ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಡ, ಬಲ ಸಮುದಾಯಕ್ಕೆ ಟಿಕೆಟ್‌ ನೀಡಿ’

ರಾಜ್ಯ ವಿಧಾನಸಭೆ ಚುನಾವಣೆ, ಕಾಂಗ್ರೆಸ್‌ ಪರಿಶಿಷ್ಟರ ಘಟಕದ ಮುಖಂಡರ ಒತ್ತಾಯ
Last Updated 19 ಮಾರ್ಚ್ 2018, 9:24 IST
ಅಕ್ಷರ ಗಾತ್ರ

ದೇವನಹಳ್ಳಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ದೇವನಹಳ್ಳಿ ಮೀಸಲು ಕ್ಷೇತ್ರದಿಂದ ಈ ಬಾರಿ ಎಡ (ಮಾದಿಗ ) ಇಲ್ಲವೆ ಬಲ (ಛಲವಾದಿ) ಸಮುದಾಯಕ್ಕೆ ಮಾತ್ರ ಟಿಕೆಟ್ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕ ಅಧ್ಯಕ್ಷ ಚೌಡಪ್ಪನಹಳ್ಳಿ ಲೋಕೇಶ್ ಒತ್ತಾಯಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಮಾದಿಗ ಮತ್ತು ಛಲವಾದಿ ಸಮುದಾಯದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಸ್ತುತ ಈ ಕ್ಷೇತ್ರದಲ್ಲಿ ಎಡ ಮತ್ತು ಬಲ ಸಮುದಾಯದ 75 ಸಾವಿರ ಮತಗಳಿವೆ. 5 ರಿಂದ 6 ಸಾವಿರ ಮತದಾರರಿರುವ ಬೋವಿ ಸಮುದಾಯಕ್ಕೆ ಟಿಕೆಟ್ ನೀಡುವ ಪ್ರಯತ್ನ ನಡೆದರೆ ಪಕ್ಷಕ್ಕೆ ಹಿನ್ನಡೆಯಾಗಲಿದೆ. ಪರಿಶಿಷ್ಟರು ಹೆಚ್ಚು ಇರುವ ಜನಸಂಖ್ಯೆಯನ್ನೇ ಗುರುತಿಸಿ ಮೀಸಲು ಕ್ಷೇತ್ರವನ್ನಾಗಿ ವಿಂಗಡಿಸಲಾಗಿದೆ ಎಂದರು.

ಬೋವಿ ಸಮುದಾಯಕ್ಕೆ ಈಗಾಗಲೇ ಎರಡು ಬಾರಿ ಅವಕಾಶ ನೀಡಲಾಗಿದೆ. ಕಾಂಗ್ರೆಸ್‌ ಪಕ್ಷದ ರಾಜ್ಯ ಮುಖಂಡರಾದ ಡಿ.ಕೆ.ಶಿವಕುಮಾರ್, ಕೃಷ್ಣ ಬೈರೇಗೌಡ, ಸಂಸದ ಎಂ.ವೀರಪ್ಪ ಮೊಯಿಲಿ ಅವರಿಗೆ ಈಗಾಗಲೇ ಮನವರಿಕೆ ಮಾಡಲಾಗಿದೆ. ಈ ಎರಡೂ ಸಮುದಾಯವನ್ನು ಹೊರತುಪಡಿಸಿ ಬೇರೆಯವರಿಗೆ ಟಿಕೆಟ್ ನೀಡಿದರೆ ಮುಂದಿನ ನಿಲುವು ಕುರಿತು ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.

ವಿಜಯಪುರ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ವಿ.ನಾರಾಯಣಸ್ವಾಮಿ ಮತ್ತು ಛಲವಾದಿ ಮಹಾಸಭಾ ತಾಲ್ಲೂಕು ಘಟಕ ಅಧ್ಯಕ್ಷ ಕೆ.ವಿ ಸ್ವಾಮಿ ಮಾತನಾಡಿ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಎಡ ಮತ್ತು ಬಲ ಸಮುದಾಯದ ಮತದಾರರ ಸಂಖ್ಯೆ 6.5 ಲಕ್ಷವಿದೆ ಎಂದು ಅವರು ಹೇಳಿದರು.

ದೇವನಹಳ್ಳಿ ಕ್ಷೇತ್ರದಲ್ಲಿ ಸಮುದಾಯಕ್ಕೆ ಪ್ರಾತಿನಿಧ್ಯ ನೀಡದಿದ್ದರೆ 2019ರ ಲೋಕಸಭಾ ಚುನಾವಣೆಯಲ್ಲಿ ಗಂಭೀರ ಪರಿಣಾಮವಾಗಲಿದೆ ಎಂದು ಎಚ್ಚರಿಸಿದರು. ಬದಲಾವಣೆ ಮಾಡುವುದು ಅನಿವಾರ್ಯವಾಗಲಿದೆ. ಎಡ ಮತ್ತು ಬಲ ಸಮುದಾಯದಲ್ಲಿ ಪ್ರಮುಖ ಐದಾರು ಮುಖಂಡರಿದ್ದಾರೆ. ವರಿಷ್ಠರೇ ಆಯ್ಕೆ ಬಗ್ಗೆ ನಿರ್ಧರಿಸಲಿ ಎಂದು ಒತ್ತಾಯಿಸಿದರು.

ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕ ಉಪಾಧ್ಯಕ್ಷ ಡೇವಿಡ್ ನಾರಾಯಣಸ್ವಾಮಿ, ದೇವನಹಳ್ಲಿ ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕ ಅಧ್ಯಕ್ಷ ರಾಜಣ್ಣ, ಕೆಪಿಸಿಸಿ ಜಿಲ್ಲಾ ಘಟಕ ಕಾರ್ಯಕಾರಿ ಸಮಿತಿ ಸದಸ್ಯ ಎಂ.ನಾರಾಯಣಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ಸೋಮಶೇಖರ, ಮುಖಂಡ ಜಿ.ಸುರೇಶ್, ಜಾಲಿಗೆ ಮುನಿರಾಜು, ನರಸಪ್ಪ, ಎಚ್.ಕೆ. ವೆಂಕಟೇಶಪ್ಪ, ಶ್ರೀನಿವಾಸ್, ನಾಗರಾಜ್, ರಮೇಶ್ ಇದ್ದರು.
**
ಯಾರಿಗಾದರೂ ನೀಡಲು ಮನವಿ
ಕೆಪಿಸಿಸಿ ರಾಜ್ಯ ಎಸ್ಸಿ ಘಟಕ ಕಾರ್ಯದರ್ಶಿ ಪ್ರಕಾಶ ಮಾತನಾಡಿ, ‘ಕಾಂಗ್ರೆಸ್ ಪಕ್ಷದ ಗೆಲುವಿಗೆ ಎಡ ಮತ್ತು ಬಲ ಸಮುದಾಯ ನಿರ್ಣಾಯಕ ಪಾತ್ರ ವಹಿಸಲಿದೆ’ ಎಂದರು.

‘ಕ್ಷೇತ್ರದಲ್ಲಿ ಈ ಹಿಂದೆ ಸ್ಪರ್ಧಿಸಿ ಸೋತಿರುವ ಅಭ್ಯರ್ಥಿ ಬಗ್ಗೆ ಮುಖಂಡರಲ್ಲಿ ಭಿನ್ನಾಭಿಪ್ರಾಯಗಳಿವೆ. ಕ್ಷೇತ್ರದಲ್ಲಿ ಎಡ ಮತ್ತು ಬಲ ಸಮುದಾಯದಲ್ಲಿ ಯಾರಿಗಾದರೂ ಟಿಕೆಟ್ ನೀಡಿದರೂ ಗೆಲ್ಲುವ ಉತ್ತಮ ಅವಕಾಶವಿದೆ. ಹೈಕಮಾಂಡ್ ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT