ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ವಿಸ್ತರಣೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ

ಜಿಲ್ಲಾ ಅಭಿವೃದ್ಧಿ ಸಮನ್ವಯ ಸಭೆಯಲ್ಲಿ ಸಂಸದ ಧ್ರುವನಾರಾಯಣ ಸೂಚನೆ
Last Updated 19 ಮಾರ್ಚ್ 2018, 9:51 IST
ಅಕ್ಷರ ಗಾತ್ರ

ಚಾಮರಾಜನಗರ: ‘ಯಳಂದೂರು, ಕೊಳ್ಳೇಗಾಲ ಮತ್ತು ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ 209 ಮತ್ತು 212ರ ವಿಸ್ತರಣೆ ಕಾಮಗಾರಿಯನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಬೇಕು’ ಎಂದು ಸಂಸದ ಆರ್. ಧ್ರುವನಾರಾಯಣ ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ಶನಿವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಬೆಂಗಳೂರು– ಕನಕಪುರ 170 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಜಿಲ್ಲೆ ಯಲ್ಲಿ 67 ಕಿ.ಮೀ. ಕಾಮಗಾರಿ ಪ್ರಗತಿಯಲ್ಲಿದೆ. ಜೂನ್‌ನೊಳಗೆ 30 ಕಿ.ಮೀ. ಪ್ರಗತಿ ತೋರಿಸಬೇಕು. ಯಾವುದೇ ಸಮಸ್ಯೆಗಳು ಇದ್ದರೂ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಿಕೊಳ್ಳಬೇಕು ಎಂದು ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 209ರ ವಿಸ್ತರಣೆ ಸಂಬಂಧ ಭೂ ಸ್ವಾಧೀನ ಪ್ರಕ್ರಿಯೆ ತ್ವರಿತಗೊಳಿಸ ಲಾಗಿದೆ. ಜಿಲ್ಲೆಯಲ್ಲಿ 133.35 ಹೆಕ್ಟೇರ್‌ ಪ್ರದೇಶ ಭೂ ಸ್ವಾಧೀನಕ್ಕೊಳಪಟ್ಟಿದ್ದು, ಇದರಲ್ಲಿ 17.40 ಹೆಕ್ಟೇರ್‌ ಸರ್ಕಾರಿ ಜಾಗ ಹಾಗೂ 70.23 ಹೆಕ್ಟೇರ್‌ ಪ್ರದೇಶಕ್ಕೆ ಪರಿಹಾರ ವಿತರಿಸಲಾಗಿದೆ. ಉಳಿದ 45.75 ಹೆಕ್ಟೇರ್‌ ಜಾಗಕ್ಕೆ ಪರಿಹಾರ ವಿತರಣೆ ಬಾಕಿಯಿದೆ ಎಂದು ವಿವರಿಸಿದರು.

ಭೂ ಮಾಲೀಕರು ಅಗತ್ಯ ದಾಖಲಾತಿ ಇಲ್ಲದ ಜಮೀನುಗಳನ್ನು ರಾಷ್ಟ್ರೀಯ ಹೆದ್ದಾರಿ ಕಾಯ್ದೆ–1956ರಡಿ ಜಿಲ್ಲಾಧಿಕಾರಿಗಳ ಮೂಲಕ ಪ್ರಾಧಿಕಾರಕ್ಕೆ 43.08 ಹೆಕ್ಟೇರ್‌ ಪ್ರದೇಶ ಸ್ವಾಧೀನಪಡಿಸಿಕೊಳ್ಳಲಾಗಿದೆ. ಒಟ್ಟು 130.71 ಹೆಕ್ಟೇರ್‌ ಪ್ರದೇಶ ಪ್ರಾಧಿಕಾರದ ಸ್ವಾಧೀನದಲ್ಲಿದ್ದು, ಕಾಮಗಾರಿ ಪ್ರಾರಂಭ ವಾಗಿದೆ. ತೋಟಗಾರಿಕೆ, ಅರಣ್ಯ ಇಲಾಖೆ ಹಾಗೂ ಕೃಷಿ ಇಲಾಖೆಯು ರಸ್ತೆಯಲ್ಲಿ ಮರಗಳನ್ನು ತೆರವುಗೊಳಿಸಿಕೊಡಬೇಕು ಎಂದು ಮನವಿ ಮಾಡಲಾಗಿದೆ ಎಂದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯಪಾಲಕ ಎಂಜಿನಿಯರ್‌ ಕಾಂತ ರಾಜು ಮಾತನಾಡಿ, ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆಯಲ್ಲಿ ನಡೆಯುತ್ತಿರುವ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಏಪ್ರಿಲ್‌ ಅಂತ್ಯದಲ್ಲಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಸಂಸದ ಧ್ರುವನಾರಾಯಣ ಮಾತ ನಾಡಿ, ಮರಗಳು ಮತ್ತು ವಿದ್ಯುತ್‌ ಕಂಬಗಳನ್ನು ತೆರವುಗೊಳಿ ಸುವ ಸಂಬಂಧ ಅರಣ್ಯ ಇಲಾಖೆ, ಸೆಸ್ಕ್‌ ಅಧಿಕಾರಿಗಳು ತ್ವರಿತವಾಗಿ ಕ್ರಮವಹಿಸ ಬೇಕು. ನಗರಸಭೆ ಅಧಿಕಾರಿಗಳು ಕಟ್ಟಡ ಗಳ ತೆರವುಗೊಳಿಸಬೇಕು ಎಂದರು.

ಜಿಲ್ಲೆಯಲ್ಲಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್‌ ಸಮಸ್ಯೆ ಹೆಚ್ಚಾಗುತ್ತಿದೆ. ಗ್ರಾಮ ಪಂಚಾಯಿತಿಗಳಲ್ಲಿ ಅಂತರ್ಜಾಲ ಸಂಪರ್ಕದ ಸಮಸ್ಯೆಯಾಗುತ್ತಿದೆ. ಹೊಸ ಗ್ರಾಮ ಪಂಚಾಯಿತಿಗಳಿಗೆ ಇನ್ನೂ ಅಂತರ್ಜಾಲ ವ್ಯವಸ್ಥೆ ಮಾಡಿಲ್ಲ. ಈ ಬಗ್ಗೆ ಗ್ರಾಹಕರಿಂದ ಸಾಕಷ್ಟು ದೂರುಗಳು ಕೇಳಿ ಬರುತ್ತಿದ್ದು, ಈ ಸಂಬಂಧ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಸೂಚಿಸಿದರು.

ಎಲ್ಲ ಗ್ರಾಮಗಳಿಗೂ ವಿದ್ಯುತ್‌ ಕಲ್ಪಿಸಿ: ಕಾಡಂಚಿನ ಗ್ರಾಮಗಳು ಸೇರಿದಂತೆ ಜಿಲ್ಲೆಯ ಎಲ್ಲ ಗ್ರಾಮಗಳಿಗೂ ವಿದ್ಯುತ್‌ ಸೌಲಭ್ಯವನ್ನು ಕಲ್ಪಿಸಬೇಕು. ಮುಂದಿನ ಸಭೆಯೊಳಗೆ ಇದು ಕಾರ್ಯಗತವಾಗಿ ರಬೇಕು ಎಂದು ಧ್ರುವನಾರಾಯಣ ತಿಳಿಸಿದರು.

ನಗರದಲ್ಲಿ ವಿದ್ಯುತ್‌ ಸಮಸ್ಯೆ ಹೆಚ್ಚಾಗಿದೆ. ಯಾವುದೇ ಮಾಹಿತಿ ನೀಡದೆ ವಾರದಲ್ಲಿ 4 ರಿಂದ 5 ದಿನ ವಿದ್ಯುತ್‌ ಕಡಿತಗೊಳಿಸಲಾಗುತ್ತಿದೆ. ಸಾರ್ವಜನಿಕರ ದೂರುಗಳಿಗೆ ಸ್ಪಂದಿಸುತ್ತಿಲ್ಲ. ಅಧಿಕಾರಿಗಳು ಜಿಲ್ಲಾ ಕೇಂದ್ರದಲ್ಲಿ ವಾಸ್ತವ್ಯ ಹೂಡುತ್ತಿಲ್ಲ ಎಂಬ ದೂರುಗಳಿವೆ. ಇದನ್ನು ಕೂಡಲೇ ಸರಿಪಡಿಸಬೇಕು ಎಂದು ತಾಕೀತು ಮಾಡಿದರು.

ಸಭೆಯಲ್ಲಿ ಶಾಸಕ ಎಸ್. ಜಯಣ್ಣ, ಜಿಲ್ಲಾ ಪಂಚಾಯಿತಿ ಪ್ರಭಾರ ಅಧ್ಯಕ್ಷ ಜೆ.ಯೋಗೇಶ್‌, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಹರೀಶ್‌ಕುಮಾರ್‌ ಇತರರು ಹಾಜರಿದ್ದರು.
***
ನರೇಗಾ ಸಾಧನೆಗೆ ಅತೃಪ್ತಿ
‘ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನದಲ್ಲಿ ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯ ಸಾಧನೆ ತೃಪ್ತಿಕರವಾಗಿಲ್ಲ’ ಎಂದು ಸಂಸದ ಧ್ರುವನಾರಾಯಣ ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯಲ್ಲಿ ಮಾತನಾಡಿದ ಅವರು, ನರೇಗಾದಡಿ ಲಭಿಸಿರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಅನುದಾನ ಬಳಕೆ ತೃಪ್ತಿದಾಯಕವಾಗಿಲ್ಲ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯದರ್ಶಿ ಮುನಿರಾಜಪ್ಪ ಮಾತನಾಡಿ, ಪ್ರಸಕ್ತ ಸಾಲಿನಡಿ ಜಿಲ್ಲೆಗೆ ಯೋಜನೆಯಡಿ ₹23.21 ಕೋಟಿ ಅನುದಾನ ನಿಗದಿಯಾಗಿತ್ತು. ಈ ಪೈಕಿ ₹19.77 ಕೋಟಿ ವೆಚ್ಚವಾಗಿದೆ. ಅನುದಾನ ಬಳಕೆಯಲ್ಲಿ ಶೇ 85.17ರಷ್ಟು ಸಾಧನೆಯಾಗಿದೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಶೇ 44ರಷ್ಟು ಮಾತ್ರ ಅನುದಾನ ಬಳಕೆಯಾಗಿದೆ ಎಂದು ವಿವರಿಸಿದರು.
**
ಅನುಪಾಲನಾ ವರದಿ ನೀಡದ ಅಧಿಕಾರಿಗಳಿಗೆ ತರಾಟೆ
ಸಭೆ ಪ್ರಾರಂಭವಾಗುತ್ತಿದಂತೆ ಸಂಸದ ಧ್ರುವನಾರಾಯಣ ಮಾತನಾಡಿ, ಸಭೆಗೆ 10 ಇಲಾಖೆಯ ಅಧಿಕಾರಿಗಳು ಅನುಪಾಲನಾ ವರದಿ ನೀಡಿಲ್ಲ. ಇದಕ್ಕೆ ಕಾರಣವೇನು? ವರದಿ ನೀಡದಿದ್ದರೆ ಅಭಿವೃದ್ಧಿಯ ಬಗ್ಗೆ ತಿಳಿಯುವುದು ಹೇಗೆ ಎಂದು ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬೇಜವಾಬ್ದಾರಿಯಿಂದ ಕೆಲಸ ನಿರ್ವಹಿಸುವುದಾದರೆ ಜಿಲ್ಲೆಗೆ ಏಕೆ ಬರುತ್ತೀರಾ? ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ನಮ್ಮ ಜಿಲ್ಲೆಯಿಂದ ಹೋಗಿ ಎಂದು ಕಿಡಿಕಾರಿದ ಅವರು, ವರದಿ ನೀಡದ ಅಧಿಕಾರಿಗಳಿಗೆ ನೋಟೀಸ್‌ ನೀಡಿ ಎಂದು ಜಿ.ಪಂ. ಸಿಇಒ ಹರೀಶ್‌ಕುಮಾರ್‌ ಅವರಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಮಾತನಾಡಿ, ಅನುಪಾಲನಾ ವರದಿ ನೀಡದಿದ್ದರೆ ಜಿಲ್ಲೆಯ ಪ್ರಗತಿಯ ಬಗ್ಗೆ ತಿಳಿಯಲು ಸಾಧ್ಯವಾಗುವುದಿಲ್ಲ. ಮುಂದಿನ ಸಭೆಯಲ್ಲಿ ನಿಗದಿತ ಸಮಯದೊಳಗೆ ಎಲ್ಲ ಇಲಾಖೆಯ ಅಧಿಕಾರಿಗಳು ವರದಿ ನೀಡಬೇಕು ಎಂದು ಸೂಚಿಸಿದರು.
**
ಟೆಕ್ಸ್‌ಟೈಲ್ ಕೈಗಾರಿಕೆ ಸ್ಥಾಪನೆ
‘ತಾಲ್ಲೂಕಿನ ಬದನಗುಪ್ಪೆ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 46 ಎಕರೆ ಪ್ರದೇಶದಲ್ಲಿ ₹ 700 ಕೋಟಿ ಹೂಡಿಕೆಯೊಂದಿಗೆ ಟೆಕ್ಸ್‌ಟೈಲ್ ಕೈಗಾರಿಕೆ ಸ್ಥಾಪಿಸಲು ರಾಜ್ಯದ ಉನ್ನತಮಟ್ಟದ ಸಮಿತಿ ಸಭೆಯಲ್ಲಿ ಅನುಮೋದನೆ ದೊರೆತಿದೆ’ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅಧಿಕಾರಿ ಮರುಳೇಶ್‌ ಹೇಳಿದರು.

ಸಭೆಯಲ್ಲಿ ಮಾತನಾಡಿದ ಅವರು, ಬದನಗುಪ್ಪೆ– ಕೆಲ್ಲಂಬಳ್ಳಿ ಪ್ರದೇಶದಲ್ಲಿ ರಸ್ತೆ ಹಾಗೂ ಚರಂಡಿ ಕಾಮಗಾರಿಯನ್ನು ಮಾಡಲಾಗಿದ್ದು, ವಿದ್ಯುತ್‌ ಉಪಕೇಂದ್ರ ಸ್ಥಾಪಿಸುವ ಕಾರ್ಯ ಹಾಗೂ ಕುಡಿಯುವ ನೀರಿನ ಕಾಮಗಾರಿಯು ಪ್ರಗತಿಯಲ್ಲಿದೆ ಎಂದರು.

ಕೈಗಾರಿಕಾ ಪ್ರದೇಶದಲ್ಲಿ ಟೆಕ್ಸ್‌ಟೈಲ್‌ ಕಂಪೆನಿ ಸ್ಥಾಪನೆಯಾಗುತ್ತಿದ್ದು, ಇದರಿಂದ 2,000 ನಿರುದ್ಯೋಗಿಗಳಿಗೆ ಉದ್ಯೋಗ ಸೌಲಭ್ಯ ದೊರೆಯಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT