ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈನವಿರೇಳಿಸಿದ ಜಾರುಟ್ಲು ಜಾತ್ರೆ

ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಯುಗಾದಿ ಹಬ್ಬ ಆಚರಿಸುವ ಜಾತ್ರೆ
Last Updated 19 ಮಾರ್ಚ್ 2018, 10:12 IST
ಅಕ್ಷರ ಗಾತ್ರ

ಗುಡಿಬಂಡೆ: ತಾಲ್ಲೂಕಿನ ಸೋಮೇನಹಳ್ಳಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಯುಗಾದಿ ಹಬ್ಬದ ನಂತರ ಮೈನವಿರೇಳಿಸುವ ಜಾರುಟ್ಲು ಮತ್ತು ಕಾಯುಟ್ಲು ಜಾತ್ರೆ ನಡೆಯುತ್ತವೆ.

30 ರಿಂದ 40 ಅಡಿ ಎತ್ತರದ ಮರವನ್ನು ಜಾತ್ರೆ ನಡೆಯುವ ದೇವಾಲಯದ ಮುಂಭಾಗ ಸ್ಥಾಪಿಸಲಾಗುತ್ತದೆ. ಬಳಿಕ ಮರದ ಸುತ್ತ ಜೇಡಿಮಣ್ಣು ಇಟ್ಟು ನೀರು ತುಂಬಲಾಗುತ್ತದೆ. ಮರಕ್ಕೆ ಜೇಡಿಮಣ್ಣು, ಅಂಟುದ್ರವ, ಕಲ್ಲಮಂದು ಪಟ್ಟೆಯನ್ನು ಚೆನ್ನಾಗಿ ಅರೆದು
ನೀರಿನಲ್ಲಿ ಬೆರೆಸುವರು. ನಂತರ ಕಂಬದ ಮೇಲೆ ಚೌಕಾಕಾರದ ಮಂಟಪಕ್ಕೆ ವಸ್ತ್ರ, ಹೂವು, ಬಾಳೆಕೊಂಬು, ಮಾವಿನ ಸೊಪ್ಪಿನಿಂದ
ಅಲಂಕರಿಸುವರು. 

ಮರದ ಮೇಲಿಂದ ಅಕ್ಕಸಾಲಿಗರು ನೀರು ಹಾಯಿಸಿದಾಗ ತಳವಾರ (ತಲಾರಿ) ಸಮುದಾಯದ 30ಕ್ಕೂ ಹೆಚ್ಚು ಯುವಕರು ಮರವೇರಲು ಮುನ್ನುಗ್ಗುವರು. ಒಬ್ಬರ ಮೇಲೆ ಒಬ್ಬರು ಬಿದ್ದು ಕಂಬದಿಂದ ಕೆಳಗೆ ಬೀಳುವ ದೃಶ್ಯ ನೋಡುಗರಿಗೆ ಆನಂದ ಉಂಟುಮಾಡುತ್ತದೆ.

ಈ ಯುವಕರ ಒಬ್ಬರ ಮೇಲೆ ಒಬ್ಬರು ಏರಿ ಕಂಬಕ್ಕೆ ಅಂಟಿಸಿದ ಜೇಡಿ ಮಣ್ಣನ್ನು ಕೀಳುತ್ತಾ  ನೀರು ಹಾಯಿಸುವವರಿಗೆ ಎಸೆಯುವರು. ಹೀಗೆ ಜಾರುಟ್ಲು ಜಾತ್ರೆ ಪ್ರಾರಂಭವಾಗುತ್ತದೆ.

4 ಗಂಟೆ ಜಾರುತ್ತಾ ಕೆಳಗೆ ತಪ್ಪನೆ ಬೀಳುವ ಆಟವು ನೋಡುಗರನ್ನು ನಗೆಗಡಲಲ್ಲಿ ತೇಲಿಸುತ್ತದೆ. ಯುವಕರು ಸುಸ್ತಾದ ನಂತರ ತಂಡದ ನಾಯಕ ಮೂರು ಹಗ್ಗಗಳಿಂದ ಮರಕ್ಕೆ ಬಿಗಿಸಿಕೊಂಡು ಕಂಬ ಏರುವ ಸಾಹಸ ಮಾಡುತ್ತಾನೆ. ಒಂದು ಹಗ್ಗವನ್ನು ಕಂಬಕ್ಕೆ ಬಿಗಿಯಾಗಿ ಬಿಗಿಸಿಕೊಂಡು ಒಂದು ಕಾಲು ಹಗ್ಗದ ಒಳಗೆ ಇಡುವನು. ಮತ್ತೊಂದು ಹಗ್ಗವನ್ನು ಸ್ವಲ್ಪ ಮೇಲಕ್ಕೆ ಬಿಗಿಸಿಕೊಂಡು ಮತ್ತೊಂದು ಕಾಲು ಇಟ್ಟು ಮರ ಹತ್ತುವ ಪ್ರಯತ್ನ ಮಾಡುವನು.

ಹಗ್ಗದ ಮೂಲಕ ಕಂಬ ಹತ್ತುವ ನಾಯಕ ಕಂಬದ ತುದಿಗೆ ಹೋಗುತ್ತಿದ್ದಂತೆ ಜನರು ಚಪ್ಪಾಳೆ, ಶಿಳ್ಳೆ ಹಾಕುವರು. ಹೀಗೆ ನಾನಾ ರೀತಿಯಲ್ಲಿ ಆಟ ಸಾಗುತ್ತದೆ.  ಇದು ನೋಡುಗರಿಗೆ ಮನರಂಜನೆ ನೀಡುತ್ತದೆ. ಕಂಬ ಹತ್ತುವವರಿಗೆ ಪ್ರಾಣ ಕುತ್ತಿಗೆಗೆ ಬಂದಿರುತ್ತದೆ. ಜಾರುವವರಿಗೆ ಜೇಡಿ ಮಣ್ಣು, ಅಂಟುದ್ರವ ಕಿವಿ, ಮೂಗು, ಕಣ್ಣಿಗೆ ‌ಸೇರಿ ಕಷ್ಟ ತಂದಿಡುತ್ತದೆ. ಈಗ ರೈತರು ಕೃಷಿ ಚಟುವಟಿಕೆಗಳಿಂದ ಬಿಡುವಾಗಿದ್ದು, ನೋಡಲು ಸಾವಿರಾರು ಜನರು ಜಾತ್ರೆಗೆ ಬರುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT