ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರ ಗುಡ್ಡರ ‘ಪಾದಯಾತ್ರೆ’ ಸಾಹಸ

ಚಾಮರಾಜನಗರದಿಂದ ಆಂಧ್ರದ ಶ್ರೀಶೈಲಕ್ಕೆ ಬರಿಗಾಲಿನಲ್ಲಿ ಕಾಲ್ನಡಿಗೆ
Last Updated 19 ಮಾರ್ಚ್ 2018, 9:54 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ದೇವರ ನಾಮಸ್ಮರಣೆ ಮಾಡುತ್ತಾ ನಡೆಯುವುದೆಂದರೆ ಇವರಿಗೆ ಎಲ್ಲಿಲ್ಲದ ಉತ್ಸಾಹ. ಪ್ರತಿ ವರ್ಷವೂ ಚಾಮರಾಜನಗರ ಜಿಲ್ಲೆಯಿಂದ ಆಂಧ್ರಪ್ರದೇಶದ ಶ್ರೀಶೈಲಕ್ಕೆ ಪಾರ್ವತಿ ದೇವಿಯ ಭಕ್ತರು ಬರಿಗಾಲಿನಲ್ಲಿ ನಡೆದು ಹೋಗುವುದು ವಾಡಿಕೆ. ಈ ಬಾರಿಯೂ ಹೋಗಿದ್ದಾರೆ.

ಚಾಮರಾಜನಗರ, ಕೊಳ್ಳೇಗಾಲ ಹಾಗೂ ಯಳಂದೂರು ತಾಲ್ಲೂಕಿನ ಕೆಲವು ಗ್ರಾಮಗಳಿಂದ 50ಕ್ಕೂ ಹೆಚ್ಚು ಪಾರ್ವತಿ ದೇವಿಯ ಗುಡ್ಡರು ಪ್ರತಿ ವರ್ಷ ಈ ಸಾಹಸ ಮಾಡುತ್ತಾರೆ. ಒಂದು ತಿಂಗಳಿಗೂ ಹೆಚ್ಚು ಕಾಲ ಬರಿಗಾಲಿನಲ್ಲಿ ನಡೆದು ಯುಗಾದಿ ಹಬ್ಬದಂದು ಶ್ರೀಶೈಲ ತಲುಪುತ್ತಾರೆ.

ದಡದಹಳ್ಳಿ, ಕೆಸ್ತೂರು, ಸಿದ್ದಯ್ಯನ ಪುರ, ಬಸ್ತೀಪುರ, ಚಂಚಹಳ್ಳಿ, ಮಂಗೀಹುಂಡಿ ಸೇರಿದಂತೆ ಹಲವಾರು ಗ್ರಾಮದ ಗುಡ್ಡರು ಪಾದಯಾತ್ರೆ ಮೂಲಕ ತಾಲ್ಲೂಕುಗಳ ಪ್ರತಿ ಗ್ರಾಮದ ದೇವರ ಗುಡ್ಡರ ಮನೆಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದು ಅವರಿಂದ ಕಾಣಿಕೆ ಸ್ವೀಕರಿಸುತ್ತಾರೆ. ಮುಂದಿನ ಗ್ರಾಮಗಳಿಗೆ ತೆರಳುತ್ತಾ ಎಲ್ಲ ಗುಡ್ಡರು ಮುಡುಕುತೊರೆಯ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದ ಬಳಿ ಶಿವರಾತ್ರಿಯಂದು ಬಂದು ಸೇರುತ್ತಾರೆ. ಇಲ್ಲಿಂದ ಇವರ ಪ್ರಯಾಣ ಆರಂಭವಾಗುತ್ತದೆ.

ಚಪ್ಪಲಿ ಇಲ್ಲದೇ ಬರಿಗಾಲಿನಲ್ಲಿ 850 ಕಿ.ಮೀ. ದೂರದ ಶ್ರೀಶೈಲ ಪರ್ವತದ ಮಲ್ಲಿಕಾರ್ಜುನಸ್ವಾಮಿ ಹಾಗೂ ಭ್ರಮರಾಂಬ ದೇವಸ್ಥಾನಕ್ಕೆ ಪ್ರಯಾಣಿಸುತ್ತಾರೆ. ಶ್ರೀಶೈಲ ಪರ್ವತದಿಂದ ಮುಡುಕುತೊರೆಗೆ ಮಲ್ಲಿಕಾರ್ಜುನಸ್ವಾಮಿ ಕರೆತಂದ ಮೈದಾಳ ರಾಮನ ಕಥೆ ಇವರ ಪ್ರಯಾಣಕ್ಕೆ ಪುಷ್ಠಿ ನೀಡುತ್ತದೆ.

ಮಾರ್ಗ ಮಧ್ಯೆ ಗ್ರಾಮಗಳಲ್ಲಿ ಪಾರ್ವತಿ ದೇವಿಯ ಒಕ್ಕಲಿನವರಿಂದ ಭೀಕ್ಷೆ ಹಾಗೂ ಕಾಣಿಕೆ ಸ್ವೀಕರಿಸಿ ಪ್ರಯಾಣ ಮುಂದುವರಿಸುತ್ತಾರೆ. ಅಲ್ಲಿ 10 ದಿನ ಇದ್ದು, ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿ ಹರಕೆ ತೀರಿಸುತ್ತಾರೆ. ಅಲ್ಲಿಂದ ಪಾದಯಾತ್ರೆ ಮೂಲಕವೇ ಮುಡುಕುತೊರೆಯ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನಕ್ಕೆ ಬಂದು ಸೇರುತ್ತಾರೆ. ಪಾದಯಾತ್ರೆ ಮೂಲಕ ಹೋಗಿ ಬರಲು 3 ತಿಂಗಳು ಬೇಕಾಗುತ್ತದೆ. ನಂತರ ಅವರ ಗ್ರಾಮಗಳಿಗೆ ತೆರಳುವಾಗ ವಿವಿಧ ಗ್ರಾಮ ಗಳಲ್ಲಿನ ಪಾರ್ವತಿ ದೇವಿಯ ಗುಡ್ಡರು ಸೇರಿಕೊಂಡು ಗಂಗಾಪರ ಹೆಸರಿನಲ್ಲಿ ಗ್ರಾಮಗಳಲ್ಲಿ ಹಬ್ಬ ಆಚರಿಸುತ್ತಾರೆ.

‘ತಲೆತಲಾಂತರದಿಂದಲೂ ಈ ಪಾದಯಾತ್ರೆ ಆಚರಣೆ ನಡೆದು ಕೊಂಡು ಬರುತ್ತಿದೆ. ಇದನ್ನು ಮುಂದುವರಿಸಿ ಕೊಂಡು ಹೋಗುತ್ತಿ ದ್ದೇವೆ’ ಎಂದು ದೇವರಗುಡ್ಡಪ್ಪ ಶಿವಣ್ಣ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT