ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಜಾನೆಯ ‘ಮೂಡ್’ ಹಿತವಾಗಿರಲಿ

Last Updated 19 ಮಾರ್ಚ್ 2018, 19:30 IST
ಅಕ್ಷರ ಗಾತ್ರ

* ಸರಿಯಾಗಿ ನಿದ್ದೆ ಮಾಡಿ: ಮೂಡ್‌ ಚೆನ್ನಾಗಿರಲು ನಿದ್ದೆ ಸರಿಯಾಗುವುದು ಅಗತ್ಯ. ನೆನಪಿನ ಶಕ್ತಿ ಹಾಗೂ ಇನ್ನಿತರ ಬೌದ್ಧಿಕ ಚಟುವಟಿಕೆಗಳಿಗೆ ಆರೋಗ್ಯಕರ ನಿದ್ದೆ ಬೇಕು. ನಿದ್ದೆಯ ಅಭ್ಯಾಸವನ್ನು ನಿಯಮಿತವಾಗಿಸಿಕೊಳ್ಳಿ. ಪ್ರತಿ ದಿನ ನಿದ್ದೆಗೆ ಹೋಗುವ ಹಾಗೂ ಬೆಳಿಗ್ಗೆ ಏಳುವ ಸಮಯ ನಿಯಮಿತವಾಗಿರಲಿ. ನಿದ್ದೆ ಬಂದಾಗ ಮಾತ್ರ ಮಲಗಲು ಹೋಗಿ. ಹಾಸಿಗೆಯಲ್ಲಿ ಮಲಗಿದ ಮೇಲೆ ನಿದ್ದೆ ಬರಲಿಲ್ಲವೆಂದಾದಲ್ಲಿ, ಅಲ್ಲಿಯೇ ಹೊರಳಾಡುವ ಬದಲು ಎದ್ದೇಳಿ. ಸ್ವಲ್ಪ ಸಮಯದ ನಂತರ ಮತ್ತೆ ನಿದ್ದೆಗೆ ಪ್ರಯತ್ನಿಸಿ. ರಾತ್ರಿ ನಿದ್ದೆ ಸರಿಯಾಗಿ ಆಗಿರದಿದ್ದರೆ, ಬೆಳಿಗ್ಗೆ ತಡವಾಗಿ ಏಳಬೇಡಿ.

* ಮಲಗುವ ವ್ಯವಸ್ಥೆ ಸರಿಯಾಗಿರಲಿ: ಕರ್ಟನ್‌ ಮುಚ್ಚಿ ಕೋಣೆಯನ್ನು ಕತ್ತಲು ಮಾಡಿಕೊಂಡು ಮಲಗಿ. ಶಬ್ದಗಳು ಮನೆಯೊಳಗೆ ಬರದೇ ಇರಲಿ. ರಾತ್ರಿ ಟಿವಿ, ಮೊಬೈಲ್‌ ನೋಡುವುದರ ಬದಲು ಪುಸ್ತಕಗಳನ್ನು ಓದಿ. ಇದರಿಂದ ರಾತ್ರಿ ನೆಮ್ಮದಿಯ ನಿದ್ದೆ ಬರುತ್ತದೆ.

* ರಾತ್ರಿ ವ್ಯಾಯಾಮ ಬೇಡ: ದೇಹ ಉಲ್ಲಾಸದಿಂದಿರಲು ದೈಹಿಕ ವ್ಯಾಯಾಮ, ಧ್ಯಾನ ಅವಶ್ಯಕ. ಆದರೆ ನಿದ್ದೆಗೆ ಎರಡು ಗಂಟೆ ಮುಂಚೆ ವ್ಯಾಯಾಮ ಬೇಡ. ವ್ಯಾಯಾಮದಿಂದ, ಮಿದುಳು ಉತ್ತೇಜಿತಗೊಂಡು ನಿದ್ದೆ ಹತ್ತುವುದು ನಿಧಾನವಾಗಬಹುದು. ರಾತ್ರಿ ಸ್ನಾನ ಮಾಡಿ ಮಲಗಿದರೂ ಚೆನ್ನಾಗಿ ನಿದ್ದೆ ಬರುತ್ತದೆ.

* ಆಹಾರ ಕ್ರಮ ಹೀಗಿರಲಿ: ರಾತ್ರಿ ಊಟ ಮಿತವಾಗಿರಲಿ. ಹಾಗಂತ ಹೊಟ್ಟೆ ಹಸಿದು ಮಲಗಬೇಡಿ. ಇದರಿಂದ ನಿದ್ರೆಗೆ ಭಂಗವಾಗುತ್ತದೆ. ಮಲಗುವ ಎರಡು ಗಂಟೆ ಮುಂಚೆ ಊಟ ಮಾಡಿ‌. ಆದಷ್ಟೂ ಮಸಾಲೆ ಪದಾರ್ಥಗಳನ್ನು ತ್ಯಜಿಸಿ. ಮಲಗುವ ವೇಳೆ ಯಥೇಚ್ಛವಾಗಿ ನೀರು ಕುಡಿಯಬೇಡಿ. ಆದರೆ ಟೀ, ಕಾಫಿ, ಮದ್ಯ ಸೇವನೆ ಬೇಡ.

* ಅಲಾರಂ ಬಳಸದಿರಲು ಪ್ರಯತ್ನಿಸಿ: ಬೆಳಿಗ್ಗೆ ಉಲ್ಲಾಸದಿಂದ ಪ್ರಾರಂಭವಾಗಬೇಕು. ಅಲಾರಂ ಹೊಡೆಯುತ್ತಿದ್ದಂತೆ ಏಳಬೇಕೆಂಬ ಒತ್ತಡ ಪ್ರಾರಂಭವಾಗುತ್ತದೆ. ಅದಕ್ಕಾಗಿ ಪ್ರತಿದಿನ ಅಲಾರಂ ಇಲ್ಲದೆಯೇ ನಿಗದಿತ ಸಮಯಕ್ಕೆ ಏಳುವ ಅಭ್ಯಾಸ ರೂಢಿಸಿಕೊಳ್ಳಿ. ಅಲಾರಂ ಇಡಲೇಬೇಕು ಎಂದಾದರೆ ಮಧುರವಾದ
ಸ್ವರವನ್ನು ಆರಿಸಿಕೊಳ್ಳಿ.

* ನಾಳೆಗೆ ಇಂದೇ ತಯಾರಾಗಿ: ಬೆಳಿಗ್ಗೆ ಕಚೇರಿಯ ಹೋಗುವ ಗಡಿಬಿಡಿಯಲ್ಲಿ ಒದ್ದಾಡಿ ಸುಸ್ತು ಮಾಡಿಕೊಳ್ಳುವ ಬದಲು, ಹಿಂದಿನ ದಿನವೇ ಮರುದಿನಕ್ಕೆ ಅಗತ್ಯವಿರುವ ತಯಾರಿ ಮಾಡಿಟ್ಟುಕೊಳ್ಳಿ. ಕಚೇರಿಗೆ ಹಾಕಿಕೊಳ್ಳುವ ಉಡುಪುಗಳ ಇಸ್ತ್ರಿ, ಮರುದಿನದ ಅಡುಗೆಗೆ ಪೂರ್ವಸಿದ್ಧತೆ ಮಾಡಿಕೊಳ್ಳುವುದರಿಂದ ಬೆಳಗ್ಗಿನ ಕೆಲಸ ಹಗುರವಾಗುತ್ತದೆ.

* ಹಾಸಿಗೆಯಲ್ಲಿಯೇ ಹೊರಳಾಡಬೇಡಿ: ಒಮ್ಮೆ ಎಚ್ಚರವಾದರೂ, ಇನ್ನೊಂದೆರಡು ನಿಮಿಷ ಕಣ್ಣು ಮುಚ್ಚಿ ಮಲಗುವ ಅಭ್ಯಾಸ ಬಿಡಿ. ಎಚ್ಚರವಾದ ತಕ್ಷಣ ಹಾಸಿಗೆಯಿಂದ ಎದ್ದು ಮುಖ ತೊಳೆದು, ಹಲ್ಲುಜುವುದರಿಂದ ಫ್ರೆಶ್‌ ಎನಿಸುತ್ತದೆ.

* ವ್ಯಾಯಾಮ ಮಾಡಿ: ಎಷ್ಟೇ ಬ್ಯುಸಿಯಾಗಿದ್ದರೂ, ಅರ್ಧ ಗಂಟೆ ವ್ಯಾಯಾಮಕ್ಕೆ ಮೀಸಲಿಡಿ. ಧ್ಯಾನ, ವ್ಯಾಯಾಮದಿಂದ ದೇಹ ಚುರುಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT