ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಸ್ಮೃತಿ ಆಡಳಿತ ಜಾರಿಗೆ ಹವಣಿಕೆ

ಚಿತ್ತಾಪುರ: ಕಾರ್ಯಕರ್ತರ ಸಮಾವೇಶದಲ್ಲಿ ಬಿಜೆಪಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ
Last Updated 21 ಮಾರ್ಚ್ 2018, 10:22 IST
ಅಕ್ಷರ ಗಾತ್ರ

ಚಿತ್ತಾಪುರ: ‘ಸಂವಿಧಾನದಲ್ಲಿ ನಂಬಿಕೆ ಯಿಲ್ಲದ ಬಿಜೆಪಿ ದೇಶದಲ್ಲಿ ಮನುಸ್ಮೃತಿ ಆಡಳಿತ ಜಾರಿಗೆ ಹವಣಿಸುತ್ತಿದೆ. ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸಂವಿಧಾನ ಬದಲಾಯಿಸುವ ಹೇಳಿಕೆ ನೀಡುತ್ತಿದ್ದಾರೆ. ದೇಶದ ಜನತೆ ಎಚ್ಚೆತ್ತುಕೊಳ್ಳಬೇಕು’ ಎಂದು ಪ್ರವಾಸೋದ್ಯಮ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಪಟ್ಟಣದ ರಾಯಲ್ ಮೈದಾನದಲ್ಲಿ ಮಂಗಳವಾರ ಬ್ಲಾಕ್ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡಿದ್ದ ‘ನವ ಚಿತ್ತಾಪುರ ನಿರ್ಮಾಣಕ್ಕಾಗಿ ಕಾರ್ಯ ಕರ್ತರ ಸಮಾವೇಶ’, ಅಭಿವೃದ್ಧಿಗಾಗಿ ಪ್ರಿಯಾಂಕ್ ಲಾಂಛನ ಮತ್ತು ಕಳೆದ 5 ವರ್ಷಗಳಲ್ಲಿ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾಮಗಾರಿ ಕುರಿತು ಕೈಪಿಡಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸಂವಿಧಾನದಡಿ ಸಂಸದರಾಗಿ ಆಯ್ಕೆಯಾಗಿ ಸಂವಿಧಾನ ಬದಲಾಯಿಸಲೆಂದೇ ನಾವು ಬಂದಿರುವುದಾಗಿ ಹೇಳುತ್ತಾರೆ ಎಂದರೆ ಅವರ ಮನಸ್ಥಿತಿ ಹೇಗಿದೆ ಎಂದು ಯೋಚಿಸಿ. ಸಂವಿಧಾನ ಅವರ ಮುತ್ತಾತನ ಸ್ವತ್ತಾ?’ ಎಂದು ಖಾರವಾಗಿ ಪ್ರಶ್ನಿಸಿದ ಪ್ರಿಯಾಂಕ್, ‘ಇಂತಹ ಅವಿವೇಕಿ ಸಂಸದರು ಆಯ್ಕೆಯಾಗಿರುವುದು ದೇಶದ ಮತ್ತು ಪ್ರಜಾಪ್ರಭುತ್ವದ ದೊಡ್ಡ ದುರಂತ’ ಎಂದು ಹೇಳಿದರು.

‘ಬಿಜೆಪಿಗೆ ಬಡವರ ಏಳಿಗೆ, ಉದ್ಧಾರ, ಪ್ರಗತಿ ಬೇಕಿಲ್ಲ. ಅವರಿಗೆ ಬೇಕಿರುವುದು ಶ್ರೀಮಂತರು, ಬಂಡ ವಾಳಶಾಹಿಗಳು, ದೇಶದ ಹಣ ಲೂಟಿ ಮಾಡುವವರು ಮಾತ್ರ. ರೈತರ ಸಾಲ ಮನ್ನಾ ಮಾಡಲಾಗದ ಮೋದಿ ಸರ್ಕಾರ ಅದಾನಿ, ಅಂಬಾನಿ ಹಾಗೂ ಇತರೆ ಉದ್ಯಮಿಗಳ ₹2 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ. ಇದರ ಆಧಾರದಲ್ಲಿ ಬಿಜೆಪಿ ಯಾರ ಪರವಾಗಿದೆ ಎಂದು ಜನರು ಅರಿತುಕೊಳ್ಳಬೇಕು’ ಎಂದರು.

‘ಪ್ರಧಾನಿ ಕುರ್ಚಿಯ ಮೇಲೆ ಕುಳಿತುಕೊಳ್ಳಲು ಮತ್ತು ಅಧಿಕಾರ ಅನುಭವಿಸಲು ಸುಳ್ಳು ಹೇಳಿ ಜನರಿಗೆ ಮೋಸ ಮಾಡಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದೇನು? ದುಡಿಯುವ ವರ್ಗ ದವರ ಹಣದ ಮೇಲೆ ಕಣ್ಣು ಹಾಕಿ ನೋಟ್ ಬದಲಾವಣೆಯ ಮೂಲಕ ಶ್ರೀಮಂತ ಉದ್ಯಮಿಗಳ ಸಾಲ ಮನ್ನಾ ಮಾಡಿದರು. ಇಲ್ಲಿವರೆಗೂ ಮಾಧ್ಯಮ ದವರ ಪ್ರಶ್ನೆಗಳಿಗೆ ಉತ್ತರಿಸುವ ಕನಿಷ್ಠ ಕೆಲಸ ಮಾಡಿಲ್ಲ. ಕೇವಲ ಫೇಸ್‌ಬುಕ್‌, ಟಿಟ್ಟರ್, ಮನ್ ಕೀ ಬಾತ್ ಹಾಗೂ ಬಹಿರಂಗ ಸಮಾರಂಭಗಳಲ್ಲಿ ಭಾಷಣ ಮಾತ್ರ ಮಾಡಿದ್ದಾರೆ’ ಎಂದು ಅವರು ಮಾತಿನ ಚಾಟಿ ಬೀಸುವ ಮೂಲಕ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಸಮಾರಂಭ ಉದ್ಘಾಟಿಸಿ ಹಾಗೂ ಸಚಿವ ಪ್ರಿಯಾಂಕ್ ಅವರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾಮಗಾರಿ ಮಾಹಿತಿ ಕೈಪಿಡಿ ಬಿಡುಗಡೆ ಮಾಡಿದ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮಾತ ನಾಡಿ, ‘ಅಭಿವೃದ್ಧಿ ಮತ್ತು ಬಡವರ ಕಲ್ಯಾಣ ಮಾಡುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಇತಿಹಾಸ ನಿರ್ಮಿಸಿದೆ. ಸ್ಥಿರ ಸರ್ಕಾರ ಮತ್ತು ಆಡಳಿತ, ಆರ್ಥಿಕ ಸ್ಥಿರತೆ ನೀಡಿದೆ’ ಎಂದು ಸರ್ಕಾರದ ಸಾಧನೆ ಗಳನ್ನು ಬಿಚ್ಚಿಟ್ಟರು.

‘ರಾಜ್ಯ ಸರ್ಕಾರ ಬಡವರ ಪರವಾಗಿ ಕೆಲಸ ಮಾಡಿ, ಜನಪರ, ಬಡವರ ಪರವಾದ ಕಾರ್ಯಕ್ರಮ ರೂಪಿಸಿ, ಯೋಜನೆ ಜಾರಿಗೊಳಿಸಿ ಜನರಿಗೆ ನೆಮ್ಮದಿಯ ಬದುಕು ಕಲ್ಪಿಸಿಕೊಟ್ಟಿದೆ. ಸರ್ಕಾರ ಬೊಕ್ಕಸದ ಹಣವನ್ನು ಬಡವರ ಯೋಜನೆಗಳಿಗೆ ಮೀಸಲಿಟ್ಟಿದೆ. ನುಡಿದಂತೆ ನಡೆದವರು, ವಾಗ್ದಾನ ಮಾಡಿದಂತೆ ಯಾರು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದು ಮತದಾರರು ತುಲನೆ ಮಾಡಬೇಕು’ ಎಂದು ಹೇಳಿದರು.

‘ಸಮಾಜವನ್ನು ಒಡೆಯುವ, ಸಾಮರಸ್ಯವನ್ನು ಕದಡುವ, ಕೋಮು ಗಲಭೆ ಉಂಟು ಮಾಡುವ ಕೆಲಸ ಬಿಜೆಪಿ ಮತ್ತು ಆರ್.ಎಸ್.ಎಸ್ ಮಾಡುತ್ತಿವೆ. ಪ್ರಸ್ತುತ ಕೇಂದ್ರದಲ್ಲಿ ಆರ್.ಎಸ್.ಎಸ್ ಮತ್ತು ಮನುಸ್ಮೃತಿ ಆಡಳಿತ ನಡೆಯುತ್ತಿದೆ. ಈ ಹಿಂದೆ ರಾಜ್ಯದಲ್ಲಿ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರ ರಾಜ್ಯದ ಮಾನ, ಮರ್ಯಾದೆ ಹರಾಜು ಹಾಕಿದೆ. ರಾಜ್ಯದ ಜನತೆ ನಾಚಿಕೆಪಡುವಂತೆ ಮಾಡಿದ್ದಾರೆ. ಇಂದು ರಾಜ್ಯದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ತತ್ವ ಪಾಲಿಸುವ ಕಾಂಗ್ರೆಸ್ ಸರ್ಕಾರ ಜನಕಲ್ಯಾಣ ಕೆಲಸ ಮಾಡಿದೆ’ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಸಂತಕುಮಾರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ ಇದ್ದರು.

**

ಚಿತ್ತಾಪುರ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅಭಿವೃದ್ಧಿಯ ಬುನಾದಿ ಹಾಕಿದರು. ಸಚಿವ ಪ್ರಿಯಾಂಕ್ ಖರ್ಗೆ ಅಭಿವೃದ್ಧಿಯ ಹೊಸ ಪರ್ವ ಆರಂಭಿಸಿದರು.
– ವಸಂತಕುಮಾರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT