ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಕ್ಕೆ ಸೆಡ್ಡು ಹೊಡೆದು ರೇಷ್ಮೆ ಕೃಷಿ

ರೇಷ್ಮೆ ಕೃಷಿಯಲ್ಲಿ ವಿರುಪಾಪುರ ರೈತನ ಯಶೋಗಾಥೆ: ಆರು ತಿಂಗಳ‌ಲ್ಲಿ ₹1 ಲಕ್ಷ ಲಾಭ
Last Updated 19 ಮಾರ್ಚ್ 2018, 11:25 IST
ಅಕ್ಷರ ಗಾತ್ರ

ತಾವರಗೇರಾ: ಮಳೆ ಕೊರತೆ, ಬೆಲೆ ಕುಸಿತ ಸೇರಿ ಇನ್ನಿತರ ಕಾರಣದಿಂದ ಕೃಷಿಯಲ್ಲಿ ನಷ್ಟ ಅನುಭವಿಸುವವರೆ ಹೆಚ್ಚು. ಹೀಗಿರುವಾಗ ಸಮೀಪದ ವಿರುಪಾಪುರ ಗ್ರಾಮದ ರೈತ ಹನುಮಂತಪ್ಪ ಗಂಗಪ್ಪ ಹರಿಜನ ಅವರು ಪ್ರತಿ ಮೂರು ತಿಂಗಳಿಗೊಮ್ಮೆ ರೇಷ್ಮೆ ಗೂಡು ಮಾರಾಟದಿಂದ ₹50 ಸಾವಿರ ಲಾಭ ಪಡೆಯುತ್ತಿದ್ದಾರೆ.

ಆ ಮೂಲಕ ಬರಕ್ಕೆ ಸೆಡ್ಡು ಹೊಡೆದು ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ.

ಹನುಮಂತಪ್ಪ ಅವರು ಜಮೀನಿನಲ್ಲಿ ಶೇಂಗಾ, ಮೆಕ್ಕೆಜೋಳ, ಸಜ್ಜೆ, ಸೂರ್ಯಕಾಂತಿ ಬೆಳೆಯುತ್ತಿದ್ದರು. ಆದರೆ, ಮಳೆ ಕೊರತೆಯಿಂದ ಕೊಳವೆಬಾವಿಯಲ್ಲಿ ನೀರು ಕಡಿಮೆ ಆಯಿತು. ಹೀಗಾಗಿ ಇಳುವರಿ ಕಡಿಮೆ ಆಯಿತು.ಹೀಗಾಗಿ ಪರ್ಯಾಯ ಕೃಷಿ ಮಾಡುವ ಬಗ್ಗೆ ಯೋಚಿಸುತ್ತಿದ್ದಾಗ ರೇಷ್ಮೆ ಕೃಷಿ ಹೊಳೆಯಿತು. ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದ ಅವರು ರೇಷ್ಮೆ ಬೆಳೆಯ ಬಗ್ಗೆ ಮಾಹಿತಿ ಪಡೆದರು. ನಂತರ ಇಲಾಖೆಯ ಸಹಾಯಧನ, ರೇಷ್ಮೆ ಹುಳುಗಳು, ಸೊಪ್ಪು ಬೆಳೆಯುವುದು, ರೇಷ್ಮೆ ಗೂಡು ಮಾರುಕಟ್ಟೆ, ಹುಳು ಸಂರಕ್ಷಣೆ ಬಗ್ಗೆ ತಿಳಿದು ಕೃಷಿ ಆರಂಭಿಸಿದರು.

ಗ್ರಾಮದ ಹತ್ತಿರದಲ್ಲಿ ಇರುವ 5 ಎಕರೆ ಜಮೀನಿನಲ್ಲಿ 2 ಎಕರೆ ಮಾತ್ರ ರೇಷ್ಮೆ ಕೃಷಿಗೆ ಮೀಸಲಿಡಲಾಗಿದೆ. ಕಳೆದ ಆರು ತಿಂಗಳಿನಿಂದ ರೇಷ್ಮೆ ಸೊಪ್ಪು ಬೆಳೆದು ಹುಳು ಬಿಡಲಾಗುತ್ತಿದೆ. ಈಗಾಗಲೇ ಎರಡು ಸಲ ಗೂಡು ಮಾರಾಟ ಮಾಡಲಾಗಿದ್ದು, ತಲಾ ₹50 ಸಾವಿರ ಲಾಭ ಬಂದಿದೆ ಎನ್ನುತ್ತಾರೆ ಹನುಮಂತಪ್ಪ.

ಪ್ರತಿ ಮೂರು ತಿಂಗಳಿಗೊಮ್ಮೆ ಹುಳು ಖರೀದಿ ಮಾಡುವುದು, ಸೊಪ್ಪು ಬೆಳೆಯುವುದು ಸೇರಿ ಇನ್ನಿತರ ಕೆಲಸಗಳಿಗೆ ₹ 20 ಸಾವಿರ ಖರ್ಚಾಗುತ್ತದೆ. ರೇಷ್ಮೆ ಬೆಳೆಗೆ ಉತ್ತಮ ಮಾರುಕಟ್ಟೆ ಇದೆ. ಮೂರನೇ ಹಂತದ ಸೊಪ್ಪು ಬೆಳೆದು ಹುಳುಗಳನ್ನು ಬಿಡಲಾಗುತ್ತಿದೆ. ನಾವು ನೇರವಾಗಿ ರಾಮನಗರಕ್ಕೆ ಹೋಗಿ ಮಾರಾಟ ಮಾಡುತ್ತೇವೆ ಎಂದು ಹೇಳಿದರು.

ಗ್ರಾಮದ ಸುತ್ತಲಿನ ರೈತರು ರೇಷ್ಮೆ ಕೃಷಿ ಮಾಡಲು ಮುಂದೆ ಬಂದಿದ್ದಾರೆ. ಆದರೆ, ಇಲಾಖೆ ಸಹಾಯಧನ ಪಡೆಯಲು ಹರಸಾಹಸ ಪಡಬೇಕಿದೆ. ಇಲಾಖೆಯ ಅಧಿಕಾರಿಗಳು ಸಣ್ಣ ರೈತರ ಬಗ್ಗೆ ಕಾಳಜಿ ವಹಿಸಬೇಕು ಎಂದರು.
**
ಆರು ತಿಂಗಳಿನಿಂದ ರೇಷ್ಮೆ ಕೃಷಿ ಮಾಡುತ್ತಿದ್ದೇನೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಇದರಿಂದ ಬಂದ ಲಾಭ ನೆಮ್ಮದಿ ನೀಡಿದೆ.
– ಹನುಮಂತಪ್ಪ ಗಂಗಪ್ಪ ಹರಿಜನ, ರೈತ, ವಿರುಪಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT