ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಮೆ ಕೇಳಿದ ಕೇಜ್ರಿವಾಲ್, ಸಿಸೋಡಿಯಾ

ನಿತಿನ್ ಗಡ್ಕರಿ, ವಕೀಲ ಅಮಿತ್ ಸಿಬಲ್ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ
Last Updated 19 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ವಿರುದ್ಧದ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕ್ಷಮೆಯಾಚಿಸಿದ್ದಾರೆ.

ಅಲ್ಲದೆ, ಕೇಜ್ರಿವಾಲ್ ಮತ್ತು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಹಿರಿಯ ವಕೀಲ ಅಮಿತ್ ಸಿಬಲ್ ಅವರಲ್ಲಿಯೂ ಕ್ಷಮೆ ಯಾಚಿಸಿದ್ದಾರೆ. ಇದರಿಂದಾಗಿ ಇಬ್ಬರ ವಿರುದ್ಧದ ಪ್ರಕರಣವನ್ನು ಕೈಬಿಡಲಾಗಿದೆ.

ಆಮ್ ಆದ್ಮಿ ಪಕ್ಷ (ಎಎಪಿ) ಬಿಡುಗಡೆ ಮಾಡಿದ್ದ ‘ಭಾರತದ ಕಡು ಭ್ರಷ್ಟ’ರ ಪಟ್ಟಿಯಲ್ಲಿ ನಿತಿನ್ ಗಡ್ಕರಿ ಅವರ ಹೆಸರನ್ನು ಸೇರಿಸಲಾಗಿತ್ತು. ಹೀಗಾಗಿ ಎಎಪಿ ಮುಖ್ಯಸ್ಥ ಕೇಜ್ರಿವಾಲ್ ವಿರುದ್ಧ ಗಡ್ಕರಿ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

‘ಕೆಲವು ವಿಚಾರಗಳ ಕುರಿತು ನಿಮ್ಮ (ನಿತಿನ್ ಗಡ್ಕರಿ) ಬಗ್ಗೆ ತಪ್ಪಾಗಿ ಹೇಳಿಕೆಗಳನ್ನು ನೀಡಿದ್ದೆ. ಅದರಿಂದ ಮನನೊಂದ ನೀವು ನನ್ನ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದೀರಿ. ನನಗೆ ನಿಮ್ಮ ವಿರುದ್ಧ ವೈಯಕ್ತಿಕ ದ್ವೇಷವಿಲ್ಲ. ನನ್ನ ಹೇಳಿಕೆಗೆ ನಾನು ವಿಷಾದಿಸುತ್ತೇನೆ’ ಎಂದು ಗಡ್ಕರಿ ಅವರಿಗೆ ಕೇಜ್ರಿವಾಲ್ ಪತ್ರದಲ್ಲಿ ಬರೆದಿದ್ದಾರೆ. ಇದೇ 16ರಂದು ಈ ಪತ್ರವನ್ನು ಬರೆಯಲಾಗಿದೆ.‌

2013ರ ಪ್ರಕರಣ: ತಮ್ಮ ವಿರುದ್ಧ ಆಧಾರ ರಹಿತ ಆರೋಪ ಮಾಡಲಾಗಿದೆ ಎಂದು ಹಿರಿಯ ರಾಜಕಾರಣಿ ಕಪಿಲ್ ಸಿಬಲ್ ಅವರ ಮಗ ಅಮಿತ್ ಸಿಬಲ್ ಅವರು ಕೇಜ್ರಿವಾಲ್ ಹಾಗೂ ಮನೀಶ್ ಸಿಸೋಡಿಯಾ ವಿರುದ್ಧ 2013ರಲ್ಲಿ ಮೊಕದ್ದಮೆ ದಾಖಲಿಸಿದ್ದರು. ಎಎಪಿ ಸದಸ್ಯರಾದ ಪ್ರಶಾಂತ್ ಭೂಷಣ್ ಮತ್ತು ಶಾಜಿಯಾ ಇಲ್ಮಿ ಅವರ ಹೆಸರನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ಬಿಕ್ರಮ್ ವಿರುದ್ಧ ಹೇಳಿಕೆಗೂ ವಿಷಾದ: ಶಿರೋಮಣಿ ಅಕಾಲಿ ದಳ ಮುಖಂಡ ಬಿಕ್ರಮ್ ಸಿಂಗ್ ಮಜಿಥಿಯಾ ಅವರು ಅಕ್ರಮ ಮಾದಕ ವಸ್ತು ಸಾಗಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ಎಎಪಿ ಆರೋಪಿಸಿತ್ತು. ಮಜಿಥಿಯಾ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದರು. ನಂತರ ಕೇಜ್ರಿವಾಲ್ ಅವರು ವಿಷಾದ ವ್ಯಕ್ತಪಡಿದ್ದರು.

‘ಆರೋಪ ಮಾಡಿದ್ದೇಕೆ?’

‘ತಮ್ಮ ನಿಲುವಿನಿಂದ ಹಿಂದೆ ಸರಿಯುವಂತಿದ್ದರೆ ಅರವಿಂದ್ ಕೇಜ್ರಿವಾಲ್ ಅವರು 20 ಮಂದಿ ಕಡು ಭ್ರಷ್ಟರ ಪಟ್ಟಿಯನ್ನು ಬಿಡುಗಡೆ ಮಾಡುವ ಅಗತ್ಯ ಏನಿತ್ತು’ ಎಂದು ಎಎಪಿ ಮಾಜಿ ನಾಯಕಿ ಅಂಜಲಿ ದಮಾನಿಯ ಪ್ರಶ್ನಿಸಿದ್ದಾರೆ.

ಅಹಮ್ಮಿನ ಹೋರಾಟದಲ್ಲಿ ನಮಗೆ ಆಸಕ್ತಿ ಇಲ್ಲ. ಕಾನೂನು ಸಮರಕ್ಕೆ ಸಮಯ ವ್ಯರ್ಥ ಮಾಡದೆ ಜನಪರ ಕೆಲಸಗಳಲ್ಲಿ ತೊಡಗಬೇಕಿದೆ

-ಮನೀಶ್ ಸಿಸೋಡಿಯಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT