ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಹೃತರ ಅವಶೇಷ ಪತ್ತೆ

ಐಎಸ್‌ ಉಗ್ರರು ಅಪಹರಿಸಿದ್ದ 39 ಭಾರತೀಯರ ಹತ್ಯೆ: ಸಾಮೂಹಿಕ ಸಮಾಧಿ
Last Updated 20 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಮೂರು ವರ್ಷಗಳ ಹಿಂದೆ ಇರಾಕ್‌ನ ಮೋಸುಲ್‌ನಿಂದ ಐಎಸ್‌ ಉಗ್ರರು ಅಪಹರಿಸಿದ ಎಲ್ಲ 39 ಭಾರತೀಯರು ಮೃತಪಟ್ಟಿದ್ದಾರೆ. ಮೃತದೇಹಗಳ ಅವಶೇಷಗಳನ್ನು ಪತ್ತೆ ಮಾಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ತಿಳಿಸಿದ್ದಾರೆ.

ಆದರೆ ಈ ಮಾಹಿತಿಯನ್ನು ಅವರು ಬಹಿರಂಗಪ‍ಡಿಸಿದ ಕೂಡಲೇ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಮೂರು ವರ್ಷಗಳಿಂದ ಸರ್ಕಾರ ಮಾಹಿತಿಯನ್ನು ಮುಚ್ಚಿಟ್ಟಿದೆ. ಸಂತ್ರಸ್ತರ ಕುಟುಂಬದ ಸದಸ್ಯರಲ್ಲಿ ಹುಸಿ ನಿರೀಕ್ಷೆ ಹುಟ್ಟಿಸಲಾಗಿದೆ ಎಂದು ವಿರೋಧ ಪಕ್ಷಗಳ ಮುಖಂಡರು ಆರೋಪಿಸಿದ್ದಾರೆ. ವಿರೋಧ ಪಕ್ಷಗಳ ಆರೋಪವನ್ನು ಸರ್ಕಾರ ಅಲ್ಲಗಳೆದಿದೆ.

ಅಪಹೃತರು ಹತ್ಯೆಯಾಗಿದ್ದಾರೆ ಎಂದು ಘೋಷಿಸಲು ಬೇಕಾದ ಯಾವುದೇ ಸಾಕ್ಷ್ಯ ಸರ್ಕಾರಕ್ಕೆ ಸಿಕ್ಕಿರಲಿಲ್ಲ. ಪುರಾವೆ ಇಲ್ಲದೆ  ಯಾವುದೇ ಸರ್ಕಾರ ಇಂತಹ ಘೋಷಣೆ ಮಾಡುವುದು ಸಾಧ್ಯವಿಲ್ಲ ಎಂದು ಸುಷ್ಮಾ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಬೆಂಬಲಕ್ಕೆ ನಿಂತಿದ್ದಾರೆ.

‘ಅಪಹೃತರನ್ನು ಸುರಕ್ಷಿತವಾಗಿ ಕರೆತರಲು ಸರ್ಕಾರ ಎಲ್ಲ ಪ್ರಯತ್ನಗಳನ್ನೂ ಮಾಡಿದೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ. ಜತೆಗೆ ಈ ಕಾರ್ಯಾಚರಣೆಯಲ್ಲಿ ಸುಷ್ಮಾ ಮತ್ತು ವಿದೇಶಾಂಗ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ಜನರಲ್‌ ವಿ.ಕೆ.ಸಿಂಗ್‌ ಭಾರಿ ಶ್ರಮ ವಹಿಸಿದ್ದಾರೆ ಎಂದೂ ಹೇಳಿದ್ದಾರೆ.

ವಿವರ ಬಿಚ್ಚಿಟ್ಟ ಸುಷ್ಮಾ: ಅಪಹೃತರು ಹತ್ಯೆಯಾದದ್ದು ಯಾವಾಗ ಎಂಬುದು ಗೊತ್ತಾಗಿಲ್ಲ. ಆದರೆ, ಮೋಸುಲ್‌ನಿಂದ ವಾಯವ್ಯಕ್ಕೆ ಇರುವ ಬಾದೋಷ್‌ ಎಂಬ ಗ್ರಾಮದ ಸಾಮೂಹಿಕ ಸಮಾಧಿಯಲ್ಲಿ ಮೃತದೇಹಗಳು ಪತ್ತೆಯಾದವು. ಡಿಎನ್‌ಎ ಪರೀಕ್ಷೆಯ ಮೂಲಕ ಇವರೆಲ್ಲರನ್ನೂ ಗುರುತಿಸಲಾಗಿದೆ ಎಂದು ರಾಜ್ಯಸಭೆಯಲ್ಲಿ ಸುಷ್ಮಾ ಅವರು ಸ್ವಯಂಪ್ರೇರಿತ ಹೇಳಿಕೆ ನೀಡಿದರು.

‘ದೃಢವಾದ ಪುರಾವೆ ಇಲ್ಲದೆ ಯಾವುದೇ ವ್ಯಕ್ತಿ ಸತ್ತಿದ್ದಾರೆ ಎಂದು ಹೇಳಲು ನನಗೆ ಸಾಧ್ಯವಿಲ್ಲ. ಇಂದು ಆ ಬದ್ಧತೆಗೆ ಬೇಕಾದ ಎಲ್ಲ ಸಾಕ್ಷ್ಯಗಳೂ ಇವೆ. ಎಲ್ಲ ಸಾಕ್ಷ್ಯಗಳ ಜತೆಗೇ ಪ್ರಕರಣವನ್ನು ಪೂರ್ಣಗೊಳಿಸಲಾಗುವುದು ಎಂದು ನಾನು ಹೇಳಿದ್ದೆ. ಭಾರವಾದ ಹೃದಯದಿಂದ ಮೃತದೇಹಗಳ ಅವಶೇಷಗಳನ್ನು ಸಂಬಂಧಿಕರಿಗೆ ನೀಡುವುದರೊಂದಿಗೆ ಪ್ರಕರಣ ಮುಕ್ತಾಯಗೊಳ್ಳಲಿದೆ’ ಎಂದು ಸುಷ್ಮಾ ವಿವರಿಸಿದರು.

ನಾಪತ್ತೆಯಾದ 39 ಭಾರತೀಯರಿಗಾಗಿ, ಐಎಸ್‌ ಉಗ್ರರನ್ನು ಹೊಡೆದೋಡಿಸಿ ಮೋಸುಲ್‌ ನಗರವನ್ನು ಇರಾಕ್‌ ಸೇನೆ ವಶಕ್ಕೆ ಪಡೆದ ಬಳಿಕ ಶೋಧ ಆರಂಭವಾಯಿತು. ವಿ.ಕೆ.ಸಿಂಗ್‌ ಅವರು ಮೋಸುಲ್‌ಗೆ ಹೋಗಿ ಹುಡುಕಾಟ ಆರಂಭಿಸಿದರು. ಇರಾಕ್‌ನಲ್ಲಿರುವ ಭಾರತದ ರಾಯಭಾರಿ ಮತ್ತು ಇರಾಕ್‌ನ ಒಬ್ಬ ಅಧಿಕಾರಿ ಜತೆಯಾದರು. ಭಾರತೀಯರನ್ನು ಇರಿಸಲಾಗಿದ್ದ ಬಾದೋಷ್‌ ಸೆರೆಮನೆಯಿಂದ ಶೋಧ ಆರಂಭವಾಗಿತ್ತು.

ಶೋಧ ಕಾರ್ಯಾಚರಣೆಯಲ್ಲಿ ಸಿಂಗ್‌ ವಹಿಸಿದ ಪಾತ್ರವನ್ನು ಶ್ಲಾಘಿಸಿದ ಸುಷ್ಮಾ, ಹುಡುಕಾಟದ ಸಂದರ್ಭದಲ್ಲಿ ಈ ಮೂವರು ಸಣ್ಣದೊಂದು ಮನೆಯಲ್ಲಿ ನೆಲದಲ್ಲಿ ಮಲಗಬೇಕಾಗಿತ್ತು ಎಂಬುದನ್ನು ನೆನಪಿಸಿಕೊಂಡರು.

ಈ ಕಾರ್ಯಾಚರಣೆಯಲ್ಲಿ ನೆರವು ನೀಡಿದ ಇರಾಕ್‌ ಸರ್ಕಾರಕ್ಕೆ ಸುಷ್ಮಾ ಕೃತಜ್ಞತೆ ಸಲ್ಲಿಸಿದ್ದಾರೆ. ಮೃತದೇಹಗಳ ಅವಶೇಷಗಳನ್ನು ತರುವುದಕ್ಕಾಗಿ ಸಿಂಗ್‌ ಅವರು ಮತ್ತೆ ಇರಾಕ್‌ಗೆ ಹೋಗಲಿದ್ದಾರೆ.

ಸುಷ್ಮಾ ಅವರ ಹೇಳಿಕೆ ಪೂರ್ಣಗೊಳ್ಳುತ್ತಿದ್ದಂತೆಯೇ ‘ಇದೊಂದು ದುಃಖದ ಸಂಗತಿ’ ಎಂದು ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು ಹೇಳಿದರು. ಎಲ್ಲ ಸಂಸದರು ಎದ್ದು ನಿಂತ ಮೌನ ಆಚರಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು.

ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್‌ ಅವರು ಶ್ರದ್ಧಾಂಜಲಿ ಅರ್ಪಿಸಿದ ಬಳಿಕ ಮಾತನಾಡಿ, ‘ಮೋಸುಲ್‌ನಲ್ಲಿ ನಾಪತ್ತೆಯಾದ ಎಲ್ಲ ಭಾರತೀಯರು ಜೀವಂತವಾಗಿದ್ದಾರೆ ಎಂದು ಸರ್ಕಾರ ನಮಗೆ ಕಳೆದ ವರ್ಷ ಭರವಸೆ ನೀಡಿತ್ತು’ ಎಂಬುದನ್ನು ನೆನಪಿಸಿದರು.

ಸುಷ್ಮಾ ಅವರು ಇದೇ ಹೇಳಿಕೆಯನ್ನು ಲೋಕಸಭೆಯಲ್ಲಿಯೂ ನೀಡಲು ಬಯಸಿದ್ದರು. ಆದರೆ ವಿರೋಧ ಪಕ್ಷಗಳ ಗದ್ದಲದಿಂದಾಗಿ ಅವರಿಗೆ ಹೇಳಿಕೆ ನೀಡಲು ಸಾಧ್ಯವಾಗಲಿಲ್ಲ.

ಮೋಸುಲ್‌ನಲ್ಲಿ ಆಗಿದ್ದೇನು

ಇರಾಕ್‌ನ ಎರಡನೇ ಅತ್ಯಂತ ದೊಡ್ಡ ನಗರವಾದ ಮೋಸುಲ್‌ ಅನ್ನು ಐಎಸ್‌ ಉಗ್ರರು 2014ರಲ್ಲಿ ವಶಕ್ಕೆ ಪಡೆದರು. ಭಾರತದ 40 ಕಾರ್ಮಿಕರ ತಂಡವನ್ನು ಈ ಉಗ್ರರು ಆಗ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದರು. ಇವರಲ್ಲಿ ಹೆಚ್ಚಿನವರು ಪಂಜಾಬ್‌ ರಾಜ್ಯದವರು.

ಅವರ ಪೈಕಿ ಗುರುದಾಸಪುರದ ಹರ್‌ಜೀತ್‌ ಮಸೀಹ್‌ ಉಗ್ರರಿಂದ ತಪ್ಪಿಸಿಕೊಂಡು ಭಾರತಕ್ಕೆ ಮರಳಿದರು. ‘ಉಳಿದ ಎಲ್ಲರನ್ನೂ ಉಗ್ರರು ಕೊಲ್ಲುವುದನ್ನು ನೋಡಿದ್ದೇನೆ’ ಎಂದು ಅವರು ಹೇಳಿಕೆ ನೀಡಿದ್ದರು. ಆದರೆ ಸರ್ಕಾರ ಇದನ್ನು ಅಲ್ಲಗಳೆದಿತ್ತು. ‘ಮಸೀಹ್‌ ಹೇಳುತ್ತಿರುವುದು ಕಟ್ಟುಕತೆ. ತಾನು ಬಾಂಗ್ಲಾದೇಶ ಮುಸ್ಲಿಂ ಎಂದು ಸುಳ್ಳು ಹೇಳಿ ಮಸೀಹ್‌ ತಪ್ಪಿಸಿಕೊಂಡರು’ ಎಂದು ಸುಷ್ಮಾ ಪ್ರತಿಕ್ರಿಯೆ ನೀಡಿದ್ದರು.

* ಸಾವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಪಕ್ಷ ಕೀಳು ರಾಜಕಾರಣ ಮಾಡುತ್ತಿದೆ. ಅಪಹೃತರ ಸಾವಿನ ಸುದ್ದಿಯನ್ನು ಲೋಕಸಭೆಯಲ್ಲಿ ತಿಳಿಸುವಾಗ ಗದ್ದಲ ಎಬ್ಬಿಸಿದ್ದು ಯಾಕೆ ಎಂದು ಕಾಂಗ್ರೆಸ್‌ ವಿವರಿಸಬೇಕು

–ಸುಷ್ಮಾ ಸ್ವರಾಜ್‌, ವಿದೇಶಾಂಗ ಸಚಿವೆ

* ಸಂತ್ರಸ್ತ ಕುಟುಂಬಗಳು ಮತ್ತು ಸಂಸತ್ತನ್ನು ಇಷ್ಟು ವರ್ಷ ಸರ್ಕಾರ ತಪ್ಪುದಾರಿಗೆಳೆದದ್ದು ಯಾಕೆ? ಮಾಹಿತಿ ಮುಚ್ಚಿಟ್ಟು ಸಂತ್ರಸ್ತರಲ್ಲಿ ಹುಸಿ ನಿರೀಕ್ಷೆ ಹುಟ್ಟಿಸಿದ್ದು ಯಾಕೆ

–ಶಶಿ ತರೂರ್‌, ಕಾಂಗ್ರೆಸ್‌ ಮುಖಂಡ

* ಅಪಹೃತರು ಸತ್ತಿದ್ದಾರೆ ಎಂದು ಪುರಾವೆ ಇಲ್ಲದೆ ಘೋಷಿಸಲು ಸಾಧ್ಯವಿಲ್ಲ ಎಂದು ಸುಷ್ಮಾ ಹೇಳಿದ್ದರು. ಆದರೆ ವಿರೋಧ ಪಕ್ಷಗಳು ಅದನ್ನು ಬೇರೆಯೇ ರೀತಿ ನೋಡುತ್ತಿವೆ

–ಜ.ವಿ.ಕೆ. ಸಿಂಗ್‌, ವಿದೇಶಾಂಗ ವ್ಯವಹಾರ ಖಾತೆ ರಾಜ್ಯ ಸಚಿವ

* ಹಲವು ಬಾರಿ ಮೋಸುಲ್‌ಗೆ ಭೇಟಿ ನೀಡಿ ಸಾಮೂಹಿಕ ಸಮಾಧಿ ಪತ್ತೆ ಮಾಡಿದ ವಿ.ಕೆ. ಸಿಂಗ್‌

* ಡಿಎನ್‌ಎ ಪರೀಕ್ಷೆಯಿಂದ ಮೃತದೇಹಗಳ ಗುರುತು ಪತ್ತೆ

* ಇರಾಕ್‌ನಲ್ಲಿ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡು ಅವಶೇಷ ಭಾರತ ತಲುಪ‍ಲು 8–10 ದಿನ ಬೇಕು

* ಮೃತರಲ್ಲಿ 27 ಮಂದಿ ಪಂಜಾಬ್‌ನವರು, ಆರು ಮಂದಿ ಬಿಹಾರದವರು, ನಾಲ್ಕು ಮಂದಿ ಹಿಮಾಚಲ ಪ್ರದೇಶದವರು, ಇಬ್ಬರು ಪಶ್ಚಿಮ ಬಂಗಾಳದವರು

* 2014ರಲ್ಲಿ 10 ಸಾವಿರಕ್ಕೂ ಹೆಚ್ಚು ಭಾರತೀಯರು ಇರಾಕ್‌ನಿಂದ ಸ್ವದೇಶಕ್ಕೆ ಹಿಂದಿರುಗಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT