ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಮುಕ್ತ ಭಾರತಕ್ಕೆ ಪ್ರತಿಪಕ್ಷಗಳು ಒಂದಾಗಬೇಕಿದೆ : ರಾಜ್‌ ಠಾಕ್ರೆ

Last Updated 19 ಮಾರ್ಚ್ 2018, 5:45 IST
ಅಕ್ಷರ ಗಾತ್ರ

ಮುಂಬೈ : ದೇಶವನ್ನು 2019ರಲ್ಲಿ ಮೋದಿ ಮುಕ್ತ ಮಾಡಲು ಪ್ರತಿಪಕ್ಷಗಳು ಒಂದಾಗಬೇಕು ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್‌ ಠಾಕ್ರೆ ಕರೆ ನೀಡಿದ್ದಾರೆ.

ನಗರದ ಶಿವಾಜಿ ಉದ್ಯಾನದಲ್ಲಿ ಆಯೋಜಿಸಿದ್ದ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಅವರು, ‘ನರೇಂದ್ರ ಮೋದಿ ಮತ್ತು ಅವರ ಸರ್ಕಾರದ ಈಡೇರಿಸಲಾಗದ ಭರವಸೆಗಳಿಂದ ದೇಶದ ಜನರು ರೋಸಿ ಹೋಗಿದ್ದಾರೆ’ ಎಂದರು.

ಬಿಜೆಪಿಯ ‘ಕಾಂಗ್ರೆಸ್‌ ಮುಕ್ತ ಭಾರತ’ ಘೋಷಣೆಯನ್ನು ಸೇರಿದ್ದ ಜನರಿಗೆ ನೆನಪಿಸುತ್ತ, ‘ದೇಶವನ್ನು ಮೋದಿ ಮುಕ್ತ ಮಾಡಲು ಎಲ್ಲ ವಿರೋಧ ಪಕ್ಷಗಳು ಒಂದಾಗಿ ಎನ್‌ಡಿಎ ಸರ್ಕಾರದ ವಿರುದ್ಧ ನಿಲ್ಲಬೇಕು’ ಎಂದು ಹೇಳಿದರು.

‘ಭಾರತ 1947ರಲ್ಲಿ ಮೊದಲ ಬಾರಿಗೆ ಸ್ವಾತಂತ್ರ್ಯ ಗಳಿಸಿತು. 1977ರಲ್ಲಿ ಎರಡನೇ ಬಾರಿಗೆ ಸ್ವಾತಂತ್ರವಾಯಿತು(ತುರ್ತು ಪರಿಸ್ಥಿತಿ ನಂತರದ ಚುನಾವಣೆ), 2019ರಲ್ಲಿ ದೇಶ ಮೋದಿ ಮುಕ್ತವಾದರೆ, ನಮಗೆ ಮೂರನೇ ಬಾರಿ ಸ್ವಾತಂತ್ರ್ಯ ಸಿಕ್ಕಂತೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಮೋದಿ ಸರ್ಕಾರ ಮಾಡಿದ ನೋಟು ಅಮಾನ್ಯೀಕರಣವನ್ನು ತನಿಖೆಗೆ ಒಳಪಡಿಸಿದ್ದೆ ಆದಲ್ಲಿ, ಸ್ವಾತಂತ್ರ್ಯ ನಂತರದ ಬಹುದೊಡ್ಡ ಹಗರಣ ಹೊರಬರಲಿದೆ’ ಎಂದು ಅವರು ಆರೋಪಿಸಿದರು.

‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲಿ ಎಂದು ನಾನೂ ಬಯಸುತ್ತೇನೆ. ಆದರೆ ಆ ವಿಷಯ ರಾಜಕೀಯವಾಗಿ ಬಳಕೆಯಾಗದಿರಲಿ, ಮತಗಳಿಕೆಗಾಗಿ ಸಮಾಜವನ್ನು ವಿಭಜಿಸದಿರಲಿ ಎಂದು ಆಶಿಸುತ್ತೇನೆ’ ಎಂದರು.

‘ಮೋದಿ ಅವರ ವಿದೇಶ ಪ್ರವಾಸಗಳು ದೇಶಕ್ಕೆ ಬಂಡವಾಳವನ್ನು ತರುತ್ತಿಲ್ಲ. ಹಾಗಾದರೆ, ಅವರು ಪಕೋಡಾ ತಯಾರಿಕೆಗೆ ಬೇಕಾದ ಹಿಟ್ಟು ತರಲು ದೇಶಗಳನ್ನು ಸುತ್ತುತ್ತಾರೆಯೇ?’ ಎಂದು ವ್ಯಂಗ್ಯವಾಡಿದರು.

ಕಳೆದ ತಿಂಗಳು ಮೃತಪಟ್ಟ ಚಿತ್ರನಟಿ ಶ್ರೀದೇವಿ ಅವರನ್ನು ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಿದ್ದಕ್ಕೆ ಠಾಕ್ರೆ ಅಸಮಾಧಾನ ವ್ಯಕ್ತಪಡಿಸಿದರು.

‘ಶ್ರೀದೇವಿ ಹೆಸರಾಂತ ನಟಿ. ಆಕೆ ದೇಶಕ್ಕೇನು ಮಾಡಿದ್ದಾಳೆಂದು ಮೃತದೇಹಕ್ಕೆ ತ್ರಿವರ್ಣ ಧ್ವಜ ಹೊದಿಸಿ ಗೌರವಿಸಲಾಯಿತು?’ ಎಂದು ಪ್ರಶ್ನಿಸಿದರು.

‘ದೇಶದ ಜನರ ಗಮನವನ್ನು ನೀರವ್‌ ಮೋದಿಯ ಹಣ ವಂಚನೆ ಪ್ರಕರಣದಿಂದ ಬೇರೆಡೆಗೆ ಸೆಳೆಯಲೆಂದೇ ಮಾಧ್ಯಮಗಳು ಶ್ರೀದೇವಿಯ ಸಾವಿನ ಸುದ್ದಿಯನ್ನು ವ್ಯಾಪಕವಾಗಿ ಬಿತ್ತರಿಸಿದವು’ ಎಂದರು.

‘ಮಾಧ್ಯಮ, ನ್ಯಾಯಾಂಗ ಮತ್ತು ಸಿಬಿಐ ನಂತಹ ಸಂಸ್ಥೆಗಳನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಮಾಧ್ಯಮಗಳು ಸರ್ಕಾರದ ಒತ್ತಡಕ್ಕೆ ಸಿಲುಕಿವೆ’ ಎಂದು ಆಪಾದಿಸಿದರು.

ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷದ(ಎನ್‌ಸಿಪಿ) ಅಧ್ಯಕ್ಷ ಶರದ್‌ ಪವಾರ್‌ ಅವರನ್ನು ರಾಜ್‌ ಠಾಕ್ರೆ ಶನಿವಾರ ಭೇಟಿ ಮಾಡಿದ್ದರು. ಅದೊಂದು ಸೌಜನ್ಯಯುತ ಭೇಟಿ ಎಂದು ಠಾಕ್ರೆ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT