ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

145 ತಾಲ್ಲೂಕು ಆಸ್ಪತ್ರೆಗಳಲ್ಲಿ ‘ಗೆಳತಿ’ ಘಟಕ

ದೊಡ್ಡಬಳ್ಳಾಪುರದಲ್ಲಿ ವಿಶೇಷ ಚಿಕಿತ್ಸಾ ಘಟಕಕ್ಕೆ ಶಾಸಕ ಟಿ. ವೆಂಕಟರಮಣಯ್ಯ ಚಾಲನೆ
Last Updated 20 ಮಾರ್ಚ್ 2018, 6:14 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಕೇಂದ್ರಗಳನ್ನು ಹೊರತುಪಡಿಸಿ ರಾಜ್ಯದ 145 ತಾಲ್ಲೂಕು ಕೇಂದ್ರದ ಸರ್ಕಾರಿ ಆಸ್ಪತ್ರೆಗಳಲ್ಲಿ ’ಗೆಳತಿ’ ವಿಶೇಷ ಚಿಕಿತ್ಸಾ ಘಟಕವನ್ನು ಸ್ಥಾಪಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕಿ ದೀಪಾ ಚೋಳನ್ ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಗೆಳತಿ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ  ಮಾತನಾಡಿದರು.

ಸಂತ್ರಸ್ತ ಮಹಿಳೆಯರಿಗೆ ವೈದ್ಯಕೀಯ ಚಿಕಿತ್ಸೆ, ಪೊಲೀಸ್, ಕಾನೂನು ನೆರವು ಹಾಗೂ ಸಮಾಲೋಚನೆ ಸೌಲಭ್ಯಗಳನ್ನು ಒಂದೇ ಸೂರಿನಡಿ ನೀಡುವ ಉದ್ದೇಶ ಹೊಂದಲಾಗಿದೆ ಎಂದರು.

ಜಿಲ್ಲಾ ಕೇಂದ್ರಕ್ಕೆ ಹೋಗಿ ಬರಲು ಸಾಧ್ಯವಾಗದ ಮಹಿಳೆಯರಿಗೆ ತಾಲ್ಲೂಕು ಕೇಂದ್ರದಲ್ಲಿಯೇ ಎಲ್ಲ ಸೌಲಭ್ಯ ಸಿಗಲು ಈ ಘಟಕ ನೆರವಾಗಲಿದೆ. ರಾಜ್ಯದಲ್ಲಿ ಅತ್ಯಾಚಾರ ಮತ್ತು ವಿವಿಧ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಮತ್ತು ಮಕ್ಕಳಿಗೆ ವಿಶೇಷ ಚಿಕಿತ್ಸೆ ನೀಡಲು 2017–18ನೇ ಸಾಲಿನ ಬಜೆಟ್‌ನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಎರಡು ಹಾಸಿಗೆ ಮತ್ತು ಶೌಚಾಲಯ ವ್ಯವಸ್ಥೆಯುಳ್ಳ ಒಂದು ಕೊಠಡಿ ಮೀಸಲಿರಿಸಲಾಗಿದೆ ಎಂದರು.

ಈ ಯೋಜನೆಯಡಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ನೆರವು ಒದಗಿಸಲಾಗುವುದು. ಒಂದೇ ಸೂರಿನಡಿ ವೈದ್ಯಕೀಯ ಚಿಕಿತ್ಸೆ, ಪೊಲೀಸ್, ಕಾನೂನು ನೆರವು ಹಾಗೂ ಸಮಾಲೋಚನೆ ವ್ಯವಸ್ಥೆಗಳು ಲಭ್ಯವಾಗಲಿವೆ ಎಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಪಿ.ಎನ್.ಅನಂತಕುಮಾರಿ, ಗೆಳತಿ  ನಾಮಫಲಕ ಹಾಗೂ ಲಾಂಛನ ಬಿಡುಗಡೆ ಮಾಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ವಿ.ಶ್ರೀವತ್ಸ, ಉಪಾಧ್ಯಕ್ಷೆ ಮೀನಾಕ್ಷಿ ಕೆಂಪಣ್ಣ, ನಗರಸಭೆ ಅಧ್ಯಕ್ಷ ಟಿ.ಎನ್. ಪ್ರಭುದೇವ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎಸ್.ಪಾಲಯ್ಯ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಲತಾ, ಉಪಕಾರ್ಯದರ್ಶಿ ಕಾಂತರಾಜು, ಮಹಿಳಾ ಆಯೋಗದ ಕಾರ್ಯದರ್ಶಿ ಕವಿತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಮಹೇಶ್ವರಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಚುಂಚೇಗೌಡ ಭಾಗವಹಿಸಿದ್ದರು.
**
ಮಹಿಳೆಯರಿಗೆ ವರದಾನ
ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ರಾಜ್ಯ ಸರ್ಕಾರ ಆರೋಗ್ಯಕ್ಕೆ ಉತ್ತಮ ಸೌಲಭ್ಯ ನೀಡಿದ್ದು, ಆರೋಗ್ಯ ಭಾಗ್ಯ ಯೋಜನೆಯಡಿ

₹1.5 ಲಕ್ಷದವರೆಗೆ ಆರೋಗ್ಯ ವಿಮೆ ಜಾರಿ ಮಾಡಿದೆ. ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಮನವಿ ಸಲ್ಲಿಸಲಾಗಿದೆ ಎಂದರು.

ಅತ್ಯಾಚಾರ ಮತ್ತು ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಮತ್ತು ಮಕ್ಕಳಿಗೆ ವಿಶೇಷ ಚಿಕಿತ್ಸೆ ನೀಡಲು ಘಟಕ ಸ್ಥಾಪಿಸಿರುವುದು ನೊಂದ ಮಹಿಳೆಯರಿಗೆ ವರದಾನವಾಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT