ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ದೇಶನದ ಕನಸು

Last Updated 20 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬಾಲ್ಯದಿಂದಲೂ ಬಣ್ಣದ ಜಗತ್ತಿನ ಆಕರ್ಷಣೆಗೆ ಒಳಗಾದವರು ಯುವ ನಿರ್ದೇಶಕ ಹಾಗೂ ನಟ ಅಮೋಘ ಶಂಭು. ಮಲ್ಲೇಶ್ವರದ ಆದರ್ಶ ಸಂಸ್ಥೆಯಲ್ಲಿ ತರಬೇತಿ ಪಡೆದಿರುವ ಶಂಭು, ಪುಣೆಯ ಫಿಲಂ ಇನ್‌ಸ್ಟಿಟ್ಯೂಟ್‌ನಿಂದಲೂ ಪಾಠ ಕಲಿತಿದ್ದಾರೆ.

‘ಜೈನ್ ಕಾಲೇಜಿನಲ್ಲಿ ಬಿಸಿಎ ನಾಲ್ಕನೇ ಸೆಮಿಸ್ಟರ್ ಓದುತ್ತಿದ್ದಾಗ ‘ಆಪ್ತಮಿತ್ರ’ ನೋಡಿದೆ. ಅಂಥದ್ದೊಂದು ಸಿನಿಮಾ ಮಾಡಬೇಕು ಎಂದು ನನಗೂ ಆಸೆಯಾಯಿತು. ಕಾಲೇಜು ಬಿಟ್ಟು ಪುಣೆಗೆ ಹೋದೆ. ಫಿಲಂ ಇನ್‌ಸ್ಟಿಟ್ಯೂಟ್‌ನಲ್ಲಿ ತರಬೇತಿ ಪಡೆದುಕೊಂಡ ಬಳಿಕ ನಿರ್ದೇಶಕ ಭಜರಂಗಿ ಎ.ಹರ್ಷ ಸಹಾಯಕ ನಿರ್ದೇಶಕನಾಗಿ ಅನುಭವ ಪಡೆಯಲು ಅವಕಾಶ ಮಾಡಿಕೊಟ್ಟರು’ ಎಂದು ನೆನಪಿಸಿಕೊಳ್ಳುತ್ತಾರೆ.

‘ಕಲರ್ಸ್‌’ ವಾಹಿನಿಯ ‘ನಾಗಕನ್ನಿಕೆ’ ಧಾರಾವಾಹಿಗೆ ಅಸೋಸಿಯಟ್‌ ಆಗಿ ಕೆಲಸ ಮಾಡಿರುವ ಅಮೋಘ, ಅದೇ ಚಾನೆಲ್‌ನ ‘ಕಿನ್ನರಿ’ ಧಾರಾವಾಹಿಗೂ ಏಳು ಪ್ರಾಜೆಕ್ಟ್‌ಗಳನ್ನು ಮಾಡಿ ಅನುಭವ ಪಡೆದಿದ್ದಾರೆ. ಈ ಅನುಭವಗಳು ಚೆನ್ನೈ ಫಿಲ್ಮ್‌ ಪ್ರೊಡೆಕ್ಷನ್‌ನ ಕೆಲ ಪ್ರಾಜೆಕ್ಟ್‌ಗಳಲ್ಲಿ ಅವಕಾಶ ದೊರೆಯಲು ಕಾರಣವಾಯಿತು. ಜಗನ್‌ಸಾಯಿ ಅವರು ಸಹಾಯಕನಾಗಿ ನೇಮಿಸಿಕೊಂಡರು.

ಶಂಭು ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ. ‘ಆಪ್ತಮಿತ್ರ’ ಸಿನಿಮಾ ನೋಡಿದ ನಂತರ ಚಿತ್ರದ ಆರಂಭದಿಂದ ಅಂತ್ಯವರೆಗಿನ ಸನ್ನಿವೇಶಗಳನ್ನು ಪುಸ್ತಕದಲ್ಲಿ ಬರೆದಿಟ್ಟು, ಗೆಳೆಯರ ಕೈಯಲ್ಲಿ ಓದಿಸಿದರಂತೆ. ಅವರು ಭೇಷ್ ಎಂದಿದ್ದು ಶಂಭು ಅವರ ಉತ್ಸಾಹ ಹೆಚ್ಚಾಗುವಂತೆ ಮಾಡಿತು. ಅಂದಿನಿಂದ ಇಂದಿನವರೆಗೆ ಅವರಲ್ಲಿ ಚಿತ್ರ ನಿರ್ದೇಶಕನಾಗುವ ಆಸೆ ಬೆಳೆಯುತ್ತಲೇ ಇದೆ. ‌

‘ನಾನು ಚಿತ್ರರಂಗಕ್ಕೆ ಬಂದು ಏಳು ವರ್ಷವಾಯಿತು. ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿ, ಅನುಭವ ಪಡೆದುಕೊಂಡಿದ್ದೇನೆ. ಸ್ವತಂತ್ರವಾಗಿ ನಿರ್ದೇಶಕನಾಗಿ ಕೆಲಸ ಮಾಡುವ ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ನನ್ನ ಪ್ರತಿಭೆ ತೋರಲು ಒಂದು ಅವಕಾಶ ಬೇಕಾಗಿದೆ’ ಎಂದು ವಿನಮ್ರವಾಗಿ ನುಡಿಯುತ್ತಾರೆ.

‘ಕ್ಯಾಂಪಸ್‌ ಲವ್‌ ಸ್ಟೋರಿ’ ಮತ್ತು ‘ಸ್ನೇಹದ ಜೀವಿಗಳು’ ಹೆಸರಿನ ಕಿರುಚಿತ್ರಗಳನ್ನೂ ಅವರು ರೂಪಿಸಿದ್ದಾರೆ. ‘ಸ್ನೇಹದ ಜೀವಿಗಳು’ ಕಿರುಚಿತ್ರವು ಸ್ನೇಹಿತರ ನಡುವೆ ನಡೆಯುವ ಪ್ರೇಮ ಪ್ರಕರಣದ ಹೂರಣ ಹೊಂದಿದೆ. ಕೆನಡಾ, ಲಂಡನ್‌, ಕ್ಯಾಲಿಫೋರ್ನಿಯ, ಲಾಸ್‌ಏಂಜಲೀಸ್‌ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ. ಸ್ಯಾನ್‌ಫ್ರಾನ್ಸಿಸ್ಕೊ ಚಿತ್ರೋತ್ಸವದಲ್ಲಿಯೂ ಅವಕಾಶ ಸಿಗುವ ವಿಶ್ವಾಸ ಶಂಭು ಅವರಿಗೆ ಇದೆ.

‘ನನ್ನ ಬಳಿ ಹತ್ತಾರು ಕಥೆಗಳಿವೆ. ಆದರೆ ನಿರ್ಮಾಪಕರು ಸಿಗುತ್ತಿಲ್ಲ. ಬಜೆಟ್‌ ವಿಚಾರದಲ್ಲಿ ವಿಪರೀತ ಚೌಕಾಶಿ ಮಾಡುತ್ತಾರೆ. ಕೇವಲ ₹60 ಲಕ್ಷದಲ್ಲಿ ಚಿತ್ರ ಮಾಡಿ ಮುಗಿಸು ಎಂದು ನಿರ್ಮಾಪಕರು ಹೇಳುತ್ತಾರೆ. ನಾನು ಆರ್ಥಿಕವಾಗಿ ಸಬಲನಲ್ಲ. ಯಾರ ಬೆಂಬಲವೂ ಇಲ್ಲ. ಅವಕಾಶ ಸಿಕ್ಕರೆ ಹೊಸ ರೀತಿಯ ಚಿತ್ರಗಳನ್ನು ಕನ್ನಡದಲ್ಲಿ ಮಾಡಬೇಕು ಎನ್ನುವ ಆಸೆ ಇದೆ’ ಎಂದು ಮನದ ಮಾತು ಹಂಚಿಕೊಳ್ಳುತ್ತಾರೆ.

ಸಂಪರ್ಕಕ್ಕೆ ಮೊಬೈಲ್‌: 73492 69271

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT