ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಗಾರು ಮಳೆ ಸಂಪೂರ್ಣ, ಮುಂಗಾರು ಬೆಳೆ ಸಾಧಾರಣ

ಯುಗಾದಿ ಹಬ್ಬದ ಫಲಾಫಲ ಭವಿಷ್ಯ
Last Updated 20 ಮಾರ್ಚ್ 2018, 6:02 IST
ಅಕ್ಷರ ಗಾತ್ರ

ಗುಳೇದಗುಡ್ಡ: ಯುಗಾದಿ ಹಬ್ಬದ ನಿಮಿತ್ತ ಪಾಡ್ಯದ ದಿನ ಇಲಾಳ ನಾಟ್ಯ ಸಂಘದವರು ಮುಂದಿನ ದಿನಗಳಲ್ಲಿ ಮುಂಗಾರು ಹಾಗೂ ಹಿಂಗಾರು ಮಳೆ, ಬೆಳೆ ಫಲಾಫಲ ಹಾಗೂ ವ್ಯಾಪಾರ, ರಾಜಕೀಯ ಭವಿಷ್ಯ ಹೇಳುವ ಕಾರ್ಯಕ್ರಮ ಮಾರವಾಡಿ ಸಮಾಜದ ಬಗೀಚ್‌ದಲ್ಲಿ ಭಾನುವಾರ ಬೆಳಿಗ್ಗೆ ನಡೆಯಿತು.

ಹಿಂಗಾರು ಮಳೆ ಸಂಪೂರ್ಣ ಇದೆ. ಮುಂಗಾರು ಮಳೆ ಸಾಧಾರಣ ಇದೆ. ಗುಳೇದಗುಡ್ಡ ಖಣ ಹಾಗೂ ಇಲಕಲ್ಲ ಸೀರೆ ವ್ಯಾಪಾರದಲ್ಲಿ ಬೇಡಿಕೆ ಹೆಚ್ಚಾಗಲಿದೆ ಎಂದು ನಾಗಪ್ಪ ಚಿಂದಿ, ಕ್ವಾಟೆಪ್ಪ ಕೋಟೆಕಲ್ಲ ಅವರು ನಕ್ಷತ್ರಗಳ ಲೆಕ್ಕಾಚಾರದ ಮೂಲಕ ಭವಿಷ್ಯ ಹೇಳಿದರು.

ಯುಗಾದಿ ಹಿಂದಿನ ದಿನ ಶನಿವಾರ ಸಂಜೆ ಮಾರವಾಡಿ ಸಮಾಜದ ಬಗೀಚ್‌ದಲ್ಲಿ ಮರಳು ಹಾಕಿ, ಚೌಕಾಕಾರದ ಮಂಡಲದ ಕಟ್ಟೆಯಂತೆ ನಿರ್ಮಾಣ ಮಾಡಿರುತ್ತಾರೆ. ಅದರ ಸುತ್ತಲು ಜೋಳದ ದಂಟು ನೆಟ್ಟಿರುತ್ತಾರೆ. ಅದರ ಒಳಗಡೆ ಮಣ್ಣಿನಿಂದ ಮಾಡಿದ ಈಶ್ವರ, ಬಸವಣ್ಣ, ಹೊಲ ಊಳುತ್ತಿರುವ ರೈತರ ಮೂರ್ತಿ ಮಾಡಿ ಇಟ್ಟಿರುತ್ತಾರೆ. ಅದರ ಸುತ್ತಲು ಎಕ್ಕಿ ಎಲಿ ಇಟ್ಟಿರುತ್ತಾರೆ, ಬಸವಣ್ಣನ ಮುಂದೆ ಅನ್ನದ ಬುತ್ತಿ ಹಾಗೂ ಚೌಕಾಕಾರದ ನಾಲ್ಕು ದಿಕ್ಕಿನಲ್ಲಿ ಅನ್ನದ ಬುತ್ತಿ ಇಟ್ಟಿರುತ್ತಾರೆ. ರೈತನ ಮುಂದೆ ಬಟ್ಟೆ ಹಾಕಿ ಜೊತೆಗೆ ವ್ಯಾಪಾರ ಮಾಡುವ ಶೆಟ್ಟಿ ಮೂರ್ತಿಗಳನ್ನು ಇಟ್ಟಿರುತ್ತಾರೆ. ಯುಗಾದಿ ಪಾಡ್ಯದ ದಿನ ಭಾನುವಾರ ಬೆಳಿಗ್ಗೆ ಭಕ್ತಿಯಿಂದ ಪೂಜೆ ಮಾಡಿದ ಮೇಲೆ ಎಕ್ಕಿ ಎಲಿಯಲ್ಲಿ ಇಬ್ಬನ್ನಿ ನೀರು ಬಿದ್ದಿರುವ ಶೌಜ್ಞ್ನೆಯ ಆಧಾರದ ಮೇಲೆ ಮತ್ತು ನಕ್ಷತ್ರಗಳ, ಗಣಿತ ಲೆಕ್ಕಾಚಾರದ ಮೇಲೆ ಮಳೆ –ಬೆಳೆ ಫಲಾಫಲ, ವ್ಯಾಪಾರ, ಮುಂದಿನ ರಾಜಕೀಯ ಭವಿಷ್ಯದ ಹೇಳಿಕೆ ನಡೆಯಿತು ಎಂದು ಚನಬಸಪ್ಪ ರಂಜಣಗಿ, ಈರಣ್ಣ ಹೊಟ್ಟಿ ಹೇಳಿದರು.

ಅಶ್ವಿನಿ ಮಳೆ 3ನೇ ಚರಣ ನಾಲ್ಕಾಣೆ ಮಳೆ ಆಗುತ್ತದೆ, ಭರಣಿ– 3ನೇ ಚರಣ ಏಳಾಣಿ ಭಾಗ ಮಳೆ, ಕೃತಿಕಾ– 4ನೇ ಚರಣ ಏಳಾಣಿ ಭಾಗ ಮಳೆ, ರೋಹಿನಿ– 3ನೇ ಚರಣ ಹತ್ತಾಣೆ ಭಾಗ ಮಳೆ, ಮೃಗಶಿರಾ– 3ನೇ ಚರಣ ಆರಾಣೆ ಭಾಗ ಮಳೆ, ಆರಿದ್ರಾ– 3ನೇ ಚರಣ ಎಂಟಾಣೆ ಭಾಗ ಮಳೆ, ಪುನರ್ವಸು– 3ನೇ ಚರಣ ಎಂಟಾಣೆ ಭಾಗ ಮಳೆ, ಪುಷ್ಯಾ– 4ನೇ ಚರಣ ಎಂಟಾಣೆ ಭಾಗ ಮಳೆ, ಆಷ್ಲೇಷಾ– 3ನೇ ಚರಣ ಒಂಭತ್ತಾಣೆ ಭಾಗ ಮಳೆ, ಮಘಿ– 4ನೇ ಚರಣ ಹತ್ತಾಣೆ ಭಾಗ ಮಳೆ, ಹುಬ್ಬಾ– 2ನೇ ಚರಣ ಎಂಟಾಣೆ ಭಾಗ ಮಳೆ, ಉತ್ತರಿ– 4ನೇ ಚರಣ ಒಂಭತ್ತಾಣೆ ಭಾಗ ಮಳೆ, ಹಸ್ತಾ– 4ನೇ ಚರಣ ಎಂಟಾಣೆ ಭಾಗ ಮಳೆ, ಚಿತ್ತಿ– 4ನೇ ಚರಣ ಆರಾಣೆ ಭಾಗ ಮಳೆ, ಸ್ವಾತಿ– 2ನೇ ಚರಣ ನಾಲ್ಕಾಣೆ ಭಾಗ ಮಳೆ, ವಿಶಾಖಾ– ಮೂರಾಣೆ ಭಾಗ ಮಳೆ ಆಗುವುದು ಇಲ್ಲದಿದ್ದರೆ ಇಲ್ಲ. ಅನುರಾಧಾ– ಸಾಧಾರಾಣ ಹಾಗೂ ಅಲ್ಲಲ್ಲಿ ತುಂತುರು ಮಳೆ ಆಗುವುದು.

ಮಳೆ ಬೆಳೆ ಫಲಾಫಲದ ಜೊತೆಗೆ ಕಾಳು, ಕಡಿಯ ವ್ಯಾಪಾರ ಉತ್ತಮವಾಗಿರುತ್ತದೆ. ರಾಜಕಾರಣ– ಕರ್ನಾಟಕದ ರಾಜಕೀಯದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರು ಪಕ್ಷಗಳು ಅಧಿಕಾರದ ಚುಕ್ಕಾಣೆ ಹಿಡಿಯಲು ಶತಪ್ರಯತ್ನ ನಡೆಸುತ್ತಿದೆ. ರಾಜ್ಯದಲ್ಲಿ ಸಮಿಶ್ರ ಸರ್ಕಾರ ಆಗುವುದು ಎಂದು ಭವಿಷ್ಯದ ಹೇಳಿಕೆ ನಡೆಯಿತು.

ಇದು ಮುಂಬರುವ ರಾಜಕೀಯ ಭವಿಷ್ಯದ ದಿಕ್ಸುಚಿಯನ್ನು ಇಲ್ಲಿ ಹೇಳಲಾಯಿತು. ಈ ಯುಗಾದಿ ಮಳೆ ಬೆಳೆ ಫಲಾಫಲ ಭವಿಷ್ಯ ಕೇಳಲು ರೈತರು, ನೇಕಾರರು, ಜನಪ್ರತಿನಿಧಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT