ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ಔಚಿತ್ಯ ಪ್ರಶ್ನಿಸಿದ ಹಿರಿಯ ಅಧಿಕಾರಿ

ಶಿಕ್ಷಣಾಧಿಕಾರಿ ಕಚೇರಿಯನ್ನು ತಾಲ್ಲೂಕು ಕಚೇರಿಗೆ ಬಿಟ್ಟು ಕೊಡಲು ಜಿಲ್ಲಾಧಿಕಾರಿ ಸತ್ಯವತಿ ಸೂಚನೆ
Last Updated 21 ಮಾರ್ಚ್ 2018, 11:21 IST
ಅಕ್ಷರ ಗಾತ್ರ

ಕೆಜಿಎಫ್‌: ಹೊಸ ತಾಲ್ಲೂಕಿನ ತಹಶೀಲ್ದಾರ್ ಕಚೇರಿಗಾಗಿ ಜಿಲ್ಲಾಡಳಿತ ನಿರ್ಧಾರ ಮಾಡಿದ್ದ ಕಟ್ಟಡವನ್ನು ನೀಡಿದ ಶಿಕ್ಷಣ ಇಲಾಖೆಯ ಸ್ಥಳೀಯ ಅಧಿಕಾರಿಗಳ ಔಚಿತ್ಯವನ್ನು ಇಲಾಖೆಯ ಹಿರಿಯ ಅಧಿಕಾರಿಗಳು ಪ್ರಶ್ನಿಸಿದ್ದಾರೆ.

ಕೆಜಿಎಫ್ ಹೊಸ ತಾಲ್ಲೂಕು ರಚನೆಗೆ ಡಿಸೆಂಬರ್‌ನಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಕೂಡಲೇ ಹೊಸ ತಾಲ್ಲೂಕು ರಚನೆಯಾಗಬೇಕು ಎಂದು ಜಿಲ್ಲಾಧಿಕಾರಿ ಸತ್ಯವತಿ ಮತ್ತಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ನಗರದಲ್ಲಿ ಹಲವಾರು ಕಟ್ಟಡಗಳನ್ನು ಪರಿಶೀಲನೆ ನಡೆಸಿದ್ದರು. ಆಗ ತಾನೆ ಹೊಸದಾಗಿ ನಿರ್ಮಿಸಿದ್ದ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸೂಕ್ತ ಜಾಗವೆಂದು ಗುರುತಿಸಿದ್ದ ಜಿಲ್ಲಾಧಿಕಾರಿ, ಕಚೇರಿಯನ್ನು ತಾಲ್ಲೂಕು ಕಚೇರಿಗೆ ಬಿಟ್ಟು ಕೊಡಲು ಮೌಖಿಕವಾಗಿ ಸೂಚಿಸಿದ್ದರು. ಅದರಂತೆ ಆಗ ತಾನೆ ಹಳೇ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಬಂದಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಸಿಬ್ಬಂದಿ ಒಲ್ಲದ ಮನಸ್ಸಿನಿಂದಲೇ ಹೊಸ ಕಟ್ಟಡ ಖಾಲಿ ಮಾಡಿ, ಹಳೇ ಕಟ್ಟಡಕ್ಕೆ ಸ್ಥಳಾಂತರವಾದರು.

ಈ ಸಂಬಂಧವಾಗಿ ಅಧಿಕೃತವಾಗಿ ಇಲಾಖೆಯ ಅನುಮತಿಯನ್ನು ಪಡೆಯಬೇಕಾದ ಅನಿವಾರ್ಯತೆಯಲ್ಲಿ ಸಿಕ್ಕಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಕೋಲಾರದ ಉಪನಿರ್ದೇಶಕರ ಕಚೇರಿಗೆ ಪತ್ರ ಬರೆದು ಕಂದಾಯ ಇಲಾಖೆಗೆ ಕಟ್ಟಡವನ್ನು ನೀಡಲಾಗಿದೆ. ಈ ಕಾರ್ಯಕ್ಕೆ ಅನುಮತಿ ನೀಡಬೇಕು ಎಂದು ಕೋರಿದರು. ಈ ಪತ್ರ ಶಿಕ್ಷಣ ಇಲಾಖೆಯ ಆಯುಕ್ತರಿಗೂ ಮುಟ್ಟಿತು. ಇಲಾಖೆಯ ಪೂರ್ವಾನುಮತಿಯಿಲ್ಲದೆ ಶಿಕ್ಷಣ ಇಲಾಖೆಯ ಅನುದಾನದಲ್ಲಿ ಕಟ್ಟಿದ ಕಟ್ಟಡವನ್ನು ಕಂದಾಯ ಇಲಾಖೆಗೆ ನೀಡಿದ ಬಗ್ಗೆ ಪ್ರಶ್ನಿಸಿದ ಆಯುಕ್ತರ ಕಚೇರಿ, ಹೊಸ ಕಟ್ಟಡ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಅಗ್ಯವಿಲ್ಲವೆ? ಶಿಕ್ಷಣ ಇಲಾಖೆಯ ಅನುದಾನದಲ್ಲಿ ಕಟ್ಟಿದ ಕಟ್ಟಡವನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸುವುದರಲ್ಲಿ ಪರ್ಯಾಯವಿದೆಯೇ? ಎಂಬ ಪ್ರಶ್ನೆಯನ್ನು ಒಡ್ಡಿದೆ.

ಇದಕ್ಕೆ ಉತ್ತರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸ್ಥಳಾಂತರ ತಾತ್ಕಾಲಿಕ. ಕೇವಲ ಆರು ತಿಂಗಳಿಗೆ ಮಾತ್ರ ನೀಡಲಾಗಿದೆ. ಹಾನಿ ಮತ್ತು ವಿರೂಪಗೊಳಿಸಬಾರದು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಅನುಮೋದನೆಗೆ ಒಳಪಟ್ಟಿದೆ ಎಂದು ತಿಳಿಸಿದೆ. ಈ ಸಂಬಂಧವಾಗಿ ಆಯುಕ್ತರಿಂದ ಇದುವರೆವಿಗೂ ಸೂಚನೆ ಬಂದಿಲ್ಲ.

ಈ ಎಲ್ಲ ಕಾರಣಗಳಿಂದ ಜತೆಗೆ ಹೊಸ ತಾಲ್ಲೂಕಿನ ಅಧಿಸೂಚನೆ ಹಾಗೂ ನಂತರದ ಆಕ್ಷೇಪಣೆಗೆ ಕಾಲಾವಕಾಶ ಮುಗಿದು ಸುಮಾರು ಮೂರು ತಿಂಗಳು ಮುಗಿಯುತ್ತಿದ್ದರೂ, ಇದುವರೆವಿಗೂ ಸರ್ಕಾರಿ ಹೊಸ ತಾಲ್ಲೂಕಿನ ಅಧಿಸೂಚನೆ ಹೊರಡಿಸಿಲ್ಲ. ಅನೇಕ ಹೊಸ ಕಚೇರಿಗಳು ನಾಮಫಲಕಕ್ಕೆ ಮಾತ್ರ ಸೀಮಿತವಾಗಿದೆ.

ತಹಶೀಲ್ದಾರ್ ಕಚೇರಿ ಸಮೇತ ಬಹುತೇಕ ಕಚೇರಿಗಳು ಬಾಗಿಲು ಹಾಕಿವೆ. ಸಿಬ್ಬಂದಿ ನೇಮಕವಾಗಿಲ್ಲ. ಪೀಠೋಪಕರಣಗಳು ಇಲ್ಲ. ಅಧಿಕೃತ ಉದ್ಘಾಟನೆಯೂ ಆಗಿಲ್ಲ. ಹೊಸ ತಾಲ್ಲೂಕು ಕಚೇರಿ ಸಂಕೀರ್ಣಕ್ಕೆ ಇನ್ನೂ ಜಾಗ ಗುರುತಿಸಿಲ್ಲ. ಈ ಸಂಬಂಧವಾಗಿ ಸ್ಥಳೀಯ ಕಂದಾಯ ಅಧಿಕಾರಿಗಳು ಮೇಲಿನಿಂದ ಆದೇಶಕ್ಕೆ ಕಾಯುತ್ತಿದ್ದಾರೆ. ಅಕಸ್ಮಾತ್‌ ಚುನಾವಣೆ ದಿನಾಂಕ ಘೋಷಣೆಯಾದರೆ, ಹೊಸ ತಾಲ್ಲೂಕು ರಚನೆ ಚುನಾವಣೆಯ ನಂತರವೇ ಎಂದು ಅಧಿಕಾರಿಗಳು ಹೇಳುತ್ತಾರೆ.

-ಕೃಷ್ಣಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT