ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐತಿಹಾಸಿಕ ಸಿಹಿ ನೀರು ಬಾವಿಗೆ ‘ಮುಕ್ತಿ’

ಶತಮಾನದಿಂದ ಕಿತ್ತೂರಿನ ದಾಹ ಇಂಗಿಸಿದ ಹೆಗ್ಗಳಿಕೆ
Last Updated 20 ಮಾರ್ಚ್ 2018, 6:31 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಕಿತ್ತೂರು ಸಂಸ್ಥಾನ ಕಾಲದಲ್ಲಿ ಕೊರೆದಿದ್ದು ಎನ್ನಲಾದ ಇಲ್ಲಿನ ವಳಸಂಗ ಕತ್ತರಿ ಬಳಿಯ ಶತಮಾನದಷ್ಟು ಹಿಂದಿನ ತೆರೆದ ಬಾವಿ, ಈಗ ಇತಿಹಾಸದ ಗರ್ಭ ಸೇರಿದೆ. ಕಸದ ವಿಶಾಲ ಹೊಂಡವಾಗಿ ಪರಿವರ್ತನೆಗೊಂಡಿದ್ದ ಭಾವಿಯನ್ನು ಪಟ್ಟಣ ಪಂಚಾಯ್ತಿ ವತಿಯಿಂದ ಇತ್ತೀಚೆಗೆ ಮುಚ್ಚಿಸಲಾಯಿತು.

ಗುರುವಾರಪೇಟೆ ಮುಖ್ಯರಸ್ತೆಗೆ ಹೊಂದಿಕೊಂಡಿದ್ದ, ಕುಪ್ಪಸಗೌಡ್ರ ಮನೆ ಪಕ್ಕಕ್ಕಿದ್ದ ಈ ಬಾವಿಯ ನೀರು ಸಂಪೂರ್ಣ ಬತ್ತಿ ಹೋಗಿ ವರ್ಷಗಳೇ ಕಳೆದಿದ್ದವು. ಹೀಗಾಗಿ, ಬಾವಿಯು ತ್ಯಾಜ್ಯ ಎಸೆಯುವ ದೊಡ್ಡ ತೊಟ್ಟಿಯಾಗಿ ಮಾರ್ಪಾಡಾಗಿತ್ತು.

‘ಪಟ್ಟಣದ ಜನದಟ್ಟಣೆ ಈಗ ಹೆಚ್ಚಾಗಿದೆ. ಮುಖ್ಯ ರಸ್ತೆಗೆ ಹೊಂದಿಕೊಂಡಿದ್ದ ಈ ಬತ್ತಿದ ಬಾವಿ ಸಂಚಾರಕ್ಕೂ ಅಡಚಣೆ ಉಂಟು ಮಾಡುತ್ತಿತ್ತು. ಆದ್ದರಿಂದ ಪಟ್ಟಣ ಪಂಚಾಯ್ತಿಯು ನೀರಿಲ್ಲದ, ಈ ಬಾವಿಯನ್ನು ಮುಚ್ಚಿಸುವ ತೀರ್ಮಾನವನ್ನು ತೆಗೆದುಕೊಂಡಿತು’ ಎಂದು ಇಲ್ಲಿಯ ನಿವಾಸಿ ಮಹಾಂತೇಶ ನಾಗಲಾಪುರ ತಿಳಿಸಿದರು.

ಸಿಹಿ ನೀರಿನ ಬಾವಿ: ‘ಪಟ್ಟಣವು ನೀರಿನ ನಲ್ಲಿಗಳನ್ನು ಕಾಣುವುದಕ್ಕೆ ಮುಂಚೆ, ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯಲು ಯೋಗ್ಯವಾದ ಸಿಹಿನೀರನ್ನು ಈ ಬಾವಿ ಒದಗಿಸುತ್ತಿತ್ತು.

ತೆರೆದ ಬಾವಿಗೆ ರಾಟೆ ಕಟ್ಟಿ, ಹಗ್ಗದ ನೆರವಿನಿಂದ ಜನ ನೀರು ಎಳೆದುಕೊಂಡು ಹೋಗುತ್ತಿದ್ದರು. ಅನೇಕ ಕುಟುಂಬಗಳು ಮತ್ತು ಹೋಟೆಲ್‌ನವರು ಆಹಾರ ತಯಾರಿಸಲು ಇದೇ ನೀರನ್ನು ಬಳಸುತ್ತಿದ್ದರು’ ಎಂದು ಅವರು ನೆನೆದರು.

‘ಕಾಲ ಉರುಳಿದಂತೆ ಬೀದಿಗಳಲ್ಲಿ ಕೊಳವೆ ಬಾವಿ, ನೀರಿನ ಟ್ಯಾಂಕ್ ಹಾಗೂ ಅಲ್ಲಲ್ಲಿ ನಲ್ಲಿಗಳು ಕಾಣಿಸಿಕೊಂಡವು. ಇದರಿಂದಾಗಿ ರಸ್ತೆ ಬಾವಿ ನೀರಿನ ಬಳಕೆಯನ್ನು ಜನ ಕಡಿಮೆ ಮಾಡಿದರು. ಬಾವಿಯು ರಸ್ತೆಯಲ್ಲಿ ಇದ್ದಿದ್ದರಿಂದ, ಕೊಳಚೆ ನೀರು ಸುಲಭವಾಗಿ ಅದರೊಳಕ್ಕೆ ಹರಿಯತೊಡಗಿತು. ಇದರಿಂದ ಇಡೀ ಬಾವಿ ಮಲೀನಗೊಂಡಿತು’ ಎಂದು ಸ್ಥಳೀಯ ಬಸವರಾಜ ಕುಪ್ಪಸಗೌಡ್ರ ಹೇಳಿದರು.

‘ಕಾಲಕ್ರಮೇಣ ಪಟ್ಟಣದಲ್ಲಿ ಪಟ್ಟಣದಲ್ಲಿ ಕೊಳವೆ ಬಾವಿಗಳು ಹೆಚ್ಚಾದವು. ಇದರಿಂದ ಅಂತರ್ಜಲ ಮಟ್ಟ ಕುಸಿಯಿತು. ಇದರಿಂದಾಗಿ, ಪಾಳು ಬಿದ್ದಂತಿದ್ದ ಬಾವಿಯ ನೀರಿನ ಸೆಲೆಯೂ ಸತ್ತು ಹೋಯಿತು.

ಜನರು ಕಸವನ್ನು ತಂದು ಅದರೊಳಕ್ಕೆ ಎಸೆಯತೊಡಗಿದರು’ ಎಂದು ಅವರು ವಿವರಿಸಿದರು.‘ರಸ್ತೆ ಪಕ್ಕದ ತೆರೆದ ಬಾವಿ ಇದಾಗಿದ್ದರಿಂದ, ಪ್ರಾಣಿಗಳು ಇದರಲ್ಲಿ ಬಿದ್ದು ಒದ್ದಾಡಿದ ಅನೇಕ ಉದಾಹರಣೆಗಳುಂಟು. ಬತ್ತಿದ ಆಳವಾದ ಬಾವಿಯಿಂದ ಅವುಗಳನ್ನು ಮೇಲೆತ್ತಲು ಕಷ್ಟವಾಗುತ್ತಿತ್ತು. ನೀರು ಸಹ ಬತ್ತಿ ಹೋಗಿದ್ದರಿಂದ, ಬಾವಿಯನ್ನು ಜಿರ್ಣೋ ದ್ಧಾರ ಮಾಡಿಸಲು ಸಹ ಆಗುತ್ತಿರಲಿಲ್ಲ. ಹಾಗಾಗಿ, ಬಾವಿಯನ್ನು ಮುಚ್ಚಿರುವುದು ಸರಿಯಾದ ಕ್ರಮವಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.
**
ನಿತ್ಯ ಬಳಸಲು ಮತ್ತು ಕುಡಿಯಲು ಬಳಸುತ್ತಿದ್ದ ಬಾವಿಗಳು ಬತ್ತಿ ಹೋಗಿವೆ. ಅಂತರ್ಜಲ ಮಟ್ಟ ಎಷ್ಟು ಕುಸಿದಿದೆ ಎಂಬುದಕ್ಕೆ ಇದು ನಿದರ್ಶನವಾಗಿದೆ.
   – ಮಹಾಂತೇಶ ನಾಗಲಾಪುರ, ಗುರುವಾರಪೇಟೆ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT