ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿ ದಾಳಿ: ಅರಣ್ಯಧಿಕಾರಿಗಳ ವಿರುದ್ಧ ರೈತರ ಪ್ರತಿಭಟನೆ

Last Updated 21 ಮಾರ್ಚ್ 2018, 10:57 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಪೊನ್ನಂಪೇಟೆ, ಶ್ರೀಮಂಗಲ ವ್ಯಾಪ್ತಿ ಗ್ರಾಮಗಳಲ್ಲಿ ಆಗಾಗ್ಗೆ ಜಾನುವಾರುಗಳ ಮೇಲೆ ಹುಲಿ ದಾಳಿ ನಡೆದಿದ್ದು, ಇದರ ತಡೆಗೆ ಕ್ರಮವಹಿಸಲು ಆಗ್ರಹಪಡಿಸಿ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.

ಪೊನ್ನಂಪೇಟೆ ವಲಯ ಅರಣ್ಯ ಕಚೇರಿಗೆ ಮುತ್ತಿಗೆ ಬೆಳಿಗ್ಗೆ 10.30ಕ್ಕೆ ಜಾನುವಾರುಗಳ ಜೊತೆಗೆ ಬಂದ ರೈತ ಸಂಘಟನೆ ಮುಖಂಡರು ಹಾಗೂ ಇತರ ಸಂಘಸಂಸ್ಥೆಗಳ ಪದಾಧಿಕಾರಿಗಳು ತಮ್ಮ ಸಮಸ್ಯೆ ಬಗ್ಗೆ ಗಮನಸೆಳೆದರು.

‘ಹುಲಿ ದಾಳಿಯಿಂದ ರೈತರು ಜಾನುವಾರು ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ. ಹುಲಿ ದಾಳಿ ಸಮಸ್ಯೆ ಒಂದು ವರ್ಷದಿಂದ ಇದೆ’ ಎಂದು ದೂರಿದರು.

‘ರೈತರು ಆತಂಕದಲ್ಲಿಯೇ ದಿನ ಕಳೆಯುವ ಸ್ಥಿತಿ ಇದೆ. ಘಟನೆ ನಡೆದಾಗ ಸ್ಥಳಕ್ಕೆ ಬಂದು ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸುವ, ಬೋನು ಇಡುವ ಕ್ರಮ ವಹಿಸುತ್ತಾರೆ. ಮತ್ತೆ ಕೃತ್ಯ ನಡೆಯುವವರಿಗೆ ಮುಂಜಾಗ್ರತೆ ವಹಿಸುವುದಿಲ್ಲ’ ಎಂದು ದೂರಿದರು.

ರೈತ ಸಂಘದ ಜಿಲ್ಲಾ ಅಧ್ಯಕ್ಷ ಕಾಡ್ಯಮಾಡ ಸೋಮಯ್ಯ ಅವರು, ಜಾನುವಾರು ಕಳೆದುಕೊಂಡ ರೈತರಿಗೆ ಕಡಿಮೆ ಪರಿಹಾರ ಪಾವತಿಸಲಾಗುತ್ತಿದೆ. ಮತ್ತೆ ಜಾನುವಾರು ಖರೀದಿಸಲು ಆಗುವುದಿಲ್ಲ’ ಎಂದು ಅಳಲು ತೋಡಿಕೊಂಡರು.

ಇನ್ನೊಂದೆಡೆ ಕಾಡಾನೆಗಳ ದಾಳಿಯಿಂದ ಜೀವಹಾನಿಯೂ ಆಗುತ್ತಿದ್ದು, ಜನತೆಗೆ ನೆಮ್ಮದಿ ಕಳೆದುಕೊಂಡಿದ್ದಾರೆ. ಈ ಸಮಸ್ಯೆಗಳ ಬಗ್ಗೆ ತುರ್ತು ಗಮನಹರಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನಾಕಾರರು ಕೆಲ ಕಾಲ ರಸ್ತೆ ತಡೆ ನಡೆಸಿದರು.

ಸ್ಥಳಕ್ಕೆ ಆಗಮಿಸಿದ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮನಿ ಪೊನ್ನಪ್ಪ, ‘ರೈತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಸೆಳೆಯಲಾಗುವುದು’ ಎಂದು ಹೇಳಿದರು.

ಅಲ್ಲದೆ, ಪರಿಹಾರದ ಮೊತ್ತ ಹೆಚ್ಚಿಸುವ ಕುರಿತು ಸಂಬಂಧಿಸಿದವರ ಜೊತೆಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

ನಾಗರಹೊಳೆ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಪೌಲ್ ಆಂಟೋನಿ, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಮುಕ್ಕಾಟೀರ ಶಿವುಮಾದಪ್ಪ, ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ, ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಶಂಕರು ನಾಚಪ್ಪ, ರೈತ ಸಂಘದ ಕಾರ್ಯದರ್ಶಿ ಸುಜಯ್ ಬೋಪಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT