ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿಯಲ್ಲಿ ಸೌಹಾರ್ದ ವಾತಾವರಣ ನಿರ್ಮಾಣ

ಭಟ್ಕಳ: ‘ಕುಮಾರಣ್ಣನ ವಿಕಾಸ ಪರ್ವಯಾತ್ರೆ’ಯಲ್ಲಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಭರವಸೆ
Last Updated 19 ಮಾರ್ಚ್ 2018, 11:12 IST
ಅಕ್ಷರ ಗಾತ್ರ

ಭಟ್ಕಳ: ‘ಜೆಡಿಎಸ್ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಮತ್ತು ಬಿಜೆಪಿ ಸೇರಿಕೊಂಡು ಕರಾವಳಿ ಜಿಲ್ಲೆಗಳಲ್ಲಿ ಉಂಟು ಮಾಡಿರುವ ಆತಂಕದ ವಾತಾವರಣವನ್ನು ಹೋಗಲಾಡಿಸಿ ಸೌಹಾರ್ದ ಮೂಡಿಸಲಾಗುವುದು’ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಇಲ್ಲಿ ಶನಿವಾರ ನಡೆದ ‘ಕುಮಾರಣ್ಣನ ವಿಕಾಸಪರ್ವ’ ಯಾತ್ರೆಯ ಸಮಾರಂಭದಲ್ಲಿ ಮಾತನಾಡಿದರು.

‘ತಮ್ಮ ಕುಟುಂಬದ ನಿರ್ವಹಣೆಗಾಗಿ ಎಲ್ಲರನ್ನೂ ಬಿಟ್ಟು ಗಲ್ಫ್‌  ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿರುವ ಕರಾವಳಿಯ ಮುಸ್ಲಿಮರು, ಅಲ್ಲಿಂದ ಹಿಂದಕ್ಕೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗೇನಾದರೂ ಅವರು ಬಂದರೆ ಕೇರಳ ಮಾದರಿಯಲ್ಲಿ ಅವರಿಗೆ ಉದ್ಯಮ ಮತ್ತು ಉದ್ಯೋಗಗಳನ್ನು ನೀಡಿ ಕುಟುಂಬಗಳಿಗೆ ಸೂಕ್ತ ರಕ್ಷಣೆ ನೀಡಲಾಗುವುದು’ ಎಂದು ಭರವಸೆ ನೀಡಿದರು.

‘ಈ ಚುನಾವಣೆಯಲ್ಲಿ 50–60 ಸೀಟು ಗೆದ್ದು ನಾನು ಕಿಂಗ್ ಮೇಕರ್ ಆಗುವುದಕ್ಕೆ ಹೊರಟಿಲ್ಲ. ಬದಲಿಗೆ 113 ಸಂಖ್ಯೆ ಹಾಗೂ ಬಹುಮತದ ಸರ್ಕಾರಕ್ಕಾಗಿ ಈ ಯಾತ್ರೆ ನಡೆಸುತ್ತಿದ್ದೇನೆ. ಇದರಲ್ಲಿ ಭಟ್ಕಳ ವಿಧಾನಸಭಾ ಕ್ಷೇತ್ರವೂ ಸೇರಬೇಕಾಗಿದೆ. ಹೀಗಾಗಿ ಇಲ್ಲಿ ಇನಾಯತ್ ಉಲ್ಲಾ ಶಾಬಂದ್ರಿಯನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿಕೊಡಿ. ಶಾಬಂದ್ರಿಯಲ್ಲಿ ವಿದ್ಯೆ ಇಲ್ಲದಿರಬಹುದು. ಆದರೆ, ಒಳ್ಳೆಯ ಹೃದಯವಿದೆ. ನೇರವಾಗಿ ಮಾತನಾಡುತ್ತಾರೆ’ ಎಂದ ಅವರು, ‘ಈ ಹಿಂದೆ ಕೆಲವು ತಪ್ಪುಗಳು ಆಗಿದೆ. ಮುಂದೆ ಆಗುವುದಿಲ್ಲ. ನನ್ನನ್ನು ನಂಬಿ’ ಎಂದು ಮನವಿ ಮಾಡಿದರು.

ಪಕ್ಷದ ಅಭ್ಯರ್ಥಿ ಇನಾಯತ್ ಉಲ್ಲಾ ಶಾಬಂದ್ರಿ, ‘ಕಳೆದ ಚುನಾವಣೆಯಲ್ಲಿ ನಾನು ಎರಡನೇ ಸ್ಥಾನದಲ್ಲಿದ್ದೆ. ಈ ಬಾರಿ ಎಲ್ಲಾ ಸಮಾಜದವರು ಬೆಂಬಲಿಸಿದರೆ ನಾನು ಶಾಸಕನಾಗಿ ಆಯ್ಕೆಯಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ರಾಜ್ಯ ಯುವ ಘಟಕದ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಮಾತನಾಡಿದರು. ಮುಖಂಡರಾದ ಮರಿತಿಬ್ಬೇಗೌಡ, ಪ್ರಧಾನ ಕಾರ್ಯದರ್ಶಿ ಫಾರುಕ್ ಬಾವ, ಜಿಲ್ಲಾ ಘಟಕದ ಅಧ್ಯಕ್ಷ ಬಿ.ಆರ್.ನಾಯ್ಕ, ವಿವಿಧ ಕ್ಷೇತ್ರಗಳ ಅಭ್ಯರ್ಥಿಗಳಾದ ರವೀಂದ್ರನಾಥ ನಾಯ್ಕ, ಪ್ರದೀಪ ನಾಯಕ, ಕೆ.ಆರ್.ರಮೇಶ್‌, ವಿಶ್ವನಾಥ ಶೆಟ್ಟಿ, ಮೊಹಿದ್ದೀನ್ ಅಲ್ತಾಫ್ ಖರೂರಿ, ಗಣಪಯ್ಯ ಗೌಡ, ಜಿ.ಎನ್.ಗೌಡ, ಮುನಾಫ್ ಮಿರ್ಜನಕರ್‌, ಅಶ್ರಫ್, ಮೋಹಿನಿ ನಾಯ್ಕ, ಈಶ್ವರ ನಾಯ್ಕ, ವೆಂಕಟೇಶ ನಾಯ್ಕ ಇದ್ದರು. ಹಸನ್ ಅವರು ಕುರಾನ್ ಪಠಿಸಿದರು. ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಡಿ.ನಾಯ್ಕ ಸ್ವಾಗತಿಸಿದರು. ತಾಲ್ಲೂಕು ಯುವ ಘಟಕದ ಅಧ್ಯಕ್ಷ ಪಾಂಡುರಂಗ ನಾಯ್ಕ ವಂದಿಸಿದರು.

ಪಕ್ಷಕ್ಕೆ ಸೇರ್ಪಡೆ: ಸ್ಥಳೀಯ ಮುಖಂಡ ಶಂಭುಗೌಡ ಅವರನ್ನು ಕುಮಾರ ಸ್ವಾಮಿ ಅವರು ಪಕ್ಷಕ್ಕೆ ಬರಮಾಡಿಕೊಂಡರು. ಆಗ ಅವರು ಮಾತನಾಡಬೇಕೆಂದು ನೆರೆದವರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ನಮ್ಮ ಮನೆಯವರೇ ಆಗಿದ್ದ ಶಂಭುಗೌಡರು ಈಗ ಪುನಃ ಬಂದಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಮತ್ತು ಚನ್ನಮ್ಮ ಅವರನ್ನು ಭಟ್ಕಳಕ್ಕೆ ಕರೆಸಿಕೊಂಡು ಸನ್ಮಾನಿಸುತ್ತೇನೆ. ನಂತರ ನಾನು ಮಾತನಾಡುತ್ತೇನೆ ಎಂದು ನನ್ನಲ್ಲಿ ಹೇಳಿದ್ದಾರೆ’ ಎಂದರು.
**
‘ಅತಿಕ್ರಮಣದಾರರ ಸಮಸ್ಯೆ ಜೀವಂತ’
‘ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಬಾಯಿಗೆ ಬಂದಂತೆ ಮಾತನಾಡು ತ್ತಿದ್ದಾರೆಯೇ ಹೊರತು ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ. ಕೇಂದ್ರದ ಅರಣ್ಯ ಸಚಿವರನ್ನು ಕರೆತಂದು ಅತಿಕ್ರಮಣದಾರರ ಸಮಸ್ಯೆ ಬಗೆಹರಿಸಬಹುದಿತ್ತು.. ಇಂಥವರನ್ನು ನಾಲ್ಕೈದು ಬಾರಿ ಆಯ್ಕೆ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಜನರೇ ತೀರ್ಮಾನಿಸಬೇಕು’ ಎಂದು ಕುಮಾರಸ್ವಾಮಿ ಹೇಳಿದರು. ‘ಭಟ್ಕಳ ಶಾಸಕರು ₹1,500 ಕೋಟಿ ಅನುದಾನ‌ ತಂದಿರುವುದಾಗಿ ಹೇಳುವುದೇ ಹಾಸ್ಯಾಸ್ಪದ. ಇದು ಕಮಿಷನ್ ವ್ಯವಹಾರವಾಗಿದೆ. ಏಕೆಂದರೆ ರಾಜ್ಯಸಭಾ ಚುನಾವಣೆಯಲ್ಲಿ ಫಾರುಕ್ ಅವರೊಂದಿಗೆ ನಡೆದ ವ್ಯವಹಾರ ಇನ್ನೂ ಮುಗಿದಿಲ್ಲ. ಮಾತು ಕೊಟ್ಟು ಬೇರೆಯವರಿಗೆ ಮತ ಹಾಕಿದವರು. ಹಗಲು ರಾತ್ರಿ ಕೆಲಸ ಮಾಡಿದ್ದೇನೆ ಎಂದು ಹೇಳುವ ಶಾಸಕರು ಇಲ್ಲಿನ ಸಮಸ್ಯೆ ಬಗೆಹರಿಸಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT