ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 20 ಮಾರ್ಚ್ 2018, 19:30 IST
ಅಕ್ಷರ ಗಾತ್ರ

* ಪ್ರಶಾಂತ್. ಎಂ.ಎಸ್.
ಸಂಬಳ ₹ 21,720. ತಂದೆಯ ಹೆಸರಿನಲ್ಲಿ ಒಂದು ನಿವೇಶನ ಮೈಸೂರಿನಲ್ಲಿದೆ. (20X40) ನಾನು ತಂದೆಯ ಜಾಗದಲ್ಲಿ ಮನೆ ಕಟ್ಟಬೇಕೆಂದಿದ್ದೇನೆ. ನನ್ನ ಪ್ರಶ್ನೆ: (1) ನನಗೆ ಗರಿಷ್ಠ ಎಷ್ಟು ಸಾಲ ಸಿಗಬಹುದು. (2) ಜಾಗ ತಂದೆಯ ಹೆಸರಿನಲ್ಲಿದೆ, ನಾನು ಆ ಜಾಗದಲ್ಲಿ ಮನೆಕಟ್ಟಲು ನನಗೆ ಸಾಲ ಸಿಗಬಹುದೇ. (3) ಮೈಸೂರಿನ ಎಸ್.ಬಿ.ಐ. ಮುಖ್ಯ ಶಾಖೆಯಲ್ಲಿ ಕೇಳಿದಾಗ ಪ್ರಧಾನಮಂತ್ರಿ ಆವಾಸ್ ಯೋಜನಾ ಗೃಹಸಾಲದ ವಿಚಾರದಲ್ಲಿ ಅವರಿಗೆ ಇನ್ನೂ ಸುತ್ತೋಲೆ ಬರಲಿಲ್ಲ ಎನ್ನುತ್ತಾರೆ. PMAY ದಲ್ಲಿ Different Slabನ ಪ್ರಕಾರ ನನ್ನ ಸಂಬಳಕ್ಕೆ MIG-1 Plan ನಂತೆ ಅರ್ಜಿ ಸಲ್ಲಿಸಬಹುದೇ?
ಉತ್ತರ:
ನಿವೇಶನ ನಿಮ್ಮ ಹೆಸರಿನಲ್ಲಿ ಇಲ್ಲದಿರುವುದರಿಂದ ನೀವು ನೇರವಾಗಿ ನಿಮ್ಮ ತಂದೆಯ ನಿವೇಶನದಲ್ಲಿ ಮನೆಕಟ್ಟಲು ಬ್ಯಾಂಕುಗಳು ಸಾಲ ನೀಡುವುದಿಲ್ಲ. ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಸಾಲ ತೀರಿಸುವ ಗರಿಷ್ಠ ಅವಧಿ 20 ವರ್ಷಗಳಾದರೂ ಅವಧಿಗೆ ಮುನ್ನ ಸಾಲ ತೀರಿಸುವ ಹಕ್ಕು ನಿಮಗಿದೆ. ಈ ಯೋಜನೆಯಲ್ಲಿ ವಿವರಿಸಿದಂತೆ ‘ಪಟ್ಟಣದಲ್ಲಿ ವಾಸಿಸುವ ಮಧ್ಯಮ ವರ್ಗದ ಅಂದರೆ ₹ 6 ಲಕ್ಷದಿಂದ  ₹ 18 ಲಕ್ಷಗಳೊಳಗೆ ವಾರ್ಷಿಕ ಆದಾಯವಿರುವ ವ್ಯಕ್ತಿಗಳು ಮಾತ್ರ PMAY ಪ್ರಯೋಜನ ಪಡೆಯಬಹುದು. ನಿಮ್ಮ ವಾರ್ಷಿಕ ಆದಾಯ ಈಗಿನಂತೆ ₹ 2,60,640 ಇದ್ದು, ನಿವೇಶನ ಕೂಡಾ ನಿಮ್ಮ ಹೆಸರಿನಲ್ಲಿ ಇಲ್ಲದಿರುವುದರಿಂದ PMAY ಅಡಿಯಲ್ಲಿ ಗೃಹ ಸಾಲ ಸಿಗುವುದು ಕಷ್ಟವಾದೀತು.

*
ಎಂ.ಪಿ. ಚಿದಂಬರ, ಬೆಂಗಳೂರು
ನಾನು ಕೇಂದ್ರ ಸರ್ಕಾರದ ನೌಕರನಾಗಿ ನಿವೃತ್ತನಾಗಿದ್ದೇನೆ. ನಿವೃತ್ತಿಯಿಂದ ₹ 40 ಲಕ್ಷ ಬಂದಿದೆ. ಪಿಂಚಣಿ ತಿಂಗಳಿಗೆ ₹ 35,000. ನನ್ನ ಹುಟ್ಟೂರಿನಲ್ಲಿ ವಾಸದ ಮನೆ ಇದೆ. ಬೆಂಗಳೂರಿನಲ್ಲಿ ಹಾಗೂ ಮೈಸೂರಿನಲ್ಲಿ ಒಂದೊಂದು ನಿವೇಶನ ಇದೆ. ನಿವೃತ್ತಿ ಹಣ ತೊಡಗಿಸುವ ವಿಚಾರ– ಬೆಂಗಳೂರಿನಲ್ಲಿ ಒಂದು Flat ಕೊಳ್ಳಲೇ, ನಿಶ್ಚಿತ ಠೇವಣಿ ಇರಿಸಲೇ, ತಲಾ ₹ 10 ಲಕ್ಷದಂತೆ ಇಬ್ಬರು ಮಕ್ಕಳಿಗೆ ಕೊಟ್ಟು ಉಳಿದ ₹ 20 ಲಕ್ಷ ಠೇವಣಿ ಇರಿಸಲೇ (ನನ್ನ ಹೆಂಡತಿ ಹೆಸರಿನಲ್ಲಿ)?

ಉತ್ತರ: ನಿಮಗೆ ಬಂದಿರುವ ₹ 40 ಲಕ್ಷದಿಂದ Flat ಕೊಳ್ಳುವುದರಿಂದ ನಿಮಗೆ ಅಂತಹ ಅನುಕೂಲವಾಗಲಾರದು. ನೀವೇ ಉಳಿಯುವುದಾದರೆ ಮಾತ್ರ ಕೊಳ್ಳಿರಿ. ಬೆಂಗಳೂರಿನಲ್ಲಿ ಬಹಳಷ್ಟು Flatಗಳು ಬಾಡಿಗೆದಾರರಿಲ್ಲದೇ ಹಾಗೆ ಉಳಿದಿವೆ.

ನೀವು ಬಯಸಿದಂತೆ ನಿಮ್ಮ ಮಕ್ಕಳೀರ್ವರಿಗೆ ತಲಾ ₹ 10 ಲಕ್ಷ ಕೊಡಿರಿ. ಉಳಿದ ₹ 20 ಲಕ್ಷ ನಿಮ್ಮ ಹೆಂಡತಿ ಹೆಸರಿನಲ್ಲಿ ಇಟ್ಟರೂ ಇಲ್ಲಿ ಬರುವ ಬಡ್ಡಿ ನಿಮ್ಮ ಆದಾಯಕ್ಕೆ ಸೇರಿಸಿ ಆದಾಯ ತೆರಿಗೆ ಸಲ್ಲಿಸಬೇಕಾಗುತ್ತದೆ. ನಿಮಗೆ ಬಡ್ಡಿ ಅವಶ್ಯವಿಲ್ಲವಾದ್ದರಿಂದ ₹ 20 ಲಕ್ಷ ಒಮ್ಮೆಲೇ ಬಡ್ಡಿ ಬರುವ ಅವಧಿ ಠೇವಣಿಯಲ್ಲಿ ಇರಿಸಿರಿ. ಇದರಿಂದ ನಿಮ್ಮ ಹಣ ಚಕ್ರ ಬಡ್ಡಿಯಲ್ಲಿ ಬೆಳೆಯುತ್ತದೆ.

*
ಅರುಣ್‌ಕುಮಾರ್, ಯಾದಗಿರಿ
ನನ್ನ ತಂದೆಯವರು ಶೇ 5 ರಂತೆ ಬಡ್ಡಿಯಲ್ಲಿ ಸಾಲ ಮಾಡಿ ₹ 12 ಲಕ್ಷ ಪಡೆದು, ಎರಡು ಎಕರೆ ಜಮೀನನ್ನು ವ್ಯವಸಾಯದ ಉದ್ದೇಶಕ್ಕೆ ಖರೀದಿಸಿದ್ದಾರೆ. ನಮ್ಮ ವಾರ್ಷಿಕ ವರಮಾನ ₹ 1.90 ಲಕ್ಷ. ಈ ಜಮೀನು ಮುಖಾಂತರ ಕಡಿಮೆ ಬಡ್ಡಿಯಲ್ಲಿ ಬ್ಯಾಂಕಿನಲ್ಲಿ ಸಾಲ ಪಡೆದು, ಹಿಂದಿನ ಸಾಲ ತೀರಿಸಬಹುದೇ?

ಉತ್ತರ: ಶೇ 5 ಬಡ್ಡಿ ದರ ಎಂದರೆ, ತಿಂಗಳಿಗೆ ಶೇ 5 ಬಡ್ಡಿ ತೆರಬೇಕು ಎಂದು ಭಾವಿಸುತ್ತೇನೆ. ಇಷ್ಟು ಬಡ್ಡಿ ಕೊಟ್ಟು ಸಾಲ ಪಡೆದು ಜಮೀನು ಕೊಳ್ಳುವ ಅವಶ್ಯ ತಿಳಿಯಲಿಲ್ಲ. ಹೀಗೆ ಬಡ್ಡಿ ತೆರಲು ನಿಮಗೆ ಹೇಗೆ ಸಾಧ್ಯವಾದೀತು? ನಿಮ್ಮ ತಂದೆಯವರ ಆಲೋಚನೆ ನನಗೆ ತಿಳಿಯಲಿಲ್ಲ. ಬ್ಯಾಂಕುಗಳಲ್ಲಿ ಸಾಮಾನ್ಯವಾಗಿ ಕೃಷಿ ಜಮೀನು ಕೊಳ್ಳಲು ಸಾಲ ದೊರೆಯುವುದಿಲ್ಲ. ಭೂಮಿ ವೃದ್ಧಿಪಡಿಸಲು ಹಾಗೂ ಕೃಷಿ ಸಾಲ ಸಿಗುತ್ತದೆ. ಎರಡು ಎಕರೆಗೆ ಗರಿಷ್ಠ ₹ 50,000 ಸಾಲ ಸಿಗಬಹುದು. ಇದು ಒಂದು ತಿಂಗಳ ಬಡ್ಡಿ ಕಟ್ಟಲು ಕೂಡಾ ಸಾಧ್ಯವಾಗಲಾರದು.

*
ಕುಮಾರ್ ನಾಯ್ಕ, ತಿ‍ಪಟೂರು
ವಯಸ್ಸು 63. ಪತ್ನಿಗೆ 54 ವರ್ಷ. ಮನೆ ಬಾಡಿಗೆ ತಿಂಗಳಿಗೆ ₹ 80,000 ಬರುತ್ತದೆ. ಆದರೆ ಒಮ್ಮೊಮ್ಮೆ ಖಾಲಿ ಇರುವಾಗ ₹ 20,000 ಬರುವುದಿಲ್ಲ. ನಮಗೆ ಇಬ್ಬರು ಗಂಡು ಮಕ್ಕಳು. ಅವರು ಬೆಂಗಳೂರಿನಲ್ಲಿ ಖಾಸಗಿ ಕೆಲಸದಲ್ಲಿದ್ದಾರೆ. ಅವರಿಂದ ನಮಗೆ ಏನೂ ಆದಾಯವಿಲ್ಲ. ಬಾಡಿಗೆ ಬರಲಿ ಬಾರದಿರಲಿ, ವಿದ್ಯುತ್, ನೀರು, ಸುಣ್ಣ ಬಣ್ಣ ಕಂದಾಯ ಹೀಗೆ ಖರ್ಚು ಮಾಡಬೇಕಾಗುತ್ತದೆ. ಸುಮಾರು ಅರ್ಧಾಂಶ ಖರ್ಚು ಬರುತ್ತದೆ. ತೆರಿಗೆ ಹೇಗೆ ಲೆಕ್ಕ ಹಾಕಬೇಕು ತಿಳಿಸಿರಿ. ಇದಲ್ಲದೆ ನಮಗೆ 6 ಎಕರೆ ತೋಟ ಇದೆ. ಬೋರ್ ಸಹಾ ಒಣಗಿದೆ. ಬಾಡಿಗೆ ಹಣ ಇಲ್ಲಿ ವ್ಯಯವಾಗುತ್ತದೆ. ತೋಟದಿಂದ ಸದ್ಯ ಅಂತಹ ಆದಾಯವಿಲ್ಲ. ತೋಟ ಮಾರಾಟ ಮಾಡಿದರೆ ಹೇಗೆ ತಿಳಿಸಿರಿ. ಇವೆಲ್ಲಾ ಪರಿಗಣಿಸಿ ಆದಾಯ ತೆರಿಗೆ ಪರಿಹಾರವೇನು?

ಉತ್ತರ: ಮನೆ ಬಾಡಿಗೆಯಿಂದ ಬರುವ ಆದಾಯ ವಾರ್ಷಿಕವಾಗಿ ಲೆಕ್ಕ ಹಾಕಿ ಅದರಲ್ಲಿ ನೀವು ಕೊಟ್ಟ ಕಂದಾಯ ಮಾತ್ರ ಕಳೆದು ಬರುವ ಮೊತ್ತದಲ್ಲಿ ಸೆಕ್ಷನ್ 24 (a) ಆಧಾರದ ಮೇಲೆ ಶೇ 30 ಕಳೆದು ಬರುವ ಮೊತ್ತಕ್ಕೆ ನೀವು ಆದಾಯ ತೆರಿಗೆ ಕೊಡಬೇಕಾಗುತ್ತದೆ. ಕೃಷಿ ಆದಾಯ ಹೊರತು ಪಡಿಸಿ, ಬಾಡಿಗೆ ಆದಾಯ ಒಂದೇ ಆದಲ್ಲಿ, ಮೇಲೆ ವಿವರಿಸಿದಂತೆ ಬರುವ ಮೊತ್ತದಲ್ಲಿ ₹ 3.50 ಲಕ್ಷ (ನಿಮಗಿರುವ ವಿನಾಯಿತಿ) ಕಳೆದು ಬರುವ ಮೊತ್ತಕ್ಕೆ ತೆರಿಗೆ ಸಲ್ಲಿಸಬೇಕು ಹಾಗೂ ರಿಟರ್ನ್ ತುಂಬ ಬೇಕಾಗುತ್ತದೆ. ವಿದ್ಯುತ್, ನೀರು, ಸುಣ್ಣಬಣ್ಣ, ರಿಪೇರಿ ಈ ಎಲ್ಲಾ ಖರ್ಚು ಬಾಡಿಗೆ ಆದಾಯದಿಂದ ಕಳೆಯುವಂತಿಲ್ಲ. ಇವುಗಳನ್ನು ನಿಭಾಯಿಸಲು ಶೇ 30 ರಷ್ಟು ರಿಯಾಯಿತಿ ನೀಡಲಾಗಿದೆ. ಕೃಷಿ ಜಮೀನು ಸದ್ಯ ಉತ್ತಮ ವರಮಾನ ಕೊಡದಿದ್ದರೂ ಮಾರಾಟ ಮಾಡಬೇಡಿ. ಸ್ಥಿರ ಆಸ್ತಿ ಮತ್ತೆ ಮಾಡಲು ಸಾಧ್ಯವಾಗಲಾರದು. ಇಲ್ಲಿ ಬರುವ ಆದಾಯ ಅಥವಾ ವರಮಾನಕ್ಕೆ ಸೆಕ್ಷನ್ 10 (1) ಆಧಾರದ ಮೇಲೆ ಆದಾಯ ತೆರಿಗೆ ವಿನಾಯಿತಿ ಇದೆ.

*
ರಾಜ, ಬೆಂಗಳೂರು
ನಾನು ಕೇಂದ್ರ ಸರ್ಕಾರದ ನಿವೃತ್ತ ಉದ್ಯೋಗಿ. ನಿವೃತ್ತಿಯಿಂದ ಬಂದ ಹಣದಿಂದ ಖಾಲಿ ನಿವೇಶನದಲ್ಲಿ ಮನೆ ಕಟ್ಟಿ ಬಾಡಿಗೆಗೆ ಕೊಟ್ಟಿರುತ್ತೇನೆ. ವಾರ್ಷಿಕ ₹ 8.5 ಲಕ್ಷ ಬಾಡಿಗೆ ಬರುತ್ತದೆ. ಬ್ಯಾಂಕಿನಲ್ಲಿ ₹ 10 ಲಕ್ಷ ಎಫ್.ಡಿ. ಇದೆ. ಎಸ್.ಬಿ.ಐ. ನಲ್ಲಿ ತಿಂಗಳಿಗೆ ₹ 40,000 ಆರ್.ಡಿ. ಕಟ್ಟುತ್ತೇನೆ. ನನ್ನ ಮನೆ ಖರ್ಚು 20,000, ಔಷಧದ ಖರ್ಚು (ನನ್ನ ಹಾಗೂ ಹೆಂಡತಿ) ₹ 30,000. ನಾವಿಬ್ಬರೂ ಸಿಹಿ ಮೂತ್ರ ಕಾಯಿಲೆಯಿಂದ ಬಳಲುತ್ತಿದ್ದೇವೆ. ನಾನು ಒಂದು ದೇವಸ್ಥಾನ ಕಟ್ಟಿಸಿ, ತಿಂಗಳಿಗೆ ₹ 10,000 ಖರ್ಚು ಮಾಡುತ್ತೇನೆ. ನನ್ನ ಒಟ್ಟು ಆದಾಯದಲ್ಲಿ ಯಾವ ಯಾವ ಖರ್ಚು ಕಳೆದು ತೆರಿಗೆ ಸಲ್ಲಿಸುವ ಅವಕಾಶವಿದೆ. ನಾನು I.T.Return ಸಲ್ಲಿಸಬೇಕಾ?
ಉತ್ತರ:
ನಿಮ್ಮ ಪ್ರಶ್ನೆಯಲ್ಲಿ ನಿಮಗೆ ಬರುವ ಪಿಂಚಣಿ ವಿಚಾರದಲ್ಲಿ ಇಳಿಸಿಲ್ಲ. ನಿಮ್ಮ ಮನೆ ಖರ್ಚು, ಔಷಧದ ಖರ್ಚು ಅಥವಾ ದೇವಸ್ಥಾನದ ಖರ್ಚು ಇವೆಲ್ಲವನ್ನೂ ನಿಮ್ಮ ಆದಾಯದಿಂದ ಕಳೆದು ತೆರಿಗೆ ಸಲ್ಲಿಸುವ ಅವಕಾಶವಿರುವುದಿಲ್ಲ. ನೀವು ಆರೋಗ್ಯ ವಿಮೆ ಇಳಿಸಿರುವಲ್ಲಿ, ವಾರ್ಷಿಕ ಪ್ರೀಮಿಯಂ ಹಣ ಗರಿಷ್ಠ ₹ 30,000 (See 80D) ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು. ನಿಮ್ಮ ತೆರಿಗೆ ವಿಚಾರದಲ್ಲಿ ನೀವು ವಾರ್ಷಿಕವಾಗಿ ಪಡೆಯುವ ಪಿಂಚಣಿ, ಬ್ಯಾಂಕ್ ಠೇವಣಿ ಹಾಗೂ ಮನೆ ಬಾಡಿಗೆ ಸೇರಿಸಿ ತೆರಿಗೆ ಸಲ್ಲಿಸಬೇಕಾಗುತ್ತದೆ. ಇದೇ ವೇಳೆ ಮನೆ ಬಾಡಿಗೆಯಲ್ಲಿ ಶೇ 30 ರಷ್ಟು ಕಳೆದು (See 24/a) ತೆರಿಗೆ ಸಲ್ಲಿಸುವ ಅವಕಾಶವಿದೆ. ನೀವು ಹಿರಿಯ ನಾಗರಿಕರಾದ್ದರಿಂದ ಒಟ್ಟು ಆದಾಯದಲ್ಲಿ ₹ 3 ಲಕ್ಷ ಕಳೆದು ತೆರಿಗೆ ಸಲ್ಲಿಸಬಹುದು. ನೀವು ರಿಟರ್ನ್ ತುಂಬಲೇ ಬೇಕು. ನಿಮ್ಮ ಮನೆಗೆ ಸಮೀಪದ ತೆರಿಗೆ ಸಲಹೆಗಾರರು ಅಥವಾ ಚಾರ್ಟರ್ಡ್ ಅಕೌಂಟೆಂಟ್ ತಕ್ಷಣ ಸಂ‍ಪರ್ಕಿಸಿರಿ.

*
ಶಶಿಕುಮಾರ್, ಬಳ್ಳಾರಿ
ನಾನು ₹ 1.50 ಲಕ್ಷ ಠೇವಣಿ ಇರಿಸಬೇಕೆಂದಿದ್ದೇನೆ. ಇದರಲ್ಲಿ ₹ 1 ಲಕ್ಷದಿಂದ ಪ್ರತೀ ತಿಂಗಳೂ ಬಡ್ಡಿ ಪಡೆಯಬೇಕು ಹಾಗೂ ₹ 50,000 ದಿಂದ ಮೂರು ತಿಂಗಳಿಗೊಮ್ಮೆ ಬಡ್ಡಿ ಪಡೆಯಬೇಕು. ಎಲ್ಲಿ ಹಣ ಠೇವಣಿ ಇರಿಸಲಿ?
ಉತ್ತರ:
₹ 1 ಲಕ್ಷ ಅಂಚೆ ಕಚೇರಿ, M/S ಯೋಜನೆಯಲ್ಲಿ ಇರಿಸಿರಿ. ಇದರಿಂದ ನೀವು ಪ್ರತೀ ತಿಂಗಳು ಬಡ್ಡಿ ಪಡೆಯಬಹುದು. ಅದೇ ರೀತಿ

₹ 50,000 ನಿಮ್ಮ ಮನೆಗೆ ಸಮೀಪದ ಬ್ಯಾಂಕಿನಲ್ಲಿ ಠೇವಣಿ ಇರಿಸಿ ಪ್ರತೀ ಮೂರು ತಿಂಗಳಿಗೆ ಬಡ್ಡಿ ಪಡೆಯಿರಿ. ಉಳಿತಾಯ ಖಾತೆಯಲ್ಲಿ ಹೆಚ್ಚಿನ ಹಣ ಇಡುವ ಅವಶ್ಯವಿಲ್ಲ. ಆದಷ್ಟು ಬೇಗ ಇಲ್ಲಿ ತಿಳಿಸಿದಂತೆ ಠೇವಣಿ ಇರಿಸಿ ನಿಶ್ಚಿಂತರಾಗಿರಿ. ಹೆಚ್ಚಿನ ಬಡ್ಡಿ ಆಸೆಯಿಂದ ಅಭದ್ರವಾದ ಸ್ಥಳ ಅಥವಾ ವ್ಯಕ್ತಿಗಳಲ್ಲಿ ಹಣವಿರಿಸಿ ಅಸಲು ಕಳೆದುಕೊಳ್ಳಬೇಡಿ.

*
ನರಸಿಂಹಮೂರ್ತಿ, ತುಮಕೂರು
ಅಂಚೆ ಕಚೇರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತನಾಗಿದ್ದೇನೆ. ವಯಸ್ಸು 63. ಸ್ವಂತ ಮನೆ ಇದೆ. ತಿಂಗಳ ಪಿಂಚಣಿ ₹ 15,500. ನನ್ನ ನಿವೃತಿ ನಂತರ ಎಲ್ಲಾ ಮೂಲಗಳಿಂದ ₹ 18.50 ಲಕ್ಷ ಬಂದಿರುತ್ತದೆ. ಈ ಹಣ ಬ್ಯಾಂಕಿನಲ್ಲಿ ಇಟ್ಟರೆ, ತೆರಿಗೆ ಬರುತ್ತದೆಯೇ ಹಾಗೂ ಈ ಹಣ ಎಲ್ಲಿ ಹೂಡಿಕೆ ಮಾಡಬೇಕು, ಹೆಚ್ಚಿನ ವರಮಾನ ಬರಬಹುದು. ಬಡ್ಡಿಗೆ ತೆರಿಗೆ ಇದೆಯೇ?
ಉತ್ತರ:
ನೀವು ಹಿರಿಯ ನಾಗರಿಕರಾಗಿರುವುದರಿಂದ ವಾರ್ಷಿಕ ಒಟ್ಟು ಆದಾಯ, ಅಂದರೆ ಪಿಂಚಣಿ ಹಾಗೂ ಠೇವಣಿ ಮೇಲಿನ ಬಡ್ಡಿ ₹ 3 ಲಕ್ಷಗಳ ತನಕ ನಿಮಗೆ ಆದಾಯ ತೆರಿಗೆ ಇರುವುದಿಲ್ಲ. ಈಗ ಬ್ಯಾಂಕುಗಳಿಗಿಂತ ಅಂಚೆ ಕಚೇರಿ ಠೇವಣಿಯೇ ಹೆಚ್ಚಿನ ವರಮಾನ ತರುವುದರಿಂದ, ₹ 15 ಲಕ್ಷ ಸೀನಿಯರ್‌ ಸಿಟಿಜನ್‌ ಠೇವಣಿಯಲ್ಲಿ ಹಾಗೂ ಉಳಿದ ಮೊತ್ತವನ್ನು ಮಾಸಿಕ ಬಡ್ಡಿ ಬರುವ ಯೋಜನೆಯಲ್ಲಿ (Monthly Income Scheme– MIS) ಇರಿಸಿ . ಬ್ಯಾಂಕು ಹಾಗೂ ಅಂಚೆ ಕಚೇರಿ ಹೊರತಾಗಿ ಬೇರೆ ಹೂಡಿಕೆ ಬೇಡ. ಸದ್ಯದ ಪರಿಸ್ಥಿತಿಯಲ್ಲಿ ನಿಮಗೆ ತೆರಿಗೆ ಬಾಧೆ ಇಲ್ಲ. ಮುಂದೆ ಪಿಂಚಣಿ ಹೆಚ್ಚಾದಾಗ ಅಲ್ಪಸ್ವಲ್ಪ ತೆರಿಗೆ ಬರಬಹುದು.

*
ಮಂಜುನಾಥ. ಜಿ., ಚಿಕ್ಕನಾಯಕನಹಳ್ಳಿ
ಒಂದೇ ಬ್ಯಾಂಕಿನಲ್ಲಿ ಬೇರೆ ಬೇರೆ ಕಡೆ ಪ್ರತ್ಯೇಕವಾಗಿ ಉಳಿತಾಯ ಅಥವಾ ಅವಧಿ ಠೇವಣಿ ಮಾಡುವುದರಲ್ಲಿ ಏನಾದರೂ ಸಮಸ್ಯೆ ಇದೆಯೇ. ಒಂದು ಶಾಖೆಯಲ್ಲಿ FD ಇನ್ನೊಂದು ಶಾಖೆಯಲ್ಲಿ ವೇತನ ಪಡೆಯಲು ಉಳಿತಾಯ ಖಾತೆ ಹೊಂದಿದ್ದೇನೆ. ದಯಮಾಡಿ ನನ್ನ ಗೊಂದಲ ಪರಿಹಾರ ಮಾಡಿರಿ?
ಉತ್ತರ:
ನೀವು ಒಂದು ಬ್ಯಾಂಕಿನ ಒಂದು ಊರಿನಲ್ಲಿ FD ಹಾಗೂ ಇನ್ನೊಂದು ಊರಿನಲ್ಲಿ ಸಂಬಳ ಪಡೆಯಲು ಉಳಿತಾಯ ಖಾತೆ ಮಾಡಿರುವುದರಲ್ಲಿ ಯಾವ ಸಮಸ್ಯೆಯೂ ಇಲ್ಲ. ಉಳಿತಾಯ ಖಾತೆ ಮಾಡಿದ ಬ್ಯಾಂಕಿನಲ್ಲಿ ಬ್ಯಾಂಕಿನವರು ನಿಮಗೊಂದು I.D.No. ಕೊಡುತ್ತಾರೆ. ಈ ನಂಬರನ್ನೂ FD ಮಾಡಿರುವ ಶಾಖೆಗೆ ತಿಳಿಸಿರಿ. ಇಂದಿನ ದಿನಗಳಲ್ಲಿ ಓರ್ವ ವ್ಯಕ್ತಿ ಒಂದೇ ಬ್ಯಾಂಕ್‌ನ ಬೇರೆ ಬೇರೆ ಶಾಖೆಗಳಲ್ಲಿ ಉಳಿತಾಯ ಖಾತೆ ತೆರೆಯುವ ಅವಶ್ಯವಿರುವುದಿಲ್ಲ. ನೀವು ಖಾತೆ ಹೊಂದಿದ ಬ್ಯಾಂಕಿನ ಯಾವುದೇ ಶಾಖೆಯಿಂದ ಕೂಡಾ ಡೆಬಿಟ್‌ ಕಾರ್ಡು–ಚೆಕ್‌ ಮುಖಾಂತರ ಹಣ ಪಡೆಯಬಹುದು ಹಾಗೂ ನಗದನ್ನು ಜಮಾ ಮಾಡಬಹುದು. ಅವಧಿ ಠೇವಣಿ ಒಂದೇ ಬ್ಯಾಂಕಿನ ಯಾವುದೇ ಶಾಖೆಯಲ್ಲಿ ಮಾಡಬಹುದು. ನಿಮಗೆ ಈ ವಿಚಾರದಲ್ಲಿ ಗೊಂದಲ ಬೇಡ. ನಿಶ್ಚಿಂತೆಯಿಂದ ಬಾಳಿರಿ.

*
ರವಿ. ಎ.ಎಂ., ತೀರ್ಥಹಳ್ಳಿ
ನಾನು ಸರ್ಕಾರಿ ನೌಕರ, ತಿಂಗಳ ಸಂಬಳ₹ 26,000. LIC, KGID, GPF ಕಡಿತದ ನಂತರ ₹ 19,000 ಕೈಗೆ ಬರುತ್ತದೆ. ನಮ್ಮ ಮನೆ ಪಕ್ಕದ ಜಮೀನು ಕೊಂಡುಕೊಳ್ಳಬೇಕೆಂದಿದ್ದೇನೆ. ಅದರ ಬೆಲೆ ₹ 9 ಲಕ್ಷ. ಎಸ್‌.ಬಿ.ಐ. ನಲ್ಲಿ ಸಂಬಳ ಆಗುತ್ತದೆ. ನನ್ನೊಡನೆ ₹ 2 ಲಕ್ಷವಿದೆ. ಉಳಿದ ₹ 7 ಲಕ್ಷ ಬ್ಯಾಂಕಿನಲ್ಲಿ ಸಾಲ ಸಿಗಬಹುದೇ ತಿಳಿಸಿರಿ. ನನಗೆ 15 ವರ್ಷ ಸೇವಾವಧಿ ಇದೆ. KGID, GPFನಲ್ಲಿ ಸಾಲ ಪಡೆದು ಮನೆ ಕಟ್ಟಿಸಿದ್ದೇನೆ. ಈ ಸಾಲ ಒಂದು ವರ್ಷದಲ್ಲಿ ತೀರುತ್ತದೆ.
ಉತ್ತರ:
ಕಡಿತದ ನಂತರ ನೀವು ಪಡೆಯುವ ಸಂಬಳ ₹ 19,000 ಇದ್ದು ಇದರಲ್ಲಿ ಮನೆ ಖರ್ಚು ಕಳೆದು ಗರಿಷ್ಠ ₹ 10,000 ಉಳಿಸಬಹುದು. ನಿಮ್ಮ ಪ್ರಶ್ನೆಯಲ್ಲಿ ಗೃಹ ಸಾಲದ ಕಂತು ತಿಳಿಸಿಲ್ಲ. ಇವೆಲ್ಲವನ್ನೂ ಪರಿಗಣಿಸುವಾಗ, ನೀವು ಸಂಬಳ ಪಡೆಯುವ ಬ್ಯಾಂಕಿನಲ್ಲಿ ಗರಿಷ್ಠ ₹ 1.50 ಲಕ್ಷ, 60 ತಿಂಗಳ ಅವಧಿಗೆ ಸಾಲ ಸಿಗಬಹುದು. ಈ ಮೊತ್ತ ಜಮೀನು ಕೊಳ್ಳಲು ಸಾಕಾಗಲಾರದು. ಜಮೀನು ಕೊಡುವವರು ಒಪ್ಪಿದರೆ, ಅರ್ಧ ಹಣ ಈಗ ಕೊಟ್ಟು, ಉಳಿದ ಹಣ ವಾರ್ಷಿಕ ಕಂತಿನಲ್ಲಿ ಕೊಡುವುದಾಗಿ ತಿಳಿಸಿರಿ. ಪ್ರಾಯಶಃ ಈ ಮಾರ್ಗ ಬಿಟ್ಟು ಬೇರೆ ಉತ್ತಮ ಮಾರ್ಗವಿಲ್ಲ.→ v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT