ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನದ ಅರಿವು: ಕಿರುಚಿತ್ರದ ನೆರವು

ಜಿಲ್ಲೆಯ ವಿವಿಧೆಡೆ ಚಿತ್ರೀಕರಣ ನಡೆಸುತ್ತಿರುವ ರಂಗಕರ್ಮಿ ಶ್ರೀಪಾದ ಭಟ್ಟ ನೇತೃತ್ವದ ತಂಡ
Last Updated 19 ಮಾರ್ಚ್ 2018, 11:51 IST
ಅಕ್ಷರ ಗಾತ್ರ

ಶಿರಸಿ: ಮತದಾನದ ಹಕ್ಕಿನ ಕುರಿತು ಈ ಹಿಂದೆ ಕಾರ್ಟೂನ್ ಮೂಲಕ ಜಾಗೃತಿ ಮೂಡಿಸಲು ಪ್ರಯತ್ನಿಸಿದ ಜಿಲ್ಲಾಡಳಿತ, ಇನ್ನೂ ಒಂದು ಹೆಜ್ಜೆ ಮುಂದಿಟ್ಟು, ಕಿರುಚಿತ್ರಗಳನ್ನು ಬಳಸಿಕೊಂಡು, ಜನರಲ್ಲಿ ಮತದಾನದ ಅರಿವು ಮೂಡಿಸಲು ಮುಂದಾಗಿದೆ.

ರಂಗಕರ್ಮಿ ಶ್ರೀಪಾದ ಭಟ್ಟ ನೇತೃತ್ವದ ತಂಡ ಮೂರು ದಿನಗಳಿಂದ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಚಿತ್ರೀಕರಣ ಕಾರ್ಯ ನಡೆಸುತ್ತಿದೆ. ‘ಕರಾವಳಿಯ ಭಾಗದಲ್ಲಿ ಹಳದೀಪುರ, ಆರ್.ವಿ.ಭಂಡಾರಿ ಕೆರೆಕೋಣ ಅವರ ಮನೆ, ಕಡ್ಲೆ ಕ್ರಾಸ್‌ನಲ್ಲಿ ಚಿತ್ರೀಕರಣ ನಡೆಸಿ, ಒಂದೂವರೆ ನಿಮಿಷಗಳ ಎರಡು ಕಿರುಚಿತ್ರಗಳನ್ನು ಸಿದ್ಧಪಡಿಸಲಾಗಿದೆ. ಶಿರಸಿಯ ಲಯನ್ಸ್ ಇಂಗ್ಲಿಷ್ ಮಾಧ್ಯಮ ಶಾಲೆ, ಯೋಗಮಂದಿರ, ಸಿಂಧು ಹೆಗಡೆ ಅವರ ಮನೆಯ ಆವರಣ ಬಳಸಿಕೊಂಡು ಇನ್ನೊಂದು ಚಿತ್ರ ತಯಾರಾಗುತ್ತಿದೆ. ಬರಹಗಾರ್ತಿ ಸುಧಾ ಆಡುಕಳ, ಸ್ಟೇಟ್ ಬ್ಯಾಂಕ್ ಉದ್ಯೋಗಿ ಜೀವನ ಭಾಗವತ ಸಂಭಾಷಣೆ ಬರೆದುಕೊಟ್ಟಿದ್ದಾರೆ. ಶಾಲಾ ಮಕ್ಕಳು, ಯುವಕರು, ಮಹಿಳೆಯರು ಸೇರಿ ಸುಮಾರು 12 ಕಲಾವಿದರು ಕಿರುಚಿತ್ರ ನಿರ್ಮಾಣಕ್ಕೆ ಸಹಕರಿಸಿದ್ದಾರೆ’ ಎಂದು ಶ್ರೀಪಾದ ಭಟ್ಟ ತಿಳಿಸಿದರು.

‘ತಾಂತ್ರಿಕ ನೆರವು ನೀಡಿರುವ ಸಂತೋಷ ಸಂಕೊಳ್ಳಿ ಹಾಗೂ ಜೀವನ ಭಾಗವತ ಸಿನಿಮಾಟೊಗ್ರಫಿ ಕೆಲಸ ನಿರ್ವಹಿಸುತ್ತಾರೆ. ಕರಾವಳಿಯಲ್ಲಿ ಶಿವಮೊಗ್ಗದ ತಂಡ ಚಿತ್ರೀಕರಣ ನಡೆಸಿದರೆ, ಶಿರಸಿಯಲ್ಲಿ ಸ್ಥಳೀಯ ತಜ್ಞರು ಆ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಎಡಿಟಿಂಗ್ ಕಾರ್ಯ ನಡೆಯುತ್ತಿದೆ. ಯುವ ಮತದಾರರನ್ನು ಮತದಾನಕ್ಕೆ ಪ್ರೇರೇಪಿಸುವ ಹಾಗೂ ಅಂಗವಿಕಲ ಮತದಾರರಿಗೆ ಮತದಾನದಲ್ಲಿ ಭಾಗವಹಿಸಲು ಸಿಗುವ ಸೌಲಭ್ಯಗಳ ಕುರಿತು ತಿಳಿಸುವ ಪ್ರಯತ್ನ ಮಾಡಲಾಗಿದೆ’ ಎಂದು ಅವರು ವಿವರಿಸಿದರು.

‘ದೊಡ್ಡ ವಿಡಿಯೊ ಇದ್ದರೆ ಹಲವರು ಡೌನ್‌ಲೋಡ್ ಮಾಡುವುದಿಲ್ಲ. ಅದಕ್ಕಾಗಿ ಡೌನ್‌ಲೋಡ್ ಮಾಡಲು ಸುಲಭವಾಗುವಂತಹ ಸಣ್ಣ ವಿಡಿಯೊಗಳನ್ನೇ ತಯಾರಿಸಲಾಗಿದೆ. ಇಂತಹ ಕಿರುಚಿತ್ರಗಳಿಂದ ಪ್ರೇರಿತರಾಗಿ, ಹೆಚ್ಚಿನ ಜನರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಚಲಾಯಿಸಬೇಕು ಎಂಬುದು ಜಿಲ್ಲಾಡಳಿತದ ಆಶಯವಾಗಿದೆ’ ಎಂದು ಅವರು ಹೇಳಿದರು.

’ಸ್ವೀಪ್ (ಸಿಸ್ಟಮ್ಯಾಟಿಕ್ ವೋಟರ್ಸ್‌ ಎಜುಕೇಷನ್ ಆ್ಯಂಡ್ ಎಲೆಕ್ಟೋರಲ್ ಪಾರ್ಟಿಸಿಪೇಷನ್) ಕಾರ್ಯಕ್ರಮದಡಿ ಮತದಾನ ಜಾಗೃತಿ ಅನೇಕ ಚಟುವಟಿಕೆ ನಡೆಸಲಾಗುತ್ತಿದೆ. ಮತದಾರರನ್ನು ಸೆಳೆಯಲು ಚಿತ್ರ–ಕಥೆ ಸುಲಭ ಮಾರ್ಗವಾಗಿರುವುದರಿಂದ, ಸೃಜನಶೀಲವಾಗಿ ಯೋಚಿಸಿ, ಕಿರುಚಿತ್ರ ರಚನೆಗೆ ಆಡಳಿತ ಮುಂದಾಗಿದೆ. ಅಂಗವಿಕಲರು, ಯುವಜನರು, ಮಹಿಳೆಯರನ್ನು ಕೇಂದ್ರೀಕರಿಸಿ ಚಿತ್ರ ತಯಾರಾಗುತ್ತಿದೆ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ನಾಯಕ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
**
ಜಿಲ್ಲೆಯಲ್ಲಿ ಮೊದಲ ಬಾರಿಗೆ ಮತದಾನ ಜಾಗೃತಿಗೆ ಕಿರುಚಿತ್ರದ ಪ್ರಯೋಗ ಮಾಡಲಾಗಿದೆ. ವಾಟ್ಸ್‌ಆ್ಯಪ್ ಗ್ರೂಪ್‌ ಮೂಲಕ ಹೆಚ್ಚು ಜನರನ್ನು ತಲುಪುವಂತೆ ಮಾಡಲಾಗುವುದು
–ಚಂದ್ರಶೇಖರ ನಾಯಕ , ಜಿ.ಪಂ. ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT