ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿವಿಜಿ ಆಧುನಿಕ ವಿಜ್ಞಾನ ಯುಗದ ಸರ್ವಜ್ಞ

ಡಿವಿಜಿ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಜಯರಾಮರೆಡ್ಡಿ ಬಣ್ಣನೆ
Last Updated 20 ಮಾರ್ಚ್ 2018, 10:38 IST
ಅಕ್ಷರ ಗಾತ್ರ

ಕೋಲಾರ: ‘ಕವಿ ಡಿ.ವಿ.ಗುಂಡಪ್ಪನವರು (ಡಿವಿಜಿ) ಆಧುನಿಕ ವಿಜ್ಞಾನ ಯುಗದ ಸರ್ವಜ್ಞ’ ಎಂದು ನಗರದ ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಜಯರಾಮರೆಡ್ಡಿ ಬಣ್ಣಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಿವಿಜಿ ಜನ್ಮ ದಿನಾಚರಣೆ ಹಾಗೂ ದತ್ತಿ ಉಪನ್ಯಾಸ ಉದ್ಘಾಟಿಸಿ ಮಾತನಾಡಿ, ‘12ನೇ ಶತಮಾನದಲ್ಲಿ ಕವಿ ಸರ್ವಜ್ಞ ವಚನ ಕ್ರಾಂತಿ ಮಾಡಿದಂತೆ 20ನೇ ಶತಮಾನದಲ್ಲಿ ಡಿವಿಜಿ ಸರ್ವಜ್ಞರಾಗಿದ್ದರು’ ಎಂದು ಪ್ರತಿಪಾದಿಸಿದರು.

‘ಡಿವಿಜಿಯವರ ಮಂಕು ತಿಮ್ಮನ ಕಗ್ಗವು ಸಾಹಿತ್ಯ ಕ್ಷೇತ್ರದ ಅರಳಿ ಮರ ಮತ್ತು ಕನ್ನಡದ ಭಗವದ್ಗೀತೆ ಎಂದೇ ಪ್ರಚಲಿತವಾಗಿದೆ. ಆಧುನಿಕ ಜೀವನಕ್ಕೆ ಅಗತ್ಯವಾದ ಸಾರಾಂಶವನ್ನು ಕಗ್ಗವು ಒಳಗೊಂಡಿದೆ. ವಿದ್ಯಾರ್ಥಿಗಳು ಡಿವಿಜಿಯಂತಹ ಮೇರು ಕವಿಗಳ ಇತಿಹಾಸ ತಿಳಿದು ಅವರ ತತ್ವಾದರ್ಶ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಮಾದರಿ ಆಗಬೇಕು’ ಎಂದು ಕಿವಿಮಾತು ಹೇಳಿದರು.

‘ಡಿವಿಜಿ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ದೇವನಹಳ್ಳಿಯಲ್ಲಿ ಜನಿಸಿದರು. ಅವರು ಈ ಜಿಲ್ಲೆಯವರು ಎಂಬುದು ಹೆಮ್ಮೆಯ ಸಂಗತಿ. ಶಿಸ್ತಿಗೆ ಹೆಸರಾದ ಅವರು ಸಾತ್ವಿಕ ವ್ಯಕ್ತಿತ್ವದವರು. ಅವರ ಬದುಕಿನಲ್ಲಿ ಎಂದಿಗೂ ಹಣಕ್ಕೆ ಮಹತ್ವ ನೀಡದೆ ಧನಾತ್ಮಕ ಚಿಂತನೆ ಅಳವಡಿಸಿಕೊಂಡು ಸಮಾಜ ಸುಧಾರಣೆಗೆ ಜೀವನ ಮುಡುಪಾಗಿಟ್ಟರು’ ಎಂದು ಸ್ಮರಿಸಿದರು.

‘ಡಿವಿಜಿ ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣರಾದರೂ ಅವರ ಪ್ರತಿಭಾ ಸಂಪತ್ತು ಶ್ರೀಮಂತವಾಗಿತ್ತು. ಅವರ ಸಾಹಿತ್ಯದಲ್ಲಿ ತತ್ವ, ಸಿದ್ಧಾಂತ, ಪರಂಪರೆ, ಆಧುನಿಕತೆ ಮತ್ತು ವಿಜ್ಞಾನವನ್ನು ಒಳಗೊಂಡ ಸಮನ್ವಯತೆ ಕಾಣಬಹುದು. ಉತ್ತಮ ಶಿಕ್ಷಣ ಪಡೆಯದಿದ್ದರೂ ಅವರ ಪ್ರತಿಭೆ ಶ್ರೀಮಂತಿಕೆಯಿಂದ ಕೊಡಿತ್ತು. ಯಾರು ಬೇಕಾದರೂ ಪಾಂಡಿತ್ಯ ಗಳಿಸಬಹುದು. ಆದರೆ, ಪ್ರತಿಭೆ ಪಡೆ ಯಲು ಸಾಧ್ಯವಾಗದು’ ಎಂದು ಅಭಿಪ್ರಾಯಪಟ್ಟರು.

ಶಾಸನಗಳಿವೆ: ಕೋಲಾರ ನಗರದ ಶಾಸನಗಳ ಮಹತ್ವದ ಕುರಿತು ಉಪನ್ಯಾಸ ನೀಡಿದ ಸಾಹಿತಿ ವಿ.ಎಸ್.ಎಸ್.ಶಾಸ್ತ್ರಿ, ‘ಕೋಲಾರದ ಕೋಲಾರಮ್ಮ ದೇವಾಲಯದ ಮಂಟಪದಲ್ಲಿ ಕಮಲದ ಹೂವಿನ ಸುತ್ತ ಹಲವು ಶಾಸನಗಳಿವೆ. ಸ್ವಸ್ತಿ ತಿರುವಯ್ಯನ ಮಗಳು ಜಕ್ಕೆಯಬ್ಬೆ ಚೋಳ ರಾಜನ ಹೆಸರಿನಲ್ಲಿ ಮಂಟಪ ಕಟ್ಟಿಸಿದಳು. ಜಕ್ಕಯಬ್ಬೆ ಕನಕ ಪರ್ವತದ ಹತ್ತಿರದ ಊರಿನವಳು ಎಂಬ ಮಾಹಿತಿ ಇದೆ. ಕನಕ ಪರ್ವತದ ಉಲ್ಲೇಖವು ಚಿನ್ನದ ನಾಡು ಕೆಜಿಎಫ್‌ ಆಗಿರಬಹುದು’ ಎಂದು ತಿಳಿಸಿದರು.

‘ಬಹಳ ಹಿಂದೆಯೇ ಕೋಲಾರವು ಜನವಸತಿ ಪ್ರದೇಶವಾಗಿ ಪ್ರವರ್ಧಮಾನದಲ್ಲಿತ್ತು ಎಂಬುದನ್ನು ಶಾಸನಗಳಿಂದ ತಿಳಿಯಬಹುದು. ಕೋಲಾರಮ್ಮ ದೇವಾಲಯದಲ್ಲಿನ ತಮಿಳು ಶಾಸನದಲ್ಲಿ ಪಿಡಾರಿಯಾರ್ ದೇವಾಲಯ ಎಂದು ಉಲ್ಲೇಖಿಸಲಾಗಿದೆ. ಶಾಸನಗಳಲ್ಲಿ ಬಲಿಪೀಠದ ಚಿತ್ರಣವಿದೆ. ಕುರಿ, ಮೇಕೆ ಇತರ ಪ್ರಾಣಿಗಳ ಬಲಿಗೆ ಎಷ್ಟು ಶುಲ್ಕ ಪಡೆಯಲಾಗುತ್ತಿತ್ತು ಎಂಬ ಮಾಹಿತಿಯೂ ಇದೆ’ ಎಂದು ವಿವರಿಸಿದರು.

‘ಕೋಲಾರಮ್ಮ ದೇವಾಲಯದಲ್ಲಿ ಪಂಚತಂತ್ರದಲ್ಲಿ ಬರುವ ಹಂಸ ಮತ್ತು ಆಮೆಯನ್ನು ಕಲ್ಲಿನಲ್ಲಿ ಕೆತ್ತಲಾಗಿದೆ. ಪಂಚತಂತ್ರ ಯಾವ ಪುರಾಣದಲ್ಲೂ ಬರುವುದಿಲ್ಲ. ಇದು ಜನಪದ ಕಥೆ. ಇಂತಹ ಕಥೆಯನ್ನು ಕಲ್ಲಿನಲ್ಲಿ ಕೆತ್ತಿರುವುದು ದೇಶದಲ್ಲೇ ಏಕೈಕ ದೇವಾಲಯದಲ್ಲಿ ಮಾತ್ರ. ಚರಿತ್ರೆ ತಿಳಿಯಬೇಕಾದರೆ ಶಾಸನಗಳನ್ನು ಓದಬೇಕು’ ಎಂದು ಸಲಹೆ ನೀಡಿದರು.

ಜಗದ ಕವಿ: ‘ಡಿವಿಜಿ ಅವರು ಜಗದ ಕವಿ ಮತ್ತು ಯುಗದ ಕವಿ. ಮಂಕು ತಿಮ್ಮನ ಕಗ್ಗವು ಕನ್ನಡ ಸಾರಸ್ವತ ಲೋಕದಲ್ಲಿ ಸಾರ್ವಕಾಲಿಕವಾದ ಮೇರು ಕೃತಿ. ಭಗವದ್ಗೀತೆ, ಬೈಬಲ್‌ ಹಾಗೂ ಕುರಾನ್‌ನಂತಿರುವ ಆ ಕೃತಿಯು ಬದುಕಿಗೆ ದಾರಿದೀಪ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್ ಅಭಿಪ್ರಾಯಪಟ್ಟರು.

‘ಹೋರಾಟದಿಂದ ಕಂಡ ಬದುಕು ಹಾಗೂ ಪೂರ್ಣದರ್ಶನ ಭಾಗ್ಯದಿಂದ ಪಡೆದ ಜ್ಞಾನ ಎಂದಿಗೂ ವ್ಯರ್ಥವಾಗದು. ಬಾದಾಮಿ ಶಾಸನದಲ್ಲಿ ಕನ್ನಡಿಗರ ಸ್ವಾಭಿಮಾನ, ಬದುಕಿನ ಮಾರ್ಗ ಯಾವ ಸ್ತರದ್ದು ಎಂದು ಜಗತ್ತಿಗೆ ಸಾರಿ ಹೇಳಲಾಗಿದೆ. ರಾಜ ಮಹಾರಾಜರು. ಪಾಳೆಗಾರರು ಆಳಿರುವ ಈ ನಾಡಿನ ಇತಿಹಾಸವನ್ನು ಶಾಸನಗಳ ಅಧ್ಯಯನದ ಮೂಲಕ ತಿಳಿಯಬಹುದು’ ಎಂದರು.

ಮಂಕು ತಿಮ್ಮನ ಕಗ್ಗದಲ್ಲಿನ ಬದುಕಿನ ಚಿತ್ರಣ ಕುರಿತು ಎನ್.ಆರ್.ಪುರುಷೋತ್ತಮ್ ಉಪನ್ಯಾಸ ನೀಡಿದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರೊ.ಎಂ.ಮುನಿರತ್ನಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT