ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಧರ್ಮಕ್ಕೆ ಸಂಪುಟ ಅಸ್ತು

ಪ್ರತ್ಯೇಕ ಅಲ್ಪಸಂಖ್ಯಾತ ಧರ್ಮದ ಮಾನ್ಯತೆ: ಕೇಂದ್ರಕ್ಕೆ ಶಿಫಾರಸು ಮಾಡಲು ಮಹತ್ವದ ತೀರ್ಮಾನ
Last Updated 19 ಮಾರ್ಚ್ 2018, 19:28 IST
ಅಕ್ಷರ ಗಾತ್ರ

ಬೆಂಗಳೂರು: ‘ಲಿಂಗಾಯತ ಹಾಗೂ ವೀರಶೈವ ಲಿಂಗಾಯತರಿಗೆ (ಬಸವ ತತ್ವವನ್ನು ನಂಬುವ) ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ನೀಡಬೇಕು’ ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಸೋಮವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಇದರೊಂದಿಗೆ ಯಾವ ಹೆಸರಿನಲ್ಲಿ ಪ್ರತ್ಯೇಕ ಧರ್ಮಕ್ಕೆ ಶಿಫಾರಸು ಮಾಡಬೇಕು ಎಂಬ ಬಗ್ಗೆ ಲಿಂಗಾಯತರು ಮತ್ತು ವೀರಶೈವರ ನಡುವೆ ತಲೆದೋರಿದ್ದ ಗೊಂದಲ ನಿವಾರಣೆ ಆಗಿದೆ.

ಈ ಕುರಿತು ಸಚಿವ ಸಂಪುಟ ಸಭೆ ನಾಲ್ಕು ಗಂಟೆಗೂ ಹೆಚ್ಚು ಹೊತ್ತು ಚರ್ಚಿಸಿತು. ಬೆಳಿಗ್ಗೆ 11 ಗಂಟೆಗೆ ಸೇರಿದ ಸಂಪುಟ ಪರ–ವಿರೋಧ, ಆಕ್ರೋಶ ಭರಿತ ವಾಗ್ವಾದಗಳ ಬಳಿಕ ಕೇಂದ್ರಕ್ಕೆ ಶಿಫಾರಸು ಮಾಡುವ ನಿರ್ಣಯ ಕೈಗೊಂಡಿತು.

‘ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವ ಕುರಿತು ಎಚ್.ಎನ್. ನಾಗಮೋಹನದಾಸ್‌ ನೇತೃತ್ವದ ತಜ್ಞರ ಸಮಿತಿ ನೀಡಿದ ವರದಿಯನ್ನು ಸರ್ಕಾರ ಅಂಗೀಕರಿಸಿದೆ. ಸಮಿತಿ ವರದಿ ಆಧರಿಸಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗ ನೀಡಿದ ಶಿಫಾರಸುಗಳನ್ನು ಸರ್ಕಾರ ಒಪ್ಪಿಕೊಂಡಿದೆ. ಧರ್ಮದ ಮಾನ್ಯತೆ ನೀಡುವ ಕುರಿತು ಸರ್ವಾನುಮತದಿಂದ ಒಪ್ಪಿಗೆ ನೀಡಲಾಯಿತು’ ಎಂದು ಸಭೆ ಬಳಿಕ ಕಾನೂನು ಸಚಿವ ಟಿ.ಬಿ. ಜಯಚಂದ್ರ ಹೇಳಿದರು.

‘ಲಿಂಗಾಯತರು ಹಾಗೂ ಬಸವ ತತ್ವವನ್ನು ಒಪ್ಪಿಕೊಳ್ಳುವ ವೀರಶೈವ ಲಿಂಗಾಯತರು ಈ ಧರ್ಮದ ಪರಿಧಿಯೊಳಗೆ ಬರಲಿದ್ದಾರೆ. ಬಸವಣ್ಣನವರೇ ಧರ್ಮಗುರುಗಳು, ವಚನಗಳೇ ಪವಿತ್ರ ಗ್ರಂಥಗಳು, ಇಷ್ಟಲಿಂಗವನ್ನು ಧರಿಸಿ, ವಚನ ತತ್ವಗಳನ್ನು ನಂಬಿ, ಆಚರಿಸಿ, ಪ್ರಚುರ ಪಡಿಸುತ್ತಿರುವ ವೀರಶೈವರೂ ಲಿಂಗಾಯತರು ಎಂದು ಪರಿಗಣಿಸಲಾಗಿದೆ’ ಎಂದು ಅವರು ವಿವರಿಸಿದರು.

‘ಲಿಂಗಾಯತರಿಗೆ ಧರ್ಮದ ಮಾನ್ಯತೆ ನೀಡುವುದರಿಂದ ಇತರೆ ಧಾರ್ಮಿಕ ಹಾಗೂ ಭಾಷಿಕ ಅಲ್ಪಸಂಖ್ಯಾತರು ಈಗ ಪಡೆಯುತ್ತಿರುವ ಸೌಲಭ್ಯಗಳಿಗೆ ಧಕ್ಕೆಯಾಗದಂತೆ ಅಥವಾ ಅವರ ಮೀಸಲು ಪ್ರಮಾಣದ ಮೇಲೆ ಯಾವುದೇ ದುಷ್ಪರಿಣಾಮ ಆಗದಂತೆ ನೋಡಿಕೊಳ್ಳಬೇಕು ಎಂದು ಆಯೋಗ ಹೇಳಿದೆ. ಇದನ್ನು ಆಧರಿಸಿ, ಧರ್ಮದ ಮಾನ್ಯತೆಗೆ ಶಿಫಾರಸು ಮಾಡುವ ಮುನ್ನ ರಾಜ್ಯದಲ್ಲಿನ ಇತರೆ ಅಲ್ಪಸಂಖ್ಯಾತರ ಹಕ್ಕು ಮತ್ತು ಹಿತಾಸಕ್ತಿ ತೊಂದರೆಯಾಗದಂತೆ ಎಚ್ಚರ ವಹಿಸಲಾಗುತ್ತದೆ’ ಎಂದು ತಿಳಿಸಿದರು.

ಸಚಿವರ ಮಧ್ಯೆ ವಾಗ್ವಾದ: ವೀರಶೈವ ಬಣ ಬಿಟ್ಟು ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವ ಕ್ರಮದ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀವ್ರ ವಾಗ್ವಾದ ನಡೆಯಿತು ಎಂದು ಗೊತ್ತಾಗಿದೆ.

‘ಲಿಂಗಾಯತರು, ವೀರಶೈವರ ಮಧ್ಯೆ ಭೇದವಿಲ್ಲ. ಹೀಗಾಗಿ ವೀರಶೈವ–ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು’ ಎಂದು ತೋಟಗಾರಿಕೆ ಸಚಿವ ಎಸ್‌.ಎಸ್. ಮಲ್ಲಿಕಾರ್ಜುನ್ ಆಗ್ರಹಿಸಿದರು.

ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ ಕುಲಕರ್ಣಿ, ‘ವೀರಶೈವ–ಲಿಂಗಾಯತಕ್ಕೆ ಧರ್ಮದ ಮಾನ್ಯತೆ ನೀಡಿ ಎಂದು ಸಲ್ಲಿಸಿದ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಈ ಹಿಂದೆ ತಿರಸ್ಕರಿಸಿದೆ. ವೀರಶೈವ ಪಂಗಡಕ್ಕೆ ಧರ್ಮ ಸ್ಥಾಪಕರು, ಧಾರ್ಮಿಕ ಪಠ್ಯ ಯಾವುದೂ ಇಲ್ಲ. ಲಿಂಗಾಯತ ಎಂದು ಪ್ರಸ್ತಾವನೆ ಸಲ್ಲಿಸಿದರೆ ಧರ್ಮದ ಮಾನ್ಯತೆ ಸಿಗಲಿದೆ. ಸುಮ್ಮನೆ ಅಡ್ಡಗಾಲು ಹಾಕಬೇಡಿ’ ಎಂದು ಗದರಿದರು.

ಕುಲಕರ್ಣಿ ಮಾತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಮಲ್ಲಿಕಾರ್ಜುನ್‌,‘ ಮಠಾಧೀಶರು, ಸಮುದಾಯದ ಪ್ರಮುಖರು ನಿಮ್ಮ ನಿಲುವಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಒಂದಾಗಿ ಬಾಳುತ್ತಿರುವ ಸಮುದಾಯವನ್ನು ಒಡೆಯುವ ಕೆಲಸ ಮಾಡುತ್ತಿದ್ದೀರಿ’ ಎಂದು ತಿರುಗೇಟು ಕೊಟ್ಟರು. ಖಂಡ್ರೆ ಕೂಡ ಅವರಿಗೆ ಧ್ವನಿಗೂಡಿಸಿದರು.

‘ಧರ್ಮದ ಹಿತಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ನೂರಾರು ಮಠಾಧೀಶರು ಲಿಂಗಾಯತ ಧರ್ಮಕ್ಕೆ ಬೆಂಬಲ ನೀಡಿದ್ದಾರೆ. ನಿಮ್ಮಿಂದ ಪಾಠ ಕಲಿಯಬೇಕಿಲ್ಲ’ ಎಂದು ಕುಲಕರ್ಣಿ ಕಿಡಿಕಾರಿದರು. ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಾಗ ಹಿರಿಯ ಸಚಿವರು ಸಮಾಧಾನ ಪಡಿಸಲು ಮುಂದಾದರು. ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಸ್ವಲ್ಪ ಹೊತ್ತು ಹೊರಗೆ ಹೋಗಿ ಬಾರಪ್ಪ’ ಎಂದು ಕುಲಕರ್ಣಿಗೆ ಸೂಚಿಸಿದರು. ಸಂಪುಟ ಸಭೆ ನಡೆಯುತ್ತಿದ್ದ ಸಭಾಂಗಣದಿಂದ ಹೊರಬಂದ ಕುಲಕರ್ಣಿ ಕೆಲ ಹೊತ್ತು ಅಲ್ಲಿಯೇ ನಿಂತು ವಾಪಸ್ ಮರಳಿದರು.

‘ಸರ್ಕಾರ ಒಳ್ಳೆಯ ಆಶಯದಿಂದ ಹೆಜ್ಜೆ ಇಟ್ಟಿದೆ. ಪ್ರತ್ಯೇಕ ಧರ್ಮದಿಂದ ಯಾರಿಗೂ ಅನ್ಯಾಯವಾಗುವುದಿಲ್ಲ. ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳೋಣ’ ಎಂದು ಮನವಿ ಮಾಡಿ ತಮ್ಮ ಸಂಪುಟ ಸಹೋದ್ಯೋಗಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಪ್ಪಿಸಿದರು.

ಪ್ರತಿಕ್ರಿಯೆಗೆ ನಿರಾಕರಣೆ ( ತುಮಕೂರು ವರದಿ): ಧರ್ಮದ ಮಾನ್ಯತೆಗೆ ಶಿಫಾರಸು ಮಾಡಲು ರಾಜ್ಯ ಸಂಪುಟ ಒಪ್ಪಿಗೆ ನೀಡಿರುವ ಕುರಿತು ಪ್ರತಿಕ್ರಿಯಿಸಲು ಸಿದ್ಧಗಂಗಾಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ನಿರಾಕರಿಸಿದರು.

ಮಠದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿರುವ ವಿಚಾರದ ಬಗ್ಗೆ ಪರಿಪೂರ್ಣ ಮಾಹಿತಿ ಇಲ್ಲ. ಹೀಗಾಗಿ, ಈಗ ಏನೂ ಮಾತನಾಡುವುದಿಲ್ಲ. ಮಾಹಿತಿ ಪಡೆದು ನಾಳೆ ಮಾತನಾಡುತ್ತೇನೆ’ ಎಂದು ಸ್ವಾಮೀಜಿ ತಿಳಿಸಿದರು.

ವೀರಶೈವ ಮುಖಂಡನಿಗೆ ಧರ್ಮದೇಟು 

ಕಲಬುರ್ಗಿ: ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿರುವ ಸಚಿವ ಸಂಪುಟದ ನಿರ್ಣಯದ ಪರ–ವಿರುದ್ಧ ಸೋಮವಾರ ನಗರದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ನಡೆದ ಪ್ರದರ್ಶನ ವೇಳೆ ವೀರಶೈವ ಮುಖಂಡರೊಬ್ಬರನ್ನು ಲಿಂಗಾಯತ ಮುಖಂಡರು ಹಿಗ್ಗಾಮುಗ್ಗಾ ಥಳಿಸಿದರು.

ನಿರ್ಣಯವನ್ನು ವಿರೋಧಿಸಿ ವೀರಶೈವ ಲಿಂಗಾಯತ ಸ್ವಾಭಿಮಾನಿ ಬಳಗದ ಸದಸ್ಯರು ಪ್ರತಿಭಟಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎಂ.ಬಿ.ಪಾಟೀಲ, ವಿನಯ ಕುಲಕರ್ಣಿ ಮತ್ತು ಡಾ.ಶರಣಪ್ರಕಾಶ ಪಾಟೀಲ ಅವರ ವಿರುದ್ಧ ಘೋಷಣೆ ಕೂಗಿದರು. ಇದೇ ವೇಳೆ ಜಾಗತಿಕ ಲಿಂಗಾಯತ ಮಹಾಸಭಾದ ಮುಖಂಡರು ವಿಜಯೋತ್ಸವ ಆಚರಿಸಲು ಮುಂದಾದರು. ಆಗ ವೀರಶೈವ ಮುಖಂಡ ಎಂ.ಎಸ್‌.ಪಾಟೀಲ ನರಿಬೋಳ ಕೈಯಲ್ಲಿ ಚಪ್ಪಲಿ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.

ಈ ಅನುಚಿತ ವರ್ತನೆಯಿಂದ ಲಿಂಗಾಯತ ಮುಖಂಡರು ಕುಪಿತಗೊಂಡರು. ಪರಸ್ಪರರ ನಡುವೆ ಮಾತಿನ ಚಕಮಕಿ ನಡೆದು, ರೊಚ್ಚಿಗೆದ್ದ ಲಿಂಗಾಯತ ಮುಖಂಡರು ಎಂ.ಎಸ್.ಪಾಟೀಲ ನರಿಬೋಳ ಅವರನ್ನು ರಸ್ತೆ ಮಧ್ಯೆಯೇ ಹಿಡಿದು ಥಳಿಸಿದರು. ಕೋಲಿನಿಂದ ಹಲ್ಲೆ ಮಾಡಿದರು. ಇದರಿಂದಾಗಿ ಸ್ಥಳದಲ್ಲಿ ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣ ಮಧ್ಯಪ್ರವೇಶಿಸಿದ ಪೊಲೀಸರು ಪಾಟೀಲ ಅವರನ್ನು ಪಾರು ಮಾಡಿದರು.

ನಾಲ್ಕು ಜನರು ವಶಕ್ಕೆ:

ಸ್ಥಳಕ್ಕೆ ಬಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್, ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಬಿ.ಜೆ.ಲೋಕೇಶ ಸೂಚನೆ ಅನ್ವಯ ನಾಲ್ಕು ಜನ ಲಿಂಗಾಯತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಎಸ್.ಪಾಟೀಲ ನರಿಬೋಳ, ‘ಧರ್ಮ ಒಡೆದಿರುವುದನ್ನು ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದೆವು. ಆಗ ಲಿಂಗಾಯತ ಮುಖಂಡರು ನನ್ನ ಮೇಲೆ ಹಲ್ಲೆ ಮಾಡಿದರು. ನಮ್ಮ ಜತೆಗಿದ್ದ ಶ್ವೇತಾ ರಾಠೋಡ ಅವರಿಗೆ ಅವಾಚ್ಯವಾಗಿ ಬೈಯ್ದು, ಜಾತಿ ನಿಂದನೆ ಮಾಡಿದರು’ ಎಂದು ಹೇಳಿದರು.

ದೃಶ್ಯಾವಳಿ ಆಧರಿಸಿ ಕ್ರಮ:

‘ಪೊಲೀಸರ ಅನುಮತಿ ಪಡೆಯದೆ ವಿಜಯೋತ್ಸವ ಹಾಗೂ ಪ್ರತಿಭಟನೆ ನಡೆದಿವೆ. ಪಟೇಲ್ ವೃತ್ತ ಜನಜಂಗುಳಿ ಇರುವ ಪ್ರದೇಶವಾಗಿದ್ದು, ಪ್ರತಿಭಟನೆಯಿಂದಾಗಿ ಸಂಚಾರ ಅಸ್ತವ್ಯವಸ್ತಗೊಂಡಿದೆ. ಅಲ್ಲದೆ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದ್ದರಿಂದ ಸಾರ್ವಜನಿಕರು ಭಯಭೀತರಾಗಿದ್ದರು. ಇದೇ ವೇಳೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಯೊಬ್ಬರನ್ನು ಥಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ವಿಡಿಯೊ ದೃಶ್ಯಾವಳಿ ಆಧರಿಸಿ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್ ತಿಳಿಸಿದರು.

ವೀರಶೈವ ಮಹಾಸಭಾ ಸ್ವಾಗತ

ದಾವಣಗೆರೆ: ‘ಸಚಿವ ಸಂಪುಟದ ನಿರ್ಧಾರವನ್ನು ವೀರಶೈವ ಮಹಾಸಭಾ ಸ್ವಾಗತಿಸಿದೆ’ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯಿಸಿದರು.

ನಗರದ ಗೃಹ ಕಚೇರಿಯಲ್ಲಿ ಸೋಮವಾರ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದ್ದ ವೀರಶೈವ–ಲಿಂಗಾಯತರ ಜಟಾಪಟಿಯನ್ನು ಸರ್ಕಾರ ಈಗ ಕೊನೆಗಾಣಿಸಿದೆ. ಲಿಂಗಾಯತರು, ವೀರಶೈವ ಲಿಂಗಾಯತರು ಹಾಗೂ ಬಸವತತ್ವ ಅನುಯಾಯಿಗಳನ್ನೂ ಸಮಾಧಾನಪಡಿಸಿದೆ’ ಎಂದರು.

‘ಧರ್ಮಯುದ್ಧ ಆರಂಭಿಸುತ್ತೇವೆ’

ಹುಬ್ಬಳ್ಳಿ: ‘ಪಂಚಾಚಾರ್ಯ ಪರಂಪರೆಯನ್ನು ನಿರ್ನಾಮ ಮಾಡುವ ದುಷ್ಟಬುದ್ಧಿಯಿಂದ ರಾಜ್ಯ ಸರ್ಕಾರ ‘ಲಿಂಗಾಯತ– ವೀರಶೈವ’ ಎಂದು ಕೇಂದ್ರಕ್ಕೆ ಶಿಫಾರಸು ಮಾಡಿದೆ. ಈ ನಿರ್ಧಾರದಿಂದ ತೀವ್ರ ಬೇಸರವಾಗಿದ್ದು, ಕೆಲವೇ ದಿನಗಳಲ್ಲಿ ಧರ್ಮಯುದ್ಧ ಆರಂಭಿಸುತ್ತೇವೆ’ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರು ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ವೀರಶೈವ– ಲಿಂಗಾಯತ’ ಎಂದು ಶಿಫಾರಸು ಮಾಡಿದ್ದರೆ, ಅದು ಯೋಗ್ಯವಾಗಿರುತ್ತಿತ್ತು. ಮೊದಲು ಪಂಚಾಚಾರ್ಯ ಪರಂಪರೆ, ನಂತರ ಶರಣ ಪರಂಪರೆ. ಬಸವ ತತ್ವಕ್ಕೆ ಎಲ್ಲರೂ ಅಧೀನರಾಗಿರಬೇಕು ಎನ್ನುವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದನ್ನು ಪಂಚಪೀಠಗಳು ಯಾವತ್ತೂ ಒಪ್ಪಲು ಸಾಧ್ಯವೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಎರಡು– ಮೂರು ದಿನಗಳಲ್ಲಿ ಪಂಚಪೀಠಗಳ ಪೀಠಾಧೀಶರು ಸಭೆ ಸೇರಿ ಮುಂದಿನ ಹೋರಾಟದ ಬಗ್ಗೆ ಯೋಜನೆ ರೂಪಿಸುತ್ತೇವೆ. ಧರ್ಮ ವಿರೋಧಿ
ಗಳು ಮತ್ತು ಕಾಂಗ್ರೆಸ್‌ ವಿರುದ್ಧ ಶಾಂತಿಯುತವಾಗಿ ಧರ್ಮಯುದ್ಧ ಆರಂಭಿಸುತ್ತೇವೆ. ರಾಜ್ಯದ ಶಿಫಾರಸ್ಸನ್ನು ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎನ್ನುವ ವಿಶ್ವಾಸ ಇದೆ’ ಎಂದರು.

‘ಹಿಂದೂ ಸಂಸ್ಕೃತಿಯಿಂದ ವೀರಶೈವ ಲಿಂಗಾಯತರನ್ನು ಬೇರ್ಪಡಿಸುವುದು ಅಷ್ಟು ಸುಲಭವಲ್ಲ. ರಾಜಕೀಯ ಲಾಭಕ್ಕಾಗಿ ಧರ್ಮ ಒಡೆಯಲು ಮಾಡಿದ ವ್ಯರ್ಥ ಸಾಹಸ ಇದು’ ಎಂದು ಸ್ವಾಮೀಜಿ ಲೇವಡಿ ಮಾಡಿದರು.‌

ಕಸರತ್ತು ವ್ಯರ್ಥ ಎಚ್‌ಡಿಕೆ

ಚಿಕ್ಕಮಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೀರಶೈವ ಮತ್ತು ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ರಹಸ್ಯ ಕಾರ್ಯಸೂಚಿ ಮೂಲಕ ಸಮಸ್ಯೆಗಳನ್ನು ಹುಟ್ಟು ಹಾಕಿದ್ದಾರೆ. ಚುನಾವಣೆಯಲ್ಲಿ ಸಾಧನೆ ಮಾಡುತ್ತೇನೆಂಬ ಅವರ ಭ್ರಮೆ, ವ್ಯರ್ಥ ಕಸರತ್ತು’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸರ್ಕಾರದ ಜವಾಬ್ದಾರಿ ಸಮಾಜ ಒಂದುಗೂಡಿಸುವುದು, ಒಡೆಯುವುದಲ್ಲ. ಧರ್ಮದ ವಿಷಯಗಳ ತೀರ್ಮಾನವನ್ನು ಧರ್ಮಾಧಿಕಾರಿಗಳಿಗೆ ಬಿಡಬೇಕು. ಸರ್ಕಾರ ತಜ್ಞರ ಸಮಿತಿ ರಚಿಸಿ, ಸಮಿತಿಯಿಂದ ವರದಿ ಪಡೆದು ತೀರ್ಮಾನ ಕೈಗೊಂಡಿದೆ ಎಂದರು.

ಪರಿಗಣಿಸುವ ವಿಶ್ವಾಸ: ಸಿಎಂ

ಕೊಪ್ಪಳ: ‘ನ್ಯಾಯಮೂರ್ತಿ ನಾಗಮೋಹನದಾಸ್‌ ಸಮಿತಿಯ ವರದಿ ಪ್ರಕಾರವೇ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದೇವೆ. ಕೇಂದ್ರ ಶಿಫಾರಸು ಪರಿಗಣಿಸುವ ವಿಶ್ವಾಸವಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘ಮೈನಾರಿಟಿ ಕಮಿಷನ್‌ ಆಕ್ಟ್‌ನ ಸೆಕ್ಷನ್‌ 2ರ ಅಡಿ ಈ ಶಿಫಾರಸು ಮಾಡಲಾಗಿದೆ’ ಎಂದು ಪ್ರತಿಕ್ರಿಯಿಸಿದರು.

‘ರಾಜಕೀಯ ಲಾಭದ ಉದ್ದೇಶವಿಲ್ಲ’

‘ಲಿಂಗಾಯತರು ಮತ್ತು ವೀರಶೈವ ಲಿಂಗಾಯತ ಪಂಗಡಗಳಿಗೆ ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ನೀಡುವಂತೆ ಶಿಫಾರಸು ಮಾಡುತ್ತಿರುವುದರ ಹಿಂದೆ ರಾಜಕೀಯ ಲಾಭ ಪಡೆಯುವ ಉದ್ದೇಶವಿಲ್ಲ’ ಎಂದು ಸಂಪುಟದ ಮೂವರು ಹಿರಿಯ ಸಚಿವರು ಸ್ಪಷ್ಟಪಡಿಸಿದರು.

‘ಬಸವಣ್ಣನವರು 900 ವರ್ಷಗಳ ಹಿಂದೆ ಹಿಂದೂ ಧರ್ಮದ ವಿರುದ್ಧ ಸಿಡಿದೆದ್ದು ಲಿಂಗಾಯತ ಧರ್ಮ ಸ್ಥಾಪಿಸಿದರು. 1891ರವರೆಗೂ ಈ ಧರ್ಮಕ್ಕೆ ಮಹತ್ವದ ಸ್ಥಾನಮಾನವಿತ್ತು. ಕಳೆದು ಹೋಗಿರುವ ಅಸ್ಮಿತೆಯನ್ನು ಸಚಿವ ಸಂಪುಟ ಸಭೆ ಐತಿಹಾಸಿಕ ತೀರ್ಮಾನ ಕೈಗೊಳ್ಳುವ ಮೂಲಕ ನಮಗೆ ಮರಳಿ ಕೊಟ್ಟಿದೆ’ ಎಂದು ಸಚಿವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಲಿಂಗಾಯತ ಪಂಗಡಕ್ಕೆ ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ನೀಡುವ ವಿಷಯದಲ್ಲಿ ಸಾಕಷ್ಟು ಗೊಂದಲಗಳು ಇದ್ದಿದ್ದು ನಿಜ. ಅವುಗಳನ್ನು ನಿವಾರಣೆ ಮಾಡಿಕೊಂಡು ನಾವೆಲ್ಲರೂ ಒಟ್ಟಾಗಿ ಸರ್ವಸಮ್ಮತ ತೀರ್ಮಾನ ಕೈಗೊಂಡಿದ್ದೇವೆ. ಇದಕ್ಕೆ ಈಶ್ವರ ಖಂಡ್ರೆ ಹಾಗೂ ಎಸ್‌. ಎಸ್‌. ಮಲ್ಲಿಕಾರ್ಜುನ್‌ ಒಳಗೊಂಡಂತೆ ಎಲ್ಲರ ಬೆಂಬಲವೂ ಇದೆ. ಈ ತೀರ್ಮಾನ ವಿರೋಧಿಸಿರುವ ರಂಭಾಪುರಿ ಶ್ರೀಗಳ ಮನವೊಲಿಸುತ್ತೇವೆ’ ಎಂದೂ ಎಂ.ಬಿ. ಪಾಟೀಲರೂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

’ಜಾತಿ ವ್ಯವಸ್ಥೆ, ಸಾಮಾಜಿಕ ಅನ್ಯಾಯ, ಮಹಿಳಾ ಅಸಮಾನತೆ ವಿರುದ್ಧ ಸಿಡಿದೆದ್ದು ಬಸವಣ್ಣ ‍ಪ್ರತ್ಯೇಕ ಧರ್ಮ ಸ್ಥಾಪಿಸಿದರು. ಜಾಗತಿಕ ಧರ್ಮವಾಗಿ ಹಾಗೂ ಸಂಸ್ಕೃತಿಯಾಗಿ ಇದು ಬೆಳೆಯಬೇಕು ಎನ್ನುವುದೇ ನಮ್ಮ ಆಸೆ ಎಲ್ಲರೂ ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತೇವೆ’ ಎಂದರು.

ಪ್ರತ್ಯೇಕ ಧರ್ಮದ ಹೋರಾಟಕ್ಕೆ 75 ವರ್ಷಗಳ ಇತಿಹಾಸವಿದೆ. 1940ರಲ್ಲಿ ಹೋರಾಟ ಆರಂಭವಾಯಿತು. ಈಗ ಹೋರಾಟ ಯಶಸ್ಸು ಕಂಡಿದೆ. ಲಿಂಗಾಯತ ಪಂಗಡದಲ್ಲಿರುವ 99 ಉಪ ಜಾತಿಗಳ ಸ್ವಾಮೀಜಿಗಳ ಪರಿಶ್ರಮವೂ ಇದರ ಹಿಂದಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿ ಎಸ್‌.ಎಂ. ಜಾಮದಾರ ವಿವರಿಸಿದರು.

ಮುಸ್ಲಿಮರ ಸೌಲಭ್ಯಕ್ಕೆ ಧಕ್ಕೆ ಇಲ್ಲ

ಲಿಂಗಾಯತರಿಗೆ ಧಾರ್ಮಿಕ ಅಲ್ಪಸಂಖ್ಯಾತರು ಎಂಬ ಮಾನ್ಯತೆ ನೀಡಿದರೆ ಮುಸ್ಲಿಮರಿಗೆ ತೊಂದರೆಯಾಗುವುದಿಲ್ಲ ಎಂಬುದನ್ನು ಸಚಿವ ಸಂಪುಟ ಸಭೆಯಲ್ಲಿ ಮನವರಿಕೆ ಮಾಡಲಾಯಿತು ಎಂದು ತಿಳಿದುಬಂದಿದೆ.

‘ಪ್ರತ್ಯೇಕ ಧರ್ಮ ನೀಡಿದರೆ ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯಕ್ಕೆ ನಷ್ಟವಾಗಲಿದೆ. ಚುನಾವಣೆಯ ಮೇಲೆ ಇದು ದುಷ್ಪರಿಣಾಮ ಬೀರಬಹುದು’ ಎಂದು ಆರ್. ರೋಷನ್ ಬೇಗ್, ತನ್ವೀರ್ ಸೇಠ್‌, ಕೆ.ಜೆ. ಜಾರ್ಜ್‌ ತಕರಾರು ತೆಗೆದರು. ಅಡ್ವೊಕೇಟ್ ಜನರಲ್ ಮಧುಸೂದನ್ ನಾಯಕ್ ಅವರನ್ನು ಸಂಪುಟ ಸಭೆಗೆ ಕರೆಸಿದ ಮುಖ್ಯಮಂತ್ರಿ, ಅವರಿಂದ ಸಹೊದ್ಯೋಗಿಗಳಿಗೆ ವಿವರಣೆ ಕೊಡಿಸಿದರು.

‘ಮೀಸಲಾತಿಗೂ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನಕ್ಕೂ ಸಂಬಂಧವಿಲ್ಲ. ಜೈನ, ಬೌದ್ಧ, ಸಿಖ್‌ ಧರ್ಮಕ್ಕೆ ಪ್ರತ್ಯೇಕ ಮೀಸಲಾತಿ ಇಲ್ಲ. ಮುಸ್ಲಿಂ ಮೀಸಲಾತಿಯನ್ನು ಕಿತ್ತುಕೊಳ್ಳಲು ಸಂವಿಧಾನದಲ್ಲಿ ಅವಕಾಶ ಇಲ್ಲ’ ಎಂದು ನಾಯಕ್ ವಿವರಿಸಿದರು.

ಸಚಿವರ ಬೇಡಿಕೆ ಅನುಸಾರ, ‘ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಲು ಶಿಫಾರಸು ಮಾಡುವಾಗ ಇತರೆ ಅಲ್ಪಸಂಖ್ಯಾತ ಧರ್ಮದವರಿಗೆ ಸಿಗುತ್ತಿರುವ ಸೌಲಭ್ಯಗಳಿಗೆ ಧಕ್ಕೆಯಾಗದಂತೆ ಎಚ್ಚರ ವಹಿಸಲಾಗುವುದು’ ಎಂಬ ಸಾಲನ್ನು ಸಂಪುಟದ ನಿರ್ಣಯದಲ್ಲಿ ಸೇರಿಸಲಾಯಿತು ಎಂದೂ ಮೂಲಗಳು ತಿಳಿಸಿವೆ.

ರಾಜ್ಯದ ಶಿಫಾರಸಿಗೆ ಕೇಂದ್ರದ ಸ್ಪಂದನೆ ಕಷ್ಟ?

ಲಿಂಗಾಯತ–ವೀರಶೈವ ಲಿಂಗಾಯತ ಪಂಗಡಕ್ಕೆ ಧಾರ್ಮಿಕ ಅಲ್ಪಸಂಖ್ಯಾತ ಮಾನ್ಯತೆ ನೀಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆಯೇ?

* ಯಾವುದೇ ಪಂಗಡಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ಮತ್ತು ಅಗತ್ಯ ಸವಲತ್ತುಗಳನ್ನು ಕೊಡುವ ಅಧಿಕಾರ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೊಂದಿವೆ. 1992 ರ ಅಲ್ಪಸಂಖ್ಯಾತ ಆಯೋಗದ ಕಾಯ್ದೆಯಡಿ ಅಗತ್ಯ ಅಧಿಸೂಚನೆ ಹೊರಡಿಸುವ ಮೂಲಕ ಅದನ್ನು ಜಾರಿಗೊಳಿಸಬಹುದು.

* ನಾಗಮೋಹನದಾಸ್‌ ಸಮಿತಿ ತನ್ನ ವರದಿಯಲ್ಲಿ ಇದನ್ನು ಪ್ರಸ್ತಾಪಿಸಿದೆ.  ‘ಪ್ರಜಾವಾಣಿ’ ಜೊತೆ ಮಾತನಾಡಿದ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಉಪಾಧ್ಯಕ್ಷ ಜಾರ್ಜ್ ಕುರಿಯನ್‌ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

* ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಕಾಯ್ದೆ 1992ರ ಅಡಿ ಮುಸ್ಲಿಮರು, ಕ್ರೈಸ್ತರು, ಸಿಖ್ಖರು, ಪಾರ್ಸಿಗಳು, ಬೌದ್ಧರು ಹಾಗೂ ಜೈನ ಸಮುದಾಯಕ್ಕೆ ಮಾತ್ರ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡಲಾಗಿದೆ.

*ಈ ಪಟ್ಟಿಗೆ ಹೊಸ ಪಂಗಡಗಳನ್ನು ಸೇರ್ಪಡೆ ಮಾಡಬೇಕಾದರೆ ಕಾಯ್ದೆ ತಿದ್ದುಪಡಿ ಆಗಬೇಕು. ಕಾಯ್ದೆ ತಿದ್ದುಪಡಿ ಅಧಿಕಾರ ಇರುವುದು ಸಂಸತ್ತಿಗೆ ಮಾತ್ರ. ಇದು ತಕ್ಷಣಕ್ಕೆ ಆಗುವ ಕೆಲಸವಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

* ತಮಗೆ ಧಾರ್ಮಿಕ ಅಲ್ಪಸಂಖ್ಯಾತ ಮಾನ್ಯತೆ ನೀಡುವಂತೆ ಅನೇಕ ಪಂಗಡಗಳು ಸಲ್ಲಿಸಿರುವ ಅರ್ಜಿಗಳು ಬಹಳ ಸಮಯದಿಂದ ರಾಷ್ಟ್ರೀಯ ಆಯೋಗದ ಮುಂದಿವೆ.

* ಅಲ್ಪಸಂಖ್ಯಾತ ಆಯೋಗ ಈ ಅರ್ಜಿಗಳ ಪರಿಶೀಲನೆ ನಡೆಸಿ, ಏನಾದರೂ ತೀರ್ಮಾನ ಕೈಗೊಂಡರೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗುತ್ತದೆ.

* ಧಾರ್ಮಿಕ ಅಲ್ಪಸಂಖ್ಯಾತ ಮಾನ್ಯತೆ ಕೇಳಿ ಸಲ್ಲಿಸಲಾಗಿದ್ದ ಅನೇಕ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿದೆ.

*ರಾಮಕೃಷ್ಣ ಮಿಷನ್‌, ತಾನು ಹಿಂದೂ ಧರ್ಮದ ಭಾಗವಲ್ಲ, ಅದಕ್ಕಿಂತ ವಿಭಿನ್ನ ಎಂದು ಸಲ್ಲಿಸಿದ್ದ ಇಂತಹದೇ ಅರ್ಜಿಯನ್ನು ಸುಪ್ರೀಂ ಕೋರ್ಟ್‌ 1992ರಲ್ಲೇ ವಜಾ ಮಾಡಿದೆ.

* ಇವೆಲ್ಲಾ ಕಾರಣಗಳಿಂದಾಗಿ ರಾಜ್ಯ ಸರ್ಕಾರ ಕಳುಹಿಸುವ ಶಿಫಾರಸಿಗೆ ತಕ್ಷಣವೇ ಕೇಂದ್ರದ ಸ್ಪಂದನೆ ಸಿಗುವುದು ಕಷ್ಟ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸುತ್ತಾರೆ.

ಲಿಂಗಾಯತ ಧರ್ಮದ ಹಾದಿ

*2017 ಜೂನ್‌ 14: ವೀರಶೈವ– ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವ ಬಗ್ಗೆ ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅಖಿಲ ಭಾರತ ವೀರಶೈವ ಮಹಾಸಭಾ ಮನವಿ.

*2017 ಡಿಸೆಂಬರ್‌ 15: ಈ ಸಂಬಂಧ ಸಲ್ಲಿಕೆಯಾದ 35ಕ್ಕೂ ಹೆಚ್ಚು ಮನವಿಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಅಲ್ಪಸಂಖ್ಯಾತ ಇಲಾಖೆಯಿಂದ ರಾಜ್ಯ ಅಲ್ಪಸಂಖ್ಯಾತ ಆಯೋಗಕ್ಕೆ ಪತ್ರ

*2017 ಡಿಸೆಂಬರ್‌ 22: ನಿವೃತ್ತ ನ್ಯಾಯಮೂರ್ತಿ ಎಚ್.ಎನ್‌. ನಾಗಮೋಹನದಾಸ್‌ ನೇತೃತ್ವದಲ್ಲಿ ತಜ್ಞರ ಸಮಿತಿ ರಚನೆ

*2018 ಜನವರಿ 23: ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವಂತೆ ಆಗ್ರಹಿಸಲು ‘ಜಾಗತಿಕ ಲಿಂಗಾಯತ ಮಹಾಸಭಾ’ ಅಸ್ತಿತ್ವಕ್ಕೆ

*2018 ಮಾರ್ಚ್‌ 2: ನಾಗಮೋಹನದಾಸ್ ನೇತೃತ್ವದ ಸಮಿತಿಯಿಂದ ವರದಿ ಸಲ್ಲಿಕೆ

*2018 ಮಾರ್ಚ್‌ 8: ಸಂಪುಟ ಸಭೆ ಮುಂದೂಡಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT