ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ವರ್ಷದಿಂದ ಟ್ಯಾಂಕರ್‌ ನೀರೇ ಗತಿ

ಬೀಡಿ ಕಾರ್ಮಿಕರ ಕಾಲೊನಿಯಲ್ಲಿ ನಿತ್ಯ ಸಂಕಷ್ಟ, ನೀರು ಬಂದಾಗಲೆಲ್ಲ ಜಗಳ!
Last Updated 20 ಮಾರ್ಚ್ 2018, 9:23 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸೋನಿಯಾ ಗಾಂಧಿ ನಗರದ ಹಳ್ಯಾಳ ರಸ್ತೆ ಸಮೀಪ ಇರುವ ಬೀಡಿ ಕಾರ್ಮಿಕರ ಕಾಲೊನಿಯ ಜನ ನೀರಿಗಾಗಿ ನಿತ್ಯ ಪರದಾಡುತ್ತಿದ್ದಾರೆ. ಜಲಮಂಡಳಿಯ ಟ್ಯಾಂಕರ್‌ ಬಂದರೆ ಮಾತ್ರ ಅಲ್ಲಿನ ಜನರಿಗೆ ನೀರು ಸಿಗುತ್ತದೆ. ಇಲ್ಲದಿದ್ದರೆ, ಇಲ್ಲ ಎನ್ನುವ ಸ್ಥಿತಿ ಇದೆ.

ಈ ಕಾಲೊನಿಯಲ್ಲಿ ಜನರು ವಾಸಿಸಲು ಆರಂಭಿಸಿ ಮೂರು ವರ್ಷಗಳು ಕಳೆದಿವೆ. ಚರಂಡಿ ಮತ್ತು ವಿದ್ಯುತ್‌ ಸೌಲಭ್ಯ ಹೊರತುಪಡಿಸಿದರೆ ಬೇರೆ ಯಾವ ಸೌಕರ್ಯಗಳೂ ಅಲ್ಲಿಲ್ಲ. ನಳಕ್ಕೆ ಪೈಪ್‌ಲೈನ್‌ ಸಂಪರ್ಕ ಕಲ್ಪಿಸಿಲ್ಲ. ಆದ್ದರಿಂದ, ಟ್ಯಾಂಕರ್‌ ನೀರಿಗಾಗಿ ಕಾಯುವುದೇ ಕೆಲಸವಾಗಿದೆ.

200 ಕುಟುಂಬಗಳು ಕಾಲೊನಿಯಲ್ಲಿ ವಾಸವಿದ್ದು, ಬಹುತೇಕರು ದಿನಗೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ನೀರಿಗಾಗಿ ಕೆಲಸ ಬಿಟ್ಟು ಕಾಯುವ ಪರಿಸ್ಥಿತಿ ಎದುರಾಗಿದೆ. ವಾರಕ್ಕೆ ಮೂರ್ನಾಲ್ಕು ಸಲ ಬರುವ ಟ್ಯಾಂಕರ್‌ ನೀರಿಗಾಗಿಯೇ ಕಾಯುತ್ತಿರುತ್ತಾರೆ.

ಕಾಲೊನಿಯಲ್ಲಿ ಮಣ್ಣಿನ ರಸ್ತೆಗಳಿರುವುದರಿಂದ ಅನೇಕ ಸಲ ಟ್ಯಾಂಕರ್‌ ಗಾಡಿಯ ಗಾಲಿಗಳು ಮಣ್ಣಿನಲ್ಲಿ ಹೂತು ಹೋಗಿದ್ದಿದೆ. ಮಳೆ ಬಂದರಂತೂ ಕಾಲೊನಿಯ ಒಳಗೆ ಟ್ಯಾಂಕರ್‌ ಬರುವುದೇ ಇಲ್ಲ. ಒಂದು ಕಿ.ಮೀ. ದೂರದ ರಸ್ತೆಗೆ ಹೋಗಿ ನೀರಿನ ಕೊಡ ಹೊತ್ತುಕೊಂಡು ಬರಬೇಕಾಗುತ್ತದೆ ಎಂದು ಕಾಲೊನಿಯ ನಿವಾಸಿಗಳು ಹೇಳುತ್ತಾರೆ.

‘ಕಾಲೊನಿಯಲ್ಲಿ ಎರಡು ಕೊಳವೆಬಾವಿಗಳಿದ್ದು, ಒಂದು ಕೆಟ್ಟು ಹೋಗಿದೆ. ಉಳಿದ ಇನ್ನೊಂದು ಕೊಳವೆಬಾವಿಯಿಂದ ನೀರು ತರುತ್ತೇವೆ. ಟ್ಯಾಂಕರ್‌ ನೀರು ಬಂದರಷ್ಟೇ ನಮಗೆ ಕುಡಿಯಲು ನೀರು ಸಿಗುತ್ತದೆ. ನೀರು ಬಂದಾಗಲೊಮ್ಮೆ ಕಾಲೊನಿಯ ನಿವಾಸಿಗಳ ನಡುವೆ ಜಗಳವಾಗುತ್ತದೆ’ ಎಂದು ಸ್ಥಳೀಯ ನಿವಾಸಿ ಉತುಜಾಬಿ ಹೇಳುತ್ತಾರೆ.

‘ಒಮ್ಮೆ ಟ್ಯಾಂಕರ್‌ ಬಂದರೆ ಪ್ರತಿ ಮನೆಗೆ 8ರಿಂದ 10 ಕೊಡಗಳಷ್ಟು ನೀರು ಮಾತ್ರ ಸಿಗುತ್ತದೆ. ಇದಕ್ಕಾಗಿ ಹರಸಾಹಸ ಮಾಡಬೇಕು. ಇಲ್ಲವಾದರೆ, ಬಿಡನಾಳ, ಬಂಕಾಪುರ ಚೌಕ್, ಗಾಂಧಿನಗರಕ್ಕೆ ಹೋಗಿ ನೀರು ತರಬೇಕಾಗುತ್ತದೆ’ ಎಂದು ಬಿ.ಬಿ. ಆಯಿಷಾ ಹೇಳಿದರು.

ಕೆಲಸಕ್ಕೆ ಹೋದರೆ ನೀರಿಲ್ಲ: ‘ಇಲ್ಲಿರುವ ಬಹುತೇಕರು ಕೂಲಿ ಕಾರ್ಮಿಕರು, ನಿತ್ಯ ಕೆಲಸಕ್ಕೆ ಹೋದರೆ ಮಾತ್ರ ಹೊಟ್ಟೆ ತುಂಬುತ್ತದೆ. ಕೆಲಸವನ್ನು ಬಿಟ್ಟು ನೀರಿಗೆ ಕಾಯಲು ಎಲ್ಲರಿಗೂ ಆಗುವುದಿಲ್ಲ. ಕಾಯದೇ ಹೋದರೆ ನೀರು ಸಿಗುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ಏನು ಮಾಡಬೇಕೆಂಬುದೇ ಗೊತ್ತಾಗುತ್ತಿಲ್ಲ. ಅನೇಕ ಸಲ ನೀರಿಗಾಗಿ ದಿನಗೂಲಿ ಕಳೆದುಕೊಂಡಿದ್ದೂ ಇದೆ’ ಎಂದು ಸ್ಥಳೀಯ ನಿವಾಸಿ ಶಾಹೀನಾ ಬೇಸರ ವ್ಯಕ್ತಪಡಿಸಿದರು.
**
‘ನೀರಿಗಾಗಿ ಕಾಲು ಉಳುಕಿತು’
‘ಕಾಲೊನಿಗೆ ನೀರು ಬಾರದೆ 15 ದಿನಗಳು ಕಳೆದಿದ್ದವು. ಭಾನುವಾರ ಒಂದು ಟ್ಯಾಂಕರ್‌ ಬಂದಿದ್ದರಿಂದ ನೂಕುನುಗ್ಗಲು ಉಂಟಾಯಿತು. ಎಲ್ಲರೂ ಕೊಡ ಹಿಡಿದುಕೊಂಡು ಟ್ಯಾಂಕರ್‌ ಹಿಂದೆ ಓಡಿದರು. ಓಡುವಾಗ ಕಾಲು ಉಳುಕಿದ್ದರಿಂದ ಈಗ ನಡೆಯಲು ಕೂಡ ಆಗುತ್ತಿಲ್ಲ’ ಎಂದು ಕುಂಟುತ್ತಲೇ ಕೊಡ ಹಿಡಿದುಕೊಂಡು ಬಂದಿದ್ದ ಆರೀಫಾ ನೋವು ತೋಡಿಕೊಂಡರು.

‘ಕಾಲು ಉಳಿಸಿಕೊಂಡಿದ್ದು ನಾನೇ ಮೊದಲೇನಲ್ಲ. ವಯಸ್ಸಾದ ಅನೇಕರು ಟ್ಯಾಂಕರ್‌ ಹಿಂದೆ ಓಡಿ ಮಣ್ಣಿನ ರಸ್ತೆ ಮೇಲೆ ಬಿದ್ದು ಕಾಲು ಉಳುಕಿಸಿಕೊಂಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT