ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಂಗಡಿ ವಿತರಿಸಿ ವಿದ್ಯಾರ್ಥಿನಿಯರ ಪ್ರತಿಭಟನೆ

ಪ್ರಾಧ್ಯಾಪಕನಿಂದ ‘ಕಾಮುಕ ಭಾವನೆಯ ಹೇಳಿಕೆ’ ಆರೋಪ
Last Updated 20 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಕೋಯಿಕ್ಕೋಡ್ (ಕೇರಳ): ಇಲ್ಲಿನ ಫಾರೂಕ್ ತರಬೇತಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಟಿ.ಜೌಹರ್ ಮುನವ್ವಿರ್ ಅವರು ನೀಡಿದ್ದಾರೆ ಎನ್ನಲಾದ ‘ಕಾಮುಕ ಭಾವನೆಯ ಹೇಳಿಕೆ’ಯು ವಿದ್ಯಾರ್ಥಿನಿಯರ ಆಕ್ರೋಶಕ್ಕೆ ಕಾರಣವಾಗಿದೆ.

‘ಹುಡುಗಿಯರು ಮುಫ್ತಾ (ತಲೆಯನ್ನು ಮುಚ್ಚಲು ಮುಸ್ಲಿಂ ಮಹಿಳೆಯರು ಬಳಸುವ ಬಟ್ಟೆ) ಧರಿಸುತ್ತಿಲ್ಲ. ಬದಲಾಗಿ ಸ್ಕಾರ್ಫ್ ಅಥವಾ ಶಾಲುಗಳಿಂದ ತಲೆ ಮುಚ್ಚಿಕೊಳ್ಳುತ್ತಿದ್ದಾರೆ. ಅವರು ಉದ್ದೇಶಪೂರ್ವಕವಾಗಿ ಕಲ್ಲಂಗಡಿ ಹಣ್ಣಿನ ಭಾಗಗಳಂತೆ ತಮ್ಮ ಎದೆಯನ್ನು ಪ್ರದರ್ಶಿಸುತ್ತಾರೆ’ ಎಂದು ಮುನವ್ವಿರ್ ಹೇಳಿಕೆ ನೀಡಿದ್ದಾಗಿ ಆರೋಪಗಳು ಕೇಳಿಬಂದಿವೆ. ಈ ಹೇಳಿಕೆ ಇರುವ ಧ್ವನಿ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

‘ಈ ಕಾಲೇಜಿನಲ್ಲಿ ಶೇ 80 ಹೆಣ್ಣುಮಕ್ಕಳಿದ್ದಾರೆ. ಅವರೆಲ್ಲ ಬುರ್ಖಾದ ಒಳಗಡೆ ಲೆಗ್ಗಿಂಗ್ಸ್ ಧರಿಸಿ ಬರುತ್ತಾರೆ’ ಎಂಬ ಸಂಭಾಷಣೆಯೂ ಧ್ವನಿ ತುಣುಕಿನಲ್ಲಿ ಇದೆ.

ಪ್ರಾಧ್ಯಾಪಕರ ಹೇಳಿಕೆಯನ್ನು ವಿರೋಧಿಸಿದ ವಿದ್ಯಾರ್ಥಿನಿಯರು, ಕಲ್ಲಂಗಡಿ ಹಣ್ಣುಗಳನ್ನು ಹಿಡಿದು ಮತ್ತು ಅವುಗಳನ್ನು ವಿತರಿಸಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್ಐ) ಆಶ್ರಯದಲ್ಲಿ ಪ್ರತಿಭಟನೆ ನಡೆದಿದೆ. ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ಪ್ರತಿಭಟನಾಕಾರರು ಕಾಲೇಜಿನ ಎದುರು ಕಲ್ಲಂಗಡಿ ಹಣ್ಣುಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದರು.

ಹೋಳಿ ಆಚರಣೆ ವೇಳೆಯೂ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಕೆಲ ಉಪನ್ಯಾಸಕರ ನಡುವೆ ಘರ್ಷಣೆ ನಡೆದಿತ್ತು. ಈ ಸಂಬಂಧ ಪ್ರಕರಣ ದಾಖಲಾಗಿದೆ.

**

ಬಂಧನ

ನವದೆಹಲಿ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅತುಲ್‌ ಜೊಹ್ರಿ ಅವರನ್ನು ಮಂಗಳವಾರ ಬಂಧಿಸಲಾಗಿದೆ.

ಜೊಹ್ರಿ ಅವರನ್ನು ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದೆ ಎಂದು ಜಂಟಿ ಪೊಲೀಸ್‌ ಆಯುಕ್ತ ಅಜಯ್‌ ಚೌಧರಿ ತಿಳಿಸಿದ್ದಾರೆ.

ಎಂಟು ವಿದ್ಯಾರ್ಥಿನಿಯರು ನೀಡಿದ ದೂರಿನ ಆಧಾರದ ಮೇಲೆ ಜೀವ ವಿಜ್ಞಾನ ವಿಭಾಗದ ಜೊಹ್ರಿ ವಿರುದ್ಧ ಎಫ್ಐಆರ್‌ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT