ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು ಬಿಜೆಪಿ ಶಕ್ತಿ ಕೇಂದ್ರ ಆಗಲಿದೆ: ಸಂಸದ

Last Updated 21 ಮಾರ್ಚ್ 2018, 12:13 IST
ಅಕ್ಷರ ಗಾತ್ರ

ರಾಯಚೂರು: ರಾಜ್ಯಕ್ಕೆ ಶಕ್ತಿ (ವಿದ್ಯುತ್‌) ನೀಡುತ್ತಿರುವ ರಾಯಚೂರು ಜಿಲ್ಲೆಯು ಬಿಜೆಪಿಗೂ ಶಕ್ತಿ ಕೇಂದ್ರವಾಗಲಿದೆ ಎಂದು ಹಿಮಾಚಲ ಪ್ರದೇಶದ ಸಂಸದ ಅನುರಾಗ ಠಾಕೂರ್‌ ಹೇಳಿದರು.

ನಗರದ ವೀರಾಂಜನೇಯ ಮುನ್ನೂರುಕಾಪು ಸಮಾಜ ಕಲ್ಯಾಣಮಂಟಪದಲ್ಲಿ ಮಂಗಳವಾರ ಏರ್ಪಡಿಸಿದ್ದ ರಾಯಚೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

‘ಪಕ್ಷವು ಭೂತಮಟ್ಟದಲ್ಲಿ ಮಹಾಶಕ್ತಿಯಾಗಿ ಹೊಮ್ಮುವುದಕ್ಕೆ ಬೇಕಾದ ರೂಪುರೇಷೆಯನ್ನು ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮಿತ್‌ ಶಾ ಅವರು ರೂಪಿಸಿದ್ದಾರೆ. ಭೂತಮಟ್ಟದ ಕಾರ್ಯಕರ್ತರು ಕಡ್ಡಾಯವಾಗಿ ಆಯಾ ಭೂತ ವ್ಯಾಪ್ತಿಯ ಮನೆಗಳಿಗೆ ಭೇಟಿ ನೀಡಬೇಕು. ಒಂದು ಮನೆಯಲ್ಲಿರುವ ಒಟ್ಟು ಮತಗಳಲ್ಲಿ ಕನಿಷ್ಠ ಅರ್ಧದಷ್ಟು ಮತಗಳು ಬಿಜೆಪಿಗೆ ಬರುವಂತೆ ಮನವೊಲಿಸುವ ಕೆಲಸ ಮಾಡಬೇಕು. ರಾಯಚೂರು ನಗರದಲ್ಲಿ ಈ ಕೆಲಸ ಯಾವ ಪ್ರಮಾಣದಲ್ಲಿ ನಡೆದಿದೆ ಎನ್ನುವ ವರದಿಯನ್ನು ಈ ಸಭೆಯಲ್ಲಿ ಪಡೆದುಕೊಂಡು ಅಮಿತ್‌ ಶಾ ಅವರಿಗೆ ನಾನು ಮಾಹಿತಿ ನೀಡುತ್ತೇನೆ’ ಎಂದರು.

‘ಮತದಾನ ಸಮೀಪಿಸಿದಾಗ ‘ಪುಟ ಪ್ರಮುಖ’ರನ್ನು ನೇಮಿಸಲಾಗುವುದು. ಮತದಾರರ ಪಟ್ಟಿಯ ಒಂದು ಪುಟಕ್ಕೆ ಒಬ್ಬರು ಪ್ರಮುಖರಾಗಿದ್ದುಕೊಂಡು, ಆ ಒಂದು ಪುಟದಲ್ಲಿರುವ ಮತದಾರರು ಯಾವ ಪಕ್ಷಕ್ಕೆ ಮತ ನೀಡುತ್ತಾರೆ ಎನ್ನುವುದನ್ನು ಗುರುತಿಸುವ ಕೆಲಸ ಮಾಡಬೇಕಾಗುತ್ತದೆ’ ಎಂದು ಕಾರ್ಯಕರ್ತರಿಗೆ ತಿಳಿಸಿದರು.

ಉತ್ತರ ಪ್ರದೇಶ, ಗುಜರಾತ್‌ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಬಿಜೆಪಿ ಚುನಾವಣೆಯಲ್ಲಿ ಜಯ ಸಾಧಿಸುವುದಕ್ಕೆ ಈ ರೀತಿಯ ಕಾರ್ಯತಂತ್ರವು ಫಲ ಕೊಟ್ಟಿದೆ. ಕರ್ನಾಟಕದಲ್ಲೂ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಕರ್ನಾಟಕ ಸರ್ಕಾರವು ಬಿಜೆಪಿ ಕಾರ್ಯಕರ್ತರನ್ನು ಬಲಿ ತೆಗೆದುಕೊಂಡಿದೆ. ಇದಕ್ಕೆ ಪ್ರತೀಕಾರವಾಗಿ ಬಿಜೆಪಿ ಕಾರ್ಯಕರ್ತರು ಸರ್ಕಾರವನ್ನು ಬದಲಿಸುವ ಶಪಥ ಮಾಡಿ ಕೆಲಸ ಮಾಡಬೇಕು. ಭೂತಮಟ್ಟದಲ್ಲಿ ಮತದಾರರ ಮನವೊಲಿಸುವ ಕೆಲಸ ಪರಿಣಾಮಕಾರಿಯಾಗಿ ನಡೆಯಬೇಕು’ ಎಂದು ತಿಳಿಸಿದರು.

ಕಾಂಗ್ರೆಸ್‌ ಜತೆ ರಸ್ತೆಯಲ್ಲಿ ಚರ್ಚೆ!

‘ಸಂಸತ್‌ ಕಾರ್ಯಕಲಾಪದಲ್ಲಿ ಭಾಗವಹಿಸಿ ಚರ್ಚೆ ಮಾಡುವುದಕ್ಕೆ ಕಾಂಗ್ರೆಸ್‌ ನಾಯಕರು ಹೆದರಿದ್ದಾರೆ. ಲೋಕಸಭೆ ಕಾಂಗ್ರೆಸ್‌ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಸಂಸದೆ ಸೋನಿಯಾ ಗಾಂಧಿ ಅವರು ಚರ್ಚೆಯಲ್ಲಿ ಭಾಗವಹಿಸುತ್ತಿಲ್ಲ. ಚರ್ಚೆಯಲ್ಲಿ ಭಾಗವಹಿಸಿದರೆ ಕರ್ನಾಟಕದಲ್ಲೂ ಕಾಂಗ್ರೆಸ್‌ ಇರುವುದಿಲ್ಲ ಎನ್ನುವ ಆತಂಕ ರಾಹುಲ್‌ಗಾಂಧಿ ಅವರಿಗೆ ಶುರುವಾಗಿದೆ. ಲೋಕಸಭೆಯಲ್ಲಿ ಚರ್ಚೆ ಮಾಡುವುದಕ್ಕೆ ಬಾರದ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಕರ್ನಾಟಕದ ರಸ್ತೆಯಲ್ಲೆ ಚರ್ಚಿಸುತ್ತೇವೆ’ ಎಂದು ಸಂಸದ ಅನುರಾಗಸಿಂಗ್‌ ಠಾಕೂರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT