ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಠಾಣೆ ಎದುರು ಮೊದಲ ಪತ್ನಿಯ ಧರಣಿ

ಠಾಣೆ ಎದುರು ಮೊದಲ ಪತ್ನಿಯ ಧರಣಿ
Last Updated 20 ಮಾರ್ಚ್ 2018, 10:42 IST
ಅಕ್ಷರ ಗಾತ್ರ

ಕೋಲಾರ: ‘ಪತಿಯು ಎರಡನೇ ಮದುವೆಯಾಗಿ ವಂಚಿಸಿರುವ ಸಂಬಂಧ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿ ತಾಲ್ಲೂಕಿನ ವಕ್ಕಲೇರಿ ಗ್ರಾಮದ ಅಂಬಿಕಾ ಎಂಬುವರು ತಮ್ಮ ಇಬ್ಬರು ಮಕ್ಕಳೊಂದಿಗೆ ಇಲ್ಲಿನ ಗ್ರಾಮಾಂತರ ಠಾಣೆ ಎದುರು ಸೋಮವಾರ ಧರಣಿ ನಡೆಸಿದರು.

‘ಮಾವ ವೆಂಕಟೇಶಪ್ಪ ಅವರು ಪತಿ ಮನೋಹರ್‌ಗೆ ಏಳು ವರ್ಷಗಳ ಹಿಂದೆ ಎರಡನೇ ಮದುವೆ ಮಾಡಿಸಿದ್ದಾರೆ. ಈ ಸಂಗತಿ ಇತ್ತೀಚೆಗೆ ನನಗೆ ಗೊತ್ತಾಯಿತು. ಹೀಗಾಗಿ ಮಾವನು ಪತಿಯನ್ನು ರಾತ್ರೋರಾತ್ರಿ ಆಂಧ್ರಪ್ರದೇಶಕ್ಕೆ ಕಳುಹಿಸಿದ್ದಾರೆ’ ಎಂದು ಅಂಬಿಕಾ ದೂರಿದರು.

‘ಮನೋಹರ್‌ ಅವರನ್ನು ಪ್ರೀತಿಸಿ 10 ವರ್ಷಗಳ ಹಿಂದೆ ಮದುವೆಯಾಗಿದ್ದೆ. ನಮ್ಮದು ಅಂತರ್ಜಾತಿ ವಿವಾಹವಾದ ಕಾರಣ ಪತಿ ಹಾಗೂ ನನ್ನ ಪೋಷಕರ ವಿರೋಧವಿತ್ತು. ಹೀಗಾಗಿ ನಾವು ಎರಡೂ ಕುಟುಂಬಗಳಿಂದ ದೂರವಾಗಿ ಬದುಕು ಸಾಗಿಸುತ್ತಿದ್ದೆವು. ಪತಿಯು ತನ್ನ ತಂದೆಯ ಒತ್ತಡಕ್ಕೆ ಮಣಿದು ರಹಸ್ಯವಾಗಿ ಎರಡನೇ ಮದುವೆಯಾಗಿ ಮೋಸ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಪತಿ ಮತ್ತು ಮಾವನ ವಂಚನೆ ಸಂಬಂಧ ಪೊಲೀಸರಿಗೆ ವಾರದ ಹಿಂದೆ ದೂರು ಕೊಟ್ಟಿದ್ದೇನೆ. ಪತಿಯನ್ನು ಪತ್ತೆ ಹಚ್ಚುವಂತೆ ಸಾಕಷ್ಟು ಬಾರಿ ಮನವಿ ಮಾಡಿದ್ದೇನೆ. ಆದರೆ, ಪೊಲೀಸರು ಮನವಿಗೆ ಸ್ಪಂದಿಸುತ್ತಿಲ್ಲ. ನಿವೃತ್ತ ಎಎಸ್‌ಐ ಆದ ಮಾವನು ಪೊಲೀಸರ ಮೇಲೆ ಪ್ರಭಾವ ಬೀರಿ ಪತಿಯನ್ನು ಶಾಶ್ವತವಾಗಿ ನನ್ನಿಂದ ದೂರು ಮಾಡುವ ಸಂಚು ರೂಪಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪತಿಯನ್ನು ಶೀಘ್ರವೇ ಪತ್ತೆ ಮಾಡಿ ನ್ಯಾಯ ದೊರಕಿಸಿ ಕೊಡಬೇಕು. ಪತಿಯ ಜತೆ ಬಾಳಲು ಅವಕಾಶ ಕಲ್ಪಿಸಬೇಕು. ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿರುವ ಮಾವನನ್ನು ಬಂಧಿಸಬೇಕು. ಇಲ್ಲದಿದ್ದರೆ ಠಾಣೆ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT