ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೆಡಿಯು’ನಿಂದ ಭ್ರಷ್ಟಾಚಾರರಹಿತ ರಾಜಕಾರಣ

ಆಳಂದದಲ್ಲಿ ಜೆಡಿಯು ಕಾರ್ಯಕರ್ತರ ಸಮಾವೇಶದಲ್ಲಿ ಮಹಿಮ ಪಟೇಲ್ ಹೇಳಿಕೆ
Last Updated 20 ಮಾರ್ಚ್ 2018, 10:06 IST
ಅಕ್ಷರ ಗಾತ್ರ

ಆಳಂದ: ‘ಇಂದಿನ ರಾಜಕಾರಣಿಗಳ ಬಗೆಗೆ ಜನಸಾಮಾನ್ಯರಲ್ಲಿ ಕೆಟ್ಟ ಅಭಿಪ್ರಾಯ ಬೆಳೆದಿದೆ. ಇದನ್ನು ಹೋಗಲಾಡಿಸಲು ಜೆಡಿಯು ರಾಜ್ಯದಲ್ಲಿ ಸ್ವಚ್ಛ, ಪಾರದರ್ಶಕ ವ್ಯಕ್ತಿತ್ವದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಮೂಲಕ ಭ್ರಷ್ಟಾಚಾರರಹಿತ ಚುನಾವಣಾ ರಾಜಕಾರಣ ಮಾಡಲಿದೆ’ ಎಂದು ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮ ಪಟೇಲ ನುಡಿದರು.

ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ ಸೋಮವಾರ ಜನತಾ ದಳ ಸಂಯುಕ್ತ(ಜೆಡಿಯು) ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಚುನಾವಣೆ ಸ್ಪರ್ಧಿಸುವ ಅಭ್ಯರ್ಥಿಗಳು ಮತ ಪಡೆಯಲು ಹಣ, ಹೆಂಡ ಹಂಚುವ ಮೂಲಕ ಭ್ರಷ್ಟಾಚಾರ ಆರಂಭಿಸುತ್ತಾರೆ. ಕ್ಷೇತ್ರದ ಅಭಿವೃದ್ಧಿಯಲ್ಲಿ ಇದೇ ಭ್ರಷ್ಟಾಚಾರಕ್ಕೆ ಕಾರಣವಾಗುತ್ತಿದೆ. ಅದಕ್ಕೆ ಜೆಡಿಯುನ ಅಭ್ಯರ್ಥಿಗಳು ಚುನಾವಣೆಯಲ್ಲಿ ₹28 ಲಕ್ಷ ಮಿತಿಯಲ್ಲಿ ಖರ್ಚು ಮಾಡುವ ಮೂಲಕ ಪರಿವರ್ತನೆ ತರಲಾಗುತ್ತಿದೆ’ ಎಂದರು.

‘ಆಳಂದ ಮತಕ್ಷೇತ್ರದಿಂದ ಅರುಣುಕುಮಾರ ಸಿ.ಪಾಟೀಲ ಸಮರ್ಥ ಅಭ್ಯರ್ಥಿಯಾಗಿದ್ದಾರೆ. ಆಳಂದ ಅಭಿವೃದ್ಧಿ ಬಗೆಗೆ ಹೊಸ ಆಲೋಚನೆಗಳಿವೆ. 50 ಸಾವಿರ ಯುವಕರಿಗೆ ಉದ್ಯೋಗ, ಮಹಿಳೆಯರಿಗೆ ಸ್ವಯಂ ಉದ್ಯೋಗದ ಮೂಲಕ ಜನರ ಸೇವೆ ಮಾಡಲು ಈ ಬಾರಿ ಅವರನ್ನು ಬೆಂಬಲಿಸಿ’ ಎಂದು ಪಟೇಲ ಮನವಿ ಮಾಡಿದರು.

ಅಭ್ಯರ್ಥಿ ಅರುಣಕುಮಾರ ಸಿ.ಪಾಟೀಲ ಮಾತನಾಡಿ, ‘ಹಾಲಿ–ಮಾಜಿ ಶಾಸಕರು ಕ್ಷೇತ್ರದಲ್ಲಿ ಭಯದ ವಾತಾವರಣ ನಿರ್ಮಿಸಿದ್ದಾರೆ. ಶಾಸಕ ಬಿ.ಆರ್.ಪಾಟೀಲ ಅವರು ಜಯಂತಿ, ಮೂರ್ತಿ ಸ್ಥಾಪನೆ ಮೂಲಕ ಸಮಾಜ ಒಡೆಯುತ್ತಿದ್ದರೆ, ಮಾಜಿ ಶಾಸಕ ಗುತ್ತೇದಾರ ಹಳ್ಳಿ ಹಳ್ಳಿಗೆ ಅಕ್ರಮ ಸಾರಾಯಿ ಮಾರಾಟದ ಮೂಲಕ ತಾಲ್ಲೂಕು ಹಾಳು ಮಾಡಿದ್ದಾರೆ’ ಎಂದು ಆರೋಪಿಸಿದರು.

ಜೆಡಿಯುನ ರಾಷ್ಟ್ರೀಯ ಕಾರ್ಯದರ್ಶಿ ಅಖಿಲೇಶ ಕಟಲಿಯಾ, ಯುವ ಘಟಕದ ಅಧ್ಯಕ್ಷ ಕೆ.ವಿ.ಶಿವರಾಮ, ತಾಲ್ಲೂಕು ಅಧ್ಯಕ್ಷ ಕಲ್ಯಾಣರಾವ ಪಾಟೀಲ, ಮುಖಂಡರಾದ ಶರಣಗೌಡ ಪಾಟೀಲ, ಡಾ.ಬಿ.ಸಿ.ಪಾಟೀಲ, ಬಾಳಾಸಾಹೇಬ ದೇಶಮುಖ ಮಾತನಾಡಿ, ‘ಆಳಂದ ಕ್ಷೇತ್ರದ ಮತದಾರರು ಪರಿವರ್ತನೆ ಬಯಸಿದ್ದಾರೆ. ಹಾಲಿ–ಮಾಜಿ ಶಾಸಕರಿಬ್ಬರಿಂದ ಕಳೆದ 30 ವರ್ಷದಲ್ಲಿ ಆಳಂದ ಗೂಂಡಾ ರಾಜ್ಯವಾಗಿದೆ. ಈ ಬಾರಿ ಜೆಡಿಯುನ ಅರುಣಕುಮಾರ ಅವರನ್ನು ಆಯ್ಕೆ ಮಾಡುವ ಮೂಲಕ ಸರ್ವತೋಮುಖ ಪ್ರಗತಿ ಹೊಂದಲು ಸಾಧ್ಯ’ ಎಂದರು.

ಮುಖಂಡರಾದ ಮಲ್ಲಿನಾಥ ನಿಂಬಾಳ, ಸೂರ್ಯಕಾಂತ ಹತ್ತರಕಿ, ಚಂದ್ರಶೇಖರ ಸಿ.ಪಾಟೀಲ, ಗಂಗಾಧರ ಕುಂಬಾರ, ಸಂತೋಷ ದುಪದ, ಖಲೀಲ ಜರ್ಧಿ, ಸುಭಾಷ ಪಾಟೀಲ, ಸೂರ್ಯಕಾಂತ ಸರಸಂಬಿ, ಮಹ್ಮದಸಾಬ ಜಮದಾರ, ದಯಾನಂದ ಡಗೆ, ಸಿದ್ದಣ್ಣಾ ಝಳಕಿ, ಇಸ್ಮಾಯಿಲ್ ಪಟೇಲ, ಪಾರ್ವತಿ ಪಾಟೀಲ ಇದ್ದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್, ಬಿಜೆಪಿ ತೊರೆದು ಅನೇಕ ಕಾರ್ಯಕರ್ತರು ಮಹಿಮ ಪಟೇಲ ಸಮ್ಮುಖದಲ್ಲಿ ಜೆಡಿಯು ಸೇರ್ಪಡೆಯಾದರು. ಈ ಮೊದಲು ಪ್ರವಾಸಿ ಮಂದಿರದಿಂದ ಹಜರತ್ ಲಾಡ್ಲೆ ಮಶಾಕ ದರ್ಗಾಕ್ಕೆ ಭೇಟಿ ನೀಡಿ ದರ್ಶನ ಪಡೆದರು. ನಂತರ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಜೆಡಿಯು ಕಾರ್ಯಕರ್ತರು ಬೈಕ್ ರ್‍ಯಾಲಿ ನಡೆಸಿ ಗಮನ ಸೆಳೆದರು. ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಅಧಿಕ ಸಂಖ್ಯೆಯಲ್ಲಿ ಜೆಡಿಯು ಕಾರ್ಯಕರ್ತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT