ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು: ರಷ್ಯಾ ಅಧ್ಯಕ್ಷರಾಗಿ ಪುಟಿನ್‌ ಪುನರಾಯ್ಕೆ

Last Updated 19 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಮಾಸ್ಕೊ: ರಷ್ಯಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಶೇ 76.66ರಷ್ಟು ಮತಗಳನ್ನು ಪಡೆದು ಐತಿಹಾಸಿಕ ಜಯಗಳಿಸಿರುವ ವ್ಲಾಡಿಮಿರ್‌ ಪುಟಿನ್‌ ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಬಹುತೇಕ ಎರಡು ದಶಕಗಳ ಕಾಲ ಆಡಳಿತ ನಡೆಸಿರುವ ಪುಟಿನ್‌, ಈಗ ನಾಲ್ಕನೇ ಅವಧಿಗೆ ಅಧ್ಯಕ್ಷರಾಗಲಿದ್ದಾರೆ. ಮುಂದಿನ ಆರು ವರ್ಷಗಳ ಕಾಲ ಆಡಳಿತ ನಡೆಸಲಿರುವ ಅವರು, ಜೊಸೆಫ್‌ ಸ್ಟ್ಯಾಲಿನ್‌ ಬಳಿಕ ಸುದೀರ್ಘ ಅವಧಿಗೆ ಅಧ್ಯಕ್ಷರಾದ ಕೀರ್ತಿಗೆ ಭಾಜನರಾಗಲಿದ್ದಾರೆ.

ಪುಟಿನ್‌ ಜತೆ ಏಳು ಅಭ್ಯರ್ಥಿಗಳು ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಪುಟಿನ್‌ ಪ್ರತಿಸ್ಪರ್ಧಿ ಕಮ್ಯುನಿಸ್ಟ್‌ ಪಕ್ಷದ ಪವೆಲ್‌ ಗ್ರುಡಿನಿನ್‌ ಶೇ 12ರಷ್ಟು ಮತಗಳನ್ನು ಗಳಿಸಿದ್ದಾರೆ. ಉಳಿದವರು ಶೇಕಡ 6ಕ್ಕಿಂತ ಕಡಿಮೆ ಮತ ಪಡೆದಿದ್ದಾರೆ.

‘ನಮ್ಮ ಚಿಂತನೆಗಳನ್ನು ರಾಷ್ಟ್ರದ ಅಭಿವೃದ್ಧಿಯಲ್ಲಿ ಅಳವಡಿಸುತ್ತೇವೆ. ಹೆಚ್ಚುತ್ತಿರುವ ಬಡತನ ಮತ್ತು ಆರೋಗ್ಯ ರಕ್ಷಣೆ ಸೇರಿದಂತೆ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಲು ನಾಲ್ಕನೇ ಅವಧಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತೇನೆ’ ಎಂದು ಪುಟಿನ್‌ ಫಲಿತಾಂಶದ ಬಳಿಕ ಪ್ರತಿಕ್ರಿಯಿಸಿದ್ದಾರೆ.

ಆದರೆ, ಅನಿರ್ದಿಷ್ಟಾವಧಿಗೆ ಅಧಿಕಾರದಲ್ಲಿರುವ ಸಾಧ್ಯತೆಗಳನ್ನು ಪುಟಿನ್‌ ತಿರಸ್ಕರಿಸಿದ್ದಾರೆ.

2030ರಲ್ಲೂ ಚುನಾವಣೆಗೆ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನನಗೆ 100 ವರ್ಷಗಳಾಗುವವರೆಗೆ ಇಲ್ಲಿಯೇ ಕುಳಿತಿರಬೇಕೆ?’ ಎಂದು ಮರುಪ್ರಶ್ನಿಸಿದ್ದಾರೆ.

ರಷ್ಯಾದ ಬೇಹುಗಾರಿಕೆ ಸಂಸ್ಥೆ ‘ಕೆಜಿಬಿ’ ಅಧಿಕಾರಿಯಾಗಿದ್ದ ಪುಟಿನ್, 2000ನೇ ಇಸ್ವಿಯಲ್ಲಿ ಪ್ರಥಮ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಧಿಕಾರ ವಹಿಸಿಕೊಂಡ ಬಳಿಕ ಅವರು ವಿರೋಧ ಪಕ್ಷಗಳನ್ನು ಮಣಿಸುತ್ತಲೇ ಬಂದಿದ್ದಾರೆ.

ಜಾಗತಿಕ ಮಟ್ಟದಲ್ಲಿ ರಷ್ಯಾ ಏಕಾಂಗಿಯಾಗುವ ಸನ್ನಿವೇಶ ಸೃಷ್ಟಿಯಾಗುತ್ತಿರುವ ಸಂದರ್ಭದಲ್ಲೇ ಅಧ್ಯಕ್ಷೀಯ ಚುನಾವಣೆ ನಡೆದಿರುವುದು ಮಹತ್ವದ ಬೆಳವಣಿಗೆಯಾಗಿತ್ತು. ಇತ್ತೀಚೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆದ ಬೆಳವಣಿಗೆಗಳನ್ನು ಸಮರ್ಪಕವಾಗಿ ನಿಭಾಯಿಸಿರುವುದು ಚುನಾವಣೆಯಲ್ಲಿ ಪುಟಿನ್‌ ಅವರಿಗೆ ಅನುಕೂಲಕರವಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

‌ಬಡತನ ಮತ್ತು ಕಳಪೆ ಆರೋಗ್ಯ ರಕ್ಷಣೆ ಕಾರ್ಯಕ್ರಮಗಳನ್ನು ರೂಪಿಸಿದ್ದರೂ ಸೋವಿಯತ್‌ ಯೂನಿಯನ್‌ ಬಳಿಕ ರಷ್ಯಾದಲ್ಲಿ ಸ್ಥಿರ ಆಡಳಿತ ನೀಡಿದ್ದಕ್ಕಾಗಿ ಮತ್ತು ವಿದೇಶಾಂಗ ನೀತಿಗಳಿಗಾಗಿ ಪುಟಿನ್‌ ಅವರನ್ನು ಬೆಂಬಲಿಸಿರುವುದಾಗಿ ಹಲವು ಮತದಾರರು ತಿಳಿಸಿದ್ದಾರೆ.

ಬೇಹುಗಾರಿಕೆ ವಿವಾದದಲ್ಲಿ ರಷ್ಯಾ ವಿರುದ್ಧ ಬ್ರಿಟನ್‌ ಮಾಡಿದ್ದ ಆರೋಪಗಳು ಮತ್ತು ಚಳಿಗಾಲದ ಒಲಿಪಿಂಕ್‌ನಲ್ಲಿ ಉದ್ದೀಪನ ಮದ್ದು ವಿವಾದಕ್ಕಾಗಿ ರಷ್ಯಾದ ಅಥ್ಲೀಟ್‌ಗಳಿಗೆ ನಿಷೇಧ ಹೇರಿದ್ದು ಸಹ ಪುಟಿನ್‌ ಗೆಲುವಿಗೆ ನೆರವಾಯಿತು ಎಂದು ಬೆಂಬಲಿಗರು ಅಭಿಪ್ರಾಯಪಟ್ಟಿದ್ದಾರೆ.

ಅಭಿನಂದನೆ: ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರು ಪುಟಿನ್‌ ಅವರನ್ನು ಅಭಿನಂದಿಸಿದ್ದಾರೆ. ಆದರೆ, ಜರ್ಮನಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

‘ನಾಲ್ಕು ವರ್ಷಗಳ ಹಿಂದೆ ಉಕ್ರೇನ್‌ನಿಂದ ಬೇರ್ಪಡಿಸಿದ್ದ ಕ್ರಿಮಿಯಾದಲ್ಲೂ ಚುನಾವಣೆ ನಡೆಸಲಾಗಿದೆ. ಇದು ಅಂತರರಾಷ್ಟ್ರೀಯ ಕಾನೂನುಗಳ ಉಲ್ಲಂಘನೆಯಾಗಿದೆ. ಹೀಗಾಗಿ, ರಷ್ಯಾ ಜತೆಗಿನ ಸ್ನೇಹ ಕಠಿಣವಾಗಿಯೇ ಉಳಿಯಲಿದೆ’ ಎಂದು ಜರ್ಮನ್‌ ವಿದೇಶಾಂಗ ಸಚಿವ ಹೈಕೊ ಮಾಸ್‌ ತಿಳಿಸಿದ್ದಾರೆ.

**

ವಿರೋಧ ಪಕ್ಷಗಳ ಆಕ್ಷೇಪ

ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ಕೆಲವೆಡೆ ಒಬ್ಬರೇ ಒಂದಕ್ಕಿಂತ ಹೆಚ್ಚು ಮತ ಚಲಾಯಿಸಿದ್ದಾರೆ ಮತ್ತು ವೀಕ್ಷಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರಲಾಗಿದೆ. ಆದರೆ, ಚುನಾವಣಾ ಆಯೋಗ ಈ ಆರೋಪಗಳನ್ನು ತಿರಸ್ಕರಿಸಿದೆ.

ಪುಟಿನ್‌ ಅವರ ಕಟು ಟೀಕಾಕಾರ ರಾಜಕೀಯ ಕಾರ್ಯಕರ್ತ ಮತ್ತು ವಕೀಲ ಅಲೆಕ್ಸಿ ನವಲ್ನಿ ಈ ಬಾರಿಯ ಚುನಾವಣೆಯನ್ನು ಬಹಿಷ್ಕರಿಸುವಂತೆ ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದರು. ಚುನಾವಣೆ ಮೇಲೆ ನಿಗಾ ವಹಿಸಲು ದೇಶದಾದ್ಯಂತ ಸುಮಾರು 33 ಸಾವಿರ ವೀಕ್ಷಕರನ್ನು ನಿಯೋಜಿಸಿದ್ದರು.

**

ಮತದಾನಕ್ಕಾಗಿ ಸೆಲ್ಫಿ ಸ್ಪರ್ಧೆ

ಚುನಾವಣೆಯಲ್ಲಿ 10.7 ಕೋಟಿ ಮತದಾರರು ಮತ ಚಲಾಯಿಸಲು ಅರ್ಹರಿದ್ದರು. ಇವರಲ್ಲಿ ಶೇಕಡ 60ರಷ್ಟು ಮಂದಿ ಮತ ಚಲಾಯಿಸಿದ್ದಾರೆ.

ಅಧಿಕಾರಿಗಳು ಮತದಾನದ ಬಗ್ಗೆ ವ್ಯಾಪಕ ಪ್ರಚಾರ ನಡೆಸಿದ್ದರು. ಮತಗಟ್ಟೆಗಳ ಬಳಿ ಹಬ್ಬದ ವಾತಾವಾರಣ ಸೃಷ್ಟಿಸುವ ನಿಟ್ಟಿನಲ್ಲಿ ಸೆಲ್ಫಿ ಸ್ಪರ್ಧೆ, ಆಹಾರ ಉತ್ಸವ, ಮಕ್ಕಳಿಗೆ ಮನರಂಜನೆಗಾಗಿ ಆಟಗಳು ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸರ್ಕಾರಿ ಮತ್ತು ಖಾಸಗಿ ಕಂಪನಿಗಳ ಉದ್ಯೋಗಿಗಳ ಮೇಲೆ ಮತ ಚಲಾಯಿಸುವಂತೆ ಒತ್ತಡ ಹಾಕಲಾಯಿತು. ಮತ ಚಲಾಯಿಸದಿದ್ದರೆ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡುವುದಿಲ್ಲ ಎಂದು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಲಾಗಿತ್ತು.

**

ಜನರ ಆತ್ಮವಿಶ್ವಾಸ ಮತ್ತು ಆಶಾಭಾವವನ್ನು ಈ ಫಲಿತಾಂಶದಲ್ಲಿ ಕಂಡಿದ್ದೇನೆ.
-ವ್ಲಾಡಿಮಿರ್‌ ಪುಟಿನ್‌, ರಷ್ಯಾ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT