ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀಕ್ ಕ್ಯಾಂಡಿಡೇಟ್ ವಿಧಾನಸೌಧದತ್ತ!

ಮೊದಲ ಬಾರಿಗೆ ಶಾಸಕರಾದ ನೆನಪು: ಮುರುಗೇಶ ನಿರಾಣಿ
Last Updated 20 ಮಾರ್ಚ್ 2018, 6:07 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಅವ ವೀಕ್ ಕ್ಯಾಂಡಿಡೇಟ್, ಭಾಷಣ ಮಾಡೋಕೆ ಗೊತ್ತಿಲ್ಲ, ಯಾರು ಓಟು ಹಾಕ್ತಾರೆ ಎಂದು ಆಗ ವಿರೋಧಿಗಳು ಕುಹಕವಾಡಿದ್ದರು. ಕಷ್ಟಪಟ್ಟು, ಸಾಕಷ್ಟು ಪೆಟ್ಟು ತಿಂದು ಬದುಕು ಕಟ್ಟಿಕೊಂಡಿದ್ದೆ. ವಾಜಪೇಯಿ ಆದರ್ಶ, ಯಡಿಯೂರಪ್ಪ ಅವರ ಮಾರ್ಗದರ್ಶನ ಬಿಜೆಪಿಯತ್ತ ಸೆಳೆದಿತ್ತು. ಅಂದು ರಾಜಕೀಯ ಕ್ಷೇತ್ರ ಹೊಸದು. ಆದರೆ ಗೆಲ್ಲುವ ಛಲ ಒಡಮೂಡಿತ್ತು. ಕ್ಷೇತ್ರದಲ್ಲಿ ಮನೆ ಮನೆ ಸುತ್ತಿ ಮತದಾರ ಪ್ರಭುವಿನ ಕಾಲಿಗೆರಗಿದೆ. ಪ್ರತಿಸ್ಪರ್ಧಿಗಳು ಎಸೆದ ಟೀಕಾಸ್ತ್ರದ ರೂಪದ ಕಲ್ಲುಗಳನ್ನೇ ಬಳಸಿ ಮತದಾರರೊಂದಿಗೆ ವಿಶ್ವಾಸದ ಸೌಧ ಕಟ್ಟಿಕೊಂಡೆ. ಅದರ ಫಲ ವಿಧಾನಸೌಧದತ್ತ ಹಾದಿ ಸ್ಪಷ್ಟಗೊಂಡಿತ್ತು’...

ಹೀಗೆಂದು 2004ರಲ್ಲಿ ತಾವು ಎದುರಿಸಿದ್ದ ಮೊದಲ ಚುನಾವಣೆಯ ಗೆಲುವಿನ ಸಂದರ್ಭವನ್ನು ಬೀಳಗಿಯ ಕ್ಷೇತ್ರದ ಮಾಜಿ ಶಾಸಕ ಮುರುಗೇಶ ನಿರಾಣಿ ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

ಮುರುಗೇಶ ಕೇವಲ ರಾಜಕಾರಣಿಯಲ್ಲ. ದೇಶದ ಸಕ್ಕರೆ, ಸಿಮೆಂಟ್, ಶಿಕ್ಷಣ, ಬ್ಯಾಂಕಿಂಗ್ ಉದ್ಯಮದಲ್ಲಿ ನಿರಾಣಿ ಸಮೂಹದ ಹೆಜ್ಜೆಗುರುತು ಮೂಡಿಸಿದ್ದಾರೆ. ಸಹೋದರರೊಂದಿಗೆ ಸೇರಿ ಜಿಲ್ಲೆಯಲ್ಲಿ ಬೃಹತ್ ಉದ್ಯಮ ಸಾಮ್ರಾಜ್ಯಕಟ್ಟಿ ಅಲ್ಲಿ 5600 ಮಂದಿಗೆ ಉದ್ಯೋಗ ಕೊಟ್ಟಿದ್ದಾರೆ. ಉದ್ಯಮ ರಂಗದ ಯಶೋಗಾಥೆಯನ್ನೇ ರಾಜಕೀಯ ಕ್ಷೇತ್ರಕ್ಕೂ ವಿಸ್ತರಿಸಿದ್ದಾರೆ. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ, ಎರಡು ಅವಧಿಗೆ ಶಾಸಕರಾಗಿ, ಕೈಗಾರಿಕೆ ಸಚಿವರಾಗಿ ಕೆಲಸ ಮಾಡಿದ್ದಾರೆ. ಎರಡು ಬಾರಿ ವಿಶ್ವಮಟ್ಟದ ಹೂಡಿಕೆದಾರರ ಸಮ್ಮೇಳನ (ಜಿಮ್‌) ಆಯೋಜಿಸಿ ನಾಡಿನ ಕೈಗಾರಿಕಾ ರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.

ಮನೆ ಬಿಟ್ಟು ಬಂದಿದ್ದರು: ಬೀಳಗಿ ತಾಲ್ಲೂಕು ಬಸವಹಂಚಿನಾಳದ ರುದ್ರಪ್ಪ ನಿರಾಣಿ ಪುತ್ರ ಮುರುಗೇಶ ಹುಬ್ಬಳ್ಳಿಯ ಭೂಮರಡ್ಡಿ ಕಾಲೇಜಿನ ಸಿವಿಲ್‌ ಎಂಜಿನಿಯರಿಂಗ್‌ ಪದವೀಧರ. ಪುಣೆಯಲ್ಲಿ ಎಂಬಿಎ ಮುಗಿಸಿದ್ದಾರೆ. ಶಿಕ್ಷಣ ಮುಗಿಸಿ ಬಂದ ಮಗ ಸರ್ಕಾರಿ ಕೆಲಸಕ್ಕೆ ಸೇರಲಿ, ಇಲ್ಲವೇ ಜಮೀನು ನೋಡಿಕೊಂಡು ಸಿವಿಲ್ ಕ್ಷೇತ್ರದಲ್ಲಿ ಸಣ್ಣಪುಟ್ಟ ಗುತ್ತಿಗೆ ಮಾಡಿಕೊಂಡಿರಲಿ ಎಂದು ಅಪ್ಪ ಬಯಸಿದ್ದರು. ಆದರೆ ಕಾಲೇಜು ದಿನಗಳಿಂದಲೂ ಉದ್ಯಮಿಯಾಗುವ ಮುರುಗೇಶ ಕನಸು ಹೊತ್ತಿದ್ದರು. ಅದೊಂದು ದಿನ ಸಕ್ಕರೆ ಕಾರ್ಖಾನೆ ತೆರೆಯುವ ಮನದಿಂಗಿತ ಅಪ್ಪನ ಮುಂದೆ ಇಟ್ಟರು. ಇದರಿಂದ ಹೌಹಾರಿದ ರುದ್ರಪ್ಪ, ‘ಕೃಷಿ ಕುಟುಂಬದ ನಮಗೆ ಉದ್ಯಮದ ಓನಾಮ ಗೊತ್ತಿಲ್ಲ. ಅಷ್ಟೊಂದು ದೊಡ್ಡ ರಿಸ್ಕ್ ತೆಗೆದುಕೊಳ್ಳುವ ಅಗತ್ಯವಿಲ್ಲ’ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದರು. ಆದರೆ ತಲೆಯಲ್ಲಿ ಒಡಮೂಡಿದ್ದ ಕನಸಿನ ಎಳೆ, ಅಪ್ಪನ ಮಾತನ್ನು ಅಪಥ್ಯವಾಗಿಸಿತ್ತು. ಉದ್ಯಮ ಸ್ಥಾಪಿಸಿಯೇ ಬದ್ಧ ಎಂದು ಸಂಕಲ್ಪ ತೊಟ್ಟಿದ್ದರಿಂದ ಅಪ್ಪನ ಕೋಪಕ್ಕೆ ಗುರಿಯಾಗಿ ಮನೆ ಬಿಡಬೇಕಾಯಿತು.

‘ಮೂರು ತಿಂಗಳ ಮಗ ಹಾಗೂ ಪತ್ನಿಯೊಂದಿಗೆ ಮನೆ ಬಿಟ್ಟು ಬಂದಾಗ ಕೈಯಲ್ಲಿ ₹ 5 ಸಾವಿರ ಇತ್ತು. ಅದರಲ್ಲಿಯೇ ಪಾತ್ರೆ–ಪಡಗ, ದಿನಸಿ ಖರೀದಿಸಿದ್ದೆನು. ಜೀವನೋಪಾಯಕ್ಕೆ ಗೆಳೆಯರಿಂದ ಸಾಲ ಪಡೆದು ಸಣ್ಣ ವರ್ಕ್‌ಶಾಪ್‌ ಆರಂಭಿಸಿದೆ. ಗೋವಾದಿಂದ ಸೆಕೆಂಡ್‌ ಹ್ಯಾಂಡ್‌ ಟ್ರ್ಯಾಕ್ಟರ್‌ ತಂದು ಇಲ್ಲಿ ಮಾರಾಟ ಮಾಡುತ್ತಿದ್ದೆ. ಒಂದು ಟ್ರ್ಯಾಕ್ಟರ್‌ಗೆ ₹ 1 ಸಾವಿರ ಉಳಿಯುತ್ತಿತ್ತು. ಗೋವಾದಿಂದ ಇಲ್ಲಿಗೆ ಟ್ರ್ಯಾಕ್ಟರ್‌ ಚಲಾಯಿಸಿಕೊಂಡು ಬಂದವರಿಗೂ ₹ 1 ಸಾವಿರ ಕೊಡಬೇಕಿತ್ತು. ಅದನ್ನು ಉಳಿಸಲು ನಾನೇ ಸ್ವತಃ ಅಲ್ಲಿಂದ ಚಲಾಯಿಸಿಕೊಂಡು ಬರುತ್ತಿದ್ದೆ’ ಎಂದು ನಿರಾಣಿ 90ರ ದಶಕದ ನೆನಪಿಗೆ ಜಾರುತ್ತಾರೆ.

‘ವರ್ಕ್‌ಶಾಪ್‌ಗೆ ಟ್ರ್ಯಾಕ್ಟರ್ ರಿಪೇರಿ ಮಾಡಿಸಿಕೊಳ್ಳಲು ಬರುತ್ತಿದ್ದ ರೈತರೊಂದಿಗೆ ಬೆಳೆದ ಒಡನಾಟ ಪರಸ್ಪರ ವಿಶ್ವಾಸಕ್ಕೆ ದಾರಿಯಾಯಿತು. ಅವರು ಬೆಳೆ ಮಾರಿದಾಗ ಸಿಗುತ್ತಿದ್ದ ಇಡುಗಂಟನ್ನು ನನ್ನ ಬಳಿ ಇಡತೊಡಗಿದರು. ಅಗತ್ಯವಿರುವ ರೈತರಿಗೆ ನಾನು ಅದನ್ನು ಕೊಡತೊಡಗಿದೆ. ಹಗಲು–ರಾತ್ರಿಯೆನ್ನದೇ ಯಾವುದೇ ಸಂದರ್ಭದಲ್ಲಿ ಬಂದರೂ ಬಡ್ಡಿ ಇಲ್ಲದೇ ಹಣ ಸಿಗುತ್ತಿತ್ತು. ಸತ್ತಾಗ, ಕೆಟ್ಟಾಗ, ಮದುವೆ–ಮುಂಜಿ, ಆಸರ–ಬ್ಯಾಸರಕ್ಕೆಲ್ಲಾ ಹಣ ಹೊಂದಿಸಿಕೊಡುತ್ತಿದ್ದೆ. ಇದರ ಫಲ ಜನರ ಪ್ರೀತಿಗಳಿಸಿದೆ. ದಿನದ 24 ಗಂಟೆಯೂ ಖಾತರಿಯಾಗಿ ರೊಕ್ಕ ಸಿಗುತ್ತಿದ್ದ ಕಾರಣ ಜನ ನಿರಾಣಿ ಬ್ಯಾಂಕ್ ಎಂದೇ ತಮಾಷೆ ಮಾಡುತ್ತಿದ್ದರು. ಶುಭ ಕಾರ್ಯಗಳಿಗೆ ದಿನ ನಿಗದಿ ಮಾಡುವಾಗಲೂ ಬಂದು ಕೇಳುವ ಮಟ್ಟಕ್ಕೆ ಈ ವ್ಯವಹಾರ ಜನರ ಗೌರವ ದೊರಕಿಸಿಕೊಟ್ಟಿತು’ ಎನ್ನುತ್ತಾರೆ.

‘ಮುಧೋಳದಲ್ಲಿ ಓದುವಾಗ ಹಿರಿಯ ರಾಜಕಾರಣಿಯೊಬ್ಬರ ಕಾಲೇಜು ಕಾರ್ಯಕ್ರಮಕ್ಕೆ ಬಂದಿದ್ದರು. ತಮಗೆ ದೊಡ್ಡ ಮನೆ ಇದೆ. ಸಿಮೆಂಟ್ ಉದ್ಯಮವಿದೆ ಎಂದು ಭಾಷಣದಲ್ಲಿ ಹೇಳಿಕೊಂಡಿದ್ದರು. ಆಗಲೇ ಅವರ ಬಳಿ ಇರುವುದಕ್ಕಿಂತ ದೊಡ್ಡ ಉದ್ಯಮ ಸ್ಥಾಪಿಸಬೇಕು ಎಂದು ಸಂಕಲ್ಪ ತೊಟ್ಟಿದ್ದೆ. ಇದೇ ಮುಂದೆ ಸಣ್ಣ ಪ್ರಮಾಣದಲ್ಲಿ ಸಕ್ಕರೆ ತಯಾರಿಕೆ ಘಟಕ ಆರಂಭಿಸಲು ಸ್ಫೂರ್ತಿಯಾಯಿತು. ಮುಂದೆ ಬೃಹತ್‌ ಉದ್ಯಮವಾಗಿಯೂ ರೂಪುಗೊಂಡಿತು. ಆರಂಭದ ದಿನಗಳಲ್ಲಿ ನಾನು ಮಾಡುತ್ತಿದ್ದ ಕೆಲಸದ ರೀತಿ ಕಂಡು ಡೇ ಚೇರ್ಮನ್, ನೈಟ್ ವಾಚ್‌ಮನ್ ಎಂದು ಗೆಳೆಯರು ತಮಾಷೆ ಮಾಡುತ್ತಿದ್ದರು’ ಎಂದು ನಿರಾಣಿ ನೆನಪಿಸಿಕೊಳ್ಳುತ್ತಾರೆ.

ಕೈಗಾರಿಕೆ ಮಿನಿಸ್ಟರ್ ಅನ್ನಿ: ‘ಯಡಿಯೂರಪ್ಪ ಆರಂಭದಿಂದಲೂ ನನ್ನನ್ನು ಸಕ್ಕರೆ ಮಂತ್ರಿ ಎಂದೇ ಕರೆಯುತ್ತಿದ್ದರು. ಸರ್‌ ನನ್ನದು ಸಿಮೆಂಟ್ ಉದ್ಯಮ ಕೂಡ ಇದೆ. ಕೈಗಾರಿಕಾ ಮಂತ್ರಿ ಎಂದು ಕರೆಯಿರಿ ಅನ್ನುತ್ತಿದ್ದೆ. ಬಿಜೆಪಿ–ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಚಿವ ಸ್ಥಾನ ಘೋಷಣೆಯಾಗಿತ್ತು. ಆಗ ಚೀನಾದಲ್ಲಿದ್ದೆ. ಸುದ್ದಿ ತಿಳಿದು ಮರಳಿದ್ದೆನು. ಆದರೆ ಪ್ರಮಾಣವಚನ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಮುಂದೆ ಅದೇ ಕೈಗಾರಿಕೆ ಸಚಿವನಾಗಿಯೇ ಕೆಲಸ ಮಾಡುವ ಅವಕಾಶ ಸಿಕ್ಕಿತು’ ಎಂದು ನೆನಪಿಸಿಕೊಳ್ಳುತ್ತಾರೆ.

ಮೊದಲ ಚುನಾವಣೆ ವೇಳೆ ₹ 3.5 ಲಕ್ಷ ಖರ್ಚಾಗಿತ್ತು ಎನ್ನುವ ಅವರು, ಆಗ ಯಡಹಳ್ಳಿಯ ನಿಂಗಪ್ಪ ಬಿರಾದಾರ ಪಾಟೀಲ ನೀಡಿದ್ದ ನೆರವನ್ನು ತಪ್ಪದೇ ಸ್ಮರಿಸುತ್ತಾರೆ.

**
11 ಲಕ್ಷ ಜನರಿಗೆ ಉದ್ಯೋಗ..
ಸಚಿವನಾಗಿದ್ದ ವೇಳೆ ಸಂಘಟಿಸಿದ್ದ ಜಿಮ್ ಸಮ್ಮೇಳನದ ಫಲ ರಾಜ್ಯದಲ್ಲಿ 11 ಲಕ್ಷ ಜನರಿಗೆ ಉದ್ಯೋಗಾವಕಾಶ ಸಿಕ್ಕಿದೆ. 2006ರಲ್ಲಿ ತುಂಗಳ–ಕೂಡಲಸಂಗಮ ನಡುವೆ ಪಾದಯಾತ್ರೆ ಕೈಗೊಂಡು ಸರ್ಕಾರದ ಗಮನ ಸೆಳೆದಿದ್ದರಿಂದ ಕ್ಷೇತ್ರದ 13 ಕೆರೆಗಳನ್ನು ತುಂಬಿಸಲಾಯಿತು. ಜನ ಗೋವಾ–ಮಂಗಳೂರಿಗೆ ಗುಳೆ ಹೋಗುವುದು ತಪ್ಪಿತು. 14 ಪ್ರೌಢಶಾಲೆ, ಐದು ಪದವಿ ಕಾಲೇಜು, ತಲಾ ಒಂದು ಐಟಿಐ, ಪಾಲಿಟೆಕ್ನಿಕ್, ನವೋದಯ ಶಾಲೆ, ನಾಲ್ಕು ಮೊರಾರ್ಜಿ ದೇಸಾಯಿ ಶಾಲೆಗಳ ಸ್ಥಾಪನೆ. ಕ್ಷೇತ್ರದಲ್ಲಿ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದ್ದಾಗಿ ನಿರಾಣಿ ಹೇಳುತ್ತಾರೆ.

ನಿರಾಣಿ ಫೌಂಡೇಷನ್‌ನಿಂದ 65 ಸಾವಿರ ಬಡವರಿಗೆ ಉಚಿತ ಆರೋಗ್ಯ ತಪಾಸಣೆ, ಎಂಟು ಸಾವಿರ ಮಂದಿಗೆ ಉಚಿತ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ ಎನ್ನುತ್ತಾರೆ.

**
ಇದೆಲ್ಲಾ ಸಿನಿಮಾ ಕಥೆಯಂತೆ ರಾತ್ರಿ ಕಳೆದು ಬೆಳಗಾಗುವ ಹೊತ್ತಿಗೆ ಆದ ಬದಲಾವಣೆಯಲ್ಲ. ದಶಕಗಳ ಶ್ರಮ. ಅದೆಷ್ಟೊ ರಾತ್ರಿ ಕಳೆದುಕೊಂಡ ನಿದ್ರೆ, ಬೆವರ ಹನಿ ಧಾರೆಯಾದ ಫಲ
ಮುರುಗೇಶ ನಿರಾಣಿ, ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT