ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಗ್ಗಾವಿ–ಸವಣೂರಿನಲ್ಲಿ ‘ಪೋಸ್ಟರ್’ ಸಮರ

ಆಕಾಂಕ್ಷಿಗಳ ನಡುವೆ ನಿಲ್ಲದ ಸ್ಪರ್ಧೆ: ‘ಕಮಲ’ದಲ್ಲಿ ಇಬ್ಬರು, ‘ಕೈ’ ಹಿಡಿಯಲು ಮೂವರ ಕಸರತ್ತು
Last Updated 21 ಮಾರ್ಚ್ 2018, 10:07 IST
ಅಕ್ಷರ ಗಾತ್ರ

ಹಾವೇರಿ: ಶಿಗ್ಗಾವಿ–ಸವಣೂರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮತ್ತು ಬಿಜೆಪಿ ಆಕಾಂಕ್ಷಿಗಳ ಸ್ಪರ್ಧೆ ತೀವ್ರಗೊಂಡಿದ್ದು, ಕ್ಷೇತ್ರದಾದ್ಯಂತ ‘ಪೋಸ್ಟರ್’ ಸಮರ ತಾರಕಕ್ಕೇರಿದೆ.

ಶಾಸಕ ಬಸವರಾಜ ಬೊಮ್ಮಾಯಿ ಬಿಜೆಪಿ ಅಭ್ಯರ್ಥಿ ಎಂದು ಸವಣೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದರು. ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಕಾಂಗ್ರೆಸ್ ಅಭ್ಯರ್ಥಿ ಎಂದು ಹಾವೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದರು. ಎರಡೂ ಘೋಷಣೆಗಳ ಬಳಿಕ ಆಕಾಂಕ್ಷಿಗಳ ಸ್ಪರ್ಧೆ ಇನ್ನಷ್ಟು ಬಿರುಸುಗೊಂಡಿದೆ.

ಇತರ ಆಕಾಂಕ್ಷಿಗಳು ತಮ್ಮ ಪಕ್ಷಗಳ ರಾಜ್ಯ ವರಿಷ್ಠರು ಮತ್ತು ದೆಹಲಿಯ ಹೈಕಮಾಂಡ್ ಮೇಲೆ ಸತತ ಒತ್ತಡ ಹೇರುತ್ತಿದ್ದಾರೆ. ಅದರೊಂದಿಗೆ ಕ್ಷೇತ್ರದಾದ್ಯಂತ ಫ್ಲೆಕ್ಸ್, ಪೋಸ್ಟರ್‌ಗಳ ಮೂಲಕ ಪ್ರಚಾರವನ್ನೂ ಮುಂದುವರಿಸಿದ್ದಾರೆ.

ಶಿಗ್ಗಾವಿ –ಸವಣೂರ ಕ್ಷೇತ್ರದ ಬಹುತೇಕ ಬಸ್ ನಿಲ್ದಾಣಗಳು, ಪ್ರಮುಖ ಬೀದಿಗಳು, ರಸ್ತೆ ಸೇರಿದಂತೆ ಕಂಡ ಕಂಡಲ್ಲಿ ಆಕಾಂಕ್ಷಿಗಳ ಪೋಸ್ಟರ್ ಮತ್ತು ಫ್ಲೆಕ್‌ಗಳು ರಾರಾಜಿಸುತ್ತಿವೆ.

‘ಕ್ಷೇತ್ರದ ಅಭಿವೃದ್ಧಿಯ ಪಥ ಸಾಗಿದೆ. ಅಭಿವೃದ್ಧಿಯ ಪಥವನ್ನು ಇನ್ನಷ್ಟು ಮುನ್ನಡೆಸಲು ನಮ್ಮೊಂದಿಗೆ ಕೈ ಜೋಡಿಸಿ’ ಎಂದು ಕುಣಿಮೆಳ್ಳಿಹಳ್ಳಿಯಲ್ಲಿ ಬಿಜೆಪಿಯ ಬಸವರಾಜ ಬೊಮ್ಮಾಯಿ ಬ್ಯಾನರ್ ಇದೆ. ಅದರ ಬಳಿಯೇ, ‘ದೇಶಕ್ಕೆ ನರೇಂದ್ರ ಮೋದಿಜೀ, ರಾಜ್ಯಕ್ಕೆ ಬಿ.ಎಸ್. ಯಡಿಯೂರಪ್ಪಾಜೀ, ಶಿಗ್ಗಾವಿ–ಸವಣೂರ ಕ್ಷೇತ್ರಕ್ಕೆ ಸೋಮಣ್ಣ ಬೇವಿನಮರದ’ ಎಂಬ ಬ್ಯಾನರ್ ಹಾಕಲಾಗಿದೆ.

‘ಚುನಾವಣೆ ಸಮೀಪಿಸುತ್ತಿದ್ದು, ಆಕಾಂಕ್ಷಿಗಳ ಸ್ಪರ್ಧೆ ತುರುಸಾಗಿದೆ. ಹೀಗಾಗಿ ನಾವೂ ಕಾದು ನೋಡುತ್ತಿದ್ದೇವೆ’ ಎಂದು ಸ್ಥಳೀಯ ನಾಗಪ್ಪ ಕರ್ಜಗಿ ತಿಳಿಸಿದರು.

ಮಣ್ಣೂರ ಬಸ್ ನಿಲ್ದಾಣದಲ್ಲಿ ಈ ಹಿಂದೆ ಕಾಂಗ್ರೆಸ್ ಅಭ್ಯರ್ಥಿ ಅಜ್ಜಂಪೀರ್ ಖಾದ್ರಿ ಅವರ ಭಿತ್ತಿಪತ್ರಗಳು ಇದ್ದವು. ಅಲ್ಲಿ ‘ನಮ್ಮೂರು ನಮ್ಮ ಹೆಮ್ಮೆ, ಬದಲಾವಣೆಗಾಗಿ ಕೈ ಜೋಡಿಸಿ’ ಎಂದು ಮಾಜಿ ಸಂಸದ ಮಂಜುನಾಥ ಸಿ. ಕುನ್ನೂರ ಮತ್ತು ಅವರ ಪುತ್ರ, ಕೆಪಿಸಿಸಿ ಕಾರ್ಮಿಕ ವಿಭಾಗದ ಪ್ರಧಾನ ಕಾರ್ಯದರ್ಶಿ ರಾಜು ಕುನ್ನೂರ ಭಿತ್ತಿಪತ್ರ ಹಾಕಲಾಗಿತ್ತು. ಕೆಲ ದಿನಗಳ ಹಿಂದೆ ‘ನಿಮಗಾಗಿ, ನಿಮಗೋಸ್ಕರ, ಸದಾ ನನ್ನ ಸೇವೆ’ ಎಂದು ಕೆಪಿಸಿಸಿ ಕಾರ್ಯದರ್ಶಿ ರಾಜೇಶ್ವರಿ ವೀ. ಪಾಟೀಲ (ಮಾಮಲೇ ದೇಸಾಯಿ) ಅವರ ಭಿತ್ತಿಪತ್ರಗಳನ್ನು ಹಾಕಲಾಗಿದೆ.

‘ಎಲ್ಲ ಆಕಾಂಕ್ಷಿಗಳ ಭಿತ್ತಿಪತ್ರವನ್ನು ಹಚ್ಚುತ್ತಿದ್ದಾರೆ. ಇದು, ಈ ಬಾರಿ ಕ್ಷೇತ್ರದಲ್ಲಿ ಬಿರುಸಿನ ಸ್ಪರ್ಧೆಯನ್ನು ತೋರಿಸುತ್ತಿದೆ’ ಎಂದು ರೈತ ಶೇಖರಗೌಡ ತಿಳಿಸಿದರು.

ಕೇವಲ ಕುಣಿಮೆಳ್ಳಿ ಹಳ್ಳಿ ಅಥವಾ ಮಣ್ಣೂರ ಮಾತ್ರವಲ್ಲ, ಶಿಗ್ಗಾವಿ, ಬಂಕಾಪುರ, ಸವಣೂರ ಪಟ್ಟಣಗಳು ಹಾಗೂ ಬಹುತೇಕ ಪ್ರಮುಖ ಹಳ್ಳಿಗಳಲ್ಲಿ ‘ಫ್ಲೆಕ್ಸ್ ಸಮರ’ ಕಣ್ಣಿಗೆ ರಾರಾಜಿಸುತ್ತಿವೆ. ಅಚ್ಚರಿ ಎಂದರೆ, ಆಯಾ ಪಕ್ಷದ ಆಕಾಂಕ್ಷಿಗಳು ಅಕ್ಕಪಕ್ಕವೇ ಭಿತ್ತಿಪತ್ರ, ಫ್ಲೆಕ್ಸ್ ಹಾಕಿಸುತ್ತಿದ್ದಾರೆ.

ಜೆಡಿಎಸ್: ಈ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಬೇವಿನಮರ ಸಿದ್ಧತೆ ನಡೆಸಿದ್ದಾರೆ ಅವರ ಹೆಸರನ್ನು ಪಕ್ಷದ ವರಿಷ್ಠರು ಅಧಿಕೃತವಾಗಿ ಘೋಷಿಸಬೇಕಾಗಿದೆ.

‘ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿ ಆಕಾಂಕ್ಷಿಗಳ ನಡುವೆ ಈ ಹಿಂದೆ ಕಾಣದಷ್ಟು ಸ್ಪರ್ಧೆ ಇದೆ. ಇದರ ಪರಿಣಾಮವನ್ನು ಆಯಾ ಪಕ್ಷಗಳು ‘ಬಿ ಫಾರಂ’ ನೀಡಿದ ಬಳಿಕವೇ ನಿರ್ಧರಿಸಲು ಸಾಧ್ಯ ’ ಎಂದು ಅವರು ಪ್ರತಿಕ್ರಿಯಿಸಿದರು.

‘ಕೊನೆ ಕ್ಷಣದಲ್ಲಿ ಯಾರು? ಯಾವ? ಪಕ್ಷದಿಂದ ಅಭ್ಯರ್ಥಿ ಆಗುತ್ತಾರೆ ಹಾಗೂ ಗೆದ್ದ ಬಳಿಕ ನೀರಿನ ಸಮಸ್ಯೆಯನ್ನು ಬಗೆಹರಿಸುತ್ತಾರೆ ಎಂಬುದೇ ನಮ್ಮ ಕುತೂಹಲ’ ಎಂದು ಮತದಾರರೊಬ್ಬರು ತಿಳಿಸಿದರು.

**

ಈ ಬಾರಿ ಶಿಗ್ಗಾವಿ–ಸವಣೂರ ಕ್ಷೇತ್ರದಲ್ಲಿ ಆಕಾಂಕ್ಷಿಗಳ ನಡುವೆ ಭಾರಿ ಸ್ಪರ್ಧೆಯಿದ್ದು, ಜನರ ನಿರೀಕ್ಷೆಯೂ ಹೆಚ್ಚಿದೆ
– ಸುರೇಶ ಶಿವಣ್ಣನವರ, ಮತದಾರ, ತವರಮೆಳ್ಳಿಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT