ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡ್ಡು ಕಟ್ಟಿ ನೋಡು...

Last Updated 19 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಹುನಗುಂದ ಹಾಗೂ ಸುತ್ತಮುತ್ತಲಿನ ಕೆಲ ರೈತರು ತಮ್ಮ ಪಾರಂಪರಿಕ ಕೃಷಿಜ್ಞಾನದಿಂದ, ಸ್ವಾನುಭವದಿಂದ ತೀವ್ರ ಬರದಲ್ಲೂ ಭೂಮಿಗೆ ಹಸಿರು ತೊಡಿಸುವಷ್ಟು, ಹೊಟ್ಟೆ ತುಂಬಲು ಬೇಕಾದ ಫಸಲು ತೆಗೆಯುವಷ್ಟು ಕೌಶಲ ಹೊಂದಿದ್ದಾರೆ. ಈ ಕಲೆ ಈ ಭಾಗದ ರೈತರಿಗೆ ಪರಂಪರೆಯಿಂದ ಬಂದ ಬಳುವಳಿ. ಇದನ್ನು ಸಂದರ್ಭಕ್ಕೆ ತಕ್ಕಂತೆ ಮಾರ್ಪಡಿಸಿ, ವೈಜ್ಞಾನಿಕ ವಿಧಾನ ಅನುಸರಿಸಿ ಯಶಸ್ವಿಯಾಗಿದ್ದು ರೈತ, ಕೃಷಿ ಅನುಭಾವಿ ಮಲ್ಲಣ್ಣ ನಾಗರಾಳ. ಇದಕ್ಕೆ ಇವರ ರಾಮವಾಡಗಿ ಹೊಲ, ಮಡಿ ಹೊಲಗಳು ಸಾಕ್ಷಿ ಎನ್ನುವಂತೆ ತೆನೆದೂಗುತ್ತಾ ನಿಂತಿವೆ.

ನಾಗರಾಳ ಅವರ ಕುಟುಂಬ ಮೂರು ತಲೆಮಾರುಗಳಿಂದ ‘ಕೃಷಿ ಋಷಿ’ ಸಂತೆಕೆಲೂರಿನ ಘನಮಠದ ಶಿವಯೋಗಿಗಳ ‘ಕೃಷಿ ಜ್ಞಾನ ಪ್ರದೀಪಿಕೆ’ ಗ್ರಂಥದ ಬೆಳಕಿನಲ್ಲಿ ಮುನ್ನೆಡೆದು ಬಂದಿದೆ. ಮಲ್ಲಣ್ಣ ನಾಗರಾಳರ ಅಜ್ಜ ಸಂಗನ ಬಸಪ್ಪ ಈ ಪುಸ್ತಕದ ಕೈಬರಹ ಮಾಡಿಟ್ಟು ಕೊಂಡು ಧರ್ಮಗ್ರಂಥಕ್ಕಿಂತ ಮಿಗಿಲು ಎಂಬಂತೆ ಅನುಸರಿಸುತ್ತಿದ್ದವರು. ಅಪ್ಪ ಶಂಕರಣ್ಣನವರು ಈ ಕೃತಿ ಹೇಳುವುದನ್ನು ಹಾಡು ಮಾಡಿ ಹಾಡುತ್ತಾ ರೈತರಿಗೆ ತಿಳಿಸಿ ಹೇಳುತ್ತಿದ್ದ ಕಾರಣ, ಅವರು ‘ಕೃಷಿ ಕವಿ’ ಎಂದೇ ಹೆಸರಾಗಿ ದ್ದರು. ತಂದೆಯ ಹಾಡುಗಳನ್ನೇ ಕೇಳಿ ಬೆಳೆದವರು ಮಲ್ಲಣ್ಣ.

ತಾವೊಬ್ಬರೇ ಕಲಿತರೆ ಸಾಕೇ? ತಮ್ಮ ಹಿರೀಕರಿಂದ, ಸ್ವಾನುಭವದಿಂದ ಕಲಿತ ನೀರು, ಮಣ್ಣು ಸಂರಕ್ಷಣೆ ತಂತ್ರಗಳನ್ನು ಆಸಕ್ತ ರೈತರಿಗೆ ಹೇಳಿಕೊಡಲು, ಹೊಲಗಳನ್ನು ತಿದ್ದಿ ಬರ ನಿರೋಧಕ ಮಾಡಲು ಮಲ್ಲಣ್ಣ 65ರ ಇಳಿವಯಸ್ಸಿನಲ್ಲೂ ದಣಿವರಿಯದೇ ಓಡಾಡುತ್ತಾರೆ. ತಾವೂ ಹಾಡು ಕಟ್ಟಿ ಹಾಡುತ್ತಾ ಜಾಗೃತಿ ಮೂಡಿಸುತ್ತಿದ್ದಾರೆ.

ಮಳೆಯ ಪ್ರತಿ ಹನಿ, ಮಣ್ಣಿನ ಪ್ರತಿ ಕಣವೂ ಅಮೂಲ್ಯ. ಇವೆರಡರ ರಕ್ಷಣೆಯೇ ಇವರ ಗುರಿ. ‘ಪ್ರಕೃತಿ ಹೊರತಾಗಿ ಈ ಎರಡನ್ನು ಯಾರಿಂದಲೂ ತಯಾರಿಸಲಾಗದು. ಹಾಗಾಗಿ ಇವುಗಳ ಸಂರಕ್ಷಣೆಯಿಂದಷ್ಟೇ ಬದುಕು ಮುಂದುವರೆಯುತ್ತದೆ. ಪ್ರತಿವರ್ಷ ಬರಪೀಡಿತ ಪ್ರದೇಶ ಎಂದು ಘೋಷಿಸಲು ಸರ್ಕಾರ ತೋರುವ ಆತುರವನ್ನು ಬರ ಎದುರಿಸುವ ಮಾದರಿಗಳನ್ನು ಬಲಪಡಿಸುವುದಕ್ಕೆ ಆಸಕ್ತಿ ವಹಿಸುತ್ತಿಲ್ಲ’ ಎಂದು ಬೇಸರಿಸುವ ಇವರು, ಬರ ಎದುರಿಸುವುದನ್ನು ಹೇಳಿಕೊಡಲು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಾರೆ.

‘ಓಡುವ ನೀರನ್ನು ನಡೆಸುವುದು, ನಡೆಯುವ ನೀರನ್ನು ನಿಲ್ಲಿಸುವುದು, ನಿಲ್ಲಿಸಿದ ನೀರನ್ನು ಉಣಿಸುವುದು, ಉಣಿಸಿ ಉಳಿದ ನೀರನ್ನು ಹೊರಬಿಡುವುದು’–ಇದು ಇವರ ತಂತ್ರ.

ಫಲವತ್ತಾದ ಕಪ್ಪುಮಣ್ಣು ಇಲ್ಲಿಯ ರೈತರ ಆಸ್ತಿ. ಮಣ್ಣು ಕಡಿಮೆ ರಂಧ್ರಯುಕ್ತವಾಗಿದ್ದು, ಚಿಕ್ಕ ಚಿಕ್ಕ ಕಣಗಳಿಂ ದಾಗಿದೆ. ಈ ಮಣ್ಣಿನಲ್ಲಿ ಮಳೆನೀರು ಇಂಗುವುದ ಕ್ಕಿಂತ ಕೊಚ್ಚಿ ಹೋಗುವುದೇ ಹೆಚ್ಚು. ಆಗ ಫಲವತ್ತಾದ ಮಣ್ಣು ಕೂಡ ನಷ್ಟವಾಗುತ್ತದೆ. ಇದನ್ನು ತಡೆಯಲು ಮಲ್ಲಣ್ಣನವರು ಹೊಲವನ್ನು ಅಂಗೈಯಂತೆ ಸಮತಲಗೊಳಿಸಿದ್ದಾರೆ. ನೀರು, ಮಣ್ಣು ಸಂರಕ್ಷಣೆಗೆ ಒಡ್ಡು ಹಾಕಿದ್ದಾರೆ.

ಆಯ ನೋಡಿ ಪಾಯ ಹಾಕು: ಭೂಮಿಯ ಇಳುಕಲಿಗೆ ಅಡ್ಡವಾಗಿ, ನೀರಿನ ಹರಿವಿಗೆ ತಡೆ ಒಡ್ಡಲು ಹಾಕುವ ಮಣ್ಣಿನ ರಾಶಿಯೇ ಒಡ್ಡು. ಹೊಲದ ತೆಂಬ (ದಿಬ್ಬ)ದಷ್ಟು ಎತ್ತರಕ್ಕೆ ಒಡ್ಡು ಹಾಕಬೇಕು. ಒಡ್ಡಿಗೆ 45 ಕೋನದಲ್ಲಿ ಎದಿ ಹಾಕಿ, ಅಗತ್ಯಕ್ಕೆ ತಕ್ಕಷ್ಟು ಕುಂಬಿ ಎತ್ತರಿಸಬೇಕು.

ಹೊಲಕ್ಕೆ ಹರಿದು ಬರುವ ನೀರಿನ ಪ್ರಮಾಣ ಹಾಗೂ ಹೊಲದ ವಿಸ್ತಾರ ನೋಡಿಕೊಂಡು ಒಡ್ಡಿನ ಗಾತ್ರ ನಿರ್ಧರಿಸಬೇಕು. ಇದನ್ನು ಪುಸ್ತಕ, ಪೆನ್ನು ಹಿಡಿದು ಲೆಕ್ಕ ಹಾಕಲಾಗದು. ಮಣ್ಣಿನ ರಚನೆ, ಮಣ್ಣು ಸವಕಳಿಯ ಪ್ರಮಾಣ ಹಾಗೂ ಹರಿದು ಬರುವ ನೀರಿನ ಪ್ರಮಾಣ ಹಾಗೂ ನೀರಿನ ಹರಿವುಗಳು ಎಲ್ಲಿವೆ ಎಂಬುದನ್ನು ತಿಳಿದು ತಳ ಒಡ್ಡಿನ ನೀಲನಕ್ಷೆ ರೂಪಿಸಬೇಕು.

ಒಡ್ಡು ಹಾಕಲು ತೋಡುವ ಗುಂಡಿ ಒಡ್ಡಿನಿಂದ ಕನಿಷ್ಠ 30 ಅಡಿಯಾದರೂ ದೂರಬೇಕು. ಗುಂಡಿಯಲ್ಲಿ ದೊರೆಯುವ ಕಪ್ಪಾದ ಮೇಲ್ಮಣ್ಣನ್ನು ಒಡ್ಡಿನ ಎದಿಗೆ ಹಾಕಿ, ಕೆಳಗೆ ದೊರೆಯುವ ಮರಳುಗಲ್ಲಿನ (ಗರಸು) ಮಣ್ಣನ್ನು ಒಡ್ಡಿನ ಹಿಂಬದಿಗೆ ಹಾಕಬೇಕು. ದಿಬ್ಬದ ಕಡೆಯಿಂದ ಓಡಿ ಬರುವ ನೀರು ಗುಂಡಿ ಸೇರುತ್ತಿದ್ದಂತೆ ವೇಗ ತಗ್ಗುತ್ತದೆ. ಒಡ್ಡಿನ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಆದರೆ ಜಲಾನಯನ ಇಲಾಖೆ ಅಧಿಕಾರಿಗಳು ಈ ಯಾವ ಸೂಕ್ಷ್ಮ ಗಳನ್ನು ಗಮನಿಸದೇ ಹಾಕಿಸುವ ಪರಿಣಾಮ ಒಡ್ಡುಗಳು ಕೆಲ ವರ್ಷಗಳಲ್ಲಿಯೇ ಒಡೆದು ಹೋಗುತ್ತಿವೆ ಎನ್ನುತ್ತಾರೆ.

ಗುಂಡಾವರ್ತಿ, ಒಳಗಟ್ಟಿ
ಇಳುಕಲು ನೋಡಿಕೊಂಡು ಅಗತ್ಯಕ್ಕೆ ತಕ್ಕಂತೆ ಒಡ್ಡು ಹಾಕಿದಾಗ ಹೊಲ ಕೆರೆಯಂತಾಗಿ ನೀರು ನಿಲ್ಲುತ್ತದೆ. ಆದರೆ ಹೀಗೆ ಹೊಲದಲ್ಲಿ ನೀರು ನಿಲ್ಲಿಸಲಾಗದು. ಉತ್ತಮ ಮಳೆಯಾದ ಸಂದರ್ಭದಲ್ಲಿ ನೀರು ಹೆಚ್ಚಾಗಿ ಒಡ್ಡು ಒಡೆಯುತ್ತದೆ. ‘ನೀರು ನಿಲ್ಲಿಸಬೇಡ, ನೀರುಣಿಸದೇ ಇರಬೇಡ’ ಎನ್ನುವುದು ಮಲ್ಲಣ್ಣರ ಸಲಹೆ. ಹೆಚ್ಚುವರಿ ನೀರನ್ನು ಹೊರ ಹಾಕಲು ಗುಂಡಾವರ್ತಿ ಇಲ್ಲವೇ ಒಣಗಲ್ಲಿನ ಒಳಗಟ್ಟಿ ಮಾಡಬೇಕು. ಎರಡರ ಉದ್ದೇಶವೂ ಒಂದೇ ಆಗಿದೆ.

ಗುಂಡಾವರ್ತಿ ಒಡ್ಡಿನ ಅಂಚಿನಿಂದ 20ರಿಂದ 25 ಅಡಿ ಮೊದಲೇ ಮಾಡಬೇಕು. ಗುಂಡಾವರ್ತಿ ಒಂದು ಚಿಕ್ಕ ಬಾವಿಯ ರೀತಿಯ ರಚನೆಯಾಗಿದ್ದು, ತಳದಿಂದ ಪೈಪ್‌ ಇಲ್ಲವೇ ಸುರಂಗದಂತಿರುವ ಮಾರ್ಗದ ಮೂಲಕ ಭೂಗತ ವಾಗಿಯೇ ನೀರು ಹೊರ ಹೋಗುತ್ತದೆ. ಗುಂಡಾವರ್ತಿಯ ವಿನ್ಯಾಸ ಜಮೀನಿನ ವಿಸ್ತೀರ್ಣ ಹಾಗೂ ಆ ಹೊಲಕ್ಕೆ ಬರುವ ನೀರಿನ ಪ್ರಮಾಣವನ್ನು ಅವಲಂಬಿಸಿರುತ್ತದೆ. 2 ಅಡಿ ವ್ಯಾಸದ ಗುಂಡಾವರ್ತಿಗೆ 1ಅಡಿ ವ್ಯಾಸದ ಸಿಮೆಂಟ್‌ ಪೈಪ್‌, 4 ಅಡಿ ವ್ಯಾಸದ ಗುಂಡಾವರ್ತಿಗೆ 2 ಅಡಿ ವ್ಯಾಸದ ಸಿಮೆಂಟ್‌ ಪೈಪ್‌ ಹಾಕಬೇಕು.

ಗುಂಡಾವರ್ತಿಯ ಮೇಲ್ಮಟ್ಟ ನಿರ್ಧರಿಸುವಾಗ ತುಂಬಾ ಎಚ್ಚರ ವಹಿಸಬೇಕು. ಎಷ್ಟು ಎತ್ತರ ನೀರು ನಿಲ್ಲಿಸಿದರೆ ಒಡ್ಡು ಹಾನಿಗೊಳಗಾಗದೇ ಇಡೀ ಹೊಲದಲ್ಲಿ ನೀರು ನಿಲ್ಲುತ್ತದೆ ಎನ್ನುವುದನ್ನು ಲೆಕ್ಕ ಹಾಕಿ, ಗುಂಡಾವರ್ತಿಯ ಮೇಲ್ಭಾಗವನ್ನು ನಿರ್ಧರಿಸಬೇಕು. ಗುಂಡಾವರ್ತಿಯ ಮೇಲ್ಭಾಗದಲ್ಲಿ 2–3 ಪ್ರವೇಶ ದ್ವಾರಗಳಿದ್ದು, ಆ ಮೂಲಕ ನೀರು ಗುಂಡಾವರ್ತಿ ಸೇರುತ್ತದೆ. ಒಳಗಟ್ಟಿ ಒಡ್ಡಿನ ನಡುವಿರುವ ಅಣೆಕಟ್ಟಿನಂತೆ. ಅಗಲವಾದ ಬಾಯಿಯ ಮೂಲಕ ಹೆಚ್ಚುವರಿ ನೀರನ್ನು ಮಾತ್ರ ಹೊರಹಾಕಿ, ಮಣ್ಣು ಸಂರಕ್ಷಿಸುತ್ತದೆ. ಹೊಲದಲ್ಲಿ ಎಷ್ಟು ನೀರನ್ನು ಎಷ್ಟು ಹೊತ್ತು ನಿಲ್ಲಿಸಬೇಕು ಹಾಗೂ ಯಾವಾಗ ಹೊರ ಬಿಡಬೇಕು ಎನ್ನುವುದನ್ನು ಪ್ರವೇಶ ದ್ವಾರಕ್ಕಿಡುವ ತೆಳುವಾದ 6 ಇಂಚು, 8 ಇಂಚು ಗಾತ್ರ ಕಲ್ಲುಗಳು ನಿಯಂತ್ರಿಸುತ್ತವೆ. ಮುಂಗಾರು ಹಂಗಾಮಿನ ಮೊದಲ ಮಳೆ ಸುರಿದಾಗ ನೀರು ನಿಲ್ಲಿಸಿ, ಭೂಮಿಗೆ ಇಂಗಿಸಲಾಗುತ್ತದೆ. ಸುರಿವ ಮಳೆಯ ಪ್ರಮಾಣ ನೋಡಿಕೊಂಡು ಪ್ರವೇಶದ್ವಾರದ ಕಲ್ಲಿನ ಮೂಲಕ ನೀರು ನಿಯಂತ್ರಿಸುವ ಕಾರಣ ಅಲ್ಪ ಮಳೆಯಲ್ಲೂ ಇಡೀ ಭೂಮಿಯನ್ನು ಹಸಿಯಾಗಿಟ್ಟುಕೊಂಡು ಬರ ಗೆಲ್ಲುವ ಜಾಣ್ಮೆ ಇಲ್ಲಿದೆ.

ಒಡ್ಡು, ಗುಂಡಾವರ್ತಿ ಹಾಗೂ ಒಳಗಟ್ಟಿಯನ್ನು ಮಾಡಿಕೊಟ್ಟರೆ ಪ್ರಕೃತಿಯೇ ಒಂಡೆರಡು ವರ್ಷದಲ್ಲಿ ಹೊಲವನ್ನು ಸಮತಟ್ಟುಗೊಳಿಸುತ್ತದೆ. ಫಲವತ್ತಾದ ಮೇಲ್ಮಣ್ಣು, ನೀರು ಸಂರಕ್ಷಣೆಯಾಗುತ್ತದೆ. ಸುತ್ತೆಲ್ಲಾ ತೇವಾಂಶದ ಕೊರತೆಯಿಂದ ಬೆಳೆಗಳು ಒಣಗಿದಾಗ ಇಲ್ಲಿ ಹಸಿರು ನಳನಳಿಸುತ್ತದೆ. ಬರ ಎನ್ನುವುದು ರೈತರನ್ನು ಬಾಧಿಸುವುದಿಲ್ಲ ಎನ್ನುವುದು ಇವರ ವಿಶ್ವಾಸದ ಮಾತು.

ಒಂದು ಹೆಕ್ಟೇರ್‌ ಹೊಲಕ್ಕೆ ಒಡ್ಡು ಹಾಕಿ ಗುಂಡಾವರ್ತಿ/ಒಳಗಟ್ಟಿ ಮಾಡಲು 60 ರಿಂದ 70 ಸಾವಿರ ಖರ್ಚು ಆಗುತ್ತದೆ. ಇದು ಒಮ್ಮೆ ಮಾತ್ರ ಮಾಡುವ ವೆಚ್ಚವಾಗಿದ್ದು, ನಂತರದಲ್ಲಿ ಒಡ್ಡಿನ ಕುಂಬಿ ಸೇರಿದಂತೆ ಸಣ್ಣಪುಟ್ಟ ರಿಪೇರಿಗಳನ್ನು ಮಾಡಿಕೊಂಡರೆ ಸಾಕು. ಒಂದು ಎಕರೆಗೆ 43560 ಚದರ ಅಡಿ. ಇಷ್ಟು ಜಮೀನಿನಲ್ಲಿ 1 ಇಂಚು ನೀರು ನಿಲ್ಲಿಸಿದರೆ 40 ಸಾವಿರ ಲೀಟರ್‌ ನೀರು ಸಂಗ್ರಹವಾಗುತ್ತದೆ. ಗುಂಡಾವರ್ತಿ ಕನಿಷ್ಠ ಎಂದರೂ 8 ಇಂಚು ಎತ್ತರವಿರುತ್ತದೆ. ಜಮೀನಿನ ವಿಸ್ತೀರ್ಣದೊಂದಿಗೆ ಲೆಕ್ಕ ಹಾಕಿದಾಗ ನಿಲ್ಲಿಸಿದ ನೀರಿನ ಪ್ರಮಾಣ ಹಾಗೂ ಭೂಮಿಯೊಳಗೆ ಇಂಗಿರುವ ನೀರಿನ ಪ್ರಮಾಣದ ಅಂದಾಜು ಸಿಗುತ್ತದೆ.

ಮಳೆನೀರು ಸಂಗ್ರಹ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಈ ರೈತನನ್ನು ಗುರುತಿಸಿ ಧಾರವಾಡದ ಕರ್ನಾಟಕ ಕೃಷಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿದೆ. ನಾಡಿನ ಹಲವಾರು ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡು ಸ್ವಾನುಭವದಿಂದ ದೇಸಿ ಕೃಷಿ ಜ್ಞಾನವನ್ನು ವಿವರಿಸಿದ್ದಾರೆ.

ಪ್ರಶಸ್ತಿ, ಸಮ್ಮಾನಗಳಿಗೆ ಕರೆದರೆ ಸಂಕೋಚಗೊಳ್ಳುವ ಮಲ್ಲಣ್ಣನವರು ಹೊಲ ತಿದ್ದಲು ಆಹ್ವಾನಿಸಿದರೆ ಸ್ವಂತ ಖರ್ಚಿನಲ್ಲಿ ಹೋಗಿ, ವಾರಗಟ್ಟಲೆ ಹೊಲದಲ್ಲಿ ಬಿಸಿಲು ಲೆಕ್ಕಿಸದೇ ನಿಂತು ಮಾರ್ಗದರ್ಶನ ಮಾಡುತ್ತಾರೆ. ಮಳೆ ಸುರಿದ ನಂತರ ಮತ್ತೊಮ್ಮೆ ಆ ಹೊಲಕ್ಕೆ ಹೋಗಿ, ಕೆನೆಯಂತಹ ಮಣ್ಣನ್ನು, ಅಮೃತದಂತಹ ಜೀವಜಲವನ್ನು ಕಣ್ತುಂಬಿಕೊಂಡು ಆನಂದಪಡುತ್ತಾರೆ.

ಆಯ ನೋಡಿ ಪಾಯ ಹಾಕು
ನೀರು, ಮಣ್ಣಿನ ಸಂರಕ್ಷಣೆ ಬಗ್ಗೆ ಮಾತನಾಡಲು ಆರಂಭಿಸುತ್ತಿದ್ದಂತೆ ಮಲ್ಲಣ್ಣ ರೈತ ಮಾತ್ರವಲ್ಲ ಅನುಭಾವಿಯೂ ಆಗುತ್ತಾರೆ. ತನ್ಮಯರಾಗಿ ಮಾತಿಗೆ ಇಳಿಯುತ್ತಾರೆ. ಭೂಮಿಯ ಇಳುಕಲಿಗೆ ಅಡ್ಡವಾಗಿ, ನೀರಿನ ಹರಿವಿಗೆ ತಡೆ ಒಡ್ಡಲು ಹಾಕುವ ಮಣ್ಣಿನ ರಾಶಿಯೇ ಒಡ್ಡು. ಹೊಲದ ತೆಂಬ (ದಿಬ್ಬ)ದಷ್ಟು ಎತ್ತರಕ್ಕೆ ಒಡ್ಡು ಹಾಕಬೇಕು. ಒಡ್ಡಿಗೆ 45 ಕೋನದಲ್ಲಿ ಎದಿ ಹಾಕಿ, ಅಗತ್ಯಕ್ಕೆ ತಕ್ಕಷ್ಟು ಕುಂಬಿ ಎತ್ತರಿಸಬೇಕು.

ಹೊಲಕ್ಕೆ ಹರಿದು ಬರುವ ನೀರಿನ ಪ್ರಮಾಣ ಹಾಗೂ ಹೊಲದ ವಿಸ್ತಾರ ನೋಡಿಕೊಂಡು ಒಡ್ಡಿನ ಗಾತ್ರ ನಿರ್ಧರಿಸಬೇಕು. ಇದನ್ನು ಪುಸ್ತಕ, ಪೆನ್ನು ಹಿಡಿದು ಲೆಕ್ಕ ಹಾಕಲಾಗದು. ಮಣ್ಣಿನ ರಚನೆ, ಮಣ್ಣು ಸವಕಳಿಯ ಪ್ರಮಾಣ ಹಾಗೂ ಹರಿದು ಬರುವ ನೀರಿನ ಪ್ರಮಾಣ ಹಾಗೂ ನೀರಿನ ಹರಿವುಗಳು ಎಲ್ಲಿವೆ ಎಂಬುದನ್ನು ತಿಳಿದು ತಳ ಒಡ್ಡಿನ ನೀಲನಕ್ಷೆ ರೂಪಿಸಬೇಕು.

ಒಡ್ಡು ಹಾಕಲು ತೋಡುವ ಗುಂಡಿ ಒಡ್ಡಿನಿಂದ ಕನಿಷ್ಠ 30 ಅಡಿಯಾದರೂ ದೂರಬೇಕು. ಗುಂಡಿಯಲ್ಲಿ ದೊರೆಯುವ ಕಪ್ಪಾದ ಮೇಲ್ಮಣ್ಣನ್ನು ಒಡ್ಡಿನ ಎದಿಗೆ ಹಾಕಿ, ಕೆಳಗೆ ದೊರೆಯುವ ಮರಳುಗಲ್ಲಿನ (ಗರಸು) ಮಣ್ಣನ್ನು ಒಡ್ಡಿನ ಹಿಂಬದಿಗೆ ಹಾಕಬೇಕು. ದಿಬ್ಬದ ಕಡೆಯಿಂದ ಓಡಿ ಬರುವ ನೀರು ಗುಂಡಿ ಸೇರುತ್ತಿದ್ದಂತೆ ವೇಗ ತಗ್ಗುತ್ತದೆ. ಒಡ್ಡಿನ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಆದರೆ ಜಲಾನಯನ ಇಲಾಖೆ ಅಧಿಕಾರಿಗಳು ಈ ಯಾವ ಸೂಕ್ಷ್ಮಗಳನ್ನು ಗಮನಿಸದೇ ಹಾಕಿಸುವ ಪರಿಣಾಮ ಒಡ್ಡುಗಳು ಕೆಲವರ್ಷಗಳಲ್ಲಿಯೇ ಒಡೆದು ಹೋಗುತ್ತಿವೆ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT