ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೆ ಮೇಲೆ ಮತದಾನ ಜಾಗೃತಿ!

ಜಿಲ್ಲೆಯ ಭೌಗೋಳಿಕ ವಿಶೇಷ ಪ್ರದೇಶಗಳನ್ನು ‘ಪ್ರಜಾಪ್ರಭುತ್ವ’ದ ಪ್ರಚಾರಕ್ಕೆ ಬಳಸಲು ಚಿಂತನೆ
Last Updated 20 ಮಾರ್ಚ್ 2018, 6:40 IST
ಅಕ್ಷರ ಗಾತ್ರ

ಬಳ್ಳಾರಿ: ನಗರದ ಐತಿಹಾಸಿಕ ಕೋಟೆಯ ಬಂಡೆಗಳ ಮೇಲೆ ಮತದಾನದ ಕುರಿತ ಚಿತ್ತಾರ. ಮತದಾನದ ಕುರಿತು ಯುವ ಮತದಾರರಲ್ಲಿ ಜಾಗೃತಿ ಮೂಡಿಸಲು ಗಾಳಿಪಟ ಉತ್ಸವ, ತುಂಗಭದ್ರಾ ಜಲಾಶಯದಲ್ಲಿ ಪ್ರಜಾಪ್ರಭುತ್ವದ ಮಹತ್ವ ಸಾರುವ ದೀಪಾಲಂಕಾರ....

ಜಿಲ್ಲೆಯಲ್ಲಿ ಮತದಾರರ ಜಾಗೃತಿ ಸಮಿತಿಯು ಇಂಥ ಹೊಸ ಕಾರ್ಯಕ್ರಮಗಳನ್ನು ಸದ್ದಿಲ್ಲದೆ ರೂಪಿಸುತ್ತಿದೆ. ಜಿಲ್ಲೆಯ ಭೌಗೋಳಿಕ ವಿಶೇಷ ಪ್ರದೇಶಗಳನ್ನು ಜಾಗೃತಿ ಸಲುವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆದಿದ್ದು, ತಿಂಗಳ ಕೊನೆಯ ವಾರದಲ್ಲಿ ಕಾರ್ಯಕ್ರಮಗಳು ಅನುಷ್ಠಾನಗೊಳ್ಳಲಿವೆ.

ಕೋಟೆ ಬಂಡೆಗಳು: ನಗರದ ಒಳಗೆ ಮತ್ತು ಹೊರಗೆ ಎಲ್ಲಿಂದ ನೋಡಿದರೂ, ಕೋಟೆ ಪ್ರದೇಶದ ಬೆಟ್ಟದ ಬಂಡೆಗಳು ಗಮನ ಸೆಳೆಯುತ್ತವೆ. ಬೃಹತ್‌ ಬಂಡೆಗಳ ಮೇಲೆ ಪ್ರಜಾಪ್ರಭುತ್ವ, ನೈತಿಕ ಮತದಾನದ ಮಹತ್ವದ ಸಾಲುಗಳನ್ನು ಆಕರ್ಷಕವಾಗಿ ಬರೆಸಲು ಸಮಿತಿ ಚಿಂತನೆ ನಡದಿದೆ. ಅದಕ್ಕಾಗಿ ಭಾರತೀಯ ಪುರಾತತ್ವ ಇಲಾಖೆಗೆ ಅನುಮತಿ ಕೋರಿ ಪತ್ರ ಬರೆಯಲು ನಿರ್ಧರಿಸಿದೆ.

‘ನಗರದ ಪ್ರಮುಖ ಆಕರ್ಷಣೆಯ ಕೇಂದ್ರವಾದ ಕೋಟೆಯನ್ನು ನಗರದ ಹೊರವಲಯದಿಂದ ನಾಲ್ಕೂ ದಿಕ್ಕಿನಿಂದ ನೋಡಿದಾಗ
ಅಲ್ಲಿನ ಬಂಡೆಗಳು ಎದ್ದು ಕಾಣುತ್ತವೆ. ಖಾಲಿಯಾದ ಬಂಡೆಗಳ ಮೇಲೆ ಚುನಾವಣೆ ಮಹತ್ವ ಸಾರುವ ಸಾಲುಗಳು, ಚಿತ್ರಗಳನ್ನು ಬರೆಸಿದರೆ ಪರಿಣಾಮ ಹೆಚ್ಚಾಗುತ್ತದೆ’ ಎಂದು ಸಮಿತಿಯ ಅಧ್ಯಕ್ಷ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ‘ಪ್ರಜಾವಾಣಿ’ಗೆ ಸೋಮವಾರ ತಿಳಿಸಿದರು.

‘ಹೊಸಪೇಟೆ ರಸ್ತೆ, ಇನ್‌ಫ್ಯಾಂಟ್ರಿ ರಸ್ತೆ, ಸಿರುಗುಪ್ಪ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸುವ ಪ್ರಯಾಣಿಕರನ್ನೂ ಈ ಬಂಡೆಗಳು ಆಕರ್ಷಿಸುತ್ತವೆ. ಅವುಗಳನ್ನು ಈ ಸಂದರ್ಭದಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಎಂಬುದು ಸಮಿತಿಯ ಆಶಯ’ ಎಂದರು.

ಜಲಾಶಯ: ‘ಜಿಲ್ಲೆಯ ಹೆಚ್ಚು ಜನ ಪ್ರತಿ ಭಾನುವಾರ, ರಜಾದಿನ ಭೇಟಿ ನೀಡುವ ಆಕರ್ಷಕ ತಾಣ ತುಂಗಭದ್ರಾ ಜಲಾಶಯ. ಅಲ್ಲಿಯೂ ಪ್ರಜಾಪ್ರಭುತ್ವದ ಮಹತ್ವವನ್ನು ಸಾರುವ ಸಾಲುಗಳನ್ನು ದೀಪಾಲಂಕಾರದಲ್ಲಿ ಕಾಣಿಸುವ ಉದ್ದೇಶವಿದೆ’ ಎಂದು ಹೇಳಿದರು.

ಬಳ್ಳಾರಿಯ ಭೂಪಟ: ಶಾಲಾ ಮಕ್ಕಳನ್ನು ಸೇರಿಸಿ ಅವರಿಂದಲೇ ಬಳ್ಳಾರಿಯ ಭೂಪಟವನ್ನು ರಚಿಸುವ ಉದ್ದೇಶವೂ ಇದೆ. ಮಕ್ಕಳು ಒಬ್ಬರಿಗೊಬ್ಬರು ಭುಜ
ಕೊಟ್ಟು ನಿಂತು ಭೂಪಟವನ್ನು ರಚಿಸಲಿದ್ದಾರೆ. ಅಲ್ಲಿಯೂ ಮತದಾನದ ಮಹತ್ವ ಸಾರುವ ಸಾಲುಗಳನ್ನೂ ರಚಿಸಲಿದ್ದಾರೆ’ ಎಂದರು.

ಗಾಳಿಪಟ ಉತ್ಸವ: ಯುವ ಮತದಾರರನ್ನು ಸೆಳೆಯುವ ಸಲುವಾಗಿ ವಿಶೇಷ ಕಾರ್ಯಕ್ರಗಳನ್ನು ರೂಪಿಸಲಾಗುತ್ತಿದ್ದು, ಮೊದಲಿಗೆ ಗಾಳಿಪಟ ಉತ್ಸವವನ್ನು ಹಮ್ಮಿಕೊಳ್ಳಲಾಗುವುದು. ಉತ್ಸವದಲ್ಲಿ ಪ್ರಜಾಪ್ರಭುತ್ವ ಮತ್ತು ಮತದಾನದ ಮಹತ್ವ ಸಾರುವ ಗಾಳಿಪಟಗಳಿಗೆ ಬಹುಮಾನ ನೀಡಲಾಗುವುದು. ಉತ್ಸವ ನಡೆಸುವ ಸ್ಥಳಗಳನ್ನು ಇನ್ನೂ ನಿಗದಿ ಮಾಡಿಲ್ಲ’ ಎಂದರು.
**
ಪ್ರಜಾಪ್ರಭುತ್ವ ಎಂಬ ಬೆಳಕು....
‘ಪ್ರಜಾಪ್ರಭುತ್ವ ಎಂದರೆ ಜನರನ್ನು ಕತ್ತಲಿನಿಂದ ಹೊರಕ್ಕೆ ಕರೆ ತರುವ ಬೆಳಕು’ ಎಂಬ ಸಂದೇಶವನ್ನು ಸಾರುವ ಸಲುವಾಗಿಯೇ ಮುಂದಿನ ವಾರದಲ್ಲಿ ಪಂಜಿನ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗುವುದು. ರಾತ್ರಿ ವೇಳೆ ನಗರದಲ್ಲಿ ನಡೆಯಲಿರುವ ಈ ಮೆರವಣಿಗೆ ವಿಶೇಷ ಆಕರ್ಷಣೆ ಆಗಲಿದೆ’ ಎಂದು ಡಾ.ರಾಜೇಂದ್ರ ತಿಳಿಸಿದರು.
**
ಮಾ.22ರಂದು ನಡೆಯಲಿರುವ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯ ಬಳಿಕ ಜಾಗೃತಿ ಕಾರ್ಯಕ್ರಮಗಳು ಚುರುಕುಗೊಳ್ಳಲಿವೆ.
–ಡಾ.ಕೆ.ವಿ.ರಾಜೇಂದ್ರ, ಜಿ.ಪಂ. ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT