ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೈವತ್ವಕ್ಕೆ ಕೊಂಡೊಯ್ಯುವ ಮಾರ್ಗ ಧರ್ಮ’

Last Updated 20 ಮಾರ್ಚ್ 2018, 10:15 IST
ಅಕ್ಷರ ಗಾತ್ರ

ಸಿದ್ದಾಪುರ : ‘ಧರ್ಮ ಎಂದರೆ ಮನುಷ್ಯರು ಪಶುತ್ವದಿಂದ, ಮಾನವತ್ವದ ಮೂಲಕ ದೈವತ್ವಕ್ಕೆ ಸಾಗುವ ಮಾರ್ಗ’ ಎಂದು ರಾಣೆಬೆನ್ನೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಪ್ರಕಾಶಾನಂದಜಿ ಮಹಾರಾಜ್ ವ್ಯಾಖ್ಯಾನಿಸಿದರು.

ಪಟ್ಟಣದಲ್ಲಿ ಭಾನುವಾರ ಏರ್ಪಡಿಸಿದ್ದ ಯುಗಾದಿ ಉತ್ಸವದಲ್ಲಿ ಅವರು ಮಾತನಾಡಿದರು.

‘ಜಗತ್ತಿಗೆ ಧರ್ಮವನ್ನು ಕೊಟ್ಟಿದ್ದು ಭಾರತ. ಭಾರತದ ಅಸ್ಮಿತೆಯ ಪುನರ್ ಜಾಗೃತಿ ಸ್ವಾಮಿ ವಿವೇಕಾನಂದರಿಂದ ಉಂಟಾಯಿತು’ ಎಂದರು.

‘ನಮ್ಮ ಜನರಿಗೆ ಧರ್ಮದ ಬಗ್ಗೆ ಸರಿಯಾಗಿ ಹೇಳಬೇಕಾಗಿದೆ. ಇಂದು ಧರ್ಮವನ್ನು ಬೇಕಾಬಿಟ್ಟಿಯಾಗಿ ಅರ್ಥ ಮಾಡಿಕೊಳ್ಳುವವರು ಹೆಚ್ಚಾಗಿದ್ದಾರೆ. ಧರ್ಮ ಎಂದರೆ ವಿಜ್ಞಾನ. ಅದನ್ನು ನಾವು ಜನರಿಗೆ ತಿಳಿಸಬೇಕಾಗಿದೆ’ ಎಂದರು.

ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ‘ಹಲವಾರು ಮಠ, ಮಂದಿರಗಳು, ಸಂಘಟನೆಗಳು ಯುಗಾದಿ ಉತ್ಸವದ ಕುರಿತು ಜನರಿಗೆ ಅರಿವು ಮೂಡಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿವೆ. ಇದರಿಂದ ನಮ್ಮ ನಡುವೆ ನಮ್ಮತನ ಜಾಗೃತವಾಗಿದೆ. ಇದು ಇನ್ನಷ್ಟು ಆಗಬೇಕು’ ಎಂದರು.

ಆನಂದಪುರದ ಬೆಕ್ಕಿನ ಕಲ್ಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯ ನಾಗರಾಜ ನಾಯ್ಕ, ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸುಮನಾ ಕಾಮತ್ ಇದ್ದರು.

ಯುಗಾದಿ ಉತ್ಸವ ಸಮಿತಿ ಗೌರವಾಧ್ಯಕ್ಷ ಆನಂದ ನಾಯ್ಕ ದಂಪತಿ ಹಾಗೂ ಪ್ರಧಾನ ಕಾರ್ಯದರ್ಶಿ ವಿಜಯ ಎನ್.ಹೆಗಡೆ ದಂಪತಿ ಸ್ವಾಮೀಜಿಗಳಿಗೆ ಗೌರವ ಸಲ್ಲಿಸಿದರು. ವಿಶ್ವಕರ್ಮ ಯುವ ಮಿಲನ ಸಂಘಟನೆ ರೂಪಿಸಿರುವ ಮೊಬೈಲ್ ಆ್ಯಪ್‌ ಅನ್ನು ಬಿಡುಗಡೆಗೊಳಿಸಲಾಯಿತು.

ಸುಧೀರ ಬೆಂಗ್ರೆ ವಂದೆ ಮಾತರಂ ಗೀತೆ ಹಾಡಿದರು. ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ಡಾ.ಕೆ.ಶ್ರೀಧರ ವೈದ್ಯ ಸ್ವಾಗತಿಸಿದರು. ಗುರುರಾಜ ಶಾನಭಾಗ ವಂದಿಸಿದರು. ಎಂ.ಜಿ.ಭಟ್ಟ ನಿರೂಪಿಸಿದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಹೊಸಪೇಟೆ ಹನುಮಂತ ದೇವಾಲಯದಿಂದ ಆರಂಭಗೊಂಡ ಅದ್ಧೂರಿ ಶೋಭಾಯಾತ್ರೆ ಪಟ್ಟಣದ ವಿವಿಧ ಬೀದಿಗಳಲ್ಲಿ ಸಂಚರಿಸಿತು. ಚಂಡೆ ವಾದಕರ ತಂಡ, ಬೇಡರ ವೇಷ ಮೊದಲಾದ ಕಲಾ ತಂಡಗಳು ಶೋಭಾಯಾತ್ರೆ ಮೆರುಗನ್ನು ಹೆಚ್ಚಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT