ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಇ: ನೋಂದಣಿಗೆ ಸಿಗದ ಆಧಾರ್‌ ಸೇವೆ

ಆನ್‌ಲೈನ್‌ ನೋಂದಣಿಗೆ ಇನ್ನೆರಡು ದಿನ ಬಾಕಿ; ಮಾಹಿತಿ ತಿದ್ದುಪಡಿಗಾಗಿ ಪೋಷಕರ ಪರದಾಟ
Last Updated 20 ಮಾರ್ಚ್ 2018, 10:53 IST
ಅಕ್ಷರ ಗಾತ್ರ

ಮಂಡ್ಯ: ನಾಡ ಕಚೇರಿ, ಬ್ಯಾಂಕ್‌, ಅಂಚೆ ಕಚೇರಿಗಳಲ್ಲಿ ಸಮರ್ಪಕ ಆಧಾರ್‌ ಸೇವೆ ಸಿಗದ ಕಾರಣ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ)ಯಡಿ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಲು ಆಧಾರ್‌ ಕಾರ್ಡ್‌ ಮಾಹಿತಿ ತಿದ್ದುಪಡಿ ಬಯಸುತ್ತಿರುವ ಪೋಷಕರು ಪರದಾಡುವಂತಾಗಿದೆ.

ಆರ್‌ಟಿಇ ಅಡಿ ಮಕ್ಕಳ ದಾಖಲಾತಿಗೆ ಆನ್‌ಲೈನ್‌ನಲ್ಲಿ ಹೆಸರು ನೋಂದಣಿ ಮಾಡಿಸಲು ಇನ್ನೆರಡು ದಿನ ಬಾಕಿ ಉಳಿದಿದೆ. ನೋಂದಣಿಗೆ ಆಧಾರ್‌ ಕಾರ್ಡ್‌ ಕಡ್ಡಾಯಗೊಳಿಸಲಾಗಿದ್ದು ಮೊಬೈಲ್‌ ಸಂಖ್ಯೆ, ಪಿನ್‌ ಕೋಡ್‌ ಸಂಖ್ಯೆ ಆಧಾರ್‌ ಕಾರ್ಡ್‌ನಲ್ಲಿ ಇರಬೇಕು. ಆದರೆ ಹಳೆಯ ಕಾರ್ಡ್‌ಗಳಲ್ಲಿ ಪೋಷಕರ ಮೊಬೈಲ್‌ ಹಾಗೂ ಪಿನ್‌ ಸಂಖ್ಯೆ ಸೇರ್ಪಡೆಗೊಂಡಿಲ್ಲ. ಅಲ್ಲದೆ ಮಗು ಮತ್ತು ಪೋಷಕರ ವಿಳಾಸ ಒಂದೇ ಇದ್ದರೆ ಮಾತ್ರ ಆಟಿಇ ಅಡಿ ಆನ್‌ಲೈನ್‌ ನೋಂದಣಿ ಸಾಧ್ಯ. ಆದರೆ ಕೆಲ ಪೋಷಕರ ವಿಳಾಸ ಬದಲಾಗಿದ್ದು ಬದಲಾವಣೆಗಳನ್ನು ತಿದ್ದುಪಡಿ ಮಾಡಬೇಕಾಗಿದೆ. ಆಧಾರ್‌ ತಿದ್ದುಪಡಿ ಸೇವೆ ಸಮರ್ಪಕವಾಗಿ ಸಿಗದ ಕಾರಣ ಆರ್‌ಟಿಇ ಅಡಿ ಅರ್ಜಿ ಸಲ್ಲಿಸುತ್ತಿರುವ ಪೋಷಕರು ಸೀಟು ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.

ಜಿಲ್ಲೆಯಾದ್ಯಂತ 45 ಅಟಲ್‌ಜಿ ಸೇವಾ ಕೇಂದ್ರಗಳಲ್ಲಿ ಆಧಾರ್‌ ಸೇವೆ ಸಿಗುತ್ತಿದೆ ಎಂದು ಇ–ಆಡಳಿತ ಇಲಾಖೆಯ ಅಧಿಕಾರಿಗಳು ತಿಳಿಸುತ್ತಾರೆ. ಆದರೆ ಕೇಂದ್ರಗಳು ಹಲವು ತಾಂತ್ರಿಕ ಸಮಸ್ಯೆ ಎದುರಿಸುತ್ತಿದ್ದು ಜನರಿಗೆ ಸಮರ್ಪಕವಾಗಿ ಆಧಾರ್‌ ಸೇವೆ ನೀಡಲು ವಿಫಲವಾಗಿವೆ. ಆರ್‌ಟಿಇ ಅಡಿ ಅರ್ಜಿ ಸಲ್ಲಿಸುತ್ತಿರುವ ಪೋಷಕರಿಗೆ ತ್ವರಿತವಾಗಿ ತಿದ್ದುಪಡಿ ಸೇವೆ ಬೇಕಾಗಿದೆ, ಆದರೆ ನಾಡಕಚೇರಿಗಳು ಈ ನಿಟ್ಟಿನಲ್ಲಿ ಸೇವೆ ಒದಗಿಸಲು ವಿಫಲವಾಗಿವೆ.

‘ನಾಡಕಚೇರಿಯಲ್ಲಿ ಕಳೆದ ಮೂರು ದಿನಗಳಿಂದಲೂ ವಿಳಾಸ ತಿದ್ದುಪಡಿ ಮಾಡಿಸಲು ಪ್ರಯತ್ನ ಪಟ್ಟೆ. ಆದರೆ ಸರ್ವರ್‌ ಸಮಸ್ಯೆ ಇದೆ ಎಂದು ಹೇಳಿದರು. ಹೀಗಾಗಿ ನಾನು ಮಂಡ್ಯದಲ್ಲಿರುವ ಖಾಸಗಿ ಸಾಮಾನ್ಯ ಸೇವಾ ಕೇಂದ್ರದಲ್ಲಿ ತಿದ್ದುಪಡಿಗಾಗಿ ಬಂದಿದ್ದೇನೆ. ಬೆಳಿಗ್ಗೆಯಿಂದಲೂ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದೇನೆ’ ಎಂದು ಕೊತ್ತತ್ತಿಯ ನಾಗೇಗೌಡ ಹೇಳಿದರು.

ಸಿಎಸ್‌ಸಿ ಮುಂದೆ ಸಾಲು: ಸರ್ಕಾರಿ ಕಚೇರಿಯಲ್ಲಿ ಸಮರ್ಪಕ ಆಧಾರ್‌ ಸೇವೆ ಸಿಗದ ಕಾರಣ ಆರ್‌ಇಟಿ ಅಡಿ ಅರ್ಜಿ ಸಲ್ಲಿಸುವ ಮಕ್ಕಳ ಪೋಷಕರು ನಗರದಲ್ಲಿರುವ ಮೂರು ಖಾಸಗಿ ಸಾಮಾನ್ಯ ಸೇವಾ ಕೇಂದ್ರಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಆಧಾರ್‌ ತಿದ್ದುಪಡಿ ಸೇವೆ ಪಡೆಯುತ್ತಿದ್ದಾರೆ. ಸುಭಾಷ್‌ನಗರ, ಕರ್ನಾಟಕ ಬಾರ್‌ ಸರ್ಕಲ್‌ ಹಾಗೂ ಗಾಂಧಿ ಭವನದ ರಸ್ತೆ ಸೇರಿ ಮೂರು ಸಾಮಾನ್ಯ ಸೇವಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಬೆಳಿಗ್ಗೆ ಎಂಟು ಗಂಟೆಗೆ ಬಂದು ಟೋಕನ್‌ ಪಡೆದು ಆಧಾರ್‌ ತಿದ್ದುಪಡಿ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ ಸಾಮಾನ್ಯ ಸೇವಾ ಕೇಂದ್ರಗಳು ದಿನಕ್ಕೆ 100 ಕಾರ್ಡ್‌ಗಳಿಗೆ ಮಾತ್ರ ಸೇವೆ ನೀಡಲು ಸಾಧ್ಯ. ಹೀಗಾಗಿ ತಿದ್ದುಪಡಿ ಬಯಸುವ ಎಲ್ಲರಿಗೂ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ.

‘ಮಗುವಿನ ತಂದೆಯ ವಿಳಾಸ ತಿದ್ದುಪಡಿ ಮಾಡಿಸಬೇಕು. ಸರ್ಕಾರಿ ಕಚೇರಿಯಲ್ಲಿ ಆಧಾರ್‌ ಕಾರ್ಡ್‌ ತಿದ್ದುಪಡಿ ಮಾಡುತ್ತಿಲ್ಲ. ಹೀಗಾಗಿ ನಾನು ಮಂಡ್ಯಕ್ಕೆ ಬೆಳಿಗ್ಗೆಯೇ ಬಂದು ಹೆಸರು ಬರೆಸಿದ್ದೇನೆ. ಬೆಳಿಗ್ಗೆ 9ಕ್ಕೆ ಬಂದಿದ್ದೇನೆ, ಮಧ್ಯಾಹ್ನ 4 ಗಂಟೆವರೆಗೆ ಕಾಯುವಂತೆ ತಿಳಿಸಿದ್ದಾರೆ’ ಎಂದು ಮಂಗಲ ಗ್ರಾಮದ ನಾಗರಾಜ್‌ ಹೇಳಿದರು.

ಬ್ಯಾಂಕ್‌, ಅಂಚೆ ಕಚೇರಿಯಲ್ಲೂ ಸಮಸ್ಯೆ: ನಗರದ ಸಿಂಡಿಕೇಟ್‌ ಬ್ಯಾಂಕ್‌, ಬ್ಯಾಂಕ್‌ ಆಫ್‌ ಇಂಡಿಯಾ, ಕೆನರಾ ಬ್ಯಾಂಕ್‌ ಹಾಗೂ ಫೆಡರಲ್‌ ಬ್ಯಾಂಕ್‌ಗಳಲ್ಲೂ ಆಧಾರ್‌ ಸೇವೆ ನೀಡಲಾಗುತ್ತಿದೆ. ಆದರೆ ನಿರಂತರ ಸೇವೆ ನೀಡಲೂ ಬ್ಯಾಂಕ್‌ಗಳೂ ವಿಫಲವಾಗಿವೆ. ತಾಂತ್ರಿಕ ಸಮಸ್ಯೆ, ಸಿಬ್ಬಂದಿ ಕೊರತೆಯಿಂದಾಗಿ ಒಂದು ದಿನ ಸೇವೆ ಇದ್ದರೆ ಇನ್ನೊಂದು ದಿನ ಸಿಗುತ್ತಿಲ್ಲ. ಹೀಗಾಗಿ ಜನರು ಬ್ಯಾಂಕ್‌ಗಳಿಗೆ ಬಾರದೆ ಖಾಸಗಿ ಸೇವಾ ಕೇಂದ್ರಗಳತ್ತ ಮುಖ ಮಾಡಿದ್ದಾರೆ.

‘ಅಂಚೆ ಕಚೇರಿ ಹೊರಗೆ ಆಧಾರ್‌ ಸೇವೆ ಲಭ್ಯವಿದೆ ಎಂದು ಬೋರ್ಡ್‌ ಹಾಕಿದ್ದಾರೆ. ಒಳಗೆ ಹೋಗಿ ಕೇಳಿದರೆ ಆಧಾರ್‌ ಸೇವೆ ನೀಡುವವರು ರಜೆಯಲ್ಲಿದ್ದಾರೆ ಎಂದು ಹೇಳುತ್ತಾರೆ. ನಾಲ್ಕೈದಿ ದಿನ ಹೋಗಿ ಕೇಳಿದರೂ ಇದೇ ಉತ್ತರ ಸಿಗುತ್ತಿದೆ. ಖಾಸಗಿ
ಕೇಂದ್ರಗಳೇ ನಮಗೆ ಆಧಾರವಾಗಿದೆ’ ಎಂದು ನಗರದ ಶಾರದಮ್ಮ ಹೇಳಿದರು.

‘ಜಿಲ್ಲೆಯ 45 ಅಟಲ್‌ ಜೀ ಸೇವಾ ಕೇಂದ್ರಗಳಲ್ಲಿ ಆಧಾರ್‌ ಸೇವೆ ದೊರೆಯುತ್ತಿದೆ. ತಾಂತ್ರಿಕ ಸಮಸ್ಯೆ ಆಗಿರಬಹುದು, ಆದರೆ ಆಧಾರ್‌ ಸೇವೆ ಸ್ಥಗಿತಗೊಂಡಿಲ್ಲ. ಖಾಸಗಿ ಸೇವಾ ಕೇಂದ್ರಗಳನ್ನು ಮುಚ್ಚಿಸಲಾಗುತ್ತಿದೆ. ಹೀಗಾಗಿ ಜನರು ನಾಡಕಚೇರಿಗೇ ಬರಬೇಕು’ ಎಂದು ಇ–ಆಡಳಿತ ಇಲಾಖೆಯ ಜಿಲ್ಲಾ ಸಂಯೋಜಕ ವೇಣುಗೋಪಾಲ್‌ ಹೇಳಿದರು.
**
ಶಾಲೆ ಸೀಟ್‌ಗಾಗಿ ವಿಳಾಸ ತಿದ್ದುಪಡಿ
‘ಪೋಷಕರು ಉತ್ತಮ ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಅಡಿ ಸೀಟು ಪಡೆಯಲು ಅದೇ ಶಾಲೆ ವ್ಯಾಪ್ತಿಯ ವಿಳಾಸಕ್ಕೆ ಆಧಾರ್‌ ಕಾರ್ಡ್‌ ತಿದ್ದುಪಡಿ ಮಾಡಿಸಿಕೊಳ್ಳುತ್ತಿರುವ ಬಗ್ಗೆ ದೂರು ದಾಖಲಾಗಿವೆ. ಈಗ ಇದ್ದಕ್ಕಿದ್ದಂತೆಯೇ ವಿಳಾಸ ತಿದ್ದುಪಡಿಗೆ ದಿಢೀರ್‌ ಬೇಡಿಕೆ ಆರಂಭವಾಗಿರುವುದನ್ನು ನೋಡಿದರೆ ಜನರು ತಾವು ಇಷ್ಟಪಡುವ ಶಾಲೆಗಳಲ್ಲಿ ಸೀಟು ಪಡೆಯಲು ವಿಳಾಸವನ್ನೇ ಬದಲಿಸುತ್ತಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಲಾಗುವುದು. ಜೊತೆಗೆ ಅಟಲ್‌ ಕೇಂದ್ರಗಳಲ್ಲಿ ಆಧಾರ್‌ ಸೇವೆ ಸಿಗದಿರುವ ಬಗ್ಗೆಯೂ ವಿಚಾರಣೆ ಮಾಡುತ್ತೇನೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಪಿ.ವಿಜಯರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT