ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸನ್ನದ್ಧರಾದ 25,934 ವಿದ್ಯಾರ್ಥಿಗಳು

ಮಾರ್ಚ್‌ 23ರಿಂದ ಏಪ್ರಿಲ್‌ 6ರವರೆಗೆ ಪರೀಕ್ಷೆ * ಸಕಲ ಸಿದ್ಧತೆ ನಡೆಸಿದ ಜಿಲ್ಲಾಡಳಿತ
Last Updated 21 ಮಾರ್ಚ್ 2018, 12:22 IST
ಅಕ್ಷರ ಗಾತ್ರ

ಶಿವಮೊಗ್ಗ: ಶೈಕ್ಷಣಿಕ ಜೀವನದಲ್ಲಿ ಪ್ರಗತಿ ಸಾಧಿಸಲು ಎಸ್ಸೆಸ್ಸೆಲ್ಸಿ ಪರೀಕ್ಷೆ ಮೊದಲ ಮೆಟ್ಟಿಲು. ಇಲ್ಲಿ ಪಡೆಯುವ ಅಂಕಗಳು ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುತ್ತವೆ. ಇಂತಹ ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ.

ಮಾರ್ಚ್‌ 23ರಿಂದ ಏಪ್ರಿಲ್‌ 6ರವರೆಗೆ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಈ ಬಾರಿ ಜಿಲ್ಲೆಯಿಂದ ಒಟ್ಟು 25,934 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಇದರಲ್ಲಿ 11,154 ಬಾಲಕರು ಹಾಗೂ 11,578 ಬಾಲಕಿಯರು ಇದೇ ಮೊದಲ ಬಾರಿಗೆ ಪರೀಕ್ಷೆ ಬರೆಯುತ್ತಿದ್ದಾರೆ. ಉಳಿದಂತೆ 2,690 ಅನುತ್ತೀರ್ಣ ಅಭ್ಯರ್ಥಿಗಳು, 420 ಖಾಸಗಿ ಅಭ್ಯರ್ಥಿಗಳು, ಹಾಗೂ 92 ಖಾಸಗಿ ಅನುತ್ತೀರ್ಣ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.

82 ಪರೀಕ್ಷಾ ಕೇಂದ್ರ:

ವಿದ್ಯಾರ್ಥಿಗಳ ಅನುಕೂಲತೆಯ ದೃಷ್ಟಿಯಿಂದ ಈ ಬಾರಿ ಭದ್ರಾವತಿಯಲ್ಲಿ 15, ಹೊಸನಗರದಲ್ಲಿ 5, ಸಾಗರದಲ್ಲಿ 10, ಶಿಕಾರಿಪುರದಲ್ಲಿ 11, ಶಿವಮೊಗ್ಗದಲ್ಲಿ 24, ಸೊರಬದಲ್ಲಿ 10, ತೀರ್ಥಹಳ್ಳಿಯಲ್ಲಿ 7 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಅದರಲ್ಲಿ 44 ಸರ್ಕಾರಿ ಶಾಲೆ ಪರೀಕ್ಷಾ ಕೇಂದ್ರಗಳು, 30 ಅನುದಾನಿತ ಪರೀಕ್ಷಾ ಕೇಂದ್ರಗಳು ಹಾಗೂ 8 ಅನುದಾನಿತ ರಹಿತ ಪರೀಕ್ಷಾ ಕೇಂದ್ರಗಳು ಸೇರಿವೆ. ಈ ಬಾರಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಕೇಂದ್ರಗಳು ಯಾವುದೂ ಇಲ್ಲ ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.

66 ಮಂದಿ ವೀಕ್ಷಕರು:

ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಅವ್ಯವಹಾರಗಳು ನಡೆಯದಂತೆ ಜಿಲ್ಲೆಯಾದ್ಯಂತ ಒಟ್ಟು 66 ವೀಕ್ಷಕರನ್ನು ನೇಮಿಸಲಾಗಿದೆ. ಇವರು ಶಿಕ್ಷಣ ಇಲಾಖೆ ಹೊರತು ಪಡಿಸಿದ ಅಧಿಕಾರಿಗಳು. ಜತೆಗೆ ಪ್ರತಿ ಕೇಂದ್ರಕ್ಕೆ ಒಬ್ಬ ಸ್ಥಾನಿಕ ಜಾಗೃತದಳ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಾರೆ. ಅಲ್ಲದೆ ಪ್ರತಿ ತಾಲ್ಲೂಕಿಗೆ ಒಂದೊಂದು ಮೊಬೈಲ್‌ ಸ್ಕ್ವಾಡ್‌ (ಪ್ರತಿ ತಂಡದಲ್ಲಿ 3 ಜನ) ಕಾರ್ಯ ನಿರ್ವಹಿಸಲಿದ್ದಾರೆ.

ಮೊದಲ ಬಾರಿಗೆ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು:

ಇಲ್ಲಿಯವರೆಗೆ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಕೇಂದ್ರಗಳು ಹಾಗೂ ಕೆಲವು ಖಾಸಗಿ ಶಾಲಾ ಪರೀಕ್ಷಾ ಕೇಂದ್ರಗಳಲ್ಲಿ ಮಾತ್ರ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುತ್ತಿತ್ತು. ಆದರೆ ಈ ವರ್ಷ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಪ್ರಶ್ನೆಪತ್ರಿಕೆಗಳು ಖಜಾನೆಯಿಂದ ಪರೀಕ್ಷಾ ಕೇಂದ್ರಗಳಿಗೆ ರವಾನೆಯಾಗುವಾಗ ವಿಡಿಯೊ ಮಾಡಲಾಗುತ್ತದೆ. ಪ್ರಶ್ನೆಪತ್ರಿಕೆ ಬಂಡಲ್‌ಗಳನ್ನು ಖಜಾನೆಯಲ್ಲಿ ಸ್ವೀಕರಿಸುವ ವೇಳೆ ಮತ್ತು ಪರೀಕ್ಷಾ ಕೇಂದ್ರದಲ್ಲಿ ಬಂಡಲ್ ತೆರೆಯುವ ಸಂದರ್ಭದಲ್ಲಿ ಬಾರ್ ಕೋಡ್‌ ಸ್ಕ್ಯಾನ್ ಮಾಡಿ ತೆರೆಯಲಾಗುತ್ತದೆ.

ಪ್ರತ್ಯೇಕ ಗುರುತಿನ ಚೀಟಿ:

ಪರೀಕ್ಷೆ ವೇಳೆ ಅಕ್ರಮಗಳ ತಡೆಯಲು ಪರೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮಾರ್ಗಾಧಿಕಾರಿಗಳು, ನೀರು ಸರಬರಾಜು ಮಾಡುವವರು, ಜಾಗೃತದಳ ಸಿಬ್ಬಂದಿ, ವೀಕ್ಷಕರು ಹೀಗೆ ಎಲ್ಲ ಸಿಬ್ಬಂದಿಗೆ ಚುನಾವಣೆ ಮಾದರಿಯಲ್ಲಿ ಟ್ಯಾಗ್‌ಸಹಿತ ಪ್ರತ್ಯೇಕ ಬಣ್ಣದ ಗುರುತಿನ ಚೀಟಿ ನೀಡಲು ನಿರ್ಧರಿಸಲಾಗಿದೆ. ಎಲ್ಲ ಶ್ರೇಣಿಯ ಸಿಬ್ಬಂದಿಗೂ ಪ್ರತ್ಯೇಕ ಬಣ್ಣದ ಗುರುತಿನ ಚೀಟಿಗಳನ್ನು ನೀಡುವುದರಿಂದ ಅವರ ಕಾರ್ಯಚಟುವಟಿಕೆಯನ್ನು ಗುರುತಿಸಲು ಸಹಕಾರಿಯಾಗಲಿದೆ ಎಂದು ಡಿಡಿಪಿಐ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರಗಳ ಸುತ್ತ 144 ಸೆಕ್ಷನ್‌ ಜಾರಿ: ಪರೀಕ್ಷೆಯಲ್ಲಿ ಅವ್ಯವಹಾರ ತಡೆಯಲು ಪೊಲೀಸರು ಬಿಗಿ ಭದ್ರತೆ ಕೈಗೊಳ್ಳಲಿದ್ದಾರೆ. ಪರೀಕ್ಷೆ ನಡೆಯುವ ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲ ಜೆರಾಕ್ಸ್ ಅಂಗಡಿಗಳನ್ನು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30ರವರೆಗೆ ಮುಚ್ಚಲು ಆದೇಶ ಹೊರಡಿಸಲಾಗಿದೆ. ಅಲ್ಲದೆ ಯಾವುದೇ ರೀತಿಯ ಘೋಷಣೆ ಕೂಗುವುದನ್ನು, ನಿಷೇಧಿತ ವ್ಯಾಪ್ತಿಯಲ್ಲಿ 5ಕ್ಕಿಂತ ಹೆಚ್ಚು ಮಂದಿ ಸೇರುವುದನ್ನು ನಿಷೇಧಿಸಲಾಗಿದೆ.

ಪರೀಕ್ಷಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ ಉಚಿತ ಸೇವೆ:

ಕೆಎಸ್‌ಆರ್‌ಟಿಸಿ ಸಂಸ್ಥೆಯು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಅವಧಿಯಲ್ಲಿ ಉಚಿತ ಪ್ರಯಾಣಿಸಲು ಸೌಲಭ್ಯ ಕಲ್ಪಿಸಿದೆ. ಮಾರ್ಚ್‌ 23 ರಿಂದ ಏ.6ವರೆಗೆ ತಮ್ಮ ವಾಸಸ್ಥಳದಿಂದ ಪರೀಕ್ಷಾ ಕೇಂದ್ರದವರೆಗೆ ಹಾಗೂ ಹಿಂದಿರುವಾಗ ಪರೀಕ್ಷಾ ಪ್ರವೇಶ ಪತ್ರ ತೋರಿಸಿ ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಪ್ರಯಾಣಿಸಲು ಅವಕಾಶ ಒದಗಿಸಲಾಗಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವವರು

11,154 ಮೊದಲ ಬಾರಿಗೆ ಪರೀಕ್ಷೆ ಬರೆಯುತ್ತಿರುವ ಬಾಲಕರು

11,578 ಮೊದಲ ಬಾರಿಗೆ ಪರೀಕ್ಷೆ ಬರೆಯುತ್ತಿರುವ ಬಾಲಕಿಯರು

2,690 ಅನುತ್ತೀರ್ಣ ಅಭ್ಯರ್ಥಿಗಳು

420 ಖಾಸಗಿ ಅಭ್ಯರ್ಥಿಗಳು

92 ಖಾಸಗಿ ಅನುತ್ತೀರ್ಣ ಅಭ್ಯರ್ಥಿಗಳು

25,934 ಒಟ್ಟು ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT