ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್‌ ಸಿರಿಯಾ

Last Updated 21 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಅದು ನಸುಕು. ಮಂಚಕ್ಕೆ ಒರಗಿಕೊಂಡು ಕೂತಿರುವ ಅವಳು ಮೊಬೈಲಿನಲ್ಲಿ ಮದುವೆಯ ಚಿತ್ರಗಳನ್ನು ನೋಡುತ್ತಿದ್ದಾಳೆ. ಅವಳ ಕಣ್ಣುಗಳಲ್ಲಿ ಸವಿನೆನಪುಗಳ ಮಿಂಚು ಕಾಣುತ್ತಿಲ್ಲ, ಬದಲಿಗೆ ಭೀತಿಯ ಛಾಯೆ ಎದ್ದು ಹೊಡೆಯುತ್ತಿದೆ. ಪಕ್ಕದ ತೊಟ್ಟಿಲಲ್ಲಿ ಈಗಷ್ಟೇ ಎಚ್ಚರವಾಗಿ ನಗುತ್ತಿರುವ ಮಗು. ಮಂಚದ ಮೇಲೆ ಮಲಗಿರುವ ಗಂಡ.

ಅವತ್ತು ಸಂಜೆಯೇ ಅವರು ದೇಶ ತೊರೆದು ಹೋಗಲು ಸಕಲ ಏರ್ಪಾಟುಗಳನ್ನೂ ಮಾಡಿಕೊಂಡಿದ್ದಾರೆ. ಈ ನರಕದಿಂದ ಪಾರಾಗುತ್ತಿರುವ ಸಮಾಧಾನ ಮನಸಲ್ಲಿ ತುಂಬುತ್ತಿದೆ. ಗಂಡ, ಹೆಂಡತಿಗೂ ಅವಳ ಮಡಿಲಲ್ಲಿನ ಮಗುವಿನ ನೆತ್ತಿಗೂ ಮುತ್ತಿಕ್ಕಿ ಸಂಜೆಯೊಳಗೆ ಬರುವುದಾಗಿ ಹೇಳಿ ಹೊರಡುತ್ತಾನೆ. ಕಟ್ಟಡದಿಂದ ಹೊರಬೀಳುತ್ತಿರುವ ಹಾಗೆಯೇ ಅವನ ಬೆನ್ನನ್ನು ಗುಂಡು ಸೀಳುತ್ತದೆ. ಹಾಗೆಯೇ ನೆಲಕ್ಕೊರಗುತ್ತಾನೆ.

ಗಂಡ ಸತ್ತಿದ್ದನ್ನು ಆ ಮನೆಯ ಕೆಲಸದಾಕೆ ಕಿಟಕಿಯಿಂದ ನೋಡುತ್ತಾಳೆ. ಭಯದಿಂದ ಓಡಿಬಂದು ಮಾಲೀಕಳಿಗೆ ತಿಳಿಸುತ್ತಾಳೆ. ಹೆಂಡತಿ ಇನ್ನೂ ಮಗುವನ್ನು ಮಲಗಿಸಿಕೊಂಡು ಏನೂ ಅರಿವಿಲ್ಲದೇ ರೂಮಿನಲ್ಲಿ ಕೂತಿದ್ದಾಳೆ. ಅವಳಿಗೆ ಹೇಗೆ ಹೇಳುವುದು? ಹೇಳಿದರೆ ಏನಾಗಬಹುದು?

ಇಂಥದ್ದೊಂದು ಹೃದಯಕಲಕುವ ಸನ್ನಿವೇಶದೊಂದಿಗೇ ಆರಂಭವಾಗುತ್ತದೆ ಪಿಲಿಪ್ಪೇ ವ್ಯಾನ್‌ ಲೀಯೂ ನಿರ್ದೇಶನದ ‘ಇನ್‌ ಸಿರಿಯಾ’ ಸಿನಿಮಾ.   2011ರಿಂದೀಚೆಗೆ ಬಂಡುಕೋರರು ಮತ್ತು ಪ್ರಭುತ್ವದ ನಡುವೆ ನಡೆಯುತ್ತಿರುವ ಯುದ್ಧದಿಂದ ಸಿರಿಯಾ ದೇಶ ತತ್ತರಿಸಿ ಹೋಗಿದೆ. ಅಲ್ಲಿನ ಹಿಂಸೆಯನ್ನು ತಾಳಲಾಗದೆ ಲಕ್ಷಾಂತರ ಜನರು ದೇಶ ತೊರೆದಿದ್ದಾರೆ.

ಇರುವಷ್ಟೂ ಜನರು ಅನುದಿನ ಅನುಕ್ಷಣ ಗುಂಡಿನ ಮೊರೆತ ಕೇಳುತ್ತ, ಬಾಂಬಿಗೆ ಮುರಿದುಬಿದ್ದ ಕಟ್ಟಡಗಳ ನಡುವೆಯೇ ಬದುಕುತ್ತಾ, ತನ್ನ ದೇಹದೊಳಗೆ ಯಾವಾಗ ಎಲ್ಲಿಂದ ಗುಂಡು ಬಂದು ಹೊಗುತ್ತದೆಯೋ ಎಂಬ ಮೃತ್ಯುಭಯದಲ್ಲಿಯೇ ಬದುಕು ತ್ತಿದ್ದಾರೆ. ಹೀಗೆ ಯುದ್ಧದ ಅಟ್ಟಹಾಸಕ್ಕೆ ಪತರಗುಟ್ಟುತ್ತಿರುವ ದೇಶದಲ್ಲಿನ ಕ್ರೌರ್ಯದ ಚಹರೆಗಳನ್ನು  ಒಂದು ಅಪಾರ್ಟ್‌ಮೆಂಟಿನ ಒಂದು ಮನೆಯ ಒಳಗಿನ ಒಂದು ದಿನದ ಬದುಕಿನ ಮೂಲಕವೇ ಕಟ್ಟಿಕೊಡುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ.

ಜಗತ್ತಿನ ಎಲ್ಲ ಯುದ್ಧಗಳೂ ಪುರುಷಾಹಂಕಾರದ ವಿಷಫಲಗಳು. ಆದರೆ ಅದನ್ನು ಉಣ್ಣುವುದು ಮಾತ್ರ ಮಹಿಳೆಯರು ಮತ್ತು ಮಕ್ಕಳು ಎನ್ನುವ ನಿಗಿನಿಗಿ ಸತ್ಯವನ್ನೂ ಈ ಚಿತ್ರ ಮನಸ್ಸಿಗೆ ಸುರಿಯುತ್ತದೆ. ಯುದ್ಧವೆಂದರೆ ಗುಂಡು– ಬಾಂಬುಗಳ ದಾಳಿಯಷ್ಟೇ ಅಲ್ಲ, ಹೆಣ್ಣಿನ ದೇಹದ ಮೇಲೆ ನಡೆಯುವ ದಾಳಿಯೂ ಅದರ ಒಂದು ಭಾಗವೇ ಎಂದು ಎಲ್ಲಾ ಕಾಲದ ಎಲ್ಲ ಯುದ್ಧಪಿಪಾಸುಗಳೂ ನಂಬಿದಂತಿವೆ. ಅಳುತ್ತಿರುವ ಮಗುವನ್ನು ಪಕ್ಕದಲ್ಲಿ ಎತ್ತಿಟ್ಟುಕೊಂಡು ಅಮ್ಮನ ಮೇಲೆ ಅತ್ಯಾಚಾರ ಮಾಡುವ ಸನ್ನಿವೇಶವೊಂದು ಈ ಚಿತ್ರದಲ್ಲಿ ಬರುತ್ತದೆ.

ಇಷ್ಟೇ ಅಲ್ಲ, ಮರಣಭೀತಿಯ ನಡುವೆಯೇ ಬಿಚ್ಚಿಕೊಳ್ಳುವ ಮಾನವ ಸಂಬಂಧಗಳು, ಸಾವಿನ ವಾಸನೆಯಲ್ಲಿಯೇ ಅರಳಿಕೊಳ್ಳುವ ಬದುಕಿನ ಉತ್ಸಾಹ, ಕೆಂಡದ ನಡಿಗೆಯಲ್ಲಿಯೂ ಅರಳಿ ನಗುವ ಪ್ರೀತಿ ಈ ಎಲ್ಲವನ್ನೂ ಬಹುಸೂಕ್ಷ್ಮವಾಗಿ ನಿರ್ದೇಶಕರು ಚಿತ್ರೀಕರಿಸಿದ್ದಾರೆ. ನಟರ ಅಭಿನಯ, ತಾಂತ್ರಿಕ ಕೌಶಲ, ನಿರೂಪಣೆಯ ತಂತ್ರಗಳು, ಸಂಕಲನ ಹೀಗೆಲ್ಲ ಮಾತಾಡಲು ಸಾಧ್ಯವೇ ಆಗದ ಹಾಗೆ ಸುಡುಸುಡು ಅನುಭವವಾಗಿ ಮನಸೊಳಗೆ ಇಳಿದುಬಿಡುತ್ತದೆ. ಮನುಷ್ಯ ತನ್ನ ರಕ್ತಸಿಕ್ತ ಇತಿಹಾಸದಿಂದ ಪಾಠ ಕಲಿಯುವುದು ಯಾವಾಗ ಎಂಬ ಪ್ರಶ್ನೆಯೊಂದು ಕೊನೆಯಲ್ಲಿ ಉಳಿದುಕೊಂಡುಬಿಡುತ್ತದೆ.

ಅಂತರ್ಜಾಲದಲ್ಲಿ https://goo.gl/xouvgD ಕೊಂಡಿ ಬಳಸಿ ಈ ಚಿತ್ರವನ್ನು ನೋಡಬಹುದು.

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT