ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರಿನಿಂದ ಕಂಗೊಳಿಸುವ ಶಾಲಾ ಆವರಣ

ವಿಠಲಾಪುರ ಸರ್ಕಾರಿ ಶಾಲೆ: ಜಿಲ್ಲೆಯ ಏಕೈಕ ಪರಿಸರ ಮಿತ್ರ ಶಾಲೆ ಎಂಬ ಹೆಗ್ಗಳಿಕೆ
Last Updated 20 ಮಾರ್ಚ್ 2018, 9:38 IST
ಅಕ್ಷರ ಗಾತ್ರ

ಮುಂಡರಗಿ: ತಾಲ್ಲೂಕಿನ ವಿಠಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯ ಏಕೈಕ ‘ಪರಿಸರ ಮಿತ್ರ ಶಾಲೆ’ ಪ್ರಶಸ್ತಿಯನ್ನು ಪಡೆದುಕೊಂಡು ಜನ ಮೆಚ್ಚುಗೆ ಗಳಿಸಿದೆ.

ಶಾಲೆಗೆ ಕಾಂಪೌಂಡ್ ಇಲ್ಲದಿದ್ದರೂ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಶಾಲಾ ಎಸ್‌ಡಿಎಂಸಿ ಅವರ ಕಾಳಜಿ ಹಾಗೂ ಸತತ ಪರಿಶ್ರಮದಿಂದ ಶಾಲಾ ಆವರಣ ಇಂದು ಹಸಿರಿನಿಂದ ಕಂಗೊಳಿಸುತ್ತಿದೆ. ಸುತ್ತಲೂ ಕಾಡು ಗಿಡಗಳನ್ನೇ ಕಾಂಪೌಂಡಿನಂತೆ ಬೆಳೆಯಲಾಗಿದ್ದು, ಶಾಲಾ ಆವರಣದಲ್ಲಿ ಇರುವ ಗಿಡ– ಮರಗಳಿಗೆ ರಕ್ಷಣೆ ನೀಡಲಾಗುತ್ತಿದೆ.

ಶಾಲಾ ಆವರಣದಲ್ಲಿ ಹತ್ತಾರು ಜಾತಿಯ ಗಿಡ– ಮರಗಳನ್ನು ಬೆಳೆಯಲಾಗಿದೆ. ಶಾಲಾ ಬಿಸಿಯೂಟಕ್ಕೆ ಬೇಕಾಗುವ ದೈನಂದಿನ ತರಕಾರಿ ಹಾಗೂ ವಿವಿಧ ಬಗೆಯ ಸೊಪ್ಪನ್ನು ಶಾಲಾ ಕೈತೋಟದಲ್ಲಿ ಬೆಳೆಯಲಾಗುತ್ತದೆ. ಶಾಲೆಯಲ್ಲಿ ಒಂದು ಕೊಳವೆ ಬಾವಿ ಇದ್ದು, ನಿತ್ಯ ಗಿಡಗಳಿಗೆ ನೀರು ಹರಿಸಲಾಗುತ್ತಿದೆ. ನೀರು ವ್ಯರ್ಥವಾಗಬಾರದು ಎನ್ನುವ ಕಾರಣದಿಂದ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಲಾಗಿದೆ.

ಕೈದೋಟದ ಒಂದು ಭಾಗದಲ್ಲಿ ಅಪರೂಪದ ಔಷಧ ಸಸ್ಯಗಳನ್ನು ಬೆಳೆಯಲಾಗಿದ್ದು, ಮಕ್ಕಳಿಗೆ ಅವುಗಳ ಪರಿಚಯ ಮಾಡಿಕೊಡಲಾಗುತ್ತದೆ. ಎಲ್ಲ ಗಿಡ ಮತ್ತು ಸಸಿಗಳಿಗೆ ಸಾವಯವ ಗೊಬ್ಬರವನ್ನು ನೀಡಲಾಗುತ್ತಿದೆ. ಆವರಣದಲ್ಲಿರುವ ದೊಡ್ಡ ಗಿಡಗಳಲ್ಲಿ ವಿವಿಧ ಜಾತಿಯ ಪಕ್ಷಿಗಳು ಆಶ್ರಯ ಪಡೆದಿವೆ. ಪಕ್ಷಿಗಳಿಗೆ ನೀರುಣಿಸಲು ಗಿಡ ಮರಗಳಿಗೆ ನೀರು ತೊಟ್ಟಿಗಳನ್ನು ತೂಗು ಹಾಕಲಾಗಿದ್ದು, ಶಾಲಾ ಮಕ್ಕಳು ಸರದಿಯಂತೆ ಅವುಗಳಿಗೆ ನೀರು ಹಾಕುತ್ತಿದ್ದಾರೆ.

ಈ ಎಲ್ಲ ಕಾರಣಗಳಿಂದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ವಿಠಲಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ 2017–18ನೇ ಸಾಲಿನ ಜಿಲ್ಲಾ ಪರಿಸರ ಮಿತ್ರ ಶಾಲೆ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇತ್ತೀಚೆಗೆ ಗದುಗಿನಲ್ಲಿ ಜರುಗಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಮನೋಜ ಜೈನ್ ಹಾಗೂ ಮತ್ತಿತರ ಹಿರಿಯ ಅಧಿಕಾರಿಗಳು ಶಾಲಾ ಸಿಬ್ಬಂದಿ ಹಾಗೂ ಎಸ್‌ಡಿಎಂಸಿ ಅವರಿಗೆ ₹30 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.

‘ಶಿಕ್ಷಕರಾದ ಬಿ.ಆರ್.ಉಜ್ಜಮ್ಮನವರ, ಪೂರ್ಣಿಮಾ ಶೇಬಗೊಂಡ, ಜ್ಯೋತಿ ದಡೂತಿ, ಬಸವರಾಜ ನೀಲಗಾರ, ಎಸ್‌ಡಿಎಂಸಿ ಅಧ್ಯಕ್ಷ ಪರಶುರಾಮ ಜೋಗೇರ ಹಾಗೂ ಸರ್ವ ಸದಸ್ಯರು, ಗ್ರಾಮಸ್ಥರು ಹಾಗೂ ಮಕ್ಕಳ ನಿರಂತರ ಪರಿಶ್ರಮ, ಬಿಇಒ ಶಂಕರ ಹಳ್ಳಿಗುಡಿ ಹಾಗೂ ಸಮನ್ವಯಾಧಿಕಾರಿ ಶಂಕರ ಹಡಗಲಿ ಅವರ ಮಾರ್ಗದರ್ಶನಗಳಿಂದ ಶಾಲೆಯು ಜಿಲ್ಲೆಯ ಏಕೈಕ ಪರಿಸರ ಮಿತ್ರ ಶಾಲೆ ಎಂಬ ಹೆಗ್ಗಳಿಕೆಯನ್ನು ಪಡೆಯುವಂತಾಯಿತು’ ಎನ್ನುತ್ತಾರೆ ಶಾಲಾ ಪ್ರಭಾರ ಮುಖ್ಯ ಶಿಕ್ಷಕ ಬಿ.ಆರ್. ಉಜ್ಜಮ್ಮನವರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT