ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಂಗಡಿ ಕೃಷಿಯಲ್ಲಿ ಖುಷಿ ಕಂಡ ರೈತ

ಮೂರು ತಿಂಗಳಲ್ಲಿ ₹ 3 ಲಕ್ಷ ನಿವ್ವಳ ಆದಾಯ ಕಂಡ ರೈತ ಕುಟುಂಬ
Last Updated 19 ಮಾರ್ಚ್ 2018, 9:46 IST
ಅಕ್ಷರ ಗಾತ್ರ

ಭಾಲ್ಕಿ: ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಕೈ ತುಂಬ ಆದಾಯ ಗಳಿಸಿ, ಕೃಷಿ ಕೂಡ ಲಾಭದಾಯಕ ಉದ್ಯೋಗ ಎಂದು ಸಾಬೀತುಪಡಿಸಿದ್ದಾರೆ ತಾಲ್ಲೂಕಿನ ಕೋನಮೇಳಕುಂದಾ ಗ್ರಾಮದ ಪ್ರಗತಿಪರ ರೈತ ವಿನೋದ ಪಾಟೀಲ.

ಐದು ಎಕರೆ ಜಮೀನಿನಲ್ಲಿ ಪರ್ಯಾಯ ಬೆಳೆಯಾಗಿ ಕಲ್ಲಂಗಡಿ, ಖರಬೂಜ ಉತ್ತಮ ಫಸಲು ಬಂದಿದೆ. 80 ದಿನಗಳ ಕಾಲಾವಧಿಯಲ್ಲಿ ಲಭ್ಯವಿರುವ ಅಲ್ಪ ನೀರನ್ನು ಹನಿ ನೀರಾವರಿ ಮೂಲಕ ಫಸಲು ಬೆಳೆದಿದ್ದು, ಈಗ ಹೊಲದ ತುಂಬೆಲ್ಲಾ ಕಲ್ಲಂಗಡಿ ಸಮೃದ್ಧವಾಗಿ ಬೆಳೆದು ನಿಂತಿದೆ. ಒಂದು ಹಣ್ಣು 2 ಕೆ.ಜಿಯಿಂದ 10 ಕೆ.ಜಿ ವರೆಗೆ ಇವೆ.

ಬೀದರ್‌–ಭಾಲ್ಕಿ ಮುಖ್ಯ ರಸ್ತೆಯಲ್ಲಿ ಜಮೀನು ಇರುವುದರಿಂದ ಸಾಕಷ್ಟು ವಾಹನ ಸವಾರರು, ಪ್ರಯಾಣಿಕರು ಹೊಲಕ್ಕೆ ಬಂದು ತಾಜಾ ಹಣ್ಣು ಖರೀದಿಸುತ್ತಿದ್ದಾರೆ. ವ್ಯಾಪಾರಿಗಳೂ ಸಹ ಹೊಲಕ್ಕೆ ಬಂದು ಖರೀದಿಸುತ್ತಿದ್ದಾರೆ. ಹೆಚ್ಚಿನ ಹಣ್ಣುಗಳನ್ನು ಹೈದರಾಬಾದ್‌, ಉದಗೀರ್‌, ಲಾತೂರ್‌ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ.

‘ಎರಡು ಬೆಳೆ ಬೆಳೆಯಲು ಒಟ್ಟು ₹ 2.5 ಲಕ್ಷ ವ್ಯಯಿಸಿದ್ದೇನೆ. ಅಂದಾಜು ₹ 3 ಲಕ್ಷ ನಿವ್ವಳ ಲಾಭ ಗಳಿಸುತ್ತೇನೆ. ರೈತರು ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಆರ್ಥಿಕ ಅಭಿವೃದ್ಧಿಗಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು. ಸಮಸ್ಯೆಗಳಿಗೆ ಎದೆಗುಂದದೆ ನಿಷ್ಠೆ, ಆತ್ಮವಿಶ್ವಾಸದಿಂದ ದುಡಿದರೆ ಕೃಷಿಯಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ’ ಪ್ರಗತಿಪರ ರೈತ ವಿನೋದ ಪಾಟೀಲ.
‘ ಕಾರಣಗಳಿಂದ ಕಳೆದ ಕೆಲ ವರ್ಷಗಳ ಹಿಂದೆ ಸಾಂಪ್ರದಾಯಿಕ ಬೆಳೆಗಳು ಕೈಕೊಟ್ಟಿದ್ದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೆ. ಹೇಗಾದರೂ ಮಾಡಿ ಕೃಷಿಯನ್ನು ಲಾಭದಾಯಕವಾಗಿ ಪರಿವರ್ತಿಸಬೇಕು ಎಂದು ಹೊಲದಲ್ಲಿ ಲಭ್ಯವಿರುವ ಎರಡು ಕೊಳವೆ ಬಾವಿಗಳ 4 ಇಂಚು ನೀರಿನಲ್ಲಿ, ಐದು ಎಕರೆ ಹೊಲದಲ್ಲಿ ಕಲ್ಲಂಗಡಿ, ಖರಬೂಜ ಬೆಳೆಯಲು ಮುಂದಾದೆ’ ಎಂದು ರೈತ ಪಾಟೀಲ ತಿಳಿಸುತ್ತಾರೆ.

ಬೆಳೆಯುವ ವಿಧಾನ– ರೈತರಿಗೆ ಸಲಹೆ: ಕಲ್ಲಂಗಡಿ ಉತ್ತಮ ಫಸಲ ಕಾಣಬೇಕಾದರೆ ಕರ್ಪಾ, ದಾವಣಿ, ಮರ್‌ ಸೇರಿದಂತೆ ಅನೇಕ ರೋಗಗಳಿಂದ ಅವುಗಳನ್ನು ರಕ್ಷಿಸಬೇಕಾಗುತ್ತದೆ. ಬೆಳೆಗೆ ಕರ್ಪಾ ರೋಗ ಬಂದರೆ ಎಂ45 ಕಾರ್ಬೋಡೈಸಮ್‌, ಬ್ಲೂಕಾಪರ್‌, ಸ್ಕೋರ್‌ ಕವಚ್‌, ಫನೋಫಾಸ್‌, ದಾವಣಿ ರೋಗಕ್ಕೆ ರೆಡೋಮಿಲ್‌ಗೋಲ್ಡ್‌, ಮರ್‌ ರೋಗಕ್ಕೆ ಬ್ಲೂಕಾಪರ್‌ ಒಂದು ಗಿಡಕ್ಕೆ 100 ಗ್ರಾ. ಸಿಂಪಡಿಸಬೇಕು’ ಎಂದು ರೈತರಿಗೆ ಮಾರ್ಗದರ್ಶನ ಮಾಡುತ್ತಾರೆ ಪಾಟೀಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT