿನೆ ಹೆಸ್ಸೆ ಅವರನ್ನು ಮಣಿಸಿದರು. ಇದರೊಂದಿಗೆ ಮೂರು ವರ್ಷಗಳ ನಂತರ ಸಿಂಗಲ್ಸ್‌ ವಿಭಾಗದಲ್ಲಿ ಟ್ರೋಫಿ ಗೆದ್ದ ಸಾಧನೆ ಮಾಡಿದರು. ವೃತ್ತಿಬದುಕಿನಲ್ಲಿ ಅಂಕಿತಾ ಜಯಿಸಿದ ಆರನೇ ಪ್ರಶಸ್ತಿ ಇದಾಗಿದೆ. ಅವರು ಹಿಂದಿನ ಆರು ವರ್ಷಗಳಲ್ಲಿ ಒಂಬತ್ತು ಟೂರ್ನಿಗಳಲ್ಲಿ ರನ್ನರ್‌ ಅಪ್‌ ಆಗಿದ್ದಾರೆ. ಮಹಿಳೆಯರ ಡಬಲ್ಸ್‌ನಲ್ಲಿ 12 ಬಾರಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಟೂರ್ನಿಯಲ್ಲಿ ಎರಡನೇ ಶ್ರೇಯಾಂಕ ಹೊಂದಿದ್ದ ಹೆಸ್ಸೆ, ನಾಲ್ಕನೇ ಶ್ರೇಯಾಂಕಿತೆ ಅಂಕಿತಾ ಅವರನ್ನು ಸುಲಭವಾಗಿ ಸೋಲಿಸ ಬಹುದು ಎಂದು ಭಾವಿಸಲಾಗಿತ್ತು. ಎರಡೂ ಸೆಟ್‌ಗಳಲ್ಲಿ ದಿಟ್ಟ ಆಟ ಆಡಿದ ಅಂಕಿತಾ ಈ ನಿರೀಕ್ಷೆಯನ್ನು ಹುಸಿಗೊಳಿಸಿದರು.

ಹಿಂದಿನ ಪಂದ್ಯಗಳಲ್ಲಿ ಬಲಿಷ್ಠ ಎದುರಾಳಿಗಳ ಸವಾಲು ಮೀರಿದ್ದ ಅಂಕಿತಾ, ಮೊದಲ ಸೆಟ್‌ನಲ್ಲಿ ತುಂಬು ವಿಶ್ವಾಸದಿಂದ ಆಡಿದರು. ಶರವೇಗದ ಸರ್ವ್‌ಗಳನ್ನು ಮಾಡಿದ ಅವರು ಎದುರಾಳಿ ಬಾರಿಸುತ್ತಿದ್ದ ಚೆಂಡನ್ನು ಹಿಂತಿರುಗಿಸುವಲ್ಲೂ ಚುರುಕುತನ ತೋರಿದರು. ಈ ಮೂಲಕ ಸುಲಭವಾಗಿ ಗೇಮ್‌ಗಳನ್ನು ಗೆದ್ದು ಸೆಟ್‌ ತಮ್ಮದಾಗಿಸಿಕೊಂಡರು.

ಆರಂಭಿಕ ನಿರಾಸೆಯಿಂದ ಫ್ರಾನ್ಸ್‌ನ ಅಮಂಡಿನೆ ಎದೆಗುಂದಲಿಲ್ಲ. ಎರಡನೇ ಸೆಟ್‌ನಲ್ಲಿ ಆಕ್ರಮಣಕಾರಿ ಆಟ ಆಡಿದ ಅವರು ಭಾರತದ ಆಟಗಾರ್ತಿಗೆ ಪ್ರಬಲ ಪೈಪೋಟಿ ಒಡ್ಡಿದರು. ಹೀಗಾಗಿ 10ನೇ ಗೇಮ್‌ವರೆಗೆ ಸಮಬಲದ ಹೋರಾಟ ಕಂಡುಬಂತು.

11ನೇ ಗೇಮ್‌ನಲ್ಲಿ ಸರ್ವ್‌ ಉಳಿಸಿಕೊಂಡ ಅಂಕಿತಾ, ಮರು ಗೇಮ್‌ನಲ್ಲಿ ಎದುರಾಳಿಯ ಸರ್ವ್‌ ಮುರಿದು ಗೆಲುವಿನ ತೋರಣ ಕಟ್ಟಿದರು.

‘ನಾನು ಈಗ ತುಂಬಾ ಪ್ರಬುದ್ಧಳಾಗಿದ್ದೇನೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಒತ್ತಡವನ್ನು ಮೀರಿನಿಲ್ಲುವ ಕಲೆಯನ್ನು ಕರಗತ ಮಾಡಿಕೊಂಡಿದ್ದೇನೆ. ಹೀಗಾಗಿ ಇಲ್ಲಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿದೆ. ಇದರಿಂದ ತುಂಬಾ ಸಂತಸವಾಗಿದೆ’ ಎಂದು ಅಂಕಿತಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT