ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ್ತಿ: ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಲು ಸೂಚನೆ

Last Updated 20 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಬಡ್ತಿ ಮೀಸಲಾತಿ ವಿಧಾನ ಅನುಸರಿಸುವ 2002ರ ಕಾಯ್ದೆ ರದ್ದತಿ ಆದೇಶ ಪಾಲಿಸುವ ನಿಟ್ಟಿನಲ್ಲಿ, ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಲು ಇನ್ನೂ ಆರು ತಿಂಗಳ ಕಾಲಾವಕಾಶ ನೀಡಬೇಕು’ ಎಂಬ ರಾಜ್ಯ ಸರ್ಕಾರದ ಮನವಿಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ತಿರಸ್ಕರಿಸಿತು.

‘ಕಾಯ್ದೆ ರದ್ದುಪಡಿಸಿ ಕಳೆದ ಫೆಬ್ರುವರಿ 9ರಂದು ನೀಡಿರುವ ಆದೇಶವನ್ನು ಪಾಲನೆ ಮಾಡಿಲ್ಲ’ ಎಂದು ದೂರಿ ಸಲ್ಲಿಸಲಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆದರ್ಶಕುಮಾರ್‌ ಗೋಯಲ್‌ ಹಾಗೂ ಯು.ಯು. ಲಲಿತ್‌ ಅವರನ್ನು ಒಳಗೊಂಡ ಪೀಠವು, ಒಂದು ತಿಂಗಳೊಳಗೆ ಎಲ್ಲ ಇಲಾಖೆಗಳ ಜ್ಯೇಷ್ಠತಾ ಪಟ್ಟಿ ಪರಿಷ್ಕರಿಸಬೇಕು. ಇಲ್ಲದಿದ್ದರೆ ಏಪ್ರಿಲ್‌ 25ರಂದು ನಡೆಯಲಿರುವ ವಿಚಾರಣೆ ವೇಳೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಖುದ್ದಾಗಿ ಹಾಜರಾಗಬೇಕು ಎಂದು ಸೂಚಿಸಿತು.

ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಎಂ.ನಾಗರಾಜ್‌ ಅವರು ಕೇಂದ್ರ ಸರ್ಕಾರದ ವಿರುದ್ಧ 2006ರಲ್ಲಿ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯು ಸಂವಿಧಾನ ಪೀಠದಲ್ಲಿ ಬಾಕಿ ಇರುವುದರಿಂದ, ವಿಚಾರಣೆ ಪೂರ್ಣಗೊಳ್ಳುವವರೆಗೆ ಯಥಾಸ್ಥಿತಿ ಮುಂದುವರಿಸಲು ಸೂಚಿಸಬೇಕು ಎಂದು ಮಾಡಲಾದ ಮನವಿಯನ್ನೂ ನ್ಯಾಯಪೀಠ ತಿರಸ್ಕರಿಸಿತು.

‘ಸಂವಿಧಾನ ಪೀಠದೆದುರು ಇರುವ ಪ್ರಕರಣಗಳು, ನಾವು ನೀಡಿರುವ ಆದೇಶದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಸಂವಿಧಾನ ಪೀಠ ಏನೇ ಆದೇಶ ನೀಡಿದರೂ, ಬದಲಾವಣೆಗೆ ಸಂಬಂಧಿಸಿದಂತೆ ಕಾನೂನು ತನ್ನ ಪಾತ್ರ ವಹಿಸಲಿದೆ. ಈ ಪ್ರಕರಣದಲ್ಲಿ ನೀಡಲಾಗಿರುವ ಆದೇಶದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವನ್ನು ಸಮರ್ಥಿಸಲಾಗದು’ ಎಂದು ಪೀಠ ಅಭಿಪ್ರಾಯಪಟ್ಟಿತು.

‘ಆದೇಶ ಪಾಲಿಸದ್ದರಿಂದ ಅನೇಕ ಸಿಬ್ಬಂದಿಯ ಬಡ್ತಿಗೆ ತಡೆಹಿಡಿಯಲಾಗಿದೆ. ಆದೇಶ ಪಾಲನೆ ಆಗಬೇಕೆಂದರೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ವಿದ್ಯುತ್‌ ಪ್ರಸರಣ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್‌ ಜಾರಿ ಮಾಡಿ’ ಎಂದು ಅರ್ಜಿದಾರರ ಪರ ವಕೀಲ ರಾಜೀವ್‌ ಧವನ್‌ ಮನವಿ ಮಾಡಿದರು.

ಕರ್ನಾಟಕದ ವಿಧಾನಸಭೆ ಚುನಾವಣೆ ಘೋಷಣೆ ಆಗಲಿರುವುದರಿಂದ ಸರ್ಕಾರ ಯಾವುದೇ ರೀತಿಯ ಕ್ರಮವನ್ನು ತೆಗೆದುಕೊಳ್ಳುವ ಸಾಧ್ಯತೆಗಳಿಲ್ಲ ಎಂದೂ ಅವರು ದೂರಿದರು.

ಸರ್ಕಾರ ಈಗಾಗಲೇ ಎಲ್ಲ ಇಲಾಖೆಗಳ ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿದೆ. ಆದರೆ, ಬಡ್ತಿ ಹಾಗೂ ಹಿಂಬಡ್ತಿ ಕುರಿತು ಕ್ರಮ ಕೈಗೊಂಡಿಲ್ಲ ಎಂದು ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್‌ ರೋಹಟ್ಗಿ ತಿಳಿಸಿದರು.

ಬಡ್ತಿ ಮೀಡಲಾತಿ ಕುರಿತ ರಾಜ್ಯ ಸರ್ಕಾರದ ಕಾಯ್ದೆಯನ್ನು ಕೆ.ಎಸ್‌. ಪವಿತ್ರಾ ಅವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ರದ್ದುಪಡಿಸಿದ ಸಂದರ್ಭ, ಎಂ.ನಾಗರಾಜ್‌ ಪ್ರಕರಣವನ್ನೇ ಆಧರಿಸಿ ಆದೇಶ ನೀಡಲಾಗಿದೆ. ಸಂವಿಧಾನ ಪೀಠವು ಆ ಮೇಲ್ಮನವಿ ಮಾತ್ರವಲ್ಲದೆ ತ್ರಿಪುರಾ, ಮಹಾರಾಷ್ಟ್ರ ರಾಜ್ಯಗಳಿಗೆ ಸಂಬಂಧಿಸಿದ ಇದೇ ರೀತಿಯ ಅರ್ಜಿಗಳ ವಿಚಾರಣೆ ನಡೆಸುತ್ತಿದೆ. ಜುಲೈನಲ್ಲಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ನೀಡುವ ಸಾಧ್ಯತೆ ಇರುವುದರಿಂದ ಅಲ್ಲಿಯವರೆಗೆ ಈ ಪ್ರಕರಣದ ವಿಚಾರಣೆಯನ್ನು ಮುಂದೂಡಬೇಕು ಎಂದು ಅವರು ಮನವಿ ಮಾಡಿದರು.

ಮೀಸಲಾತಿ ಆಧಾರದಲ್ಲಿ ಸರ್ಕಾರಿ ನೌಕರರಿಗೆ ಸೇವಾ ಹಿರಿತನ ವಿಸ್ತರಿಸುವ ಕಾಯ್ದೆಯನ್ನು ರೂಪಿಸಿರುವ ರಾಜ್ಯ ಸರ್ಕಾರವು ರಾಷ್ಟ್ರಪತಿ ಅಂಕಿತಕ್ಕೆ ಕಳುಹಿಸಿದೆ. ಅಲ್ಲದೆ, ತೀರ್ಪಿನ ಮರು ಪರಿಶೀಲನೆ ಅರ್ಜಿ ವಿಚಾರಣೆಯೂ ಬಾಕಿ ಇದೆ ಎಂದೂ ಅವರು ನ್ಯಾಯಪೀಠದ ಗಮನ ಸೆಳೆದರು.

‘ನ್ಯಾಯಮೂರ್ತಿ ಮದನ್‌ ಬಿ. ಲೋಕೂರ್‌ ನೇತೃತ್ವದ ಪ್ರತ್ಯೇಕ ಪೀಠವು ಇದೇ ಪ್ರಕರಣದಲ್ಲಿ ಸಲ್ಲಿಕೆಯಾಗಿದ್ದ ಮತ್ತೊಂದು ಅರ್ಜಿಯ ವಿಚಾರಣೆ ನಡೆಸಿ ಯಥಾಸ್ಥಿತಿ ಮುಂದುವರಿಕೆಗೆ ಸೂಚಿಸಿದ್ದು, ನೀವೂ ಸೂಚಿಸಿ’ ಎಂದು ಪರಿಶಿಷ್ಟ ಜಾತಿ ಮತ್ತು ಪಂಗಡ ನೌಕರರ ಕಲ್ಯಾಣ ಸಂಘದ ಪರ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರೂ ಕೋರಿದರು.

ಸರ್ಕಾರವು ಈ ಪೀಠ ನೀಡಿರುವ ಆದೇಶವನ್ನು ಪಾಲಿಸಲಾಗಿದೆಯೇ ಎಂಬ ಅಂಶವನ್ನು ಮುಚ್ಚಿಟ್ಟಿದ್ದರಿಂದ ನ್ಯಾಯಮೂರ್ತಿ ಲೋಕೂರ್‌ ನೇತೃತ್ವದ ಪೀಠ ಈ ರೀತಿ ಸೂಚಿಸಿರುವ ಸಾಧ್ಯತೆ ಇದೆ ಎಂದು ರಾಜೀವ್‌ ಧವನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT